Asianet Suvarna News Asianet Suvarna News

ಕಿಚ್ಚನ ಟ್ಟಿಟರ್‌ DP: 13 ವರ್ಷಗಳ ನಂತರ ಡಿಪಿಗೆ ಪವರ್ ಫೋಟೋ ಹಾಕಿದ ಸುದೀಪ್

ಪುನೀತ್ ನಿಧನದ ಬಗ್ಗೆ ಅತೀವ ನೋವನ್ನು ವ್ಯಕ್ತಪಡಿಸಿರುವ ನಟ ಕಿಚ್ಚ ಸುದೀಪ್ ಅವರು, 13 ವರ್ಷಗಳ ಬಳಿಕ ತಮ್ಮ ಟ್ವಿಟರ್ ಡಿಪಿ ಬದಲಿಸಿ,  ಆ ಮೂಲಕ ಅಗಲಿದ ಗೆಳಯನಿಗೆ ಅತ್ಯುನ್ನತ ಗೌರವ ಸಲ್ಲಿಸಿದ್ದಾರೆ.

Kiccha Sudeep changed his twitter DP after 13 years and placed puneeth picture
Author
Bangalore, First Published Oct 31, 2021, 5:46 PM IST

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ (Puneeth Rajkumar)​ ನಿಧನರಾಗಿದ್ದು, ಇಡೀ ಭಾರತ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಕೋಟ್ಯಂತರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಇವರ ನಿಧನಕ್ಕೆ ಅಭಿಮಾನಿಗಳೂ ಸೇರಿದಂತೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿ ನೋವನ್ನು ಹೊರಹಾಕುತ್ತಿದ್ದಾರೆ. ಕಿಚ್ಚ ಸುದೀಪ್ (Kiccha Sudeep)​ ಹಾಗೂ ಪುನೀತ್​ ರಾಜ್​ಕುಮಾರ್​ ನಡುವೆ ಒಳ್ಳೆಯ ಒಡನಾಟ ಮತ್ತು ಬಾಂಧವ್ಯವಿತ್ತು. ಕೆಲ ತಿಂಗಳ  ಹಿಂದಷ್ಟೇ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ ಅದ್ಧೂರಿ ಕಾರ್ಯಕ್ರಮಕ್ಕೆ ಪುನೀತ್ ಭೇಟಿ ನೀಡಿ ಚಿತ್ರಕ್ಕೆ ಶುಭಕೋರಿದ್ದರು.  ಹಾಗೂ ತಮ್ಮ ಗೆಳೆತನದ ಬಗ್ಗೆ ವೇದಿಕೆಯಲ್ಲಿ ನೆನಪನ್ನು ಹಂಚಿಕೊಂಡಿದ್ದರು.

ಇನ್ನು ಪುನೀತ್ ನಿಧನದ ಬಗ್ಗೆ ಅತೀವ ನೋವನ್ನು ವ್ಯಕ್ತಪಡಿಸಿರುವ ನಟ ಕಿಚ್ಚ ಸುದೀಪ್ ಅವರು, 13 ವರ್ಷಗಳ ಬಳಿಕ ತಮ್ಮ ಟ್ವಿಟರ್ (Twitter) ಡಿಪಿ ಬದಲಿಸಿ,  ಆ ಮೂಲಕ ಅಗಲಿದ ಗೆಳಯನಿಗೆ ಅತ್ಯುನ್ನತ ಗೌರವ ಸಲ್ಲಿಸಿದ್ದಾರೆ. ಅಲ್ಲದೇ ಅಪ್ಪು ಕುರಿತು ಟ್ವಿಟರ್‌ನಲ್ಲಿ ಸುದೀರ್ಘ ಬರಹವೊಂದನ್ನು ಹಂಚಿಕೊಂಡಿರುವ ಸುದೀಪ್, 'ಇದು ಭರಿಸಲಾಗದ ಶೂನ್ಯ' ಎಂದು ಭಾವನಾತ್ಮಕ ಪತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.

Kiccha Sudeep changed his twitter DP after 13 years and placed puneeth picture

'ಇದು ಬಾಲ್ಯದಿಂದಲೂ ಒಂದು ಪ್ರಯಾಣ. ನಾನು ಅವರನ್ನು ಶಿವಮೊಗ್ಗದಲ್ಲಿ ಮೊದಲು ಭೇಟಿಯಾದಾಗ ಅವರಾಗಲೇ ಸ್ಟಾರ್‌ ಆಗಿದ್ದರು. ಅವರ ನಟನೆಯ ಭಾಗ್ಯವಂತರು ಚಿತ್ರವು ಹಿಟ್‌ ಆಗಿತ್ತು. ಪುನೀತ್‌ ಅವರು ಚಿತ್ರಮಂದಿರ ಭೇಟಿ ಬಳಿಕ ಊಟಕ್ಕೆಂದು ನಮ್ಮ ಮನೆಗೆ ಬಂದಿದ್ದರು. ನಾನು ಮೊದಲ ಬಾರಿ ಅವರನ್ನು ಭೇಟಿಯಾಗಿದ್ದೆ. ನಾವು ಸಮಾನ ವಯಸ್ಸಿನವರಾಗಿದ್ದರಿಂದ ಬೇಗ ಹತ್ತಿರವಾದೆವು.  ನಮ್ಮ ಮನೆಯ ಊಟಕ್ಕಿಂತ ನನ್ನ ಅಟಿಕೆಗಳ ಮೇಲೆ ಅಪ್ಪು ಹೆಚ್ಚು ಕುತೂಹಲ ಹೊಂದಿದ್ದರು. ಅವನು ಮತ್ತು ನಾನು ಆಟದಲ್ಲಿ ನಿರತರಾಗಿದ್ದಾಗ ಒಬ್ಬರು ಅವನ ಹಿಂದೆಯೇ ತಟ್ಟೆ ಹಿಡಿದುಕೊಂಡು ಅವನಿಗೆ ತಿನ್ನಿಸಲು ಪ್ರಯತ್ನಿಸುತ್ತಿದಿದ್ದು ನನಗೀಗಲು ನೆನಪಿದೆ. 

ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ ರಾಜ್‌ಕುಮಾರ್

ಅವನನ್ನು ನೋಡಿದಾಗ ಉತ್ಸಹವಾಯಿತು. ಉತ್ಸಾಹವು ನನಗೆ ಸ್ಪೂರ್ತಿಯಾಗಿತ್ತು. ಅಷ್ಟರಲ್ಲಾಗಲೇ ನಮ್ಮ ಮನೆಯಲ್ಲಿ ನೆರೆಹೊರೆಯವರು ಜಮಾಯಿಸಿದರು. ಕಾರಣ, ಅಪ್ಪು ಕೇವಲ ಮಗುವಾಗಿರಲಿಲ್ಲ. ಅವರೊಬ್ಬ ಸ್ಟಾರ್‌ ಕಿಡ್ ಮತ್ತು ದಂತಕಥೆ ಡಾ.ರಾಜ್ ಕುಮಾರ್ ಅವರ ಮಗ. ಅಂದಿನಿಂದ ನಾವು ಮತ್ತೆ ಹಲವು ಬಾರಿ ಭೇಟಿಯಾಗಿದ್ದೆವು. ನಂತರ ಸಹೋದ್ಯೋಗಿಗಳಾದೆವು. ಆತ ಕೇವಲ ಸ್ನೇಹಿತನಲ್ಲ, ಒಬ್ಬ ಉತ್ತಮ ಸ್ಪರ್ಧಿ ಕೂಡಾ. ಅದ್ಭುತ ನಟ, ಡ್ಯಾನ್ಸರ್, ಫೈಟರ್ ಮತ್ತು ಅತ್ಯುತ್ತಮ ಮನುಷ್ಯ. ನಾನು ಈ ಸ್ಪರ್ಧೆಯನ್ನು ಆನಂದಿಸಿದ್ದೇನೆ, ಯಾಕೆಂದರೆ ಅದು ನನ್ನಲ್ಲೂ ಉತ್ತಮ ಪ್ರದರ್ಶನಕ್ಕೆ ಕಾರಣವಾಗಿದೆ. ಅಪ್ಪುವಿನಂತಹ ನಟ ಇದ್ದ ಕಾಲದಲ್ಲಿಯೇ ನಾನು ನಟನಾಗಿರುವುದಕ್ಕೆ ಖುಷಿ ಮತ್ತು ಗೌರವವಿದೆ. ಚಿತ್ರರಂಗವಿಂದು ಅಪೂರ್ಣವಾಗಿದೆ. ಶೂನ್ಯವಾಗಿದೆ, ಕಾಲ ಕ್ರೂರಿಯಂತೆ ಕಾಣುತ್ತಿದೆ. ಸ್ಥಳವು ದುಃಖಕರವಾಗಿ ಕಾಣುತ್ತಿದೆ. 


ಕಪ್ಪು ಮೋಡಗಳು, ತುಂತುರು ಹನಿಗಳು, ನಿನ್ನೆ ಪ್ರಕೃತಿಯೂ ಅಳುವಂತೆ ಭಾಸವಾಗುತ್ತಿತ್ತು. ನಾನು ಬೆಂಗಳೂರಿಗೆ ಬಂದಿಳಿದು, ಅವರನ್ನಿರಿಸಿದ್ದ ಜಾಗಕ್ಕೆ ಹೊರಟೆ, ನನ್ನ ಉಸಿರು ಭಾರವಾಗುತ್ತಿತ್ತು. ನಾನಿನ್ನೂ ಅರಗಿಸಿಕೊಳ್ಳಲಾಗದ ನೈಜತೆಯತ್ತ ನಾನು ಸಮೀಪಿಸುತ್ತಿದ್ದೆ. ಆತ ಅಲ್ಲಿ ಮಲಗಿರುವುದನ್ನು ಕಂಡು ಎದೆಯ ಮೇಲೆ ಕಲ್ಲಿಟ್ಟ ಹಾಗಾಗಿತ್ತು. ಹತ್ತು ಹಲವು ಪ್ರಶ್ನೆಗಳು ಮತ್ತು ಯೋಚನೆಗಳು, ಯಾಕೆ. ಹೀಗೆ! ಮೊದಲ ಬಾರಿಗೆ ನನಗೆ ಸರಿಯಾಗಿ ಉಸಿರಾಡಲಾಗಲಿಲ್ಲ. ನನ್ನೊಬ್ಬ ಸಹೋದ್ಯೋಗಿ, ಸ್ನೇಹಿತ ಎಲ್ಲಿರಬಾರದಿತ್ತೋ ಅಲ್ಲಿ ಹೋಗಿದ್ದ. ನನಗೆ ಹೆಚ್ಚು ಹೊತ್ತು ಅವನನ್ನು ನೋಡಲಾಗಲಿಲ್ಲ. ಆ ದೃಶ್ಯ ಇನ್ನೂ ನನ್ನನ್ನು ಕಾಡುತ್ತಿದೆ. ಏಕೆ ಹೀಗೆ ಶಿವಣ್ಣನನ್ನು ಆ ಸ್ಥಿತಿಯಲ್ಲಿ ನೋಡುವುದು ಮತ್ತಷ್ಟು ಕಷ್ಟ. ಅವರೊಂದು ಮಾತು ಹೇಳಿದರು.

I Love You ಚಿನ್ನ: ಜಗ್ಗೇಶ್ ಬಿಚ್ಚಿಟ್ಟ ಪುನೀತ್ ನೆನಪು

'ಪುನೀತ್ ನನಗಿಂತ 13 ವರ್ಷ ಚಿಕ್ಕವನು. ನಾನು ಈ ಕೈಗಳಿಂದ ಅವನನ್ನು ಎತ್ತಿ ಆಡಿಸಿದ್ದೆ. ಇದುವರೆಗೆ ತುಂಬಾ ನೋಡಿದ್ದೇನೆ, ನನಗೆ ಇನ್ನೇನು ನೋಡಬೇಕಿದೆಯೋ. ಈ ಮಾತುಗಳಿನ್ನೂ ನನ್ನ ಕಿವಿಗಳಿಗೆ ಅಪ್ಪಳಿಸುತ್ತಲೇ ಇದೆ. ಎಲ್ಲರಿಗೂ ಆಘಾತವಾಗಿದೆ. ಬೇಸರವಾಗಿದೆ. ಜರ್ಜರಿತರಾಗಿದ್ದಾರೆ. ಇದನ್ನೆಲ್ಲಾ ಅರಗಿಸಿಕೊಳ್ಳಲು ಇನ್ನೂ ತುಂಬಾ ಸಮಯ ಬೇಕಾಗುತ್ತದೆ. ಆದರೂ ಆ ಒಂದು ಜಾಗ ಮಾತ್ರ ಖಾಲಿಯಾಗಿಯೇ ಉಳಿಯುತ್ತದೆ. ಆ ಜಾಗವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಆ ಜಾಗ ನಮ್ಮ ಪ್ರೀತಿಯ ಅಪ್ಪುವಿಗೆ ಮಾತ್ರ ಸೀಮಿತ. ಶಾಂತಿಯಿಂದ ಹೋಗು, ಶಕ್ತಿಯಲ್ಲಿ ವಿಶ್ರಾಂತಿಯನ್ನು ಪಡೆದುಕೋ ನನ್ನ ಸ್ನೇಹಿತ' ಎಂದು ಕಿಚ್ಚ ಸುದೀಪ್ ನಿನ್ನೆಯಷ್ಟೇ ಟ್ವೀಟ್ ಮಾಡಿದ್ದರು.

Follow Us:
Download App:
  • android
  • ios