ಕಾಂತಾರ 1ಗೆ ಎದುರಾಯ್ತು ಮತ್ತೊಂದು ಅಪತ್ತು, ಸೆಟ್‌ನಲ್ಲಿದ್ದ ಕಲಾವಿದ ಸಾವು
ಬಹುನಿರೀಕ್ಷಿತ ಕಾಂತಾರ 1 ಸಿನಿಮಾಗೆ ದೇಶವೇ ಕಾಯುತ್ತಿದೆ. ಆದರೆ ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ಈ ಸಿನಿಮಾಗೆ ಸಮಸ್ಯೆ ಹೆಚ್ಚಾಗುತ್ತಿದೆ. ಇದೀಗ ಸೆಟ್‌ನಲ್ಲಿದ್ದ ಕಾಂತಾರ ಸಿನಿಮಾ ಕಲಾವಿದ ಮೃತಪಟ್ಟಿರುವುದು ಅತಂಕ ಹೆಚ್ಚಿಸಿದೆ.

ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ಕಾಂತಾರ ಸಿನಿಮಾ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು. 16 ಕೋಟಿ ರೂಪಾಯಿ ಬಜೆಟ್ ಸಿನಿಮಾ ಬರೋಬ್ಬರಿ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿತ್ತು. ಈ ಸಿನಿಮಾವನ್ನು ದೇಶವೇ ಮೆಚ್ಚಿಕೊಂಡಿತ್ತು. ಇದೀಗ ಈ ಸಿನಿಮಾ ಮೊದಲ ಭಾಗ ನಿರ್ಮಾಣಗೊಳ್ಳುತ್ತಿದೆ. ಈ ಸಿನಿಮಾಗಾಗಿ ಭಾರತೀಯರು ಕಾಯುತ್ತಿದ್ದಾರೆ. ಆದರೆ ಈ ಸಿನಿಮಾ ಹಲವು ಅಡೆ ತಡೆ ಎದುರಿಸುತ್ತಿದೆ.
ಕಾಂತಾರ ಸಿನಿಮಾ ಚಾಪ್ಟರ್ 1 ಸಿನಿಮಾ ಮೇಲಿಂದ ಮೇಲೆ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದೀಗ ಕಾಂತಾರ 1 ಸಿನಿಮಾ ಸೆಟ್‌ನಲ್ಲಿದ್ದ ಕಲಾವಿದ ಮೃತಪಟ್ಟಿದ್ದಾನೆ. ಉಡುಪಿ ಜಿಲ್ಲೆಯಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ವೇಳೆ ಅವಘಡವೊಂದು ಸಂಭವಿಸಿದೆ. ಕಾಂತಾರ ಸೆಟ್‌ನಲ್ಲಿದ್ದ ಕಲಾವಿದ ಕಪಿಲ್ ಸೌಪರ್ಣಿಕಾ ನದಿಯಲ್ಲಿ ಮಳುಗಿ ಸಾವು ಕಂಡಿದ್ದಾನೆ.
ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಕಪಿಲ್ ಕಾಂತಾರ 1 ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ. ಕೊಲ್ಲೂರು ಭಾಗದಲ್ಲಿ ಕಾಂತಾರ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಶೂಟಿಂಗ್ ಮುಗಿಸಿದ ಕಪಿಲ್ ಹಾಗೂ ಇತರರು ಸೌರ್ಪಣಿಕಾ ನದಿಯಲ್ಲಿ ಈಜಲು ತೆರಳಿದ್ದಾರೆ. ಈ ವೇಳೆ ನೀರಿನ ಆಳ ತಿಳಿಯದ ಕಪಿಲ್ ಮುಳುಗಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.ಇಂದು ಸಂಜೆ ಈ ಘಟನೆ ನಡೆದಿದೆ.
ಕಾಂತಾರ ಸಿನಿಮಾ 1ಗೆ ಹಲವು ವಿಘ್ನಗಳು ಎದುರಾಗಿದೆ. 2024ರಲ್ಲಿ ಶೂಟಿಂಗ್‌ನಲ್ಲಿ ತೊಡಗಿದ್ದ ವೇಳೆ ಕಾಂತಾರ 1 ಸಿನಿಮಾದ ಕಲಾವಿದರಿದ್ದ ಬಸ್ ಅವಘಾತಕ್ಕೀಡಾಗಿತ್ತು. ಉಡುಪಿ ಬಳಿ ನಡೆದ ಅಪಘಾತದಲ್ಲಿ ಬಸ್ ಪಲ್ಟಿಾಯಾಗಿ ಹಲವರು ಗಾಯಗೊಂಡಿದ್ದರು. ಈ ಘಟನೆ ಭಾರಿ ಆತಂಕ ತಂದಿತ್ತು.
ಹಾಸನದ ಡೀಮ್ಡ್ ಅರಣ್ಯದಲ್ಲಿ ಶೂಟಿಂಗ್ ಮಾಡುತ್ತಿದ್ದ ಕಾಂತಾರ ಚಿತ್ರ ತಂಡಕ್ಕೆ ಸಮಸ್ಯೆ ಎದುರಾಗಿತ್ತು. ಸ್ಫೋಟಕ ವಸ್ತುಗಳ ಬಳಕೆ ಆರೋಪ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಸ್ಫೋಟಗಳು ವನ್ಯ ಜೀವಿಗಳಿಗೆ ಸಮಸ್ಯೆ ಮಾಡುತ್ತಿದೆ. ಇದು ನಿಯಮ ಬಾಹಿರ ಅನ್ನೋ ವಿವಾದ ಕಾಂತಾರ ಸಿನಿಮಾ 1ಗೆ ಹಿನ್ನಡೆ ತಂದಿತ್ತು. ಇತ್ತ ಆರಂಭಿಕ ದಿನದಲ್ಲಿ ಕಾಂತಾರ 1 ಸಿನಿಮಾ ಕಲಾವಿದರಿಗೆ ವೇತನ ನೀಡಿಲ್ಲ ಅನ್ನೋ ಆರೋಪವೂ ಕೇಳಿಬಂದಿತ್ತು.
ಇವು ಕಾಂತಾರ1 ಸಿನಿಮಾಗೆ ಅಂಟಿಕೊಂಡ ವಿವಾದ , ಸಮಸ್ಯೆಗಳಾಗಿದೆ. ಆದರೆ ಇಷ್ಟಕ್ಕೆ ಎಲ್ಲವೂ ಮುಗಿದಿಲ್ಲ. ಕಾಂತಾರ ಸಿನಿಮಾದಿಂದ ತುಳುನಾಡಿನ ಆರಾಧ್ಯ ದೈವಗಳನ್ನು ಅಣಕಿಸುವ ಕೆಲಸವಾಗುತ್ತಿದೆ. ವೇಷ ತೊಟ್ಟು ಅಣಕು ಮಾಡುತ್ತಿದ್ದಾರೆ. ವೇದಿಕೆಗಳಲ್ಲಿ, ರಿಯಾಲಿಟಿ ಶೋಗಳಲ್ಲಿ, ಕಾಲೇಜುಗಳಲ್ಲಿ ದೈವದ ನರ್ತನೆ ಮಾಡುತ್ತಿದ್ದಾರೆ. ಇದು ದೈವಾರಾಧನೆ, ನಂಬಿಕೆಗೆ ಧಕ್ಕೆ ತಂದಿದೆ ಅನ್ನೋ ಆರೋಪ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕೇಳಿಬಂದಿತ್ತು. ಹೀಗಾಗಿ ಸಿನಿಮಾ ಬ್ಯಾನ್ ಮಾಡಬೇಕು ಎಂಬ ಆಗ್ರಹವೂ ವ್ಯಕ್ತವಾಗಿತ್ತು.
ಇತ್ತೀಚೆಗೆ ರಿಷಬ್ ಶೆಟ್ಟಿ ಮಂಗಳೂರಿನಲ್ಲಿ ಇದೇ ಭೂತಾರಧಾನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪಂಜುರ್ಲಿ ದೈವ ರಿಷಬ್ ಶೆಟ್ಟಿ ಸಂಸಾರ ಹಾಳು ಮಾಡಲು ಹಲವರು ಯತ್ನಿಸುತ್ತಿದ್ದಾರೆ ಅನ್ನೋ ಎಚ್ಚರಿಕೆಯನ್ನು ದೈವ ನೀಡಿತ್ತು. ಈ ಮೂಲಕ ಕಾಂತಾರ 1 ಸನಿಮಾ ಶೂಟಿಂಗ್ ಆರಂಭಗೊಂಡ ಬಳಿಕ ರಿಷಬ್ ಶೆಟ್ಟಿ ಹಲವು ಅಡೆ ತಡೆ ಎದುರಿಸುತ್ತಿದ್ದಾರೆ.