ಥೇಟರ್ ಯಾರಿಗೆ ಬೇಕು? ಓಟಿಟಿ ಟಾಕೀಸ್ ಸಾಕು!
ಭೀಮಸೇನ ನಳಮಹರಾಜ ಚಿತ್ರ ಸಿದ್ಧವಾಗಿ ತಿಂಗಳುಗಳೇ ಕಳೆದಿವೆ. ಇನ್ನೇನು ಚಿತ್ರಮಂದಿರಗಳು ತೆರೆದ ತಕ್ಷಣ ಅದು ಬಿಡುಗಡೆ ಆಗುವುದರಲ್ಲಿತ್ತು. ಅಕ್ಟೋಬರ್ 15ರಂದು ಚಿತ್ರಮಂದಿರಗಳು ತೆರೆಯಲಿವೆ ಎಂಬ ಆಶಾಭಾವನೆ ಇದ್ದರೂ, ಪ್ರೇಕ್ಷಕರು ಬರುವ ಖಾತ್ರಿಯಿಲ್ಲ ಎಂದು ಚಿತ್ರೋದ್ಯಮ ಗೊಂದಲದಲ್ಲಿರುವ ಹೊತ್ತಿಗೇ, ನಳಮಹರಾಜ ಬೇರೆ ಮಾರ್ಗ ಹುಡುಕಿಕೊಂಡಿದ್ದಾನೆ.
ಇದೇ ತಿಂಗಳು 29ರಿಂದ ಭೀಮಸೇನ ನಳಮಹಾರಾಜ ಅಮೆಜಾನ್ ಪ್ರೈಮ್‌ನಲ್ಲಿ ಲಭ್ಯ. ಹೀಗೆ ಪ್ರೇಕ್ಷಕರ ಬದಲು ವೀಕ್ಷಕರ ಮುಂದೆ ಕಾಣಿಸಿಕೊಳ್ಳಲು ನಿರ್ಧರಿಸಿರುವ ಮತ್ತೊಂದು ಚಿತ್ರ ಮನೆ ನಂ. 13. ಅದು ಕೂಡ ನವೆಂಬರ್ 9ರಿಂದ ಅಮೆಜಾನ್ ಪ್ರೈಮ್ ಮೂಲಕವೇ ಲೋಕಪ್ರದರ್ಶನಗೊಳ್ಳುತ್ತಿದೆ.
ರಾಜ್ಯದ 600 ಥಿಯೇಟರ್‌ಗಳಿಗೆ ಸಿನಿಮಾ ಕೊಡೋರು ಯಾರು?
ಇದಕ್ಕೂ ಮುಂಚೆ ಲಾ ಮತ್ತು ಫ್ರೆಂಚ್ ಬಿರಿಯಾನಿ ಚಿತ್ರಗಳು ಕೂಡ ಅಮೆಝಾನ್ ಕೌಂಟರಿನ ಮೂಲಕವೇ ಟಿಕೆಟ್ ಹರಿಸಿಕೊಂಡಿವೆ. ಅವುಗಳಿಗೆ ಪ್ರೇಕ್ಷಕರ ಟೀಕೆ ಮತ್ತು ಮೆಚ್ಚುಗೆಗಳು ದೊರಕಿವೆ. ಎಲ್ಲಕ್ಕಿಂತ ಮುಖ್ಯವಾಗಿ ಥೇಟರುಗಳ ಬಾಡಿಗೆ, ಪ್ರಚಾರದ ವೆಚ್ಚದಿಂದ ನಿರ್ಮಾಪಕರು ಮುಕ್ತರಾಗಿದ್ದಾರೆ ಎಂಬ ಅಂಶವೇ ಅನೇಕ ನಿರ್ಮಾಪಕರು ಓಟಿಟಿ ಟಾಕೀಸನ್ನೇ ನಂಬುವಂತೆ ಮಾಡಿದೆ.
ಅಲ್ಲಿಗೆ ಚಿತ್ರಮಂದಿರಗಳೂ ಪೂರ್ತಿಯಾಗಿ ತೆರೆದ ನಂತರವೂ ಬಹಳಷ್ಟುನಿರ್ಮಾಪಕರು ಓಟಿಟಿ ಟಾಕೀಸನ್ನೇ ನಂಬಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಮಾಧ್ಯಮಗಳೂ ಓಟಿಟಿಯಲ್ಲಿ ರಿಲೀಸ್ ಆದ ಸಿನಿಮಾಗಳನ್ನು ಅಲ್ಲಿಯೇ ನೋಡಿಕೊಂಡು ವಿಮರ್ಶೆ ಬರೆಯುತ್ತಿದ್ದಾರೆ. ಪ್ರೇಕ್ಷಕರ ಅಭಿಪ್ರಾಯವೂ ತಕ್ಷಣ ಗೊತ್ತಾಗುತ್ತದೆ. ವೀಕ್ಷಕರ ರೇಟಿಂಗ್ ಕೂಡ ಗೊತ್ತಾಗುವುದರಿಂದ ಸಿನಿಮಾದ ಯಶಸ್ಸು ಮತ್ತೊಬ್ಬ ವೀಕ್ಷಕನಿಗೆ ಕೂಡಲೇ ತಿಳಿಯುತ್ತದೆ. ಎಲ್ಲಕ್ಕಿಂತ ದೊಡ್ಡ ಲಾಭವೆಂದರೆ ಚಿತ್ರ ಬಿಡುಗಡೆಯ ಸಂದರ್ಭದ ರಿಲೀಸ್ ಪತ್ರಿಕಾಗೋಷ್ಠಿ, ಪಬ್ಲಿಸಿಟಿಗೆಂದು ಖರ್ಚು ಮಾಡುವ ಸುಮಾರು ಹತ್ತರಿಂದ ಇಪ್ಪತ್ತು ಲಕ್ಷ ರುಪಾಯಿ ಉಳಿತಾಯವಾಗಲಿದೆ ಅನ್ನುತ್ತಾರೆ ಸಣ್ಣಚಿತ್ರಗಳ ನಿರ್ಮಾಪಕರು. ಹಾಗೆಯೇ, ಚಿತ್ರ ಬಿಡುಗಡೆಯಾದರೂ ಒಂದೇ ವಾರಕ್ಕೆ ಚಿತ್ರಮಂದಿರದಿಂದ ಎತ್ತಂಗಡಿ ಆಗುತ್ತದೆ. ಆಮೇಲೆ ಪ್ರೇಕ್ಷಕನಿಗೆ ಸಿನಿಮಾ ಸಿಗುವುದಿಲ್ಲ. ಕೆಲವೇ ಕೇಂದ್ರಗಳಲ್ಲಿ ಮಾತ್ರ ಸಿನಿಮಾ ತೆರೆ ಕಾಣುತ್ತದೆ. ಆದರೆ ಓಟಿಟಿ ಟಾಕೀಸುಗಳಲ್ಲಿ ಪ್ರೇಕ್ಷಕ ಯಾವಾಗ ಬೇಕಿದ್ದರೂ, ಎಲ್ಲಿಂದ ಬೇಕಿದ್ದರೂ ಸಿನಿಮಾ ನೋಡಬಹುದು ಎಂಬುದು ದೊಡ್ಡ ಅಡ್ವಾಂಟೇಜ್.
ಭೀಮಸೇನ... ರುಚಿಕಟ್ಟು ಚಿತ್ರ
ಪಿಆರ್‌ಕೆ ನಂತರ ಪುಷ್ಕರ್ ಫಿಲ್ಸ್ಮ್ ಬ್ಯಾನರ್ ಓಟಿಟಿಯನ್ನು ಬೆಂಬಲಿಸಿದೆ. ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೂ ಮುಂಚೆಯೇ ಭೀಮಸೇನ ನಳಮಹರಾಜ ಬಿಡುಗಡೆ ಆಗಬೇಕಾಗಿತ್ತು. ಆದರೆ, ಅನೇಕ ಕಾರಣಗಳಿಗೆ ಚಿತ್ರ ಬಿಡುಗಡೆ ತಡವಾಗಿ ಕೋವಿಡ್ ಸೆರೆವಾಸ ಅನುಭವಿಸಿತು.
ಕಾರ್ತಿಕ್ ಸರಗೂರು ನಿರ್ದೇಶನ ಮಾಡಿರುವ ‘ಭೀಮಸೇನ ನಳಮಹಾರಾಜ’ ಅ. 29ರಂದು ಅಮೆಜಾನ್ ಪ್ರೈಮ್ ಮೂಲಕ ಬಿಡುಗಡೆ ಕಾಣಲಿದೆ. ಇದರಲ್ಲಿ ಅರವಿಂದ್ ಅಯ್ಯರ್, ಆರೋಹಿ ನಾರಾಯಣ್, ಪ್ರಿಯಾಂಕಾ ತಿಮ್ಮೇಶ್, ಅಚ್ಯುತ್ ಕುಮಾರ್ ಮೊದಲಾದವರು ನಟಿಸಿದ್ದಾರೆ.
ರುಚಿರುಚಿಯಾದ ತಿಂಡಿ ತಿನಿಸುಗಳ ಮೂಲಕ ಬದುಕಿನ ಕತೆ ಹೇಳುವ ಚಿತ್ರ ಇದು. ಇದನ್ನು ಕಾರ್ತಿಕ್ ಸರಗೂರು ಬಹಳ ಸೊಗಸಾಗಿ ನಿರ್ದೇಶನ ಮಾಡಿದ್ದಾರೆ ಎಂಬ ಮೆಚ್ಚುಗೆಯ ಮಾತುಗಳೂ ಚಿತ್ರತಂಡದಿಂದ ಕೇಳಿಬಂದಿವೆ.