ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ನಟರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ಮಡೆನೂರು ಮನು ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸುತ್ತಿದೆ.
ಜೋಗಿ, ಕನ್ನಡಪ್ರಭದ ಹಿರಿಯ ಪತ್ರಕರ್ತರು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮುಖ್ಯಸ್ಥರಿಗೆ, ಮಡೆನೂರ್ ಮನು ಇತ್ತೀಚೆಗೆ ನಟ ಶಿವರಾಜಕುಮಾರ್, ದರ್ಶನ್, ಧ್ರುವ ಸರ್ಜಾ ಮುಂತಾದವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಗುರವಾಗಿ ಮಾತನಾಡಿದ್ದಾರೆ. ಈ ಕುರಿತು ಮಾಹಿತಿ ನೀಡಲು ಮಧ್ಯಾಹ್ನ 3 ಗಂಟೆಗೆ ಪತ್ರಿಕಾಗೋಷ್ಠಿ ಎಂಬ ಒಂದು ಆಹ್ವಾನ ಪ್ರಚಾರಕರ್ತರ ಮೂಲಕ ನನ್ನ ಫೋನಿಗೆ ಬಂದು ಬಿತ್ತು. ಅದಾದ ಸ್ವಲ್ಪ ಹೊತ್ತಿಗೇ, ಪತ್ರಿಕಾಗೋಷ್ಠಿಯನ್ನು 12.30ಕ್ಕೆ ಹಿಂದೂಡಲಾಗಿದೆ. ಯಾಕೆಂದರೆ ಮೂರು ಗಂಟೆಗೆ ಕಮಲಹಾಸನ್ ಪತ್ರಿಕಾಗೋಷ್ಠಿಯಿದೆ ಅನ್ನುವ ಸುದ್ದಿಯೂ ಬಂತು. ಈ ಹಿನ್ನೆಲೆಯಲ್ಲಿ ಕೆಲವು ಮಾತು:
1. ಮಡೇನೂರು ಮನು ಯಾರು? ಆತನಿಗೋಸ್ಕರ ನೂರಾರು ಸಿನಿಮಾ ಪತ್ರಕರ್ತರು ನಾಲ್ಕೈದು ಗಂಟೆ ವ್ಯರ್ಥ ಮಾಡಬೇಕೇ?
2. ಆತ ಸಾಮಾಜಿಕ ಜಾಲತಾಣದಲ್ಲಿ ಶಿವರಾಜಕುಮಾರ್ ಮತ್ತಿತರರ ಬಗ್ಗೆ ಹಗುರವಾಗಿ ಮಾತಾಡಿದ್ದರೆ, ಅದರ ವಿರುದ್ಧ ಕ್ರಮ ತೆಗೆದುಕೊಳ್ಳಲು ನೀವೇನು ಕಲಾವಿದರ ಸಂಘದವರೇ? ನಿಮ್ಮದು ನಿರ್ಮಾಪಕ, ಹಂಚಿಕೆದಾರ ಮತ್ತು ಪ್ರದರ್ಶಕರ ಒಕ್ಕೂಟವಲ್ಲವೇ? ಇದನ್ನೆಲ್ಲ ಕಲಾವಿದರ ಸಂಘ ನೋಡಿಕೊಳ್ಳುವುದಿಲ್ಲವೇ?
3. ಈ ಹಿರಿಯ ಕಲಾವಿದರು ನಿಮಗೇನಾದರೂ ದೂರು ಕೊಟ್ಟಿದ್ದಾರೆಯೇ? ಇಲ್ಲದೇ ಹೋದರೆ ಯಾವ ಆಧಾರದ ಮೇಲೆ ನೀವು ಮನು ಮಡೇನೂರು ವಿರುದ್ಧ ಕ್ರಮ ಕೈಗೊಳ್ಳುತ್ತೀರಿ?
4. ಹಿರಿಯರೂ ಸಜ್ಜನರೂ ಆದ ಶಿವರಾಜ್ ಕುಮಾರ್ ಬಗ್ಗೆ ಯಾರೋ ನಿನ್ನೆ ಮೊನ್ನೆ ಬಂದ ಹುಡುಗನೊಬ್ಬ ಕುಡಿದು ಏನೋ ಮಾತಾಡಿರಬಹುದು. ನನಗಂತೂ ಅದು ಗೊತ್ತಿರಲಿಲ್ಲ. ಯಾವ ಪತ್ರಿಕೆಗಳಲ್ಲೂ ಅದು ವರದಿಯಾಗಿಲ್ಲ. ಟೆಲಿವಿಷನ್ ಕೂಡ ಅದನ್ನು ಇಗ್ನೋರ್ ಮಾಡಿದೆ. ನೀವು ಆ ಬಗ್ಗೆ ಮಾಹಿತಿ ನೀಡಿ ಅದನ್ನು ಜಗಜ್ಜಾಹೀರು ಮಾಡುವುದು ಯಾಕೆ?
5. ನೀವು ಜವಾಬ್ದಾರಿಯುತ ವಾಣಿಜ್ಯ ಮಂಡಳಿಯಾಗಿ, ಮುಂದಿನ ವಾರ ನೂರಿನ್ನೂರು ಸ್ಕ್ರೀನುಗಳಿಗೆ ಅಪ್ಪಳಿಸಲಿರುವ ಕಮಲಹಾಸನ್ ತಮಿಳು ಸಿನಿಮಾ ಥಗ್ ಲೈಫ್ ಬಿಡುಗಡೆಯಿಂದಾಗಿ ಕನ್ನಡದ ಸಿನಿಮಾಗಳಿಗೆ ತೊಂದರೆ ಆಗುವುದನ್ನು ನಿಜಕ್ಕೂ ತಡೆಯಬೇಕಿತ್ತು, ಆದರೆ ಕಮಲಹಾಸನ್ ಪ್ರೆಸ್ ಮೀಟ್ ಕರೆದಿದ್ದಾರೆ ಅನ್ನುವ ಕಾರಣಕ್ಕೆ ನಿಮ್ಮ ಪ್ರೆಸ್ ಮೀಟ್ ಸಮಯವನ್ನೇ ಬದಲಾಯಿಸುವಷ್ಟು ದುರ್ಬಲ ಸಂಸ್ಥೆ ನಿಮ್ಮದು. ವಾಣಿಜ್ಯ ಮಂಡಳಿಯಾಗಿ ನೀವು 'ನಾವು ಮೂರು ಗಂಟೆಗೆ ಪತ್ರಿಕಾಗೋಷ್ಠಿ ಇಟ್ಟುಕೊಂಡಿದ್ದೇವೆ, ಕಮಲಹಾಸನ್ ಬೇರೆ ಸಮಯ ನೋಡಿಕೊಳ್ಳಲಿ' ಅನ್ನಬೇಕಾಗಿತ್ತು. ಅದು ಬಿಟ್ಟು ನಿನ್ನೆ ಮೊನ್ನೆ ಬಂದ ಬಡಪಾಯಿ ಮಡೇನೂರು ಮನು ಅವನನ್ನು ಅದುಮಿಡಲು ಹೊರಟಿದ್ದೀರಿ.
6. ಕಳೆದ ವಾರ ಬಾನು ಮುಷ್ತಾಕ್ ಅವರಿಗೆ ಅಂತಾರಾಷ್ಟ್ರೀಯ ಬೂಕರ್ ಬಂತು. ಬಾನು ಮುಷ್ಟಾಕ್ ಅವರ ಕತೆಯನ್ನು ಆಧರಿಸಿ ಗಿರೀಶ ಕಾಸರವಳ್ಳಿ ಸಿನಿಮಾ ಮಾಡಿದ್ದರು. ಅದಕ್ಕೆ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿ ಬಂದಿತ್ತು. ತಾರಾ ಅವರಿಗೆ ಅತ್ಯುತ್ತಮ ನಟಿ ಎಂಬ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸಿನಿಮಾ ಅದು. ವಾಣಿಜ್ಯ ಮಂಡಳಿ ಬಾನು ಮುಷ್ತಾಕ್ ಅವರಿಗೆ ಅಭಿನಂದನೆ ಸಲ್ಲಿಸಬೇಕಿತ್ತು. ನಿಮಗೆ ಅದು ನೆನಪಾಗಲೇ ಇಲ್ಲ.
7. ವಾರವಾರವೂ ಸಿನಿಮಾಗಳು ಬರುತ್ತವೆ, ಹೋಗುತ್ತವೆ. ಈ ವರ್ಷ ಬಂದ ನೂರು ಸಿನಿಮಾಗಳ ಪೈಕಿ ಒಂದು ಕೂಡ ದುಡ್ಡು ಮಾಡಿಲ್ಲ.
ನಿರ್ಮಾಪಕ ಕಂಗಾಲಾಗಿದ್ದಾನೆ. ನಿರ್ದೇಶಕರು ಏನು ಮಾಡುವುದು ತೋಚದೇ ಕೂತಿದ್ದಾರೆ. ಕಲಾವಿದರಿಗೆ ಕೆಲಸ ಇಲ್ಲ. ಇಂಥ ಹೊತ್ತಲ್ಲಿ, ಸರ್ಕಾರದ ಜತೆ ಮಾತಾಡಿ ಓಟಿಟಿ ಮಾಡುವಂತೆ ಕೇಳುವುದು, ಸರ್ಕಾರ ಘೋಷಿಸಿದ ಮಲ್ಟಿಪ್ಲೆಕ್ಸ್ ದರವನ್ನು 200 ರುಪಾಯಿಗೆ ಇಳಿಸುವ ಪ್ರಸ್ತಾಪ ಜಾರಿಯಾಗುವಂತೆ ನೋಡುವುದು ಬಿಟ್ಟು, ಬೆಟ್ಟ ಅಗೆದು ಇಲಿ ಹಿಡಿದರು ಎಂಬಂತೆ ಮಡೇನೂರು ಮನು ಆಡಿದ ಮಾತುಗಳ ಬಗ್ಗೆ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಕರೆಯುತ್ತಿದ್ದೀರಿ. ಇದು ವಾಣಿಜ್ಯ ಮಂಡಳಿ ಮಾಡಬೇಕಾದ ಕೆಲಸವೇ ಯೋಚಿಸಿ.
ಮೂವತ್ತು ವರ್ಷಗಳಿಂದ ಚಿತ್ರರಂಗದ ಜತೆಗಿದ್ದು, ವಾಣಿಜ್ಯ ಮಂಡಳಿಯ ಗಣ್ಯಾತಿಗಣ್ಯರನ್ನೂ ಅವರ ಸಾಧನೆಗಳನ್ನೂ ನೋಡಿದವನಾಗಿ, ನೋವಿನಿಂದ ಹೇಳುತ್ತಿದ್ದೇನೆ. ಮಡೇನೂರು ಮನು ಆಡಿರುವ ಮಾತುಗಳು ತಲುಪದಷ್ಟು ಎತ್ತರದಲ್ಲಿ ಶಿವರಾಜಕುಮಾರ್, ದರ್ಶನ್, ಧ್ರುವ ಸರ್ಜಾ ಇವರೆಲ್ಲ ಇದ್ದಾರೆ. ದಿನವೂ ಸಾಮಾಜಿಕ ಮಾಧ್ಯಮದಲ್ಲಿ ಯಾರೋ ಯಾರಿಗೋ ಇದಕ್ಕಿಂತ ಕೆಟ್ಟದಾಗಿ ಬೈಯುತ್ತಿರುತ್ತಾರೆ. ಅದಕ್ಕೆಲ್ಲ ವಾಣಿಜ್ಯ ಮಂಡಳಿಯಂಥ ಘನತೆಯುಳ್ಳ ಸಂಸ್ಥೆಗಳು ಪತ್ರಿಕಾಗೋಷ್ಠಿ ಕರೆಯಬಾರದು. ದೊಡ್ಡ ಸಂಸ್ಥೆಗಳ ದೃಷ್ಟಿ ಮತ್ತು ಧ್ಯೇಯ ಕೂಡ ದೊಡ್ಡದ್ದೇ ಆಗಿರಬೇಕು. ಅಲ್ಲವೇ?
