ಜಟ್ಟ ಗಿರಿರಾಜ್ ನಿರ್ದೇಶನದ ‘ಕಲ್ಯಾಣಿ’ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಸಾಮ್ರಾಟ್ ಶೆಟ್ಟಿ ಮತ್ತು ಸಿಮ್ರಾನ್ ನಟನೆಯ ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.
ಜಟ್ಟ ಗಿರಿರಾಜ್ ನಿರ್ದೇಶನದ ‘ಕಲ್ಯಾಣಿ’ ಚಿತ್ರದ ಆಡಿಯೋ ಬಿಡುಗಡೆ ಆಗಿದೆ. ವಿಭಿನ್ನವಾದ ಕತೆಗಳನ್ನು ತೆರೆ ಮೇಲೆ ತರುವ ಗಿರಿರಾಜ್ ಅವರು ಈ ಬಾರಿ ಬಸವರೆಡ್ಡಿ ಬರೆದಿರುವ ಕತೆಯನ್ನು ಸಿನಿಮಾ ಮಾಡಿದ್ದಾರೆ. ಚಿತ್ರಕ್ಕೆ ಸಂಪೂರ್ಣವಾಗಿ ಚಿತ್ರೀಕರಣ ಮುಗಿದ್ದು, ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ರಂಗಭೂಮಿಯಿಂದ ಬಂದಿರುವ ಸಾಮ್ರಾಟ್ ಶೆಟ್ಟಿ ಚಿತ್ರದ ನಾಯಕ. ಉತ್ತರ ಭಾರತದ ಸಿಮ್ರಾನ್ ನಾಯಕಿ. ಉಳಿದಂತೆ ರಾಹುಲ್ ಜೇಟ್ಲಿ, ಶಮಂತ್ ರಾವ್, ಪಿ.ಡಿ. ಸತೀಶ್ ಚಂದ್ರ, ಯಮುನಾ ಶ್ರೀನಿಧಿ, ವಿಜಯ್ ಚೆಂಡೂರು, ಶೈಲೇಂದ್ರ, ರಂಗು ಸಮರ್ಪಣ್ ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಗಿರಿರಾಜ್, ‘ನವಿರಾದ ಒಲವಿನ ಕಥೆ ಮುನ್ನಲೆಯಾಗಿಟ್ಟುಕೊಂಡು ಈ ಚಿತ್ರ ಮಾಡಲಾಗಿದೆ. ನಂಬಿಕೆ, ಸ್ನೇಹ, ಐಡೆಂಟಿಟಿಯ ಹಾಗೂ ಬೇರೆ ಬೇರೆ ಸಂಸ್ಕೃತಿಗಳ ಮುಖಾಮುಖಿಯೇ ಈ ಕತೆಯ ಗುಣ. ಉತ್ತರ ಭಾರತದಿಂದ ಬರುವ ಹುಡುಗಿ, ದಕ್ಷಿಣ ಭಾರತದ ಹುಡುಗನ ಪಾತ್ರಗಳನ್ನೇ ಪ್ರಧಾನವಾಗಿ ಇಟ್ಟುಕೊಂಡು ಎರಡು ಸಂಸ್ಕೃತಿಗಳ ಅನಾವರಣವನ್ನು ಈ ಚಿತ್ರದಲ್ಲಿ ಮಾಡುವ ಪ್ರಯತ್ನ ಮಾಡಿದ್ದೇವೆ. ನಾನು ಇಲ್ಲಿಯವರೆಗೆ ಮಾಡಿರುವ ಸಿನಿಮಾಗಳಿಗಿಂತ ಸಂಪೂರ್ಣ ವಿಭಿನ್ನವಾದ ಸಿನಿಮಾ ಇದು’ ಎಂದರು.
ಮೂರು ದಶಕಗಳಿಂದ ಕಾರ್ಯಕಾರಿ ನಿರ್ಮಾಪಕರಾಗಿ 45ಕ್ಕೂ ಹೆಚ್ಚು ಸಿನಿಮಾಗಳಿಗೆ ಕೆಲಸ ಮಾಡಿರುವ ಕುಮಾರಸ್ವಾಮಿ ಆರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿರುವ ಮೂರು ಹಾಡುಗಳಿಗೆ ಬಿ.ಜೆ. ಭರತ್ ಸಂಗೀತ ಇದೆ. ಒಂದು ಹಾಡಿನಲ್ಲಿ ವರಕವಿ ದ.ರಾ. ಬೇಂದ್ರೆ, ಮತ್ತೊಂದು ಹಾಡಿನಲ್ಲಿ ವಿಜಯ್ ಈಶ್ವರ್ ಸಾಹಿತ್ಯವಿದೆ. ಆಲ್ಓಕೆ ಅಲೋಕ್ ಒಂದು ಹಾಡು ಬರೆದು, ಹಾಡಿದ್ದಾರೆ. ಪ್ರಶಾಂತ ಲಾಗರ ಛಾಯಾಗ್ರಹಣ ಚಿತ್ರಕ್ಕಿದೆ.
ಬೆಂಗಳೂರು ಸುತ್ತಮುತ್ತ ಚಿತ್ರೀಕರಣ
ಚಿತ್ರಕ್ಕೆ ಬಿ.ಜೆ. ಭರತ್ ಸಂಗೀತ ಸಂಯೋಜಿಸಿದ್ದು, ಪ್ರಶಾಂತ ಲಾಗರ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಭಟ್ಕಳ ಮತ್ತು ಬೆಂಗಳೂರು ಸುತ್ತಮುತ್ತ ಪ್ರಮುಖ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಸದ್ಯ ನಿರ್ಮಾಣೋತ್ತರ ಕೆಲಸಗಳು ಭರದಿಂದ ಸಾಗುತ್ತಿವೆ. ಎಲ್ಲವೂ ಯೋಜನೆಯಂತೆ ನಡೆದರೆ ಸಿನಿಮಾವನ್ನು ತೆರೆಗೆ ತರುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ. ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು.






