ಕನ್ನಡ ಚಿತ್ರರಂಗದಲ್ಲಿ ಕೊನೆಗೂ ಪಾಶ್ ಕಮಿಟಿ ರಚನೆ; ಪಲ್ಲಂಗಕ್ಕೆ ಕರೆದವರೆಲ್ಲಾ ಜೈಲು ಕಂಬಿ ಎಣಿಸೋದು ಗ್ಯಾರಂಟಿ!
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ನಿರ್ದೇಶನದ ಮೇರೆಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯು ಪಾಶ್ ಆಂತರಿಕ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಚಿತ್ರರಂಗದಲ್ಲಿ ಕೆಲಸ ಮಾಡುವ ಮಂಡಳಿಯ ಎಲ್ಲಾ ಸದಸ್ಯರಿಗೆ ಅನ್ವಯವಾಗುತ್ತದೆ.

ಬೆಂಗಳೂರು (ಜ.22): ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರಿಂದ ಮೂರ್ನಾಲ್ಕು ಬಾರಿ ನೋಟೀಸ್ ಜಾರಿಗೊಳಿಸಿದ ಮೇಲೆ ಕೊನೆಗೂ ಜ.17ರಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಪಾಶ್ ಕಮಿಟಿ (POSH Committee) ರಚನೆ ಮಾಡಿ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗದಿಂದ 3 ಬಾರಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೋಟಿಸ್ ಜಾರಿ ಮಾಡಿ, ಪಾಶ್ ಕಮಿಟಿ ರಚಿಸುವಂತೆ ಸೂಚನೆ ನೀಡಲಾಗಿತ್ತು. ಕೊನೆಯ ನೋಟೀಸ್‌ನಲ್ಲಿ ಕೂಡಲೇ ಪಾಶ್ ಕಮಿಟಿ ಸಿದ್ಧಪಡಿಸಿ ವರದಿ ಮಾಡುವಂತೆ ನಿರ್ದೇಶಿಸಲಾಗಿತ್ತು. ಇದರ ಬೆನ್ನಲ್ಲಿಯೇ ಕನ್ನಡ ಫಿಲ್ಮ್ ಚೇಂಬರ್ ವತಿಯಿಂದ ಪಾಶ್ ಆಂತರಿಕ ಸಮಿತಿ ರಚಿಸಿ ಅದಕ್ಕೆ ಸದಸ್ಯರನ್ನೂ ನೇಮಕ ಮಾಡಲಾಗಿದೆ.
ಜೊತೆಗೆ, ದಿನಾಂಕ ಜ.8 ಹಾಗೂ ಜ.10ರಂದು ಬೆಂಗಳೂರು ನಗರ ಜಿಲ್ಲಾಡಳಿತದ ಅಧಿಕಾರಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ಕೆಲವು ಪದಾಧಿಕಾರಿಗಳು ಹಾಗೂ ಕೆಲವು ಸದಸ್ಯರುಗಳೊಂದಿಗೆ ಪಾಶ್ ಕಾಯ್ದೆಯ ಬಗ್ಗೆ ಮಾಹಿತಿ ನೀಡಲಾಗಿತ್ತು. ಜೊತೆಗೆ, ವಾಣಿಜ್ಯ ಮಂಡಳಿಯಿಂದ ಪಾಶ್ ಕಾಯ್ದೆಯಡಿ ಆಂತರಿಕ ಸಮಿತಿಯನ್ನು ರಚಿಸಲು ತಿಳಿಸಿದ ಮೇರೆಗೆ ಜ.17ರಂದು ಈ ಕೆಳಕಂಡ ಸದಸ್ಯರನ್ನೊಳಗೊಂಡಂತೆ ಆಂತರಿಕ ಸಮಿತಿಯನ್ನು ರಚಿಸಲಾಗಿದೆ.
- ಪಾಶ್ ಆಂತರಿಕ ಸಮಿತಿ ಸದಸ್ಯರು:
ಎಂ. ನರಸಿಂಹಲು
ಎಂ.ಎನ್. ಕುಮಾರ್
ಸಾ.ರಾ. ಗೋವಿಂದು
ಎನ್.ಎಂ ಸುರೇಶ್,
ಅನ್ನಪೂರ್ಣ-ಎನ್‌ಜಿಒ
ಬಿ ಎಲ್ ನಾಗರಾಜ್ (ನಾಗಣ್ಣ)
ಅನಿತಾರಾಣಿ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಬೈಲಾ ಹಾಗೂ ನಿಯಮಾವಳಿ ಪ್ರಕಾರ ಮಂಡಳಿಯ ಸದಸ್ಯರಾದವರಿಗೆ ಮಾತ್ರ ಮೇಲ್ಕಂಡ ಸಮಿತಿಯು ಅನ್ವಯವಾಗುತ್ತದೆ. ಈ ಅಂಶವನ್ನು ತಮ್ಮ ಆದ್ಯ ಗಮನಕ್ಕೆ ತರಬಯಸುತ್ತೇವೆ. ಯಾರಿಗೇ ಕಿರುಕುಳ ಉಂಟಾದರೂ ತಮ್ಮ ಗಮನಕ್ಕೆ ಬಂದು ದೂರು ಕೊಟ್ಟರೆ ಅದನ್ನು ಕೂಲಂಕುಶವಾಗಿ ಪರಿಶೀಲನೆ ನಡೆಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ನರಸಿಂಹಲು ಅವರು ಆದೇಶವನ್ನು ಹೊರಿಡಿಸಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ವುಡ್ಗೆ ಹೊಸ ಟೆನ್ಷನ್ ಕೊಟ್ಟ ಹೇಮಾ ವರದಿ: ಮಂಚಕ್ಕೆ ಕರೆದವರಿಗೆ ಶುರುವಾಗುತ್ತಿದೆ ಕೈ ಕಾಲು ನಡುಕ!
ಕೇರಳ ಚಿತ್ರರಂಗದಲ್ಲಿ ನಡೆದ ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತಾದ ಹೇಮಾ ವರದಿ ಇಡೀ ಭಾರತೀಯ ಚಿತ್ರರಂಗದಲ್ಲಿ ಸುನಾಮಿ ಎಬ್ಬಿಸಿದೆ. ಕೇರಳದಲ್ಲಿ ಎದ್ದಿರೋ ಈ ಸುನಾಮಿ ಈಗ ಕನ್ನಡ ಚಿತ್ರರಂಗಕ್ಕೂ ತಟ್ಟಿದೆ. ನಟ ಚೇತನ್, ಶೃತಿ ಹರಿಹರನ್, ನಟಿ ನೀತು ಸೇರಿದಂತೆ 153 ಜನ ಸಹಿ ಹಾಕಿ ಸ್ಯಾಂಡಲ್ವುಡ್ನಲ್ಲಿ ಹೆಣ್ಣುಮಕ್ಕಳ ರಕ್ಷಣೆಗೆ ಸರ್ಕಾರ ಪಾಶ್ ಕಮಿಟಿ ರಚಿಸುವಂತೆ ಫೈರ್ ಸಂಸ್ಥೆ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇದರ ಬೆನ್ನಲ್ಲಿಯೇ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ತಕ್ಷಣ ಸಭೆ ಮಾಡಿ, ಪಾಶ್ ಕಮಿಟಿ ರಚನೆ ಮಾಡುವಂತೆ ಕರ್ನಾಟಕ ಮಹಿಳಾ ಆಯೋಗ ಹೇಳಿತ್ತು. ಇದೀಗ ಪಾಶ್ ಕಮಿಟಿ ಸಿದ್ಧವಾಗಿದ್ದು, ಯಾರಾರ ಕರ್ಮ ಕಾಂಡಗಳು ಹೊರಗೆ ಬರುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

