ಪ್ರೇಮದ ಊರಲಿ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ನಿರ್ಮಾಪಕ ದೇವೇಂದ್ರ ಮತ್ತು ನಿರ್ದೇಶಕ ಮನೋಜ್ ಕುಮಾರ್ ಚಿತ್ರತಂಡದ ಸದಸ್ಯರಿಗಾಗಿ ವಿಶೇಷ ಔತಣಕೂಟ ಆಯೋಜಿಸಿದ್ದರು. ಯಾವುದೇ ಔಪಚಾರಿಕ ಕಾರ್ಯಕ್ರಮ..

ಚಿತ್ರರಂಗ ಸಂಭ್ರಮಿಸುವುದನ್ನು ಈಚಿನ ಕೆಲವು ವರುಷಗಳಲ್ಲಿ ಮರೆತೇಬಿಟ್ಟಿತ್ತು. ಸಿನಿಮಾ ಗೆದ್ದಾಗಲೂ ಎಲ್ಲರನ್ನೂ ಕರೆದು ನಾಲ್ಕು ಮಾತಾಡುವುದನ್ನು ಬಹುತೇಕ ಚಿತ್ರತಂಡಗಳು ನಿಲ್ಲಿಸಿಬಿಟ್ಟಿದ್ದವು. ದೊಡ್ಡ ಸಿನಿಮಾಗಳಂತೂ ಗೆಲುವಿನ ಪತಾಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾರಿಸಿ ಸಂತೋಷ ಪಡುತ್ತವೆಯೇ ವಿನಾ, ಅವನ್ನು ಚಿತ್ರತಂಡದೊಂದಿಗೆ ಹಂಚಿಕೊಳ್ಳುವುದು ಅಪರೂಪ.

ಅಷ್ಟೇನೂ ಒಳ್ಳೆಯದಲ್ಲದ ಈ ಸಂಪ್ರದಾಯವನ್ನು ಮುರಿದದ್ದು ಪ್ರೇಮದ ಊರಲಿ ತಂಡ. ನಿರ್ಮಾಪಕ ದೇವೇಂದ್ರ ಮತ್ತು ನಿರ್ದೇಶಕ ಮನೋಜ್ ಕುಮಾರ್ ಚಿತ್ರಕ್ಕೆ ಬೆಂಬಲವಾಗಿ ನಿಂತ ಎಲ್ಲರನ್ನೂ ಕರೆಸಿ ಔತಣಕೂಟ ಏರ್ಪಡಿಸಿದ್ದರು. ಸಾಮಾನ್ಯವಾಗಿ ಇಂಥ ಔತಣಕೂಟಗಳ ನಡುವೆಯೂ ಮೊಸರನ್ನದಲ್ಲಿ ಕಲ್ಲು ಸಿಕ್ಕಂತೆ ಪತ್ರಿಕಾಗೋಷ್ಠಿ ಇರುತ್ತದೆ. ಆದರೆ ಪ್ರೇಮದ ಊರಲಿ ತಂಡ ಅಂಥ ಯಾವ ಔಪಚಾರಿಕ ಕಾರ್ಯಕ್ರಮವನ್ನೂ ಇಟ್ಟುಕೊಂಡಿರಲಿಲ್ಲ.

ಸಿನಿಮಾ ಬೆಳೆಯುತ್ತಾ ಹೋದ ಪವಾಡ

ಚಿತ್ರತಂಡದ ಹುಡುಗರು ಡಾನ್ಸ್ ಮಾಡಿದರು, ಹಿರಿಯರು ಕುಳಿತುಕೊಂಡು ನೋಡಿದರು. ರಂಗಾಯಣ ರಘು ಚಿತ್ರೀಕರಣದ ಪ್ರಸಂಗಗಳನ್ನು ಹಂಚಿಕೊಂಡರು. ನೋಡನೋಡುತ್ತಿದ್ದಂತೆ ಸಿನಿಮಾ ಬೆಳೆಯುತ್ತಾ ಹೋದ ಪವಾಡವನ್ನು ವಿವರಿಸಿದರು. ನಾಯಕ ನಟ ಶ್ರೀರಾಮ್ ಚಿತ್ರದ ಗೆಲುವು ತಂದುಕೊಟ್ಟ ಬಿಡುವಿಲ್ಲದ ಬದುಕನ್ನು ಎಂಜಾಯ್ ಮಾಡುತ್ತಲೇ ತಾವು ನಡೆದು ಬಂದ ದಾರಿಯ ಕಷ್ಟಗಳನ್ನು ವಿವರಿಸಿದರು. ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗ ನಿರ್ದೇಶಕರಿಂದ ಬೈಗಳು ತಿಂದಿದ್ದನ್ನು ಚಪ್ಪರಿಸುತ್ತಲೇ ನೆನಪಿಸಿಕೊಂಡರು. ನಿರ್ದೇಶಕ ಮನೋಜ್ ಎಲ್ಲರನ್ನೂ ಸ್ವಾಗತಿಸುತ್ತಾ, ಮುಗುಳುನಗು ಬೀರುತ್ತಾ ಓಡಾಡುತ್ತಿದ್ದರು.

ಒಂದು ಸಿನಿಮಾ ಗೆಲ್ಲುವುದೆಂದರೆ ಒಬ್ಬ ನಾಯಕನ ಗೆಲುವಲ್ಲ. ತೆರೆಮೇಲೆ ಕಾಣಿಸಿಕೊಳ್ಳುವವರಷ್ಟೇ ಅಲ್ಲ, ತೆರೆಮರೆಯಲ್ಲಿ ಬೆವರು ಸುರಿಸಿದ ನೂರಾರು ಜನರ ಗೆಲುವು ಕೂಡ. ಆ ಗೆಲುವಿನಲ್ಲಿ ಒಂದು ದಿನವಾದರೂ ಎಲ್ಲರೂ ಪಾಲ್ಗೊಳ್ಳಬೇಕು. ಸಿನಿಮಾದ ಸೋಲನ್ನು ಹಂಚಿಕೊಳ್ಳಲು ಚಿತ್ರತಂಡಕ್ಕೆ ಅನೇಕ ಸಂದರ್ಭಗಳು ಸಿಗುತ್ತವೆ. ಆದರೆ ಗೆಲುವನ್ನು ಹಂಚಿಕೊಳ್ಳುವ ಇಂಥ ಕ್ಷಣಗಳು ಸಿಗುವುದು ಅಪರೂಪ. ಅಂದು ಅಲ್ಲಿ ಯಾರೂ ದೊಡ್ಡವರಿರಲಿಲ್ಲ, ಸಣ್ಣವರಿರಲಿಲ್ಲ.

ಸಂಭ್ರಮಗಳು ಚಿತ್ರರಂಗಕ್ಕೆ ಬೇಕು

ಸಿನಿಮಾ ಎಂಬ ಒಂದೇ ಕಾರಣಕ್ಕೆ ಸೇರಿದ್ದ ಜನರಿದ್ದರು. ಯಾರೂ ಭಾಷಣ ಮಾಡಬೇಕಿರಲಿಲ್ಲ, ಯಾರೂ ಲೆಕ್ಕ ಕೊಡಬೇಕಿರಲಿಲ್ಲ. ಹಾಡು, ಕುಣಿತ, ನೆನಪು ಮತ್ತು ನಗುವಿನ ನಡುವೆ ಒಂದು ಸಿನಿಮಾ ತನ್ನನ್ನು ರೂಪಿಸಿದ ಎಲ್ಲರಿಗೂ ಕೃತಜ್ಞತೆ ಹೇಳುತ್ತಿತ್ತು. ಇಂಥ ವಿನಾಕಾರಣ ಸಂಭ್ರಮಗಳು ಚಿತ್ರರಂಗಕ್ಕೆ ಬೇಕು. ನವೆಂಬರ್ ತಿಂಗಳ ಚಳಿಯನ್ನು ಹಿಮ್ಮೆಟ್ಟಿಸುವ ಕಾಕ್‌ಟೇಲ್ ಮತ್ತು ಸಕ್ಸಸ್‌ ಟೇಲ್ ನಡುವೆ ಪ್ರೇಮದ ಊರಿನ ಮಂದಿ ಬೆಳದಿಂಗಳಿಗಾಗಿ ಕಾಯುತ್ತಿದ್ದಂತೆ ಇತ್ತು.