- Home
- Karnataka Districts
- ಮೈಸೂರು ರೆಸ್ಟೋ ಪಬ್‌ನಲ್ಲಿ ಸಿಲಿಂಡರ್ ಬ್ಲಾಸ್ಟ್, ಮೈ ಪೂರ್ತಿ ಸುಟ್ಟ ಗಾಯದಿಂದ ಆಸ್ಪತ್ರೆ ಸೇರಿದ ಸ್ಯಾಂಡಲ್‌ವುಡ್ ಹಿರೋ!
ಮೈಸೂರು ರೆಸ್ಟೋ ಪಬ್‌ನಲ್ಲಿ ಸಿಲಿಂಡರ್ ಬ್ಲಾಸ್ಟ್, ಮೈ ಪೂರ್ತಿ ಸುಟ್ಟ ಗಾಯದಿಂದ ಆಸ್ಪತ್ರೆ ಸೇರಿದ ಸ್ಯಾಂಡಲ್‌ವುಡ್ ಹಿರೋ!
ಮೈಸೂರಿನ ದಟ್ಟಗಳ್ಳಿ ಬಳಿಯ ನಟ ಪ್ರೀತಂ ಪುಮೀತ್ ಮಾಲೀಕತ್ವದ 'ಫಾಕ್ಸ್ ಡೆನ್' ಪಬ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಇಬ್ಬರು ಮೃತಪಟ್ಟು, ನಟ ಪ್ರೀತಂ ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಯಾಂಡಲ್‌ವುಡ್ ಚಿತ್ರನಟ ಮಾಲೀಕತ್ವದ ಪಬ್
ಮೈಸೂರು ನಗರದ ಹೊರವಲಯದಲ್ಲಿ ಆರ್.ಟಿ.ನಗರದ ದಟ್ಟಗಳ್ಳಿ ಸಮೀಪವಿರುವ ಪ್ರಖ್ಯಾತ ರೆಸ್ಟೋ ಪಬ್‌ನಲ್ಲಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟದ ಬೆಂಕಿ ಅವಘಡಕ್ಕೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಬೆಳಕಿಗೆ ಬಂದಿತ್ತು. ಇದೀಗ ಆ ಪಬ್ ಮಾಲೀಕ ಸ್ಯಾಂಡಲ್‌ವುಡ್ ಚಿತ್ರನಟ ಎಂದು ತಿಳಿದುಬಂದಿದ್ದು, ನಟನೂ ಸೇರಿದಂತೆ ಐವರು ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು, ರಾಜಕಾರಣಿಗಳು ಈ ರೆಸ್ಟೋ ಪಬ್ ಗೆ ಭೇಟಿ ನೀಡಿದ್ದಾರೆ. ಇದರ ಸಂಪೂರ್ಣ ವಿವರಣೆ ಇಲ್ಲಿದೆ.
ಚಿತ್ರನಟ ಪ್ರೀತಂ ಒಡೆತನದ 'ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್
ಕನ್ನಡದ ‘ಬ್ರಹ್ಮ ವಿಷ್ಣು ಮಹೇಶ್ವರ’ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದ ಪ್ರೀತಂ ಪುಮೀತ್, ಮೈಸೂರು ನಗರದ ಆರ್.ಟಿ.ನಗರದ ದಟ್ಟಗಳ್ಳಿ ಸಮೀಪ 'ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್' (Fox Den Liquor Garage) ಹೆಸರಿನ ರೆಸ್ಟೋ ಪಬ್ ನಡೆಸುತ್ತಿದ್ದರು. ಈ ಹಿಂದೆ ಶ್ರೀರಂಗಪಟ್ಟಣದ ಬಳಿ 'ರಿವರ್ ರಾಂಚ್' ರೆಸಾರ್ಟ್ ನಡೆಸುತ್ತಿದ್ದ ಇವರು, ಇತ್ತೀಚೆಗೆ ದಕ್ಷಿಣ ಆಫ್ರಿಕಾದ ವಿಶಿಷ್ಟ 'ಮಾರಾ' (Mara) ಬುಡಕಟ್ಟು ಜನಾಂಗದ ಶೈಲಿಯಲ್ಲಿ ಈ ಹೊಸ ರೆಸ್ಟೋ ಬಾರ್ ಅನ್ನು ವಿನ್ಯಾಸಗೊಳಿಸಿ ಆರಂಭಿಸಿದ್ದರು.
ಸೋಮವಾರದ ಆಫರ್ ತಂದೊಡ್ಡಿದ ದುರಂತ
ಸಾಮಾನ್ಯವಾಗಿ ವಾರದ ಮೊದಲ ದಿನವಾದ ಸೋಮವಾರದಂದು ಪಬ್‌ಗಳಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ ಇರುತ್ತದೆ. ಹೀಗಾಗಿ, ಗ್ರಾಹಕರನ್ನು ಆಕರ್ಷಿಸಲು ಮಾಲೀಕ ಪ್ರೀತಂ ಇಂದು ವಿಶೇಷ ಆಫರ್ ಒಂದನ್ನು ಘೋಷಿಸಿದ್ದರು. ರೆಸ್ಟೋ ಪಬ್‌ನಲ್ಲಿ ಗ್ರಾಹಕರು ಯಾವುದೇ ಆಹಾರ ಪದಾರ್ಥ (Food Item) ಆರ್ಡರ್ ಮಾಡಿದರೂ ಕೇವಲ 175 ರೂಪಾಯಿ ಮಾತ್ರ ಎಂದು ನಿಗದಿಪಡಿಸಲಾಗಿತ್ತು.
ಈ ಆಕರ್ಷಕ ಆಫರ್‌ನಿಂದಾಗಿ ಸೋಮವಾರವಾಗಿದ್ದರೂ ಸಹ ಪಬ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಜಮಾಯಿಸಿದ್ದರು. ಗ್ರಾಹಕರು ಆಹಾರ ಮತ್ತು ಪಾನೀಯದ ಮಜಾ ಸವಿಯುತ್ತಿದ್ದಾಗಲೇ ಕಿಚನ್ ಭಾಗದಲ್ಲಿ ಹಠಾತ್ತನೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಇಡೀ ರೆಸ್ಟೋ ಪಬ್ ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ.
ಇಬ್ಬರು ದುರ್ಮರಣ, ನಟ ಪ್ರೀತಂ ಸೇರಿದಂತೆ ಐವರಿಗೆ ತೀವ್ರ ಗಾಯ
ಬೆಂಕಿ ಅವಘಡ ಸಂಭವಿಸಿದಾಗ ಮಾಲೀಕರಾದ ನಟ ಪ್ರೀತಂ ಹಾಗೂ ಅವರ ಆಪ್ತ ಸ್ನೇಹಿತ ಅವಿನಾಶ್ ಸ್ಥಳದಲ್ಲೇ ಇದ್ದರು. ಗಿಜಿಗುಡುತ್ತಿದ್ದ ಪಬ್‌ನಲ್ಲಿ ಏಕಾಏಕಿ ಬೆಂಕಿ ಆವರಿಸಿದ್ದರಿಂದ ಸಾರ್ವಜನಿಕರು ಮತ್ತು ಸಿಬ್ಬಂದಿ ಹೊರಗೆ ಓಡಲು ಯತ್ನಿಸಿದ್ದಾರೆ. ಆದರೆ, ಬೆಂಕಿಯ ತೀವ್ರತೆಗೆ ಸಿಲುಕಿ ಇಬ್ಬರು ಸ್ಥಳದಲ್ಲೇ ಜೀವಂತವಾಗಿ ದಹನವಾಗಿದ್ದಾರೆ.
ಮೃತರ ವಿವರ:
- ಸಾಹಿನ್ (26 ವರ್ಷ) - ಮೂಲತಃ ಡಾರ್ಜಿಲಿಂಗ್
- ಪ್ರಕಾಶ್ (24 ವರ್ಷ) - ಮೂಲತಃ ನೇಪಾಳ
ಆಸ್ಪತ್ರೆಗೆ ದಾಖಲಾದ ಗಾಯಾಳುಗಳು:
ಘಟನೆಯಲ್ಲಿ ಪಬ್ ಮಾಲೀಕ ಪ್ರೀತಂ ಮತ್ತು ಅವರ ಸ್ನೇಹಿತ ಅವಿನಾಶ್ ಸೇರಿದಂತೆ ಐವರು ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟ ಪ್ರೀತಂ ಕೈ ಹಾಗೂ ಮುಖದ ಭಾಗಕ್ಕೆ ಗಂಭೀರ ಸುಟ್ಟ ಗಾಯಗಳಾಗಿವೆ. ಗೆಳೆಯ ಅವಿನಾಶ್ (27 ವರ್ಷ) ತಲೆಯ ಭಾಗಕ್ಕೆ ತೀವ್ರವಾಗಿ ಸುಟ್ಟ ಗಾಯಗಳಾಗಿವೆ. ಇನ್ನು ಪಬ್‌ಗೆ ಬಂದಿದ್ದ ಸೋನು (25 ವರ್ಷ), ರಮೇಶ್ (25 ವರ್ಷ), ಮಹದೇವಪ್ರಸಾದ್ (32 ವರ್ಷ), ಮತ್ತು ಪ್ರಜ್ವಲ್ (26 ವರ್ಷ) ಎಂಬುವವರಿಗೂ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಲಿಂಡರ್ ಸೋರಿಕೆಯೇ ಈ ದುರಂತಕ್ಕೆ ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೈಸೂರಿನ ದಟ್ಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಪ್ರಸಿದ್ಧ ನಟನ ಪಬ್‌ನಲ್ಲೇ ಈ ಘಟನೆ ನಡೆದಿರುವುದು ಮೈಸೂರು ಭಾಗದಲ್ಲಿ ತೀವ್ರ ಸಂಚಲನ ಮೂಡಿಸಿದೆ.

