ಕಾಂತಾರ ಚಿತ್ರದ ಪ್ರಿಕ್ವೆಲ್ ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದ್ದು, ಟ್ರೇಲರ್ ಈ ತಿಂಗಳ 20 ರಂದು ಬಿಡುಗಡೆಯಾಗಲಿದೆ. ಅಮೆಜಾನ್ ಪ್ರೈಮ್ ವಿಡಿಯೋ ಚಿತ್ರದ ಒಟಿಟಿ ಹಕ್ಕುಗಳನ್ನು 125 ಕೋಟಿ ರೂ.ಗೆ ಖರೀದಿಸಿದೆ. ಈ ಮೂಲಕ ಚಿತ್ರಕ್ಕೆ ಹೂಡಿದ ಬಂಡವಾಳ ರಿಲೀಸ್‌ಗೂ ಮುನ್ನವೇ ವಾಪಸ್ ಬಂದಿದೆ ಎನ್ನಲಾಗುತ್ತಿದೆ.

ಕೆಜಿಎಫ್ ಸರಣಿಯ ನಂತರ ಬೇರೆ ಭಾಷಾ ಪ್ರೇಕ್ಷಕರ ಮುಂದೆ ಕನ್ನಡ ಸಿನಿಮಾಕ್ಕೆ ಭಾರಿ ಮೆಚ್ಚುಗೆ ತಂದುಕೊಟ್ಟ ಚಿತ್ರ 2022ರಲ್ಲಿ ಬಿಡುಗಡೆಯಾದ ಕಾಂತಾರ. ರಿಷಬ್ ಶೆಟ್ಟಿ ಬರೆದು, ನಿರ್ದೇಶಿಸಿ, ಎರಡು ಪಾತ್ರಗಳಲ್ಲಿ ನಟಿಸಿದ ಈ ಚಿತ್ರ ವಿಶ್ವಾದ್ಯಂತ 400 ಕೋಟಿ ಗಳಿಸಿತ್ತು. ಕೇವಲ ₹14 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಚಿತ್ರ ಎಂಬುದು ಗಮನಾರ್ಹ. ಕನ್ನಡದಲ್ಲಿ ಭರ್ಜರಿ ಯಶಸ್ಸು ಕಂಡ ನಂತರ ಈ ಸಿನಿಮಾವನ್ನು ಹಲವು ಭಾಷೆಗಳಿಗೆ ಡಬ್ಬಿಂಗ್ ಮಾಡಿ, ಬಿಡುಗಡೆ ಮಾಡುವುದಕ್ಕೆ ಸಿನಿಮಾದ ವೆಚ್ಚವೂ ಹೆಚ್ಚಾಗಿತ್ತು. ಹೂಡಿಕೆ ಮಾಡಿದ್ದಕ್ಕಿಂತ 6-7 ಪಟ್ಟು ಹಣವನ್ನು ಲಾಭ ಗಳಿಸಿತ್ತು.

ಇನ್ನು ಕಾಂತಾರ ಸಿನಿಮಾ ಪ್ರಾದೇಶಿಕವಾಗಿ ಕನ್ನಡ ಭಾಷೆಗೆ ಸೀಮಿತವಾಗಲಿದೆ ಎಂದು ನಿರೀಕ್ಷೆ ಮಾಡಿದ್ದರೂ, ಅದನ್ನು ನೋಡುವವರ ಸಂಖ್ಯೆ ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆಯಿತು. ಇನ್ನು ಸಿನಿಮಾದ ಯಶಸ್ಸು ರಾಷ್ಟ್ರದ ಗಡಿ ದಾಟಿ ಅಂತಾರಾಷ್ಟ್ರೀಯ ಮಟ್ಟಕ್ಕೂ ಬೆಳೆಯಿತು. ಕಾಂತಾರ ಸಿನಿಮಾ ನೋಡಿದ ಪ್ರೇಕ್ಷಕರು ಮುಂದುವರಿದ ಭಾಗ ಬರುತ್ತದೆಯೇ ಎಂದು ನಿರೀಕ್ಷೆ ಮಾಡಿದ್ದರು. ಅದರಂತೆ ಕಾಂತಾರ ಪ್ರೀಕ್ವೆಲ್ ಸಿನಿಮಾ ಮಾಡಿದ ನಿರ್ದೇಶಕ ರಿಷಬ್ ಶೆಟ್ಟಿ, ಇದೀಗ ಪ್ರೇಕ್ಷಕರ ಮುಂದೆ ತರಲು ಸಿದ್ಧರಾಗಿದ್ದಾರೆ. ಇನ್ನು ಭಾರಿ ಜನಪ್ರಿಯತೆ ಗಳಿಸಿದ್ದರಿಂದ ಕಾಂತಾರದ ಮುಂದುವರಿದ ಭಾಗಕ್ಕೆ ಭಾರತೀಯ ಸಿನಿಮಾ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಚಿತ್ರದ ಒಟಿಟಿ ಹಕ್ಕುಗಳ ಬೆಲೆ ಬಗ್ಗೆ ವರದಿಗಳು ಹೊರಬಿದ್ದಿವೆ.

ಸೆ.20ಕ್ಕೆ ಟ್ರೇಲರ್ ರಿಲೀಸ್

ಕಾಂತಾರ ಸಿನಿಮಾದ ಮುಂದುವರಿದ ಭಾಗವಲ್ಲ, ಬದಲಾಗಿ ಪ್ರಿಕ್ವೆಲ್ ಆಗಿ ಬರುತ್ತಿರುವ ಕಾಂತಾರದ ಮುಂದುವರಿದ ಭಾಗಕ್ಕೆ ಕಾಂತಾರ ಚಾಪ್ಟರ್ 1 ಎಂದು ಹೆಸರಿಡಲಾಗಿದೆ. ಈ ವರ್ಷ ಅಕ್ಟೋಬರ್ 2 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರದ ಟ್ರೇಲರ್ ಈ ತಿಂಗಳ 20 ರಂದು ಬಿಡುಗಡೆಯಾಗಲಿದೆ. ಚಿತ್ರದ ಒಟಿಟಿ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದೆ. ಪ್ರೈಮ್ ವಿಡಿಯೋ 2024 ರ ಮಾರ್ಚ್‌ನಲ್ಲಿ ಈ ವಿಷಯವನ್ನು ತಿಳಿಸಿತ್ತು. ಆದರೆ ಇದಕ್ಕಾಗಿ ಪಾವತಿಸಿದ ಮೊತ್ತದ ಬಗ್ಗೆ ವರದಿಗಳು ಈಗ ಬಂದಿವೆ.

125 ಕೋಟಿಗೆ ಒಟಿಟಿ ಹಕ್ಕು ಖರೀದಿ:

ಪಿಂಕ್‌ವಿಲ್ಲ ವರದಿ ಮಾಡಿರುವ ಪ್ರಕಾರ, ಕಾಂತಾರ ಚಾಪ್ಟರ್-1 ರ ಒಟಿಟಿ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ 125 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಎಲ್ಲಾ ಭಾಷೆಗಳ ಹಕ್ಕುಗಳು ಸೇರಿ ಈ ಮೊತ್ತವಾಗಿದೆ. ಕನ್ನಡ ಸಿನಿಮಾ ಇತಿಹಾಸದಲ್ಲೇ ಅತಿ ಹೆಚ್ಚು ಒಟಿಟಿ ಹಕ್ಕುಗಳ ಮೊತ್ತ ಇದಾಗಿದೆ. ನಿಜ ಹೇಳಬೇಕೆಂದರೆ, ಕೆಜಿಎಫ್ 2 ನಂತರದ ಅತಿ ಹೆಚ್ಚು ಮೊತ್ತ ಇದಾಗಿದೆ. ಚಿತ್ರದ ಬಜೆಟ್ ₹125 ಕೋಟಿ ಎಂದು ಈ ಹಿಂದೆ ವರದಿಯಾಗಿತ್ತು. ಅಂದರೆ, ಚಿತ್ರ ಬಿಡುಗಡೆಯಾಗುವ ವಾರಗಳ ಮೊದಲೇ ಶೇ.100 ಬಜೆಟ್ ರಿಕವರಿ ಆಗಿದೆ ಎಂದು ಹೇಳಲಾಗುತ್ತಿದೆ.

ಇದೇ ವೇಳೆ, ಕಾಂತಾರ ಚಾಪ್ಟರ್ 1 ಬಿಡುಗಡೆ ಸಮೀಪಿಸುತ್ತಿರುವಂತೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗಿದೆ. ವಿಶ್ವದ ವಿವಿಧ ಭಾಗಗಳಲ್ಲಿರುವ 20 ವಿಎಫ್‌ಎಕ್ಸ್ ಸ್ಟುಡಿಯೋಗಳಲ್ಲಿ ಕೆಲಸ ನಡೆಯುತ್ತಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ವಿಜಯ್ ಕಿರಗಂದೂರು ಮತ್ತು ಚಲುವೆ ಗೌಡ ಚಿತ್ರವನ್ನು ನಿರ್ಮಿಸಿದ್ದಾರೆ.