ರವಿ ಬೋಪಣ್ಣ ಚಿತ್ರವು ಸೈಬರ್‌ ಕ್ರೈಮ್‌ ಸುತ್ತ ನಡೆಯುವ ಕಥೆಯಾಗಿದ್ದು, ರವಿಚಂದ್ರನ್‌ ಇಲ್ಲಿ ಸೈಬರ್‌ ಸೆಲ್‌ನ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ದೃಶ್ಯ 2 ಎಂಬ ಟ್ಯಾಗ್‌ಲೈನ್ ಇದೆ.

ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ (V.Ravichandran) ನಟಿಸಿ ನಿರ್ದೇಶಿಸಿರುವ 'ರವಿ ಬೋಪಣ್ಣ' (Ravi Bopanna) ಚಿತ್ರದ ಫಸ್ಟ್‌ಲುಕ್ (FirstLook), ಟೀಸರ್ (Teaser) ಈಗಾಗಲೇ ಬಿಡುಗಡೆಯಾಗಿದೆ. ಇದೀಗ ಚಿತ್ರತಂಡ ಚಿತ್ರದ ಲಿರಿಕಲ್ ಹಾಡನ್ನು ರಿಲೀಸ್ ಮಾಡಿದ್ದು, ರವಿಚಂದ್ರನ್ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು! 'ರವಿ ಬೋಪಣ್ಣ' ಚಿತ್ರದ 'ಹಿರೋನೂ ಇವನೇ ವಿಲನ್ನು ಇವನೇ' ಲಿರಿಕಲ್ ಸಾಂಗ್ ಯೂಟ್ಯೂಬ್‌ನಲ್ಲಿ (YouTube) ಬಿಡುಗಡೆಯಾಗಿದ್ದು, ಸಂಗೀತ ಆರಾಧಕರಿಂದ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದೆ. ಚಿತ್ರದಲ್ಲಿನ ರವಿಚಂದ್ರನ್ ಅವರ ಡಿಫರೆಂಟ್ ಗೆಟಪ್‌ಗಳನ್ನು ಹಾಡಿನಲ್ಲಿ ಕಾಣಬಹುದಾಗಿದೆ.

'ಹಿರೋನೂ ಇವನೇ ವಿಲನ್ನು ಇವನೇ' ಹಾಡಿಗೆ ಸಾಹಿತ್ಯದ ಜೊತೆಗೆ ಸಂಗೀತ ಸಂಯೋಜನೆಯನ್ನು ರವಿಚಂದ್ರನ್ ಅವರೇ ಮಾಡಿದ್ದು, ಸುಜಾತ.ಎಸ್.ಕಾಮತ್, ಸಂತೋಷ್ ವೆಂಕಿ, ಮಧ್ವೇಶ್ ಭಾರಧ್ವಜ್ ಹಾಗೂ ಅನಿರುದ್ಧ ಶಾಸ್ತ್ರೀ ಕಂಠಸಿರಿಯಲ್ಲಿ ಈ ಹಾಡು ಮೂಡಿ ಬಂದಿದೆ. ಚಿತ್ರದ ಶೀರ್ಷಿಕೆ ಕೆಳಗೆ 'ದೃಶ್ಯ 2' ಎಂಬ ಅಡಿಬರಹ ಗಮನ ಸೆಳೆಯುತ್ತಿದೆ. ಈ ಹಿಂದೆ ಚಿತ್ರದ ರವಿಚಂದ್ರನ್ ಫಸ್ಟ್‌ಲುಕ್‌ನಲ್ಲಿ ಮೀಸೆ ಮೇಲೆ ಕೈ, ಸವಾಲಿಗೆ ಸೈ , ಸಿಡಿಯೋ ಕಿಡಿಗಳು ಎಷ್ಟೇ ಇದ್ರು, ಬೆಂಕಿ ಬೆಂಕಿನೇ ಎಂಬ ಡೈಲಾಗ್​ಗಳು ಕುತೂಹಲ ಮೂಡಿಸಿದ್ದವು.

'ರವಿ ಬೋಪಣ್ಣ' ಟೀಸರ್‌ನಿಂದ ಮತ್ತೆ ಸದ್ದು ಮಾಡಿದ ರವಿಚಂದ್ರನ್!

ರವಿಚಂದ್ರನ್‌ ಅವರು ಈ ಚಿತ್ರವನ್ನು 'ರವಿ' ಎಂಬ ಹೆಸರಿನಲ್ಲಿ ಶುರುಮಾಡಿದ್ದರು. ಅಷ್ಟೇ ಅಲ್ಲ,ಕೆಲವು ದಿನಗಳ ಕಾಲ ಚಿತ್ರೀಕರಣ ಕೂಡಾ ಮಾಡಿದ್ದರು. ಆದರೆ, ಅದು ಅವರಿಗೆ ಅದೇಕೋ ತೃಪ್ತಿಯಾಗಲಿಲ್ಲ. ಜೊತೆಗೆ ರವಿಚಂದ್ರನ್‌ ಅವರ ಗಡ್ಡದ ಗೆಟಪ್‌ ವಿಶೇಷವಾಗಿತ್ತು. ಎಲ್ಲರೂ ಗಡ್ಡದ ಬಗ್ಗೆ ಮಾತನಾಡಿದ್ದೇ ತಡ 'ರವಿ ಬೋಪಣ್ಣ' ಎಂಬ ಹೆಸರನ್ನು ಚಿತ್ರಕ್ಕಿಟ್ಟರು. ಅಂದಹಾಗೆ, ಇದು ಸೈಬರ್‌ ಕ್ರೈಮ್‌ (Cyber Crime) ಸುತ್ತ ನಡೆಯುವ ಕಥೆಯಾಗಿದ್ದು, ರವಿಚಂದ್ರನ್‌ ಇಲ್ಲಿ ಸೈಬರ್‌ ಸೆಲ್‌ನ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸ್ನೇಹಕ್ಕೂ ಹೆಚ್ಚಿನ ಮಹತ್ವವಿದ್ದು, ಸ್ಕ್ರೀನ್‌ಪ್ಲೇ ಮೇಲೆ ನಿಂತಿರುವ ಸಿನಿಮಾ ಆಗಿದೆ. ಹಾಗೂ 'ದೃಶ್ಯ 2' ತರಹದ ಫೀಲ್‌ ಕೊಡಲಿದ್ದು, ರವಿಚಂದ್ರನ್‌ ಅವರು ಎರಡು ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

'ರವಿ ಬೋಪಣ್ಣ' ಚಿತ್ರದಲ್ಲಿ ಕಿಚ್ಚ ಸುದೀಪ್ (Kiccha Sudeep) ಲಾಯರ್ ಪಾತ್ರದ ಮೂಲಕ ಗೆಸ್ಟ್‌ ಅಪಿಯರೆನ್ಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಸುದೀಪ್ ಕೋರ್ಟ್‌ನಲ್ಲಿರುವ ಫೋಟೋಗಳನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ರವಿಚಂದ್ರನ್‌ಗೆ ನಾಯಕಿಯಾಗಿ ಕಾವ್ಯಾ ಶೆಟ್ಟಿ (Kavya Shetty) ಕಾಣಿಸಿಕೊಳ್ಳುತ್ತಿದ್ದು, ಅವರ ಹುಟ್ಟುಹಬ್ಬದ ಪ್ರಯುಕ್ತ ಗ್ಲಾಮರ್ ಟೀಸರ್ ಬಿಡುಗಡೆಯಾಗಿತ್ತು. ಟೀಸರ್‌ನಲ್ಲಿ ಬಳಸಿರುವ ಹಿನ್ನೆಲೆ ಸಂಗೀತ, ದೃಶ್ಯಗಳು, ಕ್ರೇಜಿಸ್ಟಾರ್ ಮ್ಯಾನರಿಸಂ, ಕಾವ್ಯಾ ಶೆಟ್ಟಿ ಅವರ ಹಾಟ್ ಲುಕ್‌ಗಳು ನೋಡುಗರ ಗಮನ ಸೆಳೆದಿತ್ತು. ಅಲ್ಲದೇ ತುಂಬಾ ದಿನಗಳ ನಂತರ ಕಾವ್ಯಾ ಶೆಟ್ಟಿ ಗ್ಲಾಮರ್ ಪಾತ್ರದಲ್ಲಿ ನಟಿಸಿದ್ದಾರೆ.

ಕ್ರೇಜಿಸ್ಟಾರ್ ಜತೆ ಕಾವ್ಯ ಶೆಟ್ಟಿ; 'ರವಿಬೋಪಣ್ಣ' ಚಿತ್ರದ ಗ್ಲಾಮರ್ ಟೀಸರ್ ಬಿಡುಗಡೆ!

ಇನ್ನು, ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ 'ರವಿ ಬೋಪಣ್ಣ' ಚಿತ್ರಕ್ಕೆ ನಿರ್ದೇಶನ ಮಾಡುವುದರ ಜತೆಗೆ ಸಂಗೀತ, ಸಾಹಿತ್ಯ, ಚಿತ್ರಕಥೆ, ಸಂಕಲನ ಎಲ್ಲವನ್ನೂ ರವಿಚಂದ್ರನ್ ಅವರೇ ನಿಭಾಯಿಸಿದ್ದಾರೆ. ಅಜಿತ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸೀತಾರಾಮ್ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ರಾಮಕೃಷ್ಣ, ಜೈಜಗದೀಶ್, ರವಿಶಂಕರ್ ಗೌಡ, ಮೋಹನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

YouTube video player