ಕಾಂತಾರ ಚಾಪ್ಟರ್ 1 ಚಿತ್ರೀಕರಣದ ವೇಳೆ ಕಲಾವಿದ ವಿಜು ವಿ.ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆಗುಂಬೆಯ ಹೋಂ ಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಇತ್ತೀಚೆಗೆ ಕಾಂತಾರ ಚಿತ್ರತಂಡದಲ್ಲಿದ್ದ ಹಾಸ್ಯನಟ ರಾಕೇಶ್ ಕೂಡ ಹೃದಯಾಘಾತದಿಂದಲೇ ಮೃತಪಟ್ಟಿದ್ದರು.

ಶಿವಮೊಗ್ಗ (ಜೂನ್ 12): ಕನ್ನಡ ಚಿತ್ರರಂಗದಲ್ಲಿ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ಗಳಿಸುವ ಮೂಲಕ ಭಾರೀ ಹೆಗ್ಗರುತನ್ನು ಮಾಡಿದೆ. ಇದೀಗ ಕಾಂತಾರ ಸಿನಿಮಾದ ಇನ್ನೊಂದು ಭಾಗ 'ಕಾಂತಾರ ಚಾಪ್ಟರ್ 1' ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಇದೀಗ ಕಾಂತಾರ 1 ಚಿತ್ರತಂಡಕ್ಕೆ ಮತ್ತೊಂದು ಸಾವಿನ ಸುದ್ದಿ ಬಂದೆರಗಿದೆ. ಕೇರಳದ ತ್ರಿಶೂರ್ ಜಿಲ್ಲೆ ಮೂಲದ ಮಿಮಿಕ್ರಿ ಹಾಗೂ ಚಲನಚಿತ್ರ ಕಲಾವಿದ ವಿಜು ವಿ.ಕೆ ಅವರು ಹೃದಯಾಘಾತದಿಂದ ಮೃತಪಟ್ಟಿರುವ ದುರಂತ ಘಟನೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಂ ಸ್ಟೇ ಒಂದರಲ್ಲಿ ನಡೆದಿದೆ.

ಕಾಂತಾರ ಚಾಪ್ಟರ್ 1 ಚಿತ್ರೀಕರಣಕ್ಕಾಗಿ ಆಗುಂಬೆ ಸಮೀಪದ ಹೋಂ ಸ್ಟೇಯೊಂದರಲ್ಲಿ ವಾಸ್ತವ್ಯವಿದ್ದ ಕಲಾವಿದ ವಿಜು ಅವರು ನಿನ್ನೆ ರಾತ್ರಿ ಏಕಾಏಕಿ ಎದೆ ನೋವನ್ನು ಅನುಭವಿಸಿದರು. ತಕ್ಷಣವೇ ಸ್ಥಳೀಯರು ಅವರನ್ನು ತೀರ್ಥಹಳ್ಳಿ ಪಟ್ಟಣದ ಜೆ.ಸಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರು. ಆದರೆ ದುರಾದೃಷ್ಟವಶಾತ್ ಮಾರ್ಗ ಮಧ್ಯೆ ವಿಜು ಅವರು ಕೊನೆಯುಸಿರೆಳೆದಿದ್ದಾರೆ. ಮೃತದೇಹವನ್ನು ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಕೇರಳದಿಂದ ಆಗಮಿಸುವ ಕುಟುಂಬಸ್ಥರ ಆಗಮನದ ನಂತರ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿತ್ರರಂಗದ ಮತ್ತೊಂದು ಸಾವು:

ಇತ್ತೀಚೆಗಷ್ಟೆ ಕಾಂತಾರ ಚಾಪ್ಟರ್ 1 ಚಿತ್ರದಲ್ಲಿ ನಟಿಸುತ್ತಿದ್ದ ಮತ್ತೊಬ್ಬ ಹಾಸ್ಯನಟ ರಾಕೇಶ್ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದರು. ಶೂಟಿಂಗ್‌ನಿಂದ ಬಿಡುವು ಪಡೆದು ಗೆಳೆಯನ ಮದುವೆಗೆ ಹಾಜರಾಗಿದ್ದ ಅವರು, ಡ್ಯಾನ್ಸ್ ಮಾಡುತ್ತಿದ್ದ ಸಂದರ್ಭದಲ್ಲೇ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಸಾವಿನ ಬಗ್ಗೆ ಖಚಿತಪಡಿಸಿದ್ದರು. ರಾಕೇಶ್ ಕಿರುತೆರೆಯಲ್ಲಿ ಹಾಸ್ಯ ಕಾರ್ಯಕ್ರಮಗಳ ಮೂಲಕ ರಾಜ್ಯದಾದ್ಯಂತ ತುಂಬಾ ಪ್ರಸಿದ್ಧಿ ಪಡೆದಿದ್ದರು. ರಾಕೇಶ್ ಸಾವಿನ ಸುದ್ದಿ ಚಿತ್ರತಂಡಕ್ಕೆ ಭಾರೀ ಆಘಾತವನ್ನು ನಿಡಿತ್ತು. ಇದೀಗ ಮತ್ತೊಬ್ಬ ಕಲಾವಿದ ವಿಜು ಅವರ ನಿಧನದ ಸುದ್ದಿ ಚಿತ್ರತಂಡಕ್ಕೂ ಅಭಿಮಾನಿಗಳಿಗೆ ಶಾಕ್ ಉಂಟಾಗಿದೆ.

ಅಂತಿಮ ಶ್ರದ್ಧಾಂಜಲಿ:

ಸೃಜನಾತ್ಮಕತೆಯ ಮೆರುಗು ನೀಡುತ್ತಿದ್ದ ಮಿಮಿಕ್ರಿ ಕಲಾವಿದ ವಿಜು ಅವರು ಹಲವಾರು ಭಾಷೆಗಳಲ್ಲಿ ನಟನೆ, ಮಿಮಿಕ್ರಿ ಪ್ರದರ್ಶನಗಳಿಂದ ಜನಪ್ರಿಯತೆ ಗಳಿಸಿದ್ದವರು. ಅವರ ಅಕಾಲಿಕ ನಿಧನಕ್ಕೆ ಚಿತ್ರರಂಗದ ಹಲವು ತಾರೆಯರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಮುಖ್ಯಾಂಶಗಳು:

  • ಸ್ಥಳ: ಆಗುಂಬೆ ಹೋಂ ಸ್ಟೇ, ತೀರ್ಥಹಳ್ಳಿ ತಾಲೂಕು
  • ಮೃತರು: ವಿಜು ವಿ.ಕೆ, ತ್ರಿಶೂರ್, ಕೇರಳ
  • ಕಾರಣ: ಹೃದಯಾಘಾತ
  • ಆಸ್ಪತ್ರೆ: ತೀರ್ಥಹಳ್ಳಿ ಜೆ.ಸಿ ಆಸ್ಪತ್ರೆ
  • ಸಿನಿಮಾ: ಕಾಂತಾರ ಚಾಪ್ಟರ್ 1

ಕಾಂತಾರ ಸಿನಿಮಾದ ಮೂವರು ಕಲಾವಿದರ ಸಾವು:

ಕಾಂತಾರ ಚಾಪ್ಟರ್ 1 ಚಿತ್ರತಂಡದಲ್ಲಿ ಕೆಲಸ ಮಾಡುತ್ತಿದ್ದ ಕಪಿಲ್ ಸಾವನ್ನಪ್ಪಿದ್ದರು. ಶೂಟಿಂಗ್‌ನ ಬಿಡುವಿನ ಸಮಯದಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರು ಬಳಿಯಿರುವ ಸೌಪರ್ಣಿಕಾ ನದಿಯಲ್ಲಿ ಕಪಿಲ್ ಸ್ನೇಹಿತರೊಂದಿಗೆ ಈಜಾಡಲು ಹೋದಾಗ ಆಕಸ್ಮಿಕವಾಗಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಮೇ 6ರ ಸಂಜೆ 4 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿತ್ತು. ಕಪಿಲ್ ಮುಳಗಿದ್ದನ್ನು ಕಂಡ ಅವರ ಸ್ನೇಹಿತರು ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಈಜುಪಟುಗಳೊಂದಿಗೆ ಸ್ಥಳಕ್ಕೆ ಬಂದ ಪೊಲೀಸರು 3 ಗಂಟೆಗಳ ಕಾರ್ಯಾಚರಣೆ ನಡೆಸಿ ರಾತ್ರಿ 7 ಗಂಟೆಯ ಸುಮಾರಿಗೆ ಕಪಿಲ್ ಶವವನ್ನು ಪತ್ತೆ ಮಾಡಿದ್ದರು.

'ಕಾಂತಾರ' ಸಿನಿಮಾ ಪ್ರೀಕ್ವೇಲ್ ಆಗಿರುವ 'ಕಾಂತಾರ: ಅಧ್ಯಾಯ 1' ಸಿನಿಮಾವು ಅಕ್ಟೋಬರ್ 2ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡುತ್ತಿರುವ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಬೇರೆ ಯಾವೆಲ್ಲಾ ಕಲಾವಿದರು ನಟಿಸುತ್ತಿದ್ದಾರೆ ಎಂಬುದರ ಕುರಿತು ಈವರೆಗೂ ಯಾವುದೇ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಇನ್ನು ಈ ಸಿನಿಮಾದ ಶೂಟಿಂಗ್ ವೇಳೆ ಇದೀದ ಮೂವರು ಕಲಾವಿದರೊಬ್ಬರು ಸಾವನ್ನಪ್ಪಿದ್ದಾರೆ.

ಮೃತರು:

  • ಕೇರಳ ಮೂಲದ ಎಂ.ಎಫ್. ಕಪಿಲ್ (ಮೇ 6)
  • ಕರ್ನಾಟಕದ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ (ಮೇ 12)
  • ಕೇರಳ ತ್ರಿಶೂರ್ ಮೂಲದ ವಿಜು ವಿಕೆ (ಜೂ.12)