ಹೀಗೆ ಆಕಸ್ಮಿಕವಾಗಿ ಚಿತ್ರೀಕರಣಗೊಂಡ ಚಿತ್ರದ ಹೀರೋ ಧನಂಜಯ್‌. ಇವರನ್ನು ಹುಡುಕಿಕೊಂಡು ಬಂದು ಸಿನಿಮಾ ಮಾಡಿದ್ದು ತಮಿಳು ನಿರ್ದೇಶಕ ಜೈಶಂಕರ್‌ ಹಾಗೂ ಛಾಯಾಗ್ರಾಹಕ ತಿರು.

ಮೊದಲ ಲಾಕ್‌ಡೌನ್‌ನಲ್ಲಿ ಕತೆ ಮಾಡಿಕೊಂಡು, ಎರಡನೇ ಹಂತದ ಲಾಕ್‌ಡೌನ್‌ ಸಡಿಲ ಮಾಡಿದಾಗ 25 ರಿಂದ 30 ದಿನಗಳ ಕಾಲ ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆರಂಭದಲ್ಲಿ ಚಿಕ್ಕ ಬಜೆಟ್‌ ಚಿತ್ರ ಎಂದುಕೊಂಡು ಶುರು ಮಾಡಿದವರು ಮುಂದೆ ಧನಂಜಯ್‌ ಅವರ ಪ್ರತಿಭೆ ನೋಡಿ, ಚಿಕ್ಕ ಸಿನಿಮಾ ದೊಡ್ಡದಾಯಿತು. ಇದುವರೆಗೂ ತೆರೆ ಮೇಲೆ ನೋಡಿರದ ಒಂದು ಪೋಲಿಸ್‌ ಡ್ರಾಮಾ ಕತೆಯನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದಾರೆ. ಬಾಲು, ಅಭಿಷೇಕ್‌, ಸುನೀಲ್‌ ಚಿತ್ರದ ನಿರ್ಮಾಪಕರು.

ಛಾಯಾಗ್ರಾಹಕ ತಿರು ಅವರದ್ದು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು. ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿ 35ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಣ ಮಾಡಿದ್ದಾರೆ. ತೆಲುಗಿನ ‘ಜನತಾ ಗ್ಯಾರೇಜ್‌’, ‘ಭರತ್‌ ಅನೇ ನೇನು’ ರಜನಿಕಾಂತ್‌ ಅವರ ‘ಪೆಟ್ಟಾ’, ಪ್ರಕಾಶ್‌ ರೈ ಅವರ ‘ಕಾಂಜೀವರಂ’, ಕಮಲ್‌ ಹಾಸನ್‌ ಅವರ ‘ಹೇ ರಾಮ್‌’, ಪ್ರಭುದೇವ ಅವರ ‘ಮಕ್ರ್ಯುರಿ’ ಹಾಗೂ ಹಿಂದಿಯಲ್ಲಿ ‘ಕ್ರಿಷ್‌ 3’, ‘ಗರಂ ಮಸಾಲ’ ಸೇರಿದಂತೆ ಹಲವು ಚಿತ್ರಗಳಿಗೆ ಕ್ಯಾಮೆರಾ ಹಿಡಿದಿರುವ ರಾಷ್ಟ್ರ ಪ್ರಶಸ್ತಿ ವಿಜೇತ ಛಾಯಾಗ್ರಾಹಕ. ಸದ್ಯಕ್ಕೆ ಈಗ ಚಿರಂಜೀವಿ ನಟನಯ ‘ಆಚಾರ್ಯ’ ಹಾಗೂ ಮೋಹಲ್‌ ಲಾಲ್‌ ಅವರ ‘ಮರಕ್ಕರ’ ಚಿತ್ರಗಳಿಗೆ ಛಾಯಾಗ್ರಾಹಣ ಮಾಡುತ್ತಿದ್ದಾರೆ. ಇನ್ನೂ ಜೈಶಂಕರ್‌ ಬಾಲಿವುಡ್‌ನಲ್ಲಿ ಹತ್ತಾರು ಜಾಹೀರಾತು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಅವರಿಗೆ ಇದು ಮೊದಲ ಸಿನಿಮಾ.

‘ಕೆಜಿಎಫ್‌’ ಚಿತ್ರವನ್ನು ನಾನು ಎಷ್ಟುಸಲ ನೋಡಿದ್ದೇನೆ ಅಂತ ಲೆಕ್ಕ ಇಲ್ಲ. ಈ ಚಿತ್ರದ ನಂತರ ನಟ ಯಶ್‌ ಹೇಗೆ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಪರಿಚಯ ಆದರೋ ಅಂಥದ್ದೇ ಪ್ರತಿಭೆ ಹಾಗೂ ಫೈರ್‌ ಇರೋ ನಟ ಎಂದರೆ ಧನಂಜಯ್‌. ‘ಕೆಜಿಎಫ್‌’ ಚಿತ್ರದ ನಂತರ ನಾನು ಪ್ರಶಾಂತ್‌ ನೀಲ್‌ ಅಭಿಮಾನಿ ಆದೆ. ಅದೇ ರೀತಿ ಧನಂಜಯ್‌ ಅವರ ಜತೆ ಈ ಚಿತ್ರ ಮಾಡಿದ ಮೇಲೆ ನಾನು ಅವರ ಪ್ರತಿಭೆಗೆ ಫಿದಾ ಆದೆ.- ತಿರು, ರಾಷ್ಟ್ರಪ್ರಶಸ್ತಿ ವಿಜೇತ ಛಾಯಾಗ್ರಾಹಕ

ಇವರಿಬ್ಬರು ಸೇರಿ ಲಾಕ್‌ಡೌನ್‌ ಹೊತ್ತಿನಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಚಿತ್ರೀಕರಣ ಮುಗಿಸಿದ್ದಾರೆ. ಬೆಂಗಳೂರಿನಲ್ಲೇ ಇಡೀ ಚಿತ್ರಕ್ಕೆ ಶೂಟಿಂಗ್‌ ಮುಗಿಸಿದ್ದಾರೆ. 10 ರಿಂದ 15 ಪ್ರಧಾನ ಪಾತ್ರಗಳು ಚಿತ್ರದಲ್ಲಿ ಬರಲಿವೆ. ಧನಂಜಯ್‌ ಅವರಿಗೆ ನಾಯಕಿಯಾಗಿ ಮಲಯಾಳಂ ನಟಿ ದುರ್ಗಾ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕನ್ನಡದ ಒಂದಿಷ್ಟುಹೊಸ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರ ಸದ್ಯಕ್ಕೆ ಕನ್ನಡದಲ್ಲಿ ಮೂಡಿ ಬರುತ್ತಿದ್ದು, ಮುಂದೆ ಬೇರೆ ಭಾಷೆಗಳಿಗೂ ಡಬ್‌ ಮಾಡುವ ಪ್ಲಾನ್‌ ಇದೆ. ಧನಂಜಯ್‌ ಇಲ್ಲಿ ಪೊಲೀಸ್‌ ಪಾತ್ರ ಮಾಡುತ್ತಿದ್ದಾರೆ.

"