Sakath Song Release: ರ್‍ಯಾಪ್ ಹಾಡಿಗೆ ಗೋಲ್ಡನ್ ಸ್ಟೆಪ್ಸ್ ಹಾಕಿದ ಗಣೇಶ್
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಸಿಂಪಲ್ ಸುನಿ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಸಖತ್ ಸಿನಿಮಾದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದ್ದು, ರ್‍ಯಾಪ್ ಹಾಡಿಗೆ ಗಣೇಶ್ ಗೋಲ್ಡನ್ ಸ್ಟೆಪ್ಸ್ ಹಾಕಿದ್ದಾರೆ.
ಸ್ಯಾಂಡಲ್‌ವುಡ್‌ನ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಮತ್ತು ನಿರ್ದೇಶಕ ಸಿಂಪಲ್ ಸುನಿ (Simple Suni) ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ 'ಸಖತ್' (Sakath) ಸಿನಿಮಾದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದ್ದು, ರ್‍ಯಾಪ್ ಹಾಡಿಗೆ (Rap Song) ಗಣೇಶ್ ಗೋಲ್ಡನ್ ಸ್ಟೆಪ್ಸ್ ಹಾಕಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ಈ ಚಿತ್ರವು ಇದೇ ತಿಂಗಳ 12ರಂದು ಬಿಡುಗಡೆಯಾಗಬೇಕಿತ್ತು. ಆದರೆ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಅಗಲಿಕೆಯ ಹಿನ್ನೆಲೆಯಲ್ಲಿ ಚಿತ್ರತಂಡ ಚಿತ್ರವನ್ನು ನವೆಂಬರ್ 26ಕ್ಕೆ ಬಿಡುಗಡೆ ಮಾಡುತ್ತಿದೆ.
ನವೆಂಬರ್ 26ಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ 'ಸಖತ್' ಸಿನಿಮಾ ರಿಲೀಸ್
ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ 'ಸಖತ್' ಚಿತ್ರದ ಟೈಟಲ್ ಹಾಡಿಗೆ ನಿಂತಲ್ಲೇ ಡ್ಯಾನ್ಸ್ ಮಾಡುವಂತ ರ್‍ಯಾಪ್ ಸಾಹಿತ್ಯವನ್ನು ಸಿಂಪಲ್ ಸುನಿ ಹಾಗೂ ರ್‍ಯಾಪರ್ ಸಿದ್ (Rapper Sid) ಬರೆದಿದ್ದಾರೆ. ಜೂಡಾ ಸ್ಯಾಂಡಿ (Judah Sandhy) ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಪಂಚಮ್ ಜೀವಾ, ಜೂಡಾ ಸ್ಯಾಂಡಿ, ರ್‍ಯಾಪರ್ ಸಿದ್ ಕಂಠಸಿರಿಯಲ್ಲಿ ಮೂಡಿಬಂದಿದ್ದು, ಬಿ.ಧನಂಜಯ್ (B.Dhananjay) ಹಾಡಿಗೆ ಕೊರಿಯೋಗ್ರಾಫಿ ಮಾಡಿದ್ದಾರೆ. ಟಿ.ವಿ. ರಿಯಾಲಿಟಿ ಶೋ ಮತ್ತು ಕೋರ್ಟ್ ಕೇಸ್ ಸುತ್ತ ಈ ಸಿನಿಮಾ ಕಥೆ ಹೆಣೆಯಲಾಗಿದ್ದು, ಗಣೇಶ್ ರಿಯಾಲಿಟಿ ಶೋ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.
ಈ ಹಾಡಿನ ಬಗ್ಗೆ ಸಿಂಪಲ್ ಸುನಿ ಇನ್‌ಸ್ಟಾಗ್ರಾಮ್‌ನಲ್ಲಿ (Instagram), 'ಹಾಡು ನೋಡಬೇಕು ನಮ್ಮ ಪ್ರಜೆಗಳು. ಇಲ್ಲಿ ನೀವೆ ನಮ್ಮ ನಿಜವಾದ ಬಂಧುಗಳು. ಈಗ ಬೀಳುತಾವೆ ಗೋಲ್ಡನ್ ಸ್ಟೆಪ್ಪುಗಳು. ಕೇಕೆ ಹಾಕುವಂತೆ ಕುಣಿಬೇಕು ನೀವುಗಳು' ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಜೊತೆಗೆ ಸಖತ್ ರೀಲ್ ಧಮಾಕ ವಿಥ್ ನಾಯಕಿ ನಿಶ್ವಿಕಾ. ಬಿಡುವಿದ್ದವರು ನೋಡಿ ಇಚ್ಛಿಸಿ. ಇನ್ನೂ ಬಿಡುವಿದ್ದವರೂ ನೀವೂ ಮಾಡಿ ಮೆಚ್ಚಿಸಿ ಎಂದು ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಈ ಚಿತ್ರದಲ್ಲಿ ಗಣೇಶ್ ಪುತ್ರ ವಿಹಾನ್ (Vihan) ನಟಿಸುತ್ತಿದ್ದು, ಚಿತ್ರದ ನಾಯಕ ಗಣೇಶ್ ಅವರ ಬಾಲ್ಯದ ದಿನಗಳ ಪಾತ್ರವನ್ನು ಬಾಲು ಪಾತ್ರದಲ್ಲಿ ವಿಹಾನ್ ಮಾಡುತ್ತಿದ್ದು, ಪಾತ್ರಕ್ಕೆ ತಾವೇ ಡಬ್ಬಿಂಗ್ (Dubbing) ಕೂಡ ಮಾಡಿದ್ದಾರೆ ಎಂದು ಗಣೇಶ್ ಈ ಹಿಂದೆ ಟ್ವೀಟ್ (Tweet) ಮಾಡಿದ್ದರು. ಬಾಲು & ಜ್ಯೂನಿಯರ್ ಬಾಲು (ವಿಹಾನ್) ನಿಂದ ಡಬ್ಬಿಂಗ್ ಮುಕ್ತಾಯ. ನಮ್ಮಿಬ್ಬರ ಮಾತಿನ ಪುಳಕ ಹಾಗೂ ಕಣ್ ಚಳಕ. ನಿಮ್ಮ ಹಾರೈಕೆಯಿರಲಿ ಎಂದು ನಟ ಗಣೇಶ್ ಹೇಳಿದ್ದರು.
ಸಿಂಪಲ್ ಸುನಿ 'ಸಖತ್'ನಲ್ಲಿ ಕುರುಡನಾದ ಗಣೇಶ್
ಇತ್ತೀಚೆಗಷ್ಟೇ ಚಿತ್ರತಂಡ ಚಿತ್ರದ 'ಸಖತ್ ಬಾಲು' ಟೀಸರ್ ಬಿಡುಗಡೆ ಮಾಡಿತ್ತು. ಮೊದಲ ಬಾರಿಗೆ ಈ ಚಿತ್ರದಲ್ಲಿ ಕಣ್ಣು ಕಾಣದ ವ್ಯಕ್ತಿಯಾಗಿ ಗಣೇಶ್ ಕಾಣಿಸಿಕೊಂಡಿದ್ದರು. ಕಚಗುಳಿ ಇಡುವ ಡೈಲಾಗ್ಗಳು, ಭರ್ಜರಿ ಕಾಮಿಡಿ ಟೀಸರ್‌ನಲ್ಲಿತ್ತು. ಚಿತ್ರದಲ್ಲಿ ಗಣೇಶ್ ಜೊತೆ ನಿಶ್ವಿಕಾ ನಾಯ್ಡು (Nishwika Naidu), ಸುರಭಿ (Surabhi) ನಾಯಕಿಯರಾಗಿ ನಟಿಸಿದ್ದಾರೆ. ರಂಗಾಯಣ ರಘು (Rangayana Raghu), ಸಾಧು ಕೋಕಿಲ (Sadhu Kokila), ಗಿರಿ, ಧರ್ಮಣ್ಣ ಮುಂತಾದ ಕಲಾವಿದರ ತಾರಾಬಳಗ ಚಿತ್ರಕ್ಕಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಈ ಸಿನಿಮಾ ತಯಾರಾಗಿದ್ದು, ನಿಶಾ ವೆಂಕಟ್ ಕೋನಂಕಿ ಮತ್ತು ಸುಪ್ರಿತ್ ಬಂಡವಾಳ ಹಾಕಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ, ಶಾಂತ್ ಕುಮಾರ್ ಸಂಕಲನ ಮತ್ತು ಸಂತೋಷ್ ರೈ ಪಾತಾಜೆ ಛಾಯಾಗ್ರಹಣ 'ಸಖತ್' ಸಿನಿಮಾಗಿದೆ.