ನಾವು ಈ ವರ್ಷ ಚಿತ್ರಮಂದಿರಗಳಿಗೆ ಬರಲ್ಲ...

-ಹೀಗೊಂದು ಖಡಕ್‌ ನಿರ್ಧಾರಕ್ಕೆ ಬಂದಿದ್ದಾರೆ ಕನ್ನಡ ಚಿತ್ರರಂಗದ ಹಲವು ನಿರ್ಮಾಪಕರು. ಅದರಲ್ಲೂ ಸ್ಟಾರ್‌ ನಟರಿರುವ ಚಿತ್ರಗಳ ನಿರ್ಮಾಪಕರಂತೂ ತಮ್ಮ ಚಿತ್ರಗಳನ್ನು ಥಿಯೇಟರ್‌ಗಳ ಕಡೆ ಮುಖ ಮಾಡಿಸದಿರಲು ಅಂತಿಮ ತೀರ್ಮಾನಕ್ಕೆ ಬಂದಿದ್ದಾರೆ. ಈಗಾಗಲೇ ಆ್ಯಕ್ಟಿವ್‌ ನಿರ್ಮಾಪಕರ ಒಂದು ತಂಡ ಈ ನಿಟ್ಟಿನಲ್ಲಿ ಸಭೆ ಮಾಡಿ ಈ ಗಟ್ಟಿ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲಿಗೆ ಶಿವರಾಜ್‌ಕುಮಾರ್‌, ದರ್ಶನ್‌, ಸುದೀಪ್‌, ಯಶ್‌, ಪುನೀತ್‌ ರಾಜ್‌ಕುಮಾರ್‌, ಧ್ರುವ ಸರ್ಜಾ, ದುನಿಯಾ ವಿಜಯ್‌, ಗಣೇಶ್‌ ಸೇರಿದಂತೆ ಹಲವು ಸ್ಟಾರ್‌ಗಳ ಚಿತ್ರ ನೋಡುವ ಸೌಭಾಗ್ಯ ಈ ವರ್ಷ ಪ್ರೇಕ್ಷಕರಿಗೆ ಇಲ್ಲ.

ಪ್ರೇಕ್ಷಕನನ್ನು ಥೇಟರಿಗೆ ಕರೆಸುವುದು ಪ್ರದರ್ಶಕರ ಕೈಯಲ್ಲಿದೆ 

‘ಸರ್ಕಾರದ ಹಾಕಿರುವ ಷರತ್ತುಗಳನ್ನು ಪಾಲಿಸಿಕೊಂಡು ಸಿನಿಮಾ ಬಿಡುಗಡೆ ಮಾಡುವುದೇ ದೊಡ್ಡ ಸಾಹಸ. ಬಿಡುಗಡೆ ಆಗುವ ಚಿತ್ರವನ್ನು ನೋಡಲು ಪ್ರೇಕ್ಷಕರು ಬರುವ ಗ್ಯಾರಂಟಿ ಇಲ್ಲ. ಈಗ ಸಿನಿಮಾ ಬಿಡುಗಡೆಯ ಸಂಭ್ರಮಕ್ಕಿಂತ ಆರೋಗ್ಯ ರಕ್ಷಣೆಯೇ ಮುಖ್ಯ. ಪಕ್ಕದ ರಾಜ್ಯಗಳಲ್ಲೂ ಚಿತ್ರಗಳು ಬಿಡುಗಡೆ ಆಗುತ್ತಿಲ್ಲ. ಬೇರೆ ಭಾಷೆಯ ದೊಡ್ಡ ದೊಡ್ಡ ಚಿತ್ರಗಳೇ ಬರುತ್ತಿಲ್ಲ. ಇಂಥ ಸಮಯದಲ್ಲಿ ನಾವು ಯಾಕೆ ರಿಸ್ಕ್‌ ತೆಗೆದುಕೊಳ್ಳಬೇಕು. ಈ ಸಂಕಷ್ಟಕಡಿಮೆ ಆಗುವ ತನಕ ನಮ್ಮ ಚಿತ್ರಗಳನ್ನು ಚಿತ್ರಮಂದಿರಗಳಿಗೆ ತರಲ್ಲ.’ - ಸೂರಪ್ಪ ಬಾಬು, ನಿರ್ಮಾಪಕ

ಸರ್ಕಾರ ಚಿತ್ರಮಂದಿರಗಳ ಬಾಗಿಲು ತೆರೆಯಲು ಗ್ರೀನ್‌ ಸಿಗ್ನಲ್‌ ಕೊಟ್ಟಾಗಿದೆ. ಅಕ್ಟೋಬರ್‌ 15ರಿಂದ ರಾಜ್ಯದಲ್ಲಿ ಥಿಯೇಟರ್‌ಗಳು ಆರಂಭಗೊಳ್ಳಬಹುದು. ಕಳೆದ ಏಳು ತಿಂಗಳುಗಳಿಂದ ಮೌನವಾಗಿದ್ದು ಚಿತ್ರಮಂದಿರಗಳು ಸದ್ದು ಮಾಡಬಹುದು. ಈ ನಿಟ್ಟಿನಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆ ಚಿತ್ರಮಂದಿರಗಳ ಪುನರ್‌ ನವೀಕರಣ ಕೆಲಸಗಳು ಭರದಿಂದ ಸಾಗುತ್ತಿವೆ. ಆದರೆ, ಬಾಗಿಲು ತೆಗೆಯುವ ಹೊತ್ತಿಗೆ ಪರದೆಗಳ ಮೇಲೆ ರಾರಾಜಿಸಬೇಕಾದ ಸಿನಿಮಾಗಳೇ, ಮುಂದೆ ಬರಲು ಒಲ್ಲೆ ಎನ್ನುತ್ತಿವೆ. ಚಿತ್ರೀಕರಣ ಮುಗಿಸಿಕೊಂಡ ಸ್ಟಾರ್‌ ಚಿತ್ರಗಳು ಥಿಯೇಟರ್‌ಗಳಿಗೆ ‘ಬರಬಹುದು ಅಥವಾ ಬರಲ್ಲ’ ಎನ್ನುವ ಗಿಣಿ ಶಾಸ್ತ್ರದ ಮಾತುಗಳೇ ಇಲ್ಲಿವರೆಗೂ ಕೇಳಿ ಬರುತ್ತಿದ್ದವು. ಆದರೆ ಇದಕ್ಕೀಗ ಸ್ಪಷ್ಟತೆ ಸಿಕ್ಕಿದೆ. ‘ನಮ್ಮ ಪ್ರೀತಿಯ ಪ್ರೇಕ್ಷಕರೇ, ಚಿತ್ರಮಂದಿರಗಳಿಗೆ ನಾವು ಬರಲ್ಲ’ ಎಂದು ಸ್ಟಾರ್‌ ಚಿತ್ರಗಳ ನಿರ್ಮಾಪಕರು ಈಗ ಖಡಕ್‌ ಆಗಿ ಹೇಳಿದ್ದಾರೆ.

ನೀವು ರೆಡೀನಾ? ನಾವ್ ರೆಡಿ; ಕಾಯುತ್ತಿದೆ 10 ಪ್ರಮುಖ ಚಿತ್ರಗಳು! 

ಸದ್ಯದ ಮಾಹಿತಿಯಂತೆ ಸ್ಟಾರ್‌ ಚಿತ್ರಗಳು ಮಾತ್ರವಲ್ಲ, ಹೊಸಬರ ಚಿತ್ರಗಳೂ ಚಿತ್ರಮಂದಿರಗಳಿಗೆ ಬರುವುದು ಅನುಮಾನ. ಒಂದು ವೇಳೆ ಹೊಸದಾಗಿ ಬಿಡುಗಡೆ ಮಾಡುವುದಕ್ಕೆ ಹೊರಟರೆ ಅಂಥವರ ಜತೆಗೂ ಮಾತನಾಡಿ ಬಿಡುಗಡೆಯನ್ನು ಮುಂದೂಡಿಸುವಂತೆ ಮನ ಒಲಿಸುವುದಕ್ಕೂ ಇದೇ ನಿರ್ಮಾಪಕರು ಮುಂದಾಗಿದ್ದಾರೆ.

ಹಾಗಾದರೆ ಅಕ್ಟೋಬರ್‌ 15 ರಿಂದ ಚಿತ್ರಮಂದಿರ ಪ್ರವೇಶಿಸುವ ಚಿತ್ರಗಳು ಯಾವುವು ಎಂಬುದಕ್ಕೆ ‘ಮರು ಬಿಡುಗಡೆ’ ಸಾಲಿನಲ್ಲಿರುವ ಚಿತ್ರಗಳತ್ತ ಎಲ್ಲರ ಚಿತ್ತ ಹೊರಳುತ್ತಿದೆ.

ಹಳೆಯ ಚಿತ್ರಗಳನ್ನು ಮರು ಬಿಡುಗಡೆ ಮಾಡುವುದಕ್ಕೆ ಯಾರದೂ ಅಭ್ಯಂತರ ಇಲ್ಲ. ಮಾಯಾಬಜಾರ್‌, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಟಗರು ಮುಂತಾದ ಚಿತ್ರಗಳನ್ನು ಕೇಳುತ್ತಿದ್ದಾರೆ. ಹೀಗಾಗಿ ಮರು ಬಿಡುಗಡೆ ಮಾಡುವುದಾದರೆ ಮಾಡಲಿ. ಆದರೆ, ಹೊಸದಾಗಿ ಬಿಡುಗಡೆ ಮಾಡಿ ಕೈ ಸುಟ್ಟುಕೊಳ್ಳುವುದು ಬೇಡ. ಜತೆಗೆ ಆರೋಗ್ಯದ ವಿಚಾರದಲ್ಲಿ ರಿಸ್ಕ್‌ ತೆಗೆದುಕೊಳ್ಳುವುದು ಬೇಕಿಲ್ಲ.- ಕೆ ಪಿ ಶ್ರೀಕಾಂತ್‌, ನಿರ್ಮಾಪಕ

ರಾಜ್ಯದಲ್ಲಿರುವ 600 ಚಿತ್ರಮಂದಿರಗಳಿಗೆ ಸಿನಿಮಾ ಕೊಡುವುದು ಯಾರು ಎಂಬುದು ಮತ್ತೊಂದು ಪ್ರಶ್ನೆ. ಯಾಕೆಂದರೆ ಒಂದು ಕನ್ನಡ ಸಿನಿಮಾ ಕನಿಷ್ಠ 250 ರಿಂದ 300 ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತದೆ. ಉಳಿದ 300 ಚಿತ್ರಮಂದಿರಗಳಲ್ಲಿ ಪರಭಾಷೆಯ ಚಿತ್ರಗಳೇ ತುಂಬಿಕೊಳ್ಳುತ್ತವೆ. ಆದರೆ ಆಂಧ್ರ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಪಕ್ಕದ ರಾಜ್ಯಗಳಲ್ಲಿ ಸಿನಿಮಾ ಬಿಡುಗಡೆಗೆ ಯಾರೂ ಮುಂದಾಗುತ್ತಿಲ್ಲ. ತೆಲುಗಿನ ಪವನ್‌ ಕಲ್ಯಾಣ್‌ ನಟನೆಯ ಎರಡು ಚಿತ್ರಗಳು, ಬಾಲಿವುಡ್‌ನ ಅಕ್ಷಯ್‌ ಕುಮಾರ್‌, ಸಲ್ಮಾನ್‌ ಖಾನ್‌ ನಟನೆಯ ಸಿನಿಮಾಗಳೆಲ್ಲ ಮುಂದಿನ ವರ್ಷದವರೆಗೂ ಕಾಯುತ್ತಿವೆ. ನಿಗದಿಯಂತೆ ನವೆಂಬರ್‌ನಲ್ಲಿ ತೆರೆಗೆ ಬರಬೇಕಿದ್ದ ಹಾಲಿವುಡ್‌ನ ಬಾಂಡ್‌ ಸಿನಿಮಾ ಮುಂದಿನ ವರ್ಷಕ್ಕೆ ಹೋಗಿದೆ. ತಮಿಳು, ಮಲಯಾಳಂ ಚಿತ್ರರಂಗದವರು ಬಿಡುಗಡೆಯ ಮಾತೇ ಆಡುತ್ತಿಲ್ಲ. ಹಾಗಾದರೆ ಕೇವಲ ಕನ್ನಡ ಚಿತ್ರಗಳನ್ನೇ ನಂಬಿಕೊಂಡು ರಾಜ್ಯದ 600 ಚಿತ್ರಮಂದಿರಗಳು ಬಾಗಿಲು ತೆರೆಯಲು ಸಾಧ್ಯವೆ?

ಒಂದು ಚಿತ್ರದ ಬಿಡುಗಡೆ ತಯಾರಿಗೆ ಕನಿಷ್ಠ ಒಂದು ತಿಂಗಳು ಬೇಕು, ಒಂದು ಚಿತ್ರಮಂದಿರದ ಪುನರ್‌ ನವೀಕರಣಕ್ಕೆ ಎರಡು ತಿಂಗಳು ಬೇಕು. ಬಿಡುಗಡೆಯ ತಯಾರಿ, ಪುನರ್‌ ನವೀಕರಣಕ್ಕೆ ಮೂರು ತಿಂಗಳು ಕಳೆದರೆ ಈ ವರ್ಷ ಮುಕ್ತಾಯವಾಗುತ್ತದೆ. ಹೀಗಾಗಿ ಮುಂದಿನ ವರ್ಷವೇ ಸಿನಿಮಾ ಪ್ರದರ್ಶನ ಮಾಡುವುದು ಒಳಿತು. ಅಲ್ಲದೆ ಸರ್ಕಾರದ ಮುಂದೆ ಪ್ರದರ್ಶಕರ ಬೇಡಿಕೆಗಳು ಇವೆ. ಮುಖ್ಯವಾಗಿ ವಿದ್ಯುತ್‌ ಬಿಲ್‌ ಮನ್ನಾ ಮಾಡಬೇಕೆಂಬುದು. ಈ ಎಲ್ಲವೂ ಸುಸೂತ್ರವಾಗಿ ಆಗಬೇಕು ಅಂದರೆ ಈ ವರ್ಷ ಕಾಯುವುದು ಒಳ್ಳೆಯದು ಎನ್ನುವ ಅಭಿಪ್ರಾಯವೂ ಒಂದಿಷ್ಟುಪ್ರದರ್ಶಕರಿಂದ ಕೇಳಿ ಬರುತ್ತಿದೆ. ಇದರ ನಡುವೆ ಸ್ಟಾರ್‌ ಚಿತ್ರಗಳ ಹೊರತಾಗಿ ಉಳಿದವರ ಚಿತ್ರಗಳ ಪ್ರದರ್ಶನದ ವಿಚಾರದಲ್ಲಿ ಬಾಡಿಗೆ ಹಾಗೂ ಶೇಕಡಾವಾರು ಪದ್ಧತಿಯ ಹಗ್ಗಜಗ್ಗಾಟವೂ ಪ್ರದರ್ಶಕರು ಮತ್ತು ನಿರ್ಮಾಪಕರ ನಡುವೆ ನಡೆಯುತ್ತಿದೆ.