Asianet Suvarna News Asianet Suvarna News

Drishya 2 ಹುಟ್ಟುಹಾಕಿದ ಪ್ರಶ್ನೆಗಳು, ಹಿರಿಯ ನಟ ಅನಂಗ್‌ನಾಗ್ ಲೇಖನ!

ಇವತ್ತು ಬಿಡುಗಡೆ ಆಗುತ್ತಿರುವ ದೃಶ್ಯ 2 ಚಿತ್ರದಲ್ಲಿ ಚಿಕ್ಕದಾದರೂ ಪ್ರಮುಖ ಪಾತ್ರದಲ್ಲಿ ಅನಂತ್‌ನಾಗ್ ಕಾಣಿಸಿಕೊಳ್ಳುತ್ತಿದ್ದಾರೆ. ಅಪರಾಧ ಮತ್ತು ಶಿಕ್ಷೆಗೆ ಸಂಬಂಧಿಸಿದ ದೃಶ್ಯ 2 ಚಿತ್ರದ ಕತೆಯನ್ನು ಇಟ್ಟುಕೊಂಡು ತಮ್ಮ ನೆನಪುಗಳನ್ನು ಸಂಚಿಯನ್ನು ಅವರಿಲ್ಲಿ ಬಿಚ್ಚಿಟ್ಟಿದ್ದಾರೆ. 

Kannada Veteran actor Anant Nag pens down impact of Drishya 2 film vcs
Author
Bangalore, First Published Dec 10, 2021, 9:37 AM IST

ಅನಂತನಾಗ್‌

ಫ್ಯೋದೊರ್ ದಾಸ್ತೊಯೆವಸ್ಕಿಯ ಕಾದಂಬರಿ ‘ಕ್ರೈಮ್‌ ಅಂಡ್‌ ಪನಿಶ್‌ಮೆಂಟ್‌’ ಓದಿದವರಿಗೆ ಅಲ್ಲಿ ನಡೆಯುವ ಅಪರಾಧ ಮತ್ತು ಶಿಕ್ಷೆಯ ಕುರಿತ ವಾಗ್ವಾದಗಳೆಲ್ಲ ನೆನಪಲ್ಲಿ ಉಳಿದಿರುತ್ತವೆ. ಅಪರಾಧಕ್ಕೆ ತಕ್ಕ ಶಿಕ್ಷೆ ಯಾವುದು, ಆ ಶಿಕ್ಷೆ ಯಾರು ಕೊಡಬೇಕು, ಯಾವಾಗ ಕೊಡಬೇಕು? ಹಾಗೆ ಕೊಡುವ ಶಿಕ್ಷೆ ನ್ಯಾಯಯುತ ಆಗಿರುತ್ತದೆಯೋ ಎಂಬಿತ್ಯಾದಿ ವಿಷಯಗಳನ್ನೂ ನಾವೆಲ್ಲ ಆಲೋಚಿಸುತ್ತಿರುತ್ತೇವೆ. ನ್ಯಾಯಪರತೆಯ ಬಗ್ಗೆ ಯೋಚಿಸಿದಾಗೆಲ್ಲ ನನಗೆ ಥಟ್ಟನೆ ನೆನಪಾಗುವುದು 'Justice must not only be done,but must also be seen to be done' ಅಂದರೆ ನ್ಯಾಯಯುತವಾದ ತೀರ್ಪು ನೀಡಿದರೆ ಸಾಲದು, ನೀಡಿದ ತೀರ್ಪು ನ್ಯಾಯಯುತ ಎಂಬುದು ಎಲ್ಲರಿಗೂ ತಿಳಿಯುವಂತಿರಬೇಕು.

ಇತ್ತೀಚೆಗೆ ನಾನು ದೃಶ್ಯ-2 ಚಿತ್ರದಲ್ಲಿ ನಟಿಸಿದೆ. ತನ್ನ ಕುಟುಂಬವನ್ನು ರಕ್ಷಿಸಲಿಕ್ಕೆ, ತನ್ನ ಮಗಳನ್ನು ಕಾಪಾಡಲಿಕ್ಕೆ ಆ ಮನೆಯ ಯಜಮಾನ ಒಂದು ಕೊಲೆ ಮಾಡಿದ್ದಾನೆ. ಪೊಲೀಸರು ಅವನ ಬೆನ್ನುಬಿದ್ದಿದ್ದಾರೆ. ಅವನು ಶಿಕ್ಷೆಯಿಂದ ಪಾರಾಗುತ್ತಾನೋ ಇಲ್ಲವೋ ಎಂಬುದು ಕತೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಇಂಥ ಘಟನೆ ಎದುರಾದಾಗ ನಾವು ಪೊಲೀಸರ ಪರ ನಿಲ್ಲುತ್ತೇವೆ. ಕೊಲೆ ಮಾಡಿದವನಿಗೆ ಶಿಕ್ಷೆಯಾಗಲಿ ಎಂದು ಬಯಸುತ್ತೇವೆ. ಆದರೆ ದೃಶ್ಯ ಚಿತ್ರದ ಮೊದಲ ಭಾಗದಲ್ಲಿ ಪ್ರೇಕ್ಷಕ, ಕೊಲೆ ಮಾಡಿದವನ ಪರವಾಗಿ ನಿಲ್ಲುತ್ತಾನೆ. ತನ್ನ ಮೇಲೆ ಆದ ಅನ್ಯಾಯಕ್ಕೆ ತಾನೇ ಶಿಕ್ಷೆ ಕೊಟ್ಟಿರುವುದು ತಪ್ಪೇನಲ್ಲ ಎಂದು ನೋಡುಗ ಭಾವಿಸುವಂತೆ ಕತೆಯನ್ನು ಹೆಣೆದಿದ್ದಾರೆ.

Kannada Veteran actor Anant Nag pens down impact of Drishya 2 film vcs

ಇಂಥ ಹೊತ್ತಲ್ಲೇ ನಮ್ಮ ನ್ಯಾಯಾಂಗದ ಬಗ್ಗೆ ಅನೇಕ ಪ್ರಶ್ನೆಗಳು ಮೂಡುತ್ತವೆ. ನ್ಯಾಯಾಲಯಗಳಲ್ಲಿ ನ್ಯಾಯ ಸಿಗುತ್ತದೆಯೋ ಇಲ್ಲವೋ ಅನ್ನುವುದು ಮೊದಲ ಪ್ರಶ್ನೆ. ಒಂದು ವೇಳೆ ನ್ಯಾಯ ಸಿಕ್ಕರೆ ಯಾವಾಗ ಸಿಗುತ್ತದೆ ಅನ್ನುವುದು ಮತ್ತೊಂದು ಪ್ರಶ್ನೆ. ನ್ಯಾಯವಿಳಂಬ ನಮ್ಮ ನ್ಯಾಯಾಂಗ ವ್ಯವಸ್ಥೆಯ ದೋಷ ಎಂದು ಉನ್ನತ ನ್ಯಾಯಾಧೀಶರೇ ಒಪ್ಪಿಕೊಂಡಿದ್ದಾರೆ. ಸರಿಯಾದ ಸಮಯಕ್ಕೆ ನ್ಯಾಯ ಸಿಗದೇ ಹೋದರೆ, ಅದು ನ್ಯಾಯವೇ ಅಲ್ಲ ಅನ್ನುವ ಮಾತೂ ಇದೆ. ಇದನ್ನೆಲ್ಲ ಮುಂದಿಟ್ಟುಕೊಂಡು ಯೋಚಿಸಿದರೆ ನ್ಯಾಯಯುತ ಹತ್ಯೆ ಮಾಡಿದ ಕಥಾನಾಯಕನ ಮೇಲೆ ಪ್ರೇಕ್ಷಕರಿಗೆ ಅನುಕಂಪ ಹುಟ್ಟುವುದು ಆಶ್ಚರ್ಯಕರ ಸಂಗತಿಯೇನೂ ಅಲ್ಲ.

ಈ ಚಿತ್ರದ ಎರಡನೆಯ ಭಾಗದಲ್ಲಿ ನಾನು ನಟಿಸಿದ್ದೇನೆ. ನನ್ನ ಪಾತ್ರ ಪುಟ್ಟದಾದರೂ ಅದರ ಪರಿಣಾಮ ಸಣ್ಣದೇನಲ್ಲ. ನನಗೆ ಕಥಾನಾಯಕ ಅವನ ಕತೆಯನ್ನು ಹೇಳುತ್ತಿರುತ್ತಾನೆ. ಆ ಕತೆಯನ್ನು ಹೇಗೆ ಕೊನೆಗೊಳಿಸಬೇಕು ಎಂಬ ವಿಚಾರದಲ್ಲಿ ಸಣ್ಣ ಗೊಂದಲ ಅವನೊಳಗೇ ಇರುತ್ತದೆ. ಯಾವ ತಪ್ಪೇ ಮಾಡಿರಲಿ, ನಾಯಕ ಗೆಲ್ಲಬೇಕೆಂದು ಪ್ರೇಕ್ಷಕ ಬಯಸುತ್ತಾನೆ ಅನ್ನುವ ಮಾತೂ ಅವನ ಬಾಯಿಯಿಂದ ಬರುತ್ತದೆ.

Drishya 2 'ಮಳೆಬಿಲ್ಲೇ ಮರೆಯಾಗುವೇ ನೀ ಏಕೆ' ಎಂದು ಹಾಡಿದ ರಾಜೇಂದ್ರ ಪೊನ್ನಪ್ಪ

ಈ ಹಂತದಲ್ಲಿ ನನಗೆ ಅನ್ನಿಸಿದ್ದಿಷ್ಟು: ಒಬ್ಬ ಅಪರಾಧಿಗೆ ನ್ಯಾಯಾಲಯದಲ್ಲಿ ಶಿಕ್ಷೆ ಆಗದೇ ಇರಬಹುದು. ಆದರೆ ಪ್ರತಿಯೊಬ್ಬನ ಮನಸ್ಸಿನೊಳಗೂ ಒಂದು ನ್ಯಾಯಾಲಯ ಇರುತ್ತದೆ. ಅಲ್ಲಿ ವಾದ-ಪ್ರತಿವಾದಗಳು ನಡೆಯುತ್ತಿರುತ್ತವೆ. ತಪ್ಪು ಮಾಡಿದ್ದೇನೆ ಅಂತ ನಮ್ಮ ಒಳಮನಸ್ಸಿಗೆ ಅನ್ನಿಸಿದರೆ, ಹೊರ ಜಗತ್ತಿನಲ್ಲಿ ಶಿಕ್ಷೆ ಆಗದೇ ಹೋದರೂ, ತಪ್ಪು ಮಾಡಿದೆ ಎಂಬ ಕೊರಗು ಮಾತ್ರ ಕೊನೆಯ ತನಕವೂ ಕಾಡುತ್ತದೆ. ಆ ಪಾಪಪ್ರಜ್ಞೆಯಲ್ಲಿ ಬದುಕುವುದು ಕೂಡ ಶಿಕ್ಷೆಯೇ.

ಆದರೆ, ತಾನು ಮಾಡಿದ್ದು ನ್ಯಾಯಯುತ ಅಂತ ಆತ್ಮಸಾಕ್ಷಿಗೆ ಅನ್ನಿಸಿದರೆ, ನ್ಯಾಯಾಲಯ ಶಿಕ್ಷೆ ಕೊಟ್ಟರೂ ಆ ವ್ಯಕ್ತಿಯ ನೈತಿಕ ಸ್ಥೈರ್ಯ ಕುಗ್ಗುವುದಿಲ್ಲ. ಅಂಥ ನ್ಯಾಯಯುತವಾದ ಶಿಕ್ಷೆಯನ್ನು ಪ್ರೇಕ್ಷಕ ಕೂಡ ಒಪ್ಪುತ್ತಾನೆ. ಕಾನೂನಿನ ಪ್ರಕಾರ ಆತ ಮಾಡಿದ್ದು ತಪ್ಪೇ ಆದರೂ ಆ ಹೊತ್ತಲ್ಲಿ ಆತ ದುಷ್ಟಶಿಕ್ಷಣಕ್ಕಾಗಿ ಹಾಗೆ ಮಾಡಬೇಕಾಗಿತ್ತು ಅಂತಲೇ ಪ್ರೇಕ್ಷಕರಿಗೂ ಅನ್ನಿಸುತ್ತದೆ.

ಶಂಕರನ ನಂತರ ಅತೀವ ನೋವು ಕೊಟ್ಟ ಅಗಲಿಕೆ: ಅನಂತ್‌ ನಾಗ್‌

ನೂರು ಅಪರಾಧಿಗಳಿಗೆ ಶಿಕ್ಷೆ ಆಗದೇ ಹೋದರೂ ಚಿಂತೆಯಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬ ಬಹಳ ಪ್ರಸಿದ್ಧವಾದ ಹೇಳಿಕೆಯೊಂದಿದೆ. ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಅನ್ನುವುದು ನಿಜ. ಅದಕ್ಕಾಗಿ ನೂರು ಅಪರಾಧಿಗಳು ಶಿಕ್ಷೆಯಿಂದ ಪಾರಾಗುವ ಸ್ಥಿತಿ ಬರಲಿ ಅನ್ನುವುದು ಮಾತ್ರ ಸರಿಯಲ್ಲ. ಪ್ರತಿ ಅಪರಾಧಿಗೂ ಪ್ರತಿ ಅಪರಾಧಕ್ಕೂ ಶಿಕ್ಷೆಯಾಗಲೇಬೇಕು.

ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ ಇರುವ ರಾಷ್ಟ್ರಗಳಲ್ಲಿ ನ್ಯಾಯವಿಳಂಬದ ಪ್ರಕರಣಗಳು ಹೆಚ್ಚು. ಇಂಗ್ಲೆಂಡಿನ ನ್ಯಾಯಾಲಯವಂತೂ ಆರ್ಥಿಕ ಅಪರಾಧಿಗಳಿಗೆ ರಕ್ಷಣೆ ನೀಡುವುದಕ್ಕೂ ಮುಂದಾಗಿರುವುದನ್ನು ನೋಡಬಹುದು. ಆದರೆ ಇಸ್ಲಾಮಿಕ್‌ ರಾಷ್ಟ್ರಗಳಲ್ಲಿ ಅಪರಾಧಕ್ಕೆ ಕ್ರೂರವಾದ ಶಿಕ್ಷೆ ತ್ವರಿತವಾಗಿಯೇ ಸಿಗುತ್ತದೆ. ಈ ವ್ಯತ್ಯಾಸವನ್ನು ಕೂಡ ನಾವು ಗಮನಿಸಬೇಕು.

Follow Us:
Download App:
  • android
  • ios