Asianet Suvarna News Asianet Suvarna News

Lyricist Kaviraj: ಎಂಇಎಸ್ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕನ್ನಡ ಬಾವುಟವನ್ನು ಸುಟ್ಟು ಹಾಕಿರುವ ಘಟನೆಯನ್ನು ಖಂಡಿಸಿ ನಿರ್ದೇಶಕ, ಗೀತ ರಚನೆಕಾರ ಕವಿರಾಜ್ ಅವರು ಸುದೀರ್ಘವಾದ ಬರಹವೊಂದನ್ನು ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ.

kannada lyricist kaviraj facebook post about mes union at belgaum gvd
Author
Bangalore, First Published Dec 20, 2021, 11:54 PM IST
  • Facebook
  • Twitter
  • Whatsapp

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನಾ (Shiv Sena) ಕಾರ್ಯಕರ್ತರು ಕನ್ನಡ ಬಾವುಟವನ್ನು (Kannada Flag) ಸುಟ್ಟು ಹಾಕಿರುವ ಘಟನೆಯನ್ನು ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿಗಳು (Sandalwood Celebrities) ಖಂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.  'ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು' ಎಂದು ಆಗ್ರಹಿಸಿದ್ದಾರೆ. ಇದೀಗ ನಿರ್ದೇಶಕ, ಗೀತ ರಚನೆಕಾರ ಕವಿರಾಜ್ (Kaviraj) ಅವರು ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಕುರಿತಂತೆ ಸುದೀರ್ಘವಾದ ಬರಹವೊಂದನ್ನು ಫೇಸ್‌ಬುಕ್‌ (FaceBook) ಖಾತೆಯಲ್ಲಿ ಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ.

ಮೊದಲಿಗೆ ಬೆರಳೆಣಿಕೆಯಷ್ಟು ಕಿಡಿಗೇಡಿಗಳು ಹಚ್ಚಿದ ಕಿಡಿ ಇಡೀ ಎರಡು ರಾಜ್ಯಗಳ ಶಾಂತಿ, ಸೌಹಾರ್ದ ಭಂಗಗೊಳಿಸುವ ಮಟ್ಟಕ್ಕೆ ತಲುಪಿದ ಪರಿಸ್ಥಿತಿ ಬಗ್ಗೆ ವಿಷಾದವಿದೆ. ನಮ್ಮ ನಮ್ಮಲ್ಲೇ ಬಡಿದಾಡಿಕೊಳ್ಳುವ ಹಾಗಾಯಿತಲ್ಲ ಎಂಬ ನೋವಿದೆ. ಇದಕ್ಕೆಲ್ಲಾ ಮೂಲ ಕಾರಣ ಕನ್ನಡ ನೆಲದಲ್ಲಿದ್ದು, ಕನ್ನಡ, ಕನ್ನಡಿಗರನ್ನು ಗೌರವಿಸಿ ಸೌಹಾರ್ದತೆಯಿಂದ ಬಾಳದೇ ಪದೇ ಪದೇ ಕನ್ನಡಿಗರನ್ನೇ ಕೆಣಕುವ ಎಂಇಎಸ್ ಸಂಘಟನೆಯ ದುರ್ನಡತೆಯೇ. ವಿಧಾನಸಭಾ ಅಧಿವೇಶನ ನಡೆಯುವ ಹೊತ್ತಲ್ಲೇ ಎಂಇಎಸ್ ಅನುಮತಿಯಿಲ್ಲದೆ 'ಮಹಾಮೇಳಾವ ನಡೆಸಲು ಹೊರಟಿದ್ದೇ ಪ್ರಸ್ತುತ ಸ್ಥಿತಿಗೆ ಪ್ರಚೋದನೆ ನೀಡಿದ್ದು. 

Sandalwood Celebrities: ಕನ್ನಡ ಧ್ವಜ ಸುಟ್ಟವರ ವಿರುದ್ಧ ಕಿಡಿಕಾರಿದ ಚಂದನವನದ ತಾರೆಯರು!

ತಿಳಿದು ತಿಳಿದೂ ಕನ್ನಡಿಗರನ್ನು ಕೆಣಕುವುದರ ಹಿಂದೆ ಷಡ್ಯಂತ್ರಗಳು ,ದುಷ್ಟ ಹಿತಾಸಕ್ತಿಗಳು ಇರುವುದು ಸ್ಪಷ್ಟ. ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ ನಂತರ, ರಾಯಣ್ಣನ ಪ್ರತಿಮೆ ವಿರೂಪಗೊಳಿಸಿದ ನಂತರ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ನೀಡದೆ ಕನ್ನಡ ಪರ ಸಂಘಟನೆಗಳು ಶಾಂತಿ ಮಂತ್ರ ಪಠಿಸುತ್ತಾ ಸುಮ್ಮನೆ ಕೂರುವುದು ಸಾಧ್ಯವು ಇರಲಿಲ್ಲ.ಈ ಹೊತ್ತಿನಲ್ಲಿ ಅಲ್ಲಿನ ಕನ್ನಡಿಗರಿಗೆ ಸ್ಥೈರ್ಯ ತುಂಬಲು, ಪದೇ ಪದೇ ಅನುಚಿತ ಪ್ರಚೋದನೆಗಳಿಂದ ಶಾಂತಿ ಕದಡುವ ಎಂಇಎಸ್ ಸಂಘಟನೆ ಮತ್ತು ಅದರ ಪುಂಡ ಕಾರ್ಯಕರ್ತರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಓಟಿನ ಆಸೆಯಿಂದ ಮೀನಾಮೇಷ ಎಣಿಸುತ್ತಿರುವ ಸರ್ಕಾರ ಮತ್ತು ಗಟ್ಟಿಯಾಗಿ ಎಂಇಎಸ್ ವಿರುದ್ಧ ದನಿಯೆತ್ತಲು ಹಿಂಜರಿಯುತ್ತಿರುವ ಎಲ್ಲಾ ಪಕ್ಷಗಳ  ರಾಜಕಾರಣಿಗಳಿಗೆ ಬಿಸಿ ಮುಟ್ಟಿಸಲು ಬೆಳಗಾವಿ ಚಲೋ  ನಡೆಸಿರುವ ಕನ್ನಡ ಸಂಘಟನೆಗಳ ಬದ್ಧತೆಗೆ, ತಾಕತ್ತಿಗೆ ಮೆಚ್ಚುಗೆ ಮತ್ತು ಬೆಂಬಲ ವ್ಯಕ್ತಪಡಿಸುತ್ತೇನೆ. 

kannada lyricist kaviraj facebook post about mes union at belgaum gvd

ಇನ್ನು ದೇಶ, ಧರ್ಮ, ಪಕ್ಷ ಮೊದಲು ಎಂದುಕೊಂಡು ನಮ್ಮದೇ ನಾಡಿಗೆ, ನಮ್ಮದೇ ಭಾಷೆಗೆ ಎರಡು ಬಗೆಯುತ್ತಿರುವ, ನಾಳೇ ನಮ್ಮದೇ ಹೋರಾಟಗಾರರನ್ನು ಗೇಲಿ ಮಾಡುವ ನಮ್ಮದೇ ಜನರ ಸೋಗಲಾಡಿತನದ ಬಗ್ಗೆ ಹೇಸಿಗೆಯಿದೆ. ಕನ್ನಡ ನೆಲದಲ್ಲಿ ಈ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಎಂಬ ಸಂಘಟನೆಯ ಹೆಸರು, ಉದ್ದೇಶ, ಅಸ್ತಿತ್ವವೇ ಅನುಚಿತ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಈ ಕಹಿ ವಾತಾವರಣ ನಿರ್ಮಾಣವಾಗದೆ, ಶಾಂತಿ ಸೌಹಾರ್ದತೆಗೆ ಧಕ್ಕೆಯಾಗದಿರಲು ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ಆಗ್ರಹಿಸುತ್ತೇನೆ. ಕನ್ನಡತನಕ್ಕೆ ಧಕ್ಕೆಯಾದಾಗ ಬೀದಿಗಿಳಿದು ಎದೆಗೊಟ್ಟು ಹೋರಾಡುವ ಈ ಹೋರಾಟಗಾರರೇ ಕನ್ನಡ, ಕರ್ನಾಟಕದ ನಿಜವಾದ ಶಕ್ತಿ. ಇನ್ನುಳಿದವರೆಲ್ಲಾ ತೋರಿಕೆಗಷ್ಟೇ.  ಜೈ ಕನ್ನಡ ,ಜೈ ಕನ್ನಡ ಪರ ಹೋರಾಟಗಾರರೇ ಎಂದು ಕವಿರಾಜ್ ಪೋಸ್ಟ್ ಮಾಡಿದ್ದಾರೆ.

Non Veg; ನೀವು ತಿನ್ನೋ ಆಹಾರವನ್ನೇ ಹೊಲಸು ಅಂತೀರಲ್ರೀ, ಮತ್ತ್ಯಾಕೆ ತಿಂತೀರಿ: ಕವಿರಾಜ್

ಇತ್ತೀಚೆಗೆ ಡಾಲಿ ಧನಂಜಯ್‌ (Dolly Dhananjay) ನಟನೆಯ 'ಬಡವ ರಾಸ್ಕಲ್‌' (Badava Rascal) ಚಿತ್ರದ ಸುದ್ದಿಗೋಷ್ಠಿಯಲ್ಲಿ ಹ್ಯಾಟ್ರಿಕ್ ಹಿರೋ  ಶಿವರಾಜ್‌ಕುಮಾರ್ (Shivarajkumar) 'ಭಾಷೆಗಾಗಿ ನಾನು ಪ್ರಾಣ ಕೊಡೋಕು ಸಿದ್ಧ, ಭಾಷೆ ಎಲ್ಲರಿಗೂ ಮುಖ್ಯ. ಆ ಭಾಷೆಗೆ ಅಗೌರವ ಕೋಡಬೇಡಿ, ಯಾವ ರಾಜ್ಯದಲ್ಲಿ ಯಾವ ಭಾಷೆ ಇದೆಯೋ ಅದಕ್ಕೆ ಮರ್ಯಾದೆ ಕೊಡೋದು ಧರ್ಮ ಎಂದು ಎಚ್ಚರಿಕೆ ನೀಡಿದರು. ಕನ್ನಡದ ಬಾವುಟ ಸುಡೋದು ಎಷ್ಟು ಸರಿ, ಅಂತಹ ಕೆಲಸ ಮಾಡಬಾರದು. ಕರ್ನಾಟಕವನ್ನ ಪ್ರೀತಿಸಬೇಕು. ನಮಗೆ ಏನು ಪವರ್ ಅಲ್ಲ ಅಂತ ಅಂದುಕೊಳ್ಳಬೇಡಿ. ಮನುಷ್ಯನಿಗೆ ಕೋಪ ಬಂದ್ರೆ ತಡೆದುಕೊಳ್ಲೋದಕ್ಕೆ ಆಗಲ್ಲ. ಸರ್ಕಾರ ಇದರ ಬಗ್ಗೆ ಗಮನ ಕೊಡಬೇಕು. ಬರೀ ಓಟಿಗೆ ಮಾತ್ರ ಕಾಯೋದು ಬೇಡ. ನಾನು ತುಂಬಾ ಪ್ರಾಕ್ಟಿಕಲ್ ಆಗಿ ಮಾತಾಡುತ್ತೇನೆ. ನಮ್ಮ ಬಾವುಟ ಸುಟ್ಟು ಹಾಕಿದ್ರೆ ನಮ್ಮ ತಾಯಿಯನ್ನೇ ಸುಟ್ಟ ಹಾಗೆ ಅಲ್ವಾ. ಅದನ್ನೆಲ್ಲಾ ಮಾಡಬೇಡಿ. ಎಲ್ಲದಕ್ಕೂ ಮರ್ಯಾದೆ ಕೊಡಬೇಕು. ಬೇರೆಯವರಿಗೆ ನಾವು ಮರ್ಯಾದೆ ಕೊಡ್ತೇವೆ. ನಮಗು ಮರ್ಯಾದೆ ಕೊಡಿ. ನಾವು ಎಲ್ಲರಿಗೂ ಜಾಗ ಕೊಡ್ತೀವಿ. ಎಲ್ಲ ಸಿನಿಮಾನೂ ನೋಡಿ. ಬಟ್ ಜಾಸ್ತಿ ಕನ್ನಡ ಸಿನಿಮಾ ನೋಡಿ. ದಯವಿಟ್ಟು ಎಲ್ಲರೂ ಸಪೋರ್ಟ್ ಮಾಡಿ ಎಂದು ಶಿವಣ್ಣ ಮನವಿ ಮಾಡಿದರು.
 

Follow Us:
Download App:
  • android
  • ios