ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳಿಂದ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ನಟ ಅವಿನಾಶ್, ತಮ್ಮ ಸಿನಿಮಾ ಪಯಣದ ಆರಂಭದ ದಿನಗಳು ಹಾಗೂ ದಿಗ್ಗಜ ನಟರಾದ ಶಂಕರ್ ನಾಗ್, ಡಾ. ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಅವರೊಂದಿಗಿನ ಒಡನಾಟದ ಕುರಿತು ಹಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳಿಂದ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ನಟ ಅವಿನಾಶ್, ತಮ್ಮ ಸಿನಿಮಾ ಪಯಣದ ಆರಂಭದ ದಿನಗಳು ಹಾಗೂ ದಿಗ್ಗಜ ನಟರಾದ ಶಂಕರ್ ನಾಗ್, ಡಾ. ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಅವರೊಂದಿಗಿನ ಒಡನಾಟದ ಕುರಿತು ಹಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾದ ಬಗ್ಗೆ ಯಾವುದೇ ಆಸಕ್ತಿ ಇಲ್ಲದೆ ವೃತ್ತಿಜೀವನ ಆರಂಭಿಸಿದ್ದ ಅವರು, ನಾಟಕದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದು ವಿಶೇಷ. ರಂಗಭೂಮಿಯಿಂದ ಸಿನಿಮಾ ಲೋಕಕ್ಕೆ ಬಂದ ತಮ್ಮ ಪಯಣ, ಶಂಕರ್ ನಾಗ್ ಅವರೊಂದಿಗಿನ ಆತ್ಮೀಯ ಸ್ನೇಹ, ಅಣ್ಣಾವ್ರ ಜೊತೆ ನಟಿಸುವ ಆಸೆ ಈಡೇರದ ನೋವು ಸೇರಿದಂತೆ ಹಲವು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ನಾಟಕದಿಂದ ಸಿನಿಮಾ ಲೋಕಕ್ಕೆ ಎಂಟ್ರಿ

ಪದವಿ ಮುಗಿಸಿ ಎಂಎ ಓದುತ್ತಿದ್ದ ಸಂದರ್ಭದಲ್ಲಿ ಅವಿನಾಶ್ ಅವರಿಗೆ ನಾಟಕದ ಬಗ್ಗೆ ಆಸಕ್ತಿ ಬೆಳೆಯಿತು. ಆಗ ಸ್ನೇಹಿತರೊಂದಿಗೆ ಇಂಗ್ಲಿಷ್ ಥಿಯೇಟರ್ ಗ್ರೂಪ್ ಆರಂಭಿಸಿದ್ದರು. ನಂತರ ಬೆಂಗಳೂರಿಗೆ ಬಂದಾಗ ಹಿರಿಯ ರಂಗಭೂಮಿ ಕಲಾವಿದೆ ಬಿ. ಜಯಶ್ರೀ ಅವರು ತಮ್ಮ ಸ್ಪಂದನ ತಂಡಕ್ಕೆ ಆಹ್ವಾನ ನೀಡಿದರು. ಇಂಗ್ಲಿಷ್ ನಾಟಕ ಮಾಡುವ ಬದಲು ಕನ್ನಡದಲ್ಲಿ ನಾಟಕ ಮಾಡುವಂತೆ ಸಲಹೆ ನೀಡಿದರು.

ಅವರ ಆಹ್ವಾನದ ಮೇರೆಗೆ ಸ್ಪಂದನ ತಂಡ ಸೇರಿದ ಅವಿನಾಶ್, ದೇವರಾಜ್ ಮತ್ತು ಪ್ರಕಾಶ್ ರಾಜ್ ಸೇರಿದಂತೆ ಹಲವು ಕಲಾವಿದರೊಂದಿಗೆ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ನಂತರ ಶಂಕರ್ ನಾಗ್ ಅವರ ಸಂಕೇತ್ ತಂಡದಲ್ಲಿಯೂ ಕೆಲಸ ಮಾಡಿದರು. ಈ ಸಮಯದಲ್ಲಿ ಅವರಿಗೆ ಸಿನಿಮಾ ಅವಕಾಶವೊಂದು ಹುಡುಕಿಕೊಂಡು ಬಂದಿತ್ತು. ಟಿ.ಎನ್. ನರಸಿಂಹನ್ ಅವರು ಸಿನಿಮಾದಲ್ಲಿ ನಟಿಸುವಂತೆ ಆಹ್ವಾನ ನೀಡಿದ್ದರು. ಆಡಿಷನ್‌ನಲ್ಲಿ ಆಯ್ಕೆಯಾದ ಬಳಿಕ ಸಿನಿಮಾದ ಮೇಲಿನ ಆಸಕ್ತಿ ಹೆಚ್ಚಾಯಿತು.

ಶಂಕರ್ ನಾಗ್ ಜೊತೆಗಿನ ಸ್ನೇಹ ಮರೆಯಲಾಗದು

ಶಂಕರ್ ನಾಗ್ ಅವರೊಂದಿಗೆ ತಮಗೆ ಬಹಳ ಆತ್ಮೀಯತೆ ಇತ್ತು ಎಂದು ಅವಿನಾಶ್ ನೆನಪಿಸಿಕೊಂಡಿದ್ದಾರೆ. ಕೆಲಸ ಮುಗಿದ ಬಳಿಕ ಬಹುತೇಕ ಸಮಯವನ್ನು ಅವರ ಮನೆಯಲ್ಲೇ ಕಳೆಯುತ್ತಿದ್ದರಂತೆ. ಶಂಕರ್ ನಾಗ್ ಅವರಲ್ಲಿದ್ದ ಅಪಾರ ಚೈತನ್ಯ, ಹೊಸ ಆಲೋಚನೆಗಳು ಮತ್ತು ಕೆಲಸದ ವೇಗವನ್ನು ಅವರು ಮೆಚ್ಚಿಕೊಂಡಿದ್ದಾರೆ.

ಶಂಕರ್ ನಾಗ್ ಸಿನಿಮಾ ಚಿತ್ರೀಕರಣ ಮುಗಿಸಿಕೊಂಡ ತಕ್ಷಣ ನಾಟಕದ ರಿಹರ್ಸಲ್‌ಗೆ ಬರುತ್ತಿದ್ದರು. 'ನೋಡಿ ಸ್ವಾಮಿ ನಾವು ಇರೋದು ಹೀಗೆ' ನಾಟಕವನ್ನು ಇಡೀ ತಂಡದೊಂದಿಗೆ ವಿವಿಧ ಊರುಗಳಲ್ಲಿ ಪ್ರದರ್ಶಿಸಿದ್ದರು. ಶಂಕರ್ ನಾಗ್ ಎಲ್ಲರನ್ನೂ ವ್ಯಾನ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಅವರ ಫಾರ್ಮ್‌ಹೌಸ್‌ನಲ್ಲಿಯೂ ಸ್ನೇಹಿತರೊಂದಿಗೆ ಸಮಯ ಕಳೆಯುತ್ತಿದ್ದೆವು ಎಂದು ಅವಿನಾಶ್ ಹೇಳಿದ್ದಾರೆ.

ರಾತ್ರಿ ಪಾರ್ಟಿ ಮಾಡಿದರೂ ಬೆಳಗ್ಗೆ ಕೆಲಸದ ವಿಚಾರದಲ್ಲಿ ಶಂಕರ್ ನಾಗ್ ಎಂದಿಗೂ ರಾಜಿಯಾಗುತ್ತಿರಲಿಲ್ಲ. ಎಲ್ಲರೂ ಮಲಗಿದ್ದಾಗಲೇ ಬೆಳಗ್ಗೆ 6 ಗಂಟೆಗೆ ಶೂಟಿಂಗ್‌ಗೆ ತೆರಳುತ್ತಿದ್ದರು. ಮನರಂಜನೆ ಮತ್ತು ಕೆಲಸ ಎರಡನ್ನೂ ಸಮಾನವಾಗಿ ನಿಭಾಯಿಸುತ್ತಿದ್ದ ವ್ಯಕ್ತಿ ಎಂದು ಅವರನ್ನು ಸ್ಮರಿಸಿದ್ದಾರೆ.

36 ಗಂಟೆಗಳಲ್ಲಿ ಸಿನಿಮಾ ಚಿತ್ರೀಕರಣ ಮುಗಿಸಿದ ಅನುಭವ

ದಿನೇಶ್ ಬಾಬು ನಿರ್ದೇಶನದ ಸಿನಿಮಾದ ಚಿತ್ರೀಕರಣದ ಅನುಭವವೂ ಅವಿನಾಶ್ ಅವರಿಗೆ ವಿಶೇಷವಾಗಿತ್ತು. ಇದರಲ್ಲಿ ಅನಂತ್ ನಾಗ್ ಮತ್ತು ಶಂಕರ್ ನಾಗ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದರು. ನಾಲ್ಕೈದು ಯೂನಿಟ್‌ಗಳು, ಹಲವು ಕ್ಯಾಮೆರಾಗಳ ಮೂಲಕ ಏಕಕಾಲದಲ್ಲಿ ಚಿತ್ರೀಕರಣ ನಡೆಯುತ್ತಿತ್ತು.

ಮನೆ, ಆಸ್ಪತ್ರೆ ಸೇರಿದಂತೆ ವಿವಿಧ ಸೆಟ್‌ಗಳಿಗೆ ಕಲಾವಿದರು ನಿರಂತರವಾಗಿ ಓಡಾಡಬೇಕಾಗಿತ್ತು. ರಾತ್ರಿ ಆರಂಭವಾಗುತ್ತಿದ್ದ ಶೂಟಿಂಗ್ ಬೆಳಗಿನ ಜಾವ 4.30 ಅಥವಾ 5 ಗಂಟೆಯವರೆಗೂ ನಡೆಯುತ್ತಿತ್ತು. ಸುಮಾರು 36 ಗಂಟೆಗಳಲ್ಲಿ ಇಡೀ ಸಿನಿಮಾ ಚಿತ್ರೀಕರಣ ಮುಗಿಸಿದ ಅನುಭವವನ್ನು ಮರೆಯಲು ಸಾಧ್ಯವಿಲ್ಲ ಎಂದು ಅವಿನಾಶ್ ನೆನಪಿಸಿಕೊಂಡಿದ್ದಾರೆ.

ರಾಜ್‌ಕುಮಾರ್ ಜೊತೆ ನಟಿಸುವ ಆಸೆ ಈಡೇರಲಿಲ್ಲ

ಡಾ. ರಾಜ್‌ಕುಮಾರ್ ಅವರೊಂದಿಗೂ ಸಾಕಷ್ಟು ಸಮಯ ಕಳೆದಿದ್ದಾಗಿ ಅವಿನಾಶ್ ಹೇಳಿದ್ದಾರೆ. ರಾಜ್‌ಕುಮಾರ್ ಅವರ ಬ್ಯಾನರ್‌ನಲ್ಲಿ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಸೆಟ್‌ಗೆ ಬರುತ್ತಿದ್ದ ಅಣ್ಣಾವ್ರು ತಮ್ಮೊಂದಿಗೆ ಮಾತನಾಡುತ್ತಿದ್ದರು. ಎಂಎ ಇಂಗ್ಲಿಷ್ ಓದಿದ್ದೀರಾ, ಹಲವು ವಿಚಾರಗಳನ್ನು ತಿಳಿಸಿ ಎಂದು ಆಸಕ್ತಿಯಿಂದ ಕೇಳುತ್ತಿದ್ದರು.

ಆದರೆ ಅಣ್ಣಾವ್ರೊಂದಿಗೆ ಒಂದೇ ಒಂದು ದೃಶ್ಯದಲ್ಲಾದರೂ ನಟಿಸಬೇಕು ಎಂಬ ಆಸೆ ಮಾತ್ರ ಈಡೇರಲಿಲ್ಲ. ತಾವು ಚಿತ್ರೀಕರಣದಲ್ಲಿದ್ದಾಗ ರಾಜ್‌ಕುಮಾರ್ ಬರುತ್ತಿರಲಿಲ್ಲ, ತಾವು ಹೋದ ಬಳಿಕ ಅವರು ಸೆಟ್‌ಗೆ ಬರುತ್ತಿದ್ದರು ಎಂದು ಅವಿನಾಶ್ ಬೇಸರ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗದ ಮೇರುನಟನೊಂದಿಗೆ ತೆರೆ ಹಂಚಿಕೊಳ್ಳುವ ಕನಸು ನನಸಾಗದೇ ಉಳಿದಿದ್ದು ಇಂದಿಗೂ ಅವರ ನೆನಪಿನಲ್ಲಿ ಉಳಿದಿದೆ.

ವಿಷ್ಣುವರ್ಧನ್ ಜೊತೆ ಚಿತ್ರಮಂದಿರಗಳಿಗೆ ಭೇಟಿ

ಇನ್ನು ವಿಷ್ಣುವರ್ಧನ್ ಅವರ 'ಯಜಮಾನ' ಸಿನಿಮಾ 100 ದಿನ ಪೂರೈಸಿದ ಸಂದರ್ಭದಲ್ಲಿ ಅವರೊಂದಿಗೆ ಹಲವು ಚಿತ್ರಮಂದಿರಗಳಿಗೆ ಅವಿನಾಶ್ ಭೇಟಿ ನೀಡಿದ್ದರು. ಆಗ ವಿಷ್ಣುವರ್ಧನ್ ಅವರ ಪಕ್ಕದಲ್ಲಿ ನಿಂತಿದ್ದಾಗ ಪ್ರೇಕ್ಷಕರು ತಮ್ಮ ಪಾತ್ರವನ್ನು ನಿಜವೆಂದು ಭಾವಿಸಿ ಬೈಯುತ್ತಿದ್ದರಂತೆ. ಆದರೆ ಪ್ರೇಕ್ಷಕರು ಪಾತ್ರವನ್ನು ಅಷ್ಟರಮಟ್ಟಿಗೆ ನಂಬಿದ್ದಾರೆ ಎಂಬುದೇ ಕಲಾವಿದನಿಗೆ ಸಿಗುವ ಯಶಸ್ಸು ಎಂದು ಅವಿನಾಶ್ ಸಂತಸದಿಂದ ನೆನಪಿಸಿಕೊಂಡಿದ್ದಾರೆ.