ಗುರುಪ್ರಸಾದ್‌ ಈ ಚಿತ್ರದಲ್ಲಿ ಕಾಣಿಸಿಕೊಳ್ಳುವ ಹಿಂದಿನ ಉದ್ದೇಶ ಏನು ಎಂಬುದಕ್ಕೆ ನಟ ಧನಂಜಯ್‌ ಹೀಗೆ ಹೇಳುತ್ತಾರೆ: ‘ಇದು ನನ್ನ ಮೊದಲ ನಿರ್ಮಾಣದ ಸಿನಿಮಾ. ನಾನು ಅವರ ಚಿತ್ರದ ಮೂಲಕ ಬಂದವನು. ಚಿತ್ರದ ನಿರ್ದೇಶಕ ಶಂಕರ್‌ ಗುರು ಕೂಡ ಗುರುಪ್ರಸಾದ್‌ ಶಿಷ್ಯ. ಹೀಗಾಗಿ ನಾನು ಮತ್ತು ಶಂಕರ್‌ ಜತೆಗೂಡಿ ಮಾಡುತ್ತಿರುವ ಚಿತ್ರದಲ್ಲಿ ಗುರುಪ್ರಸಾದ್‌ ಕಾಣಿಸಿಕೊಂಡರೆ ಚೆನ್ನಾಗಿರುತ್ತದೆಂದು ಅವರಿಂದ ಪಾತ್ರ ಮಾಡಿಸಿದ್ದೇವೆ. ಇದು ಕೇವಲ ಸೆಂಟಿಮೆಂಟ್‌ ಕಾರಣಕ್ಕೆ ತೆಗೆದುಕೊಂಡು ನಿರ್ಧಾರವಲ್ಲ. ಇಡೀ ಸಿನಿಮಾ ಮನರಂಜನೆಯಿಂದ ಕೂಡಿರುತ್ತದೆ. ತಮಾಷೆಯಾಗಿ ಸಾಗುವ ಈ ಚಿತ್ರದಲ್ಲಿ ಗುರುಪ್ರಸಾದ್‌ ಅವರಿಗೂ ಸೂಕ್ತವಾದ ಪಾತ್ರವಿದೆ.’

ಡಾಲಿ ಧನಂಜಯ್ ಗರ್ಲ್ ಫ್ರೆಂಡ್ ಕತೆ ಗೊತ್ತಾ!

ಅವರ ಪಾತ್ರಕ್ಕೆ ಅವರದೇ ಡೈಲಾಗ್‌

‘ಗುರುಪ್ರಸಾದ್‌ ಮರು ಮಾತನಾಡದೆ ಒಪ್ಪಿಕೊಂಡು ಸೆಟ್‌ಗೆ ಬಂದರು. ನಾನು ಬರೀ ದೃಶ್ಯ ವಿವರಿಸಿದೆ. ಅವರೇ ಅದಕ್ಕೆ ತಕ್ಕಂತೆ ಸ್ಕಿ್ರಪ್ಟ್‌ ಹಾಗೂ ಡೈಲಾಗ್‌ ಬರೆದುಕೊಂಡು ಬಂದು ಕ್ಯಾಮೆರಾ ಮುಂದೆ ಅಭಿನಯಿಸಿದರು. ನಾನು ಅವರ ಶಿಷ್ಯ. ಅವರಿಗೆ ಬರೆದು ಹೇಳುವಷ್ಟುದೊಡ್ಡವನಲ್ಲ. ನಾವು ಅಂದುಕೊಂಡಿದ್ದ ದೃಶ್ಯವನ್ನು ನಿರೀಕ್ಷೆಗೂ ಮೀರಿ ಚೆಂದ ಮಾಡಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ಶಂಕರ್‌ ಗುರು.

 

ಕೊನೆಯ ದಿನ ಎಲ್ಲರಿಗೂ ಗಿಫ್ಟು

ಇದೇ ಚಿತ್ರದಲ್ಲಿ ಮತ್ತೊಬ್ಬ ನಿರ್ದೇಶಕ ವಿಜಯ್‌ ಪ್ರಸಾದ್‌ ಕೂಡ ನಟಿಸಿದ್ದಾರೆ. ಇವರದ್ದು ಇಡೀ ಚಿತ್ರದಲ್ಲಿ ಬಂದು ಹೋಗುವ ಒಂದು ಕ್ಯಾರೆಕ್ಟರ್‌. ಚಿತ್ರೀಕರಣದ ಕೊನೆಯ ದಿವಸ ಧನಂಜಯ್‌, ಚಿತ್ರಕ್ಕಾಗಿ ದುಡಿದ ನೂರಕ್ಕೂ ಹೆಚ್ಚು ಕಾರ್ಮಿಕರಿಗೆ ದಿನಬಳಕೆಗೆ ಬೇಕಾಗುವ ಕುಕ್ಕರ್‌, ತವ, ಹಾಟ್‌ ವಾಟರ್‌ ಬಾಟಲ… ಮುಂತಾದ ವಸ್ತುಗಳನ್ನು ಉಡುಗೊರೆ ನೀಡಿ ತಮ್ಮ ಚಿತ್ರದ ಚಿತ್ರೀಕರಣವನ್ನು ಸಂತಸದಿಂದ ಪೂರ್ಣಗೊಳಿಸಿದವರ ಶ್ರಮವನ್ನು ನೆನಪಿಸಿಕೊಂಡಿದ್ದಾರೆ.

ಲಾಕ್‌ಡೌನ್‌ನಲ್ಲಿ ಶೂಟಿಂಗ್‌ ಆದ ಪೊಲೀಸ್‌ ಚಿತ್ರಕ್ಕೆ ಧನಂಜಯ್‌ ಹೀರೋ! 

ಮಧ್ಯಮ ವರ್ಗದ ಜನರ ದಿನನಿತ್ಯದ ಜೀವನದಲ್ಲಿ ನಡೆಯುವ ಘಟನೆಗಳೇ ಈ ಚಿತ್ರದ ಕತೆ. ಅದೇ ಮಧ್ಯಮ ವರ್ಗದ ಜನರಿಗೆ ಬೇಕಾದ ವಸ್ತುಗಳನ್ನು ನೀಡುವ ಮೂಲಕ ಚಿತ್ರದ ಆಶಯವನ್ನು ಧನಂಜಯ್‌ ತೆರೆ ಆಚೆಗೂ ಪಾಲಿಸಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್‌ ಸಂಗೀತ ನೀಡಿದ್ದಾರೆ. ಪ್ರೀತಾ ಜಯರಾಮನ್‌ ಛಾಯಾಗ್ರಾಹಣ ಮಾಡಿದ್ದಾರೆ. ಅಮೃತಾ ಅಯ್ಯಂಗಾರ್‌ ನಾಯಕಿಯಾಗಿ ನಟಿಸಿದ್ದಾರೆ. ರಂಗಾಯಣ ರಘು, ತಾರಾ, ಸ್ಪರ್ಶ ರೇಖ, ನಾಗಭೂಷಣ್‌, ಪೂರ್ಣಚಂದ್ರ ಈ ಚಿತ್ರದ ಪ್ರಮುಖ ಪಾತ್ರದಾರಿಗಳು.