ಇಂದಿನಿಂದ ದೇಶಾದ್ಯಂತ ಕೆಜಿಎಫ್‌-2 ಅಬ್ಬರ, 12,000 ಪರದೆಗಳಲ್ಲಿ ಪ್ರದರ್ಶನ!

* ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷೆಯ ಚಿತ್ರ ತೆರೆಗೆ

* ಇಂದಿನಿಂದ ದೇಶಾದ್ಯಂತ ಕೆಜಿಎಫ್‌-2 ಅಬ್ಬರ

* 5 ಭಾಷೆಯಲ್ಲಿ ಬಿಡುಗಡೆ, 12000 ಪರದೆಗಳಲ್ಲಿ ಪ್ರದರ್ಶನ

* 100 ಕೋಟಿ ವೆಚ್ಚದ ಚಿತ್ರ, ಮೊದಲ ದಿನ 200 ಕೋಟಿ ಗಳಿಕೆ?

KGF Chapter 2 movie release Yash film expected to break records at the box office pod

ಬೆಂಗಳೂರು(ಏ.14): ನಟ ಯಶ್‌ ಹಾಗೂ ನಿರ್ದೇಶಕ ಪ್ರಶಾಂತ್‌ ನೀಲ್‌ ಜೋಡಿಯ ಬಹುನಿರೀಕ್ಷೆಯ ‘ಕೆಜಿಎಫ್‌ 2’ ಚಿತ್ರ ವಿಶ್ವಾದ್ಯಂತ 12 ಸಾವಿರ ಸ್ಕ್ರೀನ್‌ಗಳಲ್ಲಿ ಗುರುವಾರ ಬಿಡುಗಡೆ ಆಗುತ್ತಿದೆ. ಕನ್ನಡ ಸೇರಿದಂತೆ ಭಾರತದ ಪ್ರಮುಖ ಭಾಷೆಗಳಾದ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ‘ಕೆಜಿಎಫ್‌ 2’ ಚಿತ್ರವನ್ನು ಅಭಿಮಾನಿಗಳು, ಪ್ರೇಕ್ಷಕರು ಭರ್ಜರಿಯಾಗಿ ಸ್ವಾಗತಿಸಲು ಸಜ್ಜಾಗಿದ್ದಾರೆ.

ಹೊಂಬಾಳೆ ಫಿಲಮ್ಸ್‌ ಮೂಲಕ ನಿರ್ಮಾಪಕ ವಿಜಯ್‌ ಕಿರಗಂದೂರು ಅವರು 100 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಈ ಚಿತ್ರವು ವಿಶ್ವಾದ್ಯಂತ ಪ್ರದರ್ಶನ ಆಗಲಿದೆ. ಬೆಂಗಳೂರಿನ ಊರ್ವಶಿ, ಮೈಸೂರಿನ ಡಿಸಿಆರ್‌ ಸೇರಿದಂತೆ ರಾಜ್ಯದ ಹಲವು ಕಡೆ ರಾತ್ರಿ 12 ಗಂಟೆಗೇ ಮೊದಲ ಶೋ ಆರಂಭವಾಗಿದ್ದು, ಸಿನಿಮಾ ನೋಡಿದವರು ಯಶ್‌ ನಟನೆಗೆ ಬಹುಪರಾಕ್‌ ಹಾಕಿದ್ದಾರೆ.

ಮೊದಲ ದಿನ 200 ಕೋಟಿ ಗಳಿಕೆ ನಿರೀಕ್ಷೆ:

ಮೊದಲ ದಿನವೇ ‘ಕೆಜಿಎಫ್‌ 2’ ಚಿತ್ರ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ದಾಖಲೆ ಮಾಡುವ ಸಾಧ್ಯತೆ ಇದ್ದು, ವಿಶ್ವಾದ್ಯಂತ ಅಂದಾಜು 150 ರಿಂದ 200 ಕೋಟಿ ರು. ಕಲೆಕ್ಷನ್‌ ಆಗಲಿದೆ ಎಂಬುದು ಸದ್ಯದ ಲೆಕ್ಕಾಚಾರ. ಕರ್ನಾಟಕದಲ್ಲೇ 550 ಸ್ಕ್ರೀನ್‌ಗಳಲ್ಲಿ ‘ಕೆಜಿಎಫ್‌ 2’ ಬಿಡುಗಡೆ ಆಗಲಿದ್ದು, ಮೊದಲ ದಿನವೇ ಒಟ್ಟು 5 ಸಾವಿರ ಶೋಗಳು ಪ್ರದರ್ಶನ ಕಾಣಲಿವೆ. ಹೀಗಾಗಿ ರಾಜ್ಯದಲ್ಲೇ 25 ಕೋಟಿ ರು. ಕಲೆಕ್ಷನ್‌ ಮಾಡುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.

ಬೆಳಗ್ಗೆ 4 ಗಂಟೆಗೆ ಮೊದಲ ಶೋ:

ರಾತ್ರಿ 12 ಗಂಟೆಯ ಹೊರತಾಗಿ ರಾಜ್ಯದಲ್ಲಿ ಬಹುತೇಕ ಚಿತ್ರಮಂದಿರಗಳಲ್ಲಿ ಮೊದಲ ಪ್ರದರ್ಶನ ಗುರುವಾರ ಬೆಳಗ್ಗೆ 4 ಹಾಗೂ 6 ಗಂಟೆಗೆ ಆರಂಭವಾಗುತ್ತಿದೆ. ಹೀಗಾಗಿ ಕೋವಿಡ್‌ ನಂತರ ದೊಡ್ಡ ಮಟ್ಟದ ಕ್ರೇಜ್‌ನಲ್ಲಿ ತೆರೆಗೆ ಬರುತ್ತಿರುವ ಪ್ಯಾನ್‌ ಇಂಡಿಯಾ ಚಿತ್ರಗಳ ಪೈಕಿ ಕನ್ನಡದ ಸಿನಿಮಾ ಇದಾಗಿದೆ. ಅಲ್ಲದೆ ಭಾರತದ ಅತಿ ದೊಡ್ಡ ಬಿಡುಗಡೆಯ ಸಿನಿಮಾ ಎನ್ನುವ ಹೆಗ್ಗಳಿಕೆಗೆ ‘ಕೆಜಿಎಫ್‌ 2’ ಪಾತ್ರವಾಗಿದ್ದು, ಶೋಗಳ ಸಂಖ್ಯೆ, ಗಳಿಕೆಯ ವಿಚಾರದಲ್ಲಿ ಈ ಹಿಂದೆ ಬಂದ ಪ್ಯಾನ್‌ ಇಂಡಿಯಾ ಸಿನಿಮಾಗಳ ಎಲ್ಲ ದಾಖಲೆಗಳನ್ನು ಹಿಂದಿಕ್ಕಿದೆ.

ಮುಗಿಲು ಮುಟ್ಟಿದ ಸಂಭ್ರಮ:

ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲೂ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಬೃಹತ್‌ ಕಟೌಟ್‌ಗಳು ರಾರಾಜಿಸುತ್ತಿವೆ. ಡೊಳ್ಳು ಕುಣಿತ, ಹೂವಿನ ಹಾರಗಳ ಅಲಂಕಾರದಿಂದ ಚಿತ್ರಮಂದಿರಗಳ ಮುಂದೆ ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಬೆಂಗಳೂರಿನ ಹೆಚ್ಚಿನೆಲ್ಲ ಥಿಯೇಟರ್‌ಗಳಲ್ಲಿ ಯಶ್‌ ಕಟೌಟ್‌, ಪೋಸ್ಟರ್‌ಗಳು ಗಮನಸೆಳೆಯುತ್ತಿವೆ. ಊರ್ವಶಿ ಥಿಯೇಟರ್‌ ಮುಂಭಾಗ ರಾಕಿ ಭಾಯ್‌ ಬೃಹತ್‌ ಕಟೌಟ್‌ ಇದೆ. ತ್ರಿವೇಣಿ, ನವರಂಗ್‌, ವೀರೇಶ್‌ ಸೇರಿದಂತೆ ಬೆಂಗಳೂರಿನ ಹೆಚ್ಚಿನೆಲ್ಲ ಥಿಯೇಟರ್‌ ಮುಂಭಾಗ ಯಶ್‌ ಕಟೌಟ್‌ ಹಾಗೂ ಪೋಸ್ಟರ್‌ಗಳು ಗಮನ ಸೆಳೆಯುತ್ತಿವೆ.

ಮುಂಬೈನಲ್ಲಿ ಯಶ್‌ 100 ಅಡಿ ಕಟೌಟ್‌

‘ಲಾರ್ಜರ್‌ ದೆನ್‌ ಲೈಫ್‌’ ಎನ್ನುವ ಪರಿಕಲ್ಪನೆಯಲ್ಲಿ ಯಶ್‌ ಅವರ 100 ಅಡಿಗಳ ಕಟೌಟನ್ನು ಮುಂಬೈನ ಥಿಯೇಟರ್‌ಗಳ ಎದುರು ಹಾಕಲಾಗಿದೆ. ಕಾರ್ನಿವಾಲ್‌ ಸಿನಿಮಾಸ್‌ ಥಿಯೇಟರ್‌ನಲ್ಲಿ ಇದೇ ಮೊದಲ ಬಾರಿ ಕನ್ನಡದ ನಟರೊಬ್ಬರ ಇಷ್ಟುಎತ್ತರದ ಕಟೌಟ್‌ ನಿಲ್ಲಿಸಲಾಗಿದೆ.

ನಿನ್ನೆ ರಾತ್ರಿಯೇ ಕೆಲವೆಡೆ ಶೋ!

ಬೆಂಗಳೂರಿನ ಊರ್ವಶಿ, ಮೈಸೂರಿನ ಡಿಸಿಆರ್‌ ಸೇರಿದಂತೆ ರಾಜ್ಯದ ಹಲವು ಥಿಯೇಟರ್‌ನಲ್ಲಿ ಕೆಜಿಎಫ್‌-2 ಸಿನಿಮಾ ಬುಧವಾರ ರಾತ್ರಿ 12 ಗಂಟೆಗೇ ಮೊದಲ ಪ್ರದರ್ಶನ ಕಂಡಿದೆ. ಗುರುವಾರ ಬೆಳಿಗ್ಗೆ 4 ಹಾಗೂ 6 ಗಂಟೆಗೂ ಅನೇಕ ಥಿಯೇಟರ್‌ಗಳಲ್ಲಿ ಮೊದಲ ಪ್ರದರ್ಶನ ನಿಗದಿಯಾಗಿದೆ. ಕೋವಿಡ್‌ ನಂತರ ಬಿಡುಗಡೆಯಾಗುತ್ತಿರುವ ಕನ್ನಡದ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾ ಇದಾಗಿದ್ದು, ಯಶ್‌ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ಕೆಜಿಎಫ್‌ 2 ಚಿತ್ರದ ವಿಶ್ವದ ಲೆಕ್ಕ

ಬಿಡುಗಡೆಯಾಗಲಿರುವ ಸ್ಕ್ರೀನ್‌ಗಳು : 12000

ಮೊದಲ ದಿನದ ಶೋಗಳ ಸಂಖ್ಯೆ: 16 ರಿಂದ 18 ಸಾವಿರ

ಮೊದಲ ದಿನದ ಕಲೆಕ್ಷನ್‌ ಅಂದಾಜು: 150 ರಿಂದ 200 ಕೋಟಿ

ಕರ್ನಾಟಕದಲ್ಲಿ ಕೆಜಿಎಫ್‌ 2 ಲೆಕ್ಕ

ಸ್ಕ್ರೀನ್‌ಗಳು: 550

ಮೊದಲ ದಿನದ ಶೋಗಳು: 5,000

ಮೊದಲ ಶೋ ಆರಂಭ: ರಾತ್ರಿ 12 ಗಂಟೆಗೆ

ಮೊದಲ ದಿನದ ಕಲೆಕ್ಷನ್‌: 25 ಕೋಟಿ

ರಾಜ್ಯವಾರು ಸ್ಕ್ರೀನ್‌ಗಳ ಸಂಖ್ಯೆ

ಕರ್ನಾಟಕ: 550

ಆಂಧ್ರ ಹಾಗೂ ತೆಲಂಗಾಣ: 1,000

ಕೇರಳ: 500

ತಮಿಳುನಾಡು: 350

ಉತ್ತರ ಭಾರತ: 450

ಹೊರ ದೇಶಗಳಲ್ಲಿ: 3,500

Latest Videos
Follow Us:
Download App:
  • android
  • ios