Asianet Suvarna News

ಕೋಟೆ ನಾಡಿನ ನಿಜದನಿಯ ಬಂಡಾಯಗಾರ ಬಿ.ಎಲ್‌ ವೇಣುಗೆ 75ರ ಸಂಭ್ರಮ!

ಜನಪ್ರಿಯ ಸಾಹಿತಿ ಹಾಗೂ ಕಾದಂಬರಿಕಾರ ಬಿ.ಎಲ್‌ ವೇಣು ಅವರಿಗೆ ಈಗ 75 ಸಂಭ್ರಮ. ಮೇ 24 ಕ್ಕೆ 75 ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಮೊನಚು ಬರವಣಿಗೆ, ನಿಷ್ಟುರ ಸ್ವಭಾವದ ವೇಣು ಅವರ ಅಂತರಂಗದಲ್ಲಿ ಸದಾ ಬಂಡಾಯ ಮನೋಧರ್ಮ ಜಾಗೃತ ಸ್ಥಿತಿಯಲ್ಲಿರುತ್ತದೆ. ಐವತ್ತು ವರ್ಷಗಳಷ್ಟುಸುಧೀರ್ಘ ಕಾಲ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ವೇಣು ಅವರ ಅಕ್ಷರ ಕೃಷಿ ನಿಂತಿಲ್ಲ. ಕರೋನಾದ ಕರಾಳ ದೃಶ್ಯಗಳ ನಡುವೆಯೂ ದುರ್ಗಾಯಣ ಕಾದಂಬರಿ ಬರೆಯುವುದರಲ್ಲಿ ತಲ್ಲೀನರಾಗಿದ್ದಾರೆ.

Kannada Novelist and Story writer BL venu celebrates 75th year
Author
Bangalore, First Published May 24, 2020, 2:13 PM IST
  • Facebook
  • Twitter
  • Whatsapp

ಚಿಕ್ಕಪ್ಪನಹಳ್ಳಿ ಷಣ್ಮುಖ

1849 ರಲ್ಲಿ ಬ್ರಿಟಿಷರ ವಿರುದ್ದ ನಡೆದ ದಂಗೆಯಲ್ಲಿ ಚಿತ್ರದುರ್ಗ ನೆಲದಲ್ಲಿ ಆದ ಬೆಳವಣಿಗೆ ಕುರಿತ ಕಾದಂಬರಿಯದು. ಅವರೇ ಹೇಳುವಂತೆ ಈ ಘಟನಾವಳಿಗಳು ಚಿತ್ರದುರ್ಗವಷ್ಟೇ ಏಕೆ ನಾಡಿನ ಬಹುತೇಕ ಐತಿಹಾಸಿಕ ಚಿತ್ರಣದಲ್ಲಿ ದಾಖಲಾಗಿಲ್ಲ. ಖ್ಯಾತ ಸಂಶೋಧಕ ಲಕ್ಷ್ಮಣ್‌ ತೆಲಗಾವಿ ಹಾಗೂ ಡಾ.ಬಿ.ನಂಜುಂಡಸ್ವಾಮಿ ಅವರ ಪ್ರಭಾವ ಈ ಕಾದಂಬರಿ ಮೇಲಿದೆ ಎನ್ನುತ್ತಾರೆ.

ಆರೋಗ್ಯ ಇಲಾಖೆಯಲ್ಲಿ ಕಾರಕೂನರಾಗಿ ಕಾರ್ಯನಿರ್ವಹಿಸುತ್ತಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ವೇಣು ನಾಡಿನಲ್ಲಿ ನಡೆದ ಎಲ್ಲ ಸಾಮಾಜಿಕ ಹಾಗೂ ಭಾಷಾ ಚಳವಳಿಯನ್ನು ಹತ್ತಿರದಿಂದ ನೋಡಿದರಾದರೂ ಚಳವಳಿಗೆ ಧುಮುಕದ ಬಂಡಾಯಗಾರನಾಗಿಯೇ ಮನೋಧರ್ಮವ ಕಾಪಾಡಿಕೊಂಡು ಬಂದರು. ಐದುವರೆ ಅಡಿಯ ಈ ಮನುಷ್ಯನಲ್ಲಿ ಸಾಮಾಜಿಕ ಅನಿಷ್ಟ, ಅಸಮಾನತೆ, ಜಾತಿ ವ್ಯವಸ್ಥೆಯ ಕರಾಳತನಗಳ ವಿರುದ್ದದ ಗಟ್ಟಿದನಿಗಳು ಸದಾ ಸ್ಪೋಟಗೊಳ್ಳುತ್ತಿದ್ದವು. ಹಾಗಾಗಿಯೇ ತುಂಬಾ ಹತ್ತಿರದಲ್ಲಿದ್ದವರಿಗೆ ವೇಣು ಸಿಡುಕರಂತೆ ಕಾಣುತ್ತಿದ್ದರು. ವೇದಿಕೆ ಯಾವುದೇ ಇರಲಿ, ಖಾದಿ, ಕಾವಿ, ಖಾಕಿ ವಿರುದ್ದ ಸಂದರ್ಭ ಸಿಕ್ಕಾಗಲೆಲ್ಲಾ ಝಾಡಿಸುತ್ತಿದ್ದರು. ಈ ಕಾರಣಕ್ಕಾಗಿಯೇ ಮಠೀಯ ವ್ಯವಸ್ಥೆ ತಾಮರಸ ಜಲದಂತೆ ಅಂತರ ಕಾಯ್ದುಕೊಂಡಿತ್ತು.

ಮದುವೆ ಸೀಕ್ರೇಟ್‌ ಹೇಳಿದ ಕಿಂಗ್ ಖಾನ್ ಆದ್ರು ಫುಲ್ ಎಮೋಷನಲ್!

ನಾನ್‌ ಅಕಾಡೆಮಿಕ್‌ ಆಗಿರುವ ವೇಣು ಅಕಾಡೆಮಿಕ್‌ ವಲಯದಲ್ಲಿ ಎಂದಿಗೂ ಗಂಭೀರ ಚರ್ಚೆಗೆ ಒಳಗಾಗಲಿಲ್ಲ. ವೇಣುನಾ ಹೋಗ್ಲಿ ಬಿಡಪಾ, ಆತ ಚಿತ್ರ ಸಾಹಿತಿ. ಸಿನಿಮಾಗಳಿಗಾಗಿಯೇ ಕಾದಂಬರಿ ಬರಿತಾರೆ ಎಂಬ ನಕಾರಾತ್ಮಕ ಧೋರಣೆಗಳು ಆರಂಭದ ದಿನಗಳಲ್ಲಿ ಸಾಹಿತ್ಯ ವಲಯದಿಂದ ತೇಲಿ ಬಂದವು. ನಂತರ ದಿನಗಳಲ್ಲಿ ಅಕಾಡೆಮಿಕ್‌ಗಳು ಸಿನಿಮಾದ ಕಡೆ ಮುಗಿ ಬಿದ್ದಾಗ ಬಹುತೇಕರಿಗೆ ವೇಣು ಅನುಭವಿಸಿದ ನೋವುಗಳು ನೆನಪಾಗಲೇ ಇಲ್ಲ.

ದಿನ ಪತ್ರಿಕೆಗಳಿಗೆ ಕಥೆ, ಧಾರಾವಾಹಿ ಬರೆಯುತ್ತಲೇ ಸಾಹಿತ್ಯ ಕೃಷಿಗೆ ಮೇಣಿ ಹಿಡಿದ ವೇಣು ಕನ್ನಡಪ್ರಭವ ಎಂದಿಗೂ ಮರೆಯುವುದಿಲ್ಲ. ತಮ್ಮ ಮೊದಲ ಕಥೆ ಕನ್ನಡಪ್ರಭದಲ್ಲಿ ಪ್ರಕಟವಾಯಿತು ಎಂದು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾರೆ. ಅಚ್ಚರಿ ಎನಿಸಬಹುದು, ಕಳೆದ ಮೂವತ್ತು ವರ್ಷಗಳಿಂದ ವೇಣು ಕನ್ನಡಪ್ರಭ ಓದುತ್ತಲೇ ಇದ್ದಾರೆ. ಇಂದಿಗೂ ಅವರ ಮನೆ ಟೇಬಲ್‌ ಮೇಲೆ ಕನ್ನಡಪ್ರಭ ರಾರಾಜಿಸುತ್ತಿದೆ.

ಆಕಸ್ಮಿಕ ಚಿತ್ರರಂಗ ಪ್ರವೇಶ:

ಎಂಭತ್ತರ ಆಸು ಪಾಸಿನಲ್ಲಿ ಆಕಸ್ಮಿಕವಾಗಿ ಚಿತ್ರರಂಗ ಪ್ರವೇಶಿಸಿದ ವೇಣು 67 ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ. ಅವರ 20 ಕಾದಂಬರಿಗಳು ಸಿನಿಮಾಗಳಾಗಿವೆ. ಏಳು ಸಿನಿಮಾಗಳಿಗೆ ಚಿತ್ರಕತೆ ರಚಿಸಿದ್ದಾರೆ. ಅವರು ಬರೆದ ದೊಡ್ಡಮನೆ ಎಸ್ಟೇಟ್‌ ಎಂಬ ಕತೆ ಚಲನ ಚಿತ್ರವಾದದ್ದು ವೇಣು ಸಿನಿಮಾ ರಂಗ ಪ್ರವೇಶಿಸಲು ಕಾರಣವಾಯಿತು.

ಕೊನೆಗೂ ಸಿಗ್ತು ನಿಖಿಲ್-ರೇವತಿ ವೆಡ್ಡಿಂಗ್ ಫೋಟೋಸ್‌; ಹೇಗಿವೆ ನೋಡಿ!

ವೇಣು ಅವರ ಮೊನಚು ಬರವಣಿಗೆಯ ಇಷ್ಟಪಟ್ಟನಿರ್ದೇಶಕ ಸಿದ್ದಲಿಂಗಯ್ಯ ಆರಂಭದಲ್ಲಿ ಪರಾಜಿತ ಚಿತ್ರಕ್ಕೆಸಂಭಾಷಣೆ ಬರೆಯಿಸಿದರು. ನಂತರ ತಮ್ಮ ಪುತ್ರ ಮುರುಳಿಯ ನಾಯಕನಟನಾಗಿ ಪ್ರವೇಶ ಮಾಡಿಸಲು ನಿರ್ಮಿಸಿದ ಪ್ರೇಮಪರ್ವಕ್ಕೂ ವೇಣು ಸಂಭಾಷಣೆ ಬರೆದರು. ಅಂದಿನಿಂದ ಆರಂಭವಾದ ಚಿತ್ರರಂಗದ ನಂಟು ಇಂದಿಗೂ ನಿಂತಿಲ್ಲ.

ಪುಟ್ಟಣ್ಣ ಕಣಗಾಲ್‌ ತಮ್ಮ ಅಮೃತಘಳಿಗೆ ಚಿತ್ರಕ್ಕೆ ಸಂಭಾಷಣೆ ಬರೆಯುವಂತೆ ದೂರದ ಮದ್ರಾಸ್‌ ನಿಂದ ಫೋನ್‌ ಮಾಡಿದ್ದರು. ಪುಟ್ಟಣ್ಣ ಕಣಗಾಲ್‌ ಫೋನ್‌ ಮಾಡಿದಾಗ,ಯಾವ ಪುಟ್ಟಣ್ಣ ಅಂತ ವೇಣು ಕೇಳಿದ್ದರಂತೆ. ನಂತರ ನಾನಪ್ಪಾ ಪುಟ್ಟಣ್ಣ ಕಣಗಾಲ್‌ ಎಂದಾಗ ಬೆಚ್ಚಿದ್ದಾರೆ. ಏಕೆಂದರೆ ವಿಷ್ಣುವರ್ಧನ್‌ ಗೆ ನಟನಾಗಿ ಪ್ರವೇಶ ಮಾಡಿದ ಮೊದಲ ಸಿನಿಮಾ ನಾಗರಹಾವು ಚಿತ್ರೀಕರಣಗೊಂಡಿದ್ದು ಚಿತ್ರದುರ್ಗದ ಕೋಟೆಯಲ್ಲಿ. ಇಂತಹ ನಿರ್ದೇಶಕರು ನನ್ನ ಕೈಲಿ ಸಂಭಾಷಣೆ ಬರೆಸಲು ಮುಂದೆ ಬಂದದ್ದನ್ನು ವೇಣು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ರಾಜಕುಮಾರ್‌ ಸಹೋದರ ವರದರಾಜ್‌, ಭಾರ್ಗವ, ದೊರೆಭಗವಾನ್‌ ,ಡಿ.ರಾಜೇಂದ್ರಸಿಂಗ್‌ ಬಾಬು, ಸೋಮಶೇಖರ್‌ ,ವಿಜಯ್‌ ಒಳಗೊಂಡಂತೆ ಬಹುತೇಕ ನಿರ್ದೇಶಕರು ಹಠ ಹಿಡಿದು ವೇಣು ಕೈಲಿ ಸಂಭಾಷಣೆ ಬರೆಸಿದ್ದಾರೆ. ನಟ ರಾಜೀವ, ನಟಿ ಮಹಲಕ್ಷ್ಮಿ ಹಾಗೂ ದೊಡ್ಡಣ್ಣ ನಟಿಸಿದ ಅಪರಂಜಿ ಚಿತ್ರಕ್ಕೆ ವೇಣು ಬರೆದ ಮೊನಚಾದ ಸಂಭಾಷಣೆ ರಾಜ್ಯ ಪ್ರಶಸ್ತಿ ತಂದು ಕೊಟ್ಟಿತ್ತು. ಚಿತ್ರದುರ್ಗದ ಪ್ರಮುಖ ವೃತ್ತವಾದ ತಿಪ್ಪಜ್ಜಿ ಸರ್ಕಲ್‌ ಆಧಾರವಾಗಿಟ್ಟುಕೊಂಡು ಅವರು ಬರೆದ ಕತೆ ಸಿನಿಮವಾಯಿತು. ಆ ಸಿನಿಮಾದ ಸಂಭಾಷಣೆಗೆ ವೇಣು ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

ಸನ್ನಿ ಲಿಯೋನ್ ನಂಬರ್ ಕೇಳಿ, ಸುದ್ದಿಯಾಗಿದ್ದ ಕಬೀರ್ ಬೇಡಿ!

ಚಿತ್ರದುರ್ಗ ಬಡುಕಟ್ಟು ಸಂಸ್ಕೃತಿಯ ತೂಗು ತೊಟ್ಟಿಲು. ಹಾಗಾಗಿ ಸಾಹಿತ್ಯ ಹಾಗೂ ಸಿನಿಮಾ ಸಂಭಾಷಣೆಯಲ್ಲಿ ವೇಣು ಚಿತ್ರದುರ್ಗ ಪರಿಸರವನ್ನು ಗಾಢವಾಗಿ ಕಟ್ಟಿಕೊಟ್ಟಿದ್ದಾರೆ. ತಳ ಸಮುದಾಯದ ನೋವುಗಳ ತಲಸ್ಫರ್ಷಿಯಾಗಿ ಬಿಚ್ಚಿಟ್ಟಿದ್ದಾರೆ. ಅವರ ಬೆತ್ತಲೆ ಸೇವೆ ಕಾದಂಬರಿ ಇದಕ್ಕೊಂದು ಸ್ಪಷ್ಟಉದಾಹರಣೆ. ಕಟು ವಾಸ್ತವ ನಿರೂಪಣೆ ವೇಣು ಅವರನ್ನು ಜನಪ್ರಿಯತೆಯ ಉತ್ತುಂಗಕ್ಕೆ ಕೊಂಡೊಯ್ದಿತ್ತು. ಸಾಮಾಜಿಕತನ ಅಭಿವ್ಯಕ್ತಿಗೊಳಿಸಿದ ಅವರ ಕ್ರಮಗಳಿಂದಾಗಿಯೇ ಅವರ ಸಾಹಿತ್ಯ ಇಟ್ಟುಕೊಂಡು ಏಳು ಮಂದಿ ಪಿಹೆಚ್‌ ಡಿ ಮಾಡಿದ್ದಾರೆ.

ಏನೇ ಆದ್ರೂ ದುರ್ಗ ಬಿಡಲಿಲ್ಲ

ಚಿತ್ರದುರ್ಗದಲ್ಲಿ ಇದ್ದುಕೊಂಡು ಏನು ಮಾಡುತ್ತೀಯಾ, ಬೆಂಗಳೂರಿಗೆ ಇಲ್ಲವೇ ಮದ್ರಾಸ್‌ ಗೆ ಬಂದು ಬಿಡು. ಸಿನಿಮಾ ಸಂಭಾಷಣೆ ಬರೆದುಕೊಂಡು ಹಾಯಾಗಿ ಇರಬಹುದೆಂದು ಅನೇಕ ನಿರ್ಮಾಪಕರು, ನಿರ್ದೇಶಕರು ವೇಣು ಅವರಿಗೆ ದುಂಬಾಲು ಬಿದ್ದಿದ್ದಾರೆ. ಸಂಭಾಷಣೆ ಬರೆಯಲು ನನಗೆ ಸ್ಟಾರ್‌ ಹೋಟೆಲ್‌ ಗಳ ಕೊಠಡಿ ಇಷ್ಟವಾಗುವುದಿಲ್ಲ. ದುರ್ಗದ ಮನೆಯಲ್ಲಿಯೇ ಇದ್ದುಕೊಂಡು ನೀವು ಕೊಟ್ಟಜವಾಬ್ದಾರಿ ನಿರ್ವಹಿಸುತ್ತೇನೆಂದು ವೇಣು ಹೇಳಿಕೊಂಡು ಬಂದಿದ್ದಾರೆ. ಹಾಗಾಗಿ ವೇಣು ಇಂದಿಗೂ ಚಿತ್ರದುರ್ಗದ ಕೆಳಗೋಟೆಯಲ್ಲಿರುವ ತಮ್ಮ ಮನೆಯಲ್ಲಿ ಕುಳಿತು ಸಾಹಿತ್ಯ ಕೃಷಿ ಮುಂದುವರಿಸಿದ್ದಾರೆ. ಸಿನಿಮಾಗೆ ಹೋದವರು ಕಳೆದು ಹೋಗುತ್ತಾರೆ ಎಂಬ ಮಾತಿದೆ. ಆದರೆ ನಾನು ಎಲ್ಲಿಯೂ ಹೋಗಲಿಲ್ಲ, ಮನೆಯಲ್ಲಿಯೇ ಇದ್ದು ಸಿನಿಮಾಗಳ ಜೊತೆ ನೆಂಟಸ್ಥನ ಉಳಿಸಿಕೊಂಡಿದ್ದೇನೆ ಎಂದು ಹೇಳುತ್ತಾರೆ ವೇಣು.

ದುರ್ಗದ ನೆಲದ ವೇಣುಗೆ ಈಗ ಎಪ್ಪತ್ತೈದರ ಹರೆಯ.

Follow Us:
Download App:
  • android
  • ios