Kannada Censor Board: ‘ಎಲ್ಲಾ ವರ್ಗದ ಪ್ರೇಕ್ಷಕರಿಗೆ ಬೇಕಾದ ಅಂಶಗಳು ನಮ್ಮ ಚಿತ್ರದಲ್ಲಿವೆ’- ಪ್ರತಿಯೊಂದು ಚಿತ್ರದವರು ಯಾವ ಕಾರಣಕ್ಕೂ ಮಿಸ್ ಮಾಡಿಕೊಳ್ಳದೆ ಹೇಳುವ ಮಾತುಗಳಿವು.
‘ನಮ್ಮದು ಕುಟುಂಬ ಸಮೇತರಾಗಿ ನೋಡುವ ಸಿನಿಮಾ’ ‘ಎಲ್ಲಾ ವರ್ಗದ ಪ್ರೇಕ್ಷಕರಿಗೆ ಬೇಕಾದ ಅಂಶಗಳು ನಮ್ಮ ಚಿತ್ರದಲ್ಲಿವೆ’- ಪ್ರತಿಯೊಂದು ಚಿತ್ರದವರು ಯಾವ ಕಾರಣಕ್ಕೂ ಮಿಸ್ ಮಾಡಿಕೊಳ್ಳದೆ ಹೇಳುವ ಮಾತುಗಳಿವು. ಆದರೆ, ಇವರ ಮಾತುಗಳಲ್ಲಿ ಎಷ್ಟು ಸತ್ಯವಿದೆ ಎಂದು ಈ ವರ್ಷ ತೆರೆಕಂಡ ಚಿತ್ರಗಳ ಸೆನ್ಸಾರ್ ಸರ್ಟಿಫಿಕೇಟ್ ನೋಡಿದರೆ ಗೊತ್ತಾಗುತ್ತದೆ! 2026ರ ಜನವರಿ ತಿಂಗಳಿಂದ ಜೂನ್ 19ರವರೆಗೂ ಕನ್ನಡ ಹಾಗೂ ಕರ್ನಾಟಕದ ಪ್ರಾದೇಶಿಕ ಭಾಷೆಯ 128 ಚಿತ್ರಗಳು ಸೆನ್ಸಾರ್ ಮಾಡಿಕೊಂಡಿವೆ.
ಈ ಪೈಕಿ 10 ಚಿತ್ರಗಳಿಗೆ ಯು ಸರ್ಟಿಫಿಕೇಟ್, 96 ಚಿತ್ರಗಳಿಗೆ ಯುಎ ಸರ್ಟಿಫಿಕೇಟ್, 22 ಚಿತ್ರಗಳಿಗೆ ಎ ಸರ್ಟಿಫಿಕೇಟ್ ಬಂದಿದೆ. ಅಂದರೆ 128 ಚಿತ್ರಗಳ ಪೈಕಿ ಕೇವಲ 10 ಚಿತ್ರಗಳು ಮಾತ್ರ ಫ್ಯಾಮಿಲಿ ಪ್ರೇಕ್ಷಕರಿಗೆ ಮೀಸಲು! ಉಳಿದ ಚಿತ್ರಗಳು ಮಕ್ಕಳು ಹಾಗೂ ಮಹಿಳೆಯರಿಂದ ದೂರ ಬಲು ದೂರ. ಈ ರೀತಿ ಹಿಂಸೆ, ವಯಸ್ಕರ ದೃಶ್ಯಗಳು, ಸಂಭಾಷಣೆಗಳಿಂದ ಕೂಡಿ ಯುಎ, ಎ ಸರ್ಟಿಫಿಕೇಟ್ ಚಿತ್ರಗಳಿಗೇ ಹೆಚ್ಚಾಗಿ ಜನ್ಮ ಕೊಡುತ್ತಿರುವ ಕನ್ನಡ ಚಿತ್ರರಂಗ ‘ಫ್ಯಾಮಿಲಿ ಆಡಿಯನ್ಸ್ ನಮ್ಮ ಕೈ ಹಿಡಿಯುತ್ತಿಲ್ಲ’ ಎಂದು ಕಣ್ಣೀರು ಹಾಕುತ್ತದೆ.
ಸೆನ್ಸಾರ್ ಮಂಡಳಿ ನೀಡುವ ಯು ಸರ್ಟಿಫಿಕೇಟ್‌ನಿಂದ ಸಿನಿಮಾಗಳು ದಿನೇ ದಿನೇ ದೂರವಾಗುತ್ತಿವೆ ಎನ್ನುವುದರ ಅರ್ಥ, ಸಾಮಾಜಿಕ, ಕುಟುಂಬದ ಮೌಲ್ಯಗಳಿಂದ ಕೂಡಿದ ಕತೆಗಳಿಗೆ ಚಿತ್ರರಂಗ ಗುಡ್ ಬೈ ಹೇಳುತ್ತಿದೆ. ಇದು ಕೇವಲ ಈ ಆರು ತಿಂಗಳ ಯು, ಎ, ಯುಎ ಸರ್ಟಿಫಿಕೇಟ್ ಲೆಕ್ಕಾಚಾರ ಮಾತ್ರವಲ್ಲ, 2017 ರಿಂದ ಇಲ್ಲಿವರೆಗೂ ನೋಡಿದರೆ ಯು ಸರ್ಟಿಫಿಕೇಟ್ ಚಿತ್ರಗಳ ಸಂಖ್ಯೆಯಲ್ಲಿ ಗಣನೀಯವಾಗಿ ಕುಸಿತ ಕಾಣುತ್ತಿದೆ. 2017 ರಿಂದ 2026ರ ಜೂನ್ ತಿಂಗಳ ವರೆಗೂ ಕನ್ನಡ ಹಾಗೂ ಪ್ರಾದೇಶಿಕ ಭಾಷೆಯ 3543 ಚಿತ್ರಗಳು ಸೆನ್ಸಾರ್ ಮಾಡಿಕೊಂಡಿದ್ದು, ಈ ಪೈಕಿ ಯು ಪ್ರಮಾಣ ಪತ್ರದ ಚಿತ್ರಗಳು ಕೇವಲ 736.
ಉಳಿದಂತೆ 1826 ಚಿತ್ರಗಳು ಯುಎ ಸರ್ಟಿಫಿಕೇಟ್, 420 ಚಿತ್ರಗಳು ಎ ಸರ್ಟಿಫಿಕೇಟ್‌ಗೆ ಪಾತ್ರವಾಗಿವೆ. ಕಿರು ಚಿತ್ರಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. 2017ರಿಂದ ಇಲ್ಲಿವರೆಗೂ 2360 ಕಿರು ಚಿತ್ರಗಳು ಸೆನ್ಸಾರ್ ಮಾಡಿಕೊಂಡಿವೆ. ಈ ಪೈಕಿ 1419 ಯು, 738 ಯುಎ, 59 ಎ ಸರ್ಟಿಫಿಕೇಟ್ ಕ್ಯಾಟಗಿರಿಗೆ ಸೇರಿವೆ. ಇನ್ನೂ ಕಳೆದ ಒಂಭತ್ತು ವರ್ಷಗಳಲ್ಲಿ ಭಾರತೀಯ ಮುಖ್ಯ ವಾಹಿನಿಯ ಹಾಗೂ ಪ್ರಾದೇಶಿಗಳ ಭಾಷೆಗಳಿಂದ ಕೂಡಿದ 28,870 ಚಿತ್ರಗಳು ಸೆನ್ಸಾರ್ ಮಾಡಿಕೊಂಡಿವೆ. ಈ ಪೈಕಿ ಯು-8,012, ಯುಎ-14,618 ಹಾಗೂ ಎ-2,300 ಚಿತ್ರಗಳು ಸರ್ಟಿಫಿಕೇಟ್ ಪಡೆದುಕೊಂಡಿವೆ.
ಮಾತಿನಲ್ಲಿ ಸತ್ಯವಿದೆಯೇ
ಕರ್ನಾಟಕ ರಾಜ್ಯ ಸೇರಿ ದೇಶದ ಒಂಭತ್ತು ಪ್ರಾದೇಶಿಕ ಸೆನ್ಸಾರ್ ಮಂಡಳಿ ನೀಡುವ ಈ ಅಂಕಿ ಅಂಶಗಳನ್ನು ನೋಡಿದರೆ ಕನ್ನಡವೂ ಸೇರಿದಂತೆ ಭಾರತೀಯ ಚಿತ್ರಗಳು ಕೌಟುಂಬಿಕ ಕತೆ, ಕೌಟುಂಬಿಕ ಪ್ರೇಕ್ಷಕರಿಂದ ಯಾವ ಪ್ರಮಾಣದಲ್ಲಿ ದೂರವಾಗುತ್ತಿದೆ ಎನ್ನುವುದು ಗೊತ್ತಾಗುತ್ತದೆ. ಅಲ್ಲದೆ ಕೋವಿಡ್ ನಂತರ ಅಂದರೆ 2019ರ ನಂತರ ಹಿಂಸೆ, ರಕ್ತಪಾತ, ಆಡಲ್ಟ್ ಕಂಟೆಂಟ್ ಕತೆಗಳೇ ಹೆಚ್ಚಾಗಿರುವ ಅಘಾತಕಾರಿ ಅಂಶ ಸೆನ್ಸಾರ್ ಮಂಡಳಿ ನೀಡುವ ಸರ್ಟಿಫಿಕೇಟ್‌ಗಳಿಂದಲೇ ಬಯಲಾಗಿದೆ. ಹಾಗಾದರೆ, ‘ನಮ್ಮದು ಕುಟುಂಬ ಸಮೇತರಾಗಿ ನೋಡುವ ಸಿನಿಮಾ’ ಎನ್ನುವ ಚಿತ್ರತಂಡಗಳ ಮಾತಿನಲ್ಲಿ ಸತ್ಯವಿದೆಯೇ?


