ರಾಕಿಂಗ್‌ ಸ್ಟಾರ್‌ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಕುರಿತು ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮಾತನಾಡಿದ್ದಾರೆ. ತಾನು ಇನ್ನೂ ಸಿನಿಮಾ ನೋಡಿಲ್ಲ ಎಂದಿರುವ ರಮ್ಯಾ, ಯಶ್‌ರನ್ನು ಇಷ್ಟಪಡುತ್ತೇನೆ ಹಾಗೂ ಅವರು ಅತ್ಯಂತ ಜೆಂಟಲ್‌ಮನ್ ಎಂದು ಹೇಳಿದ್ದಾರೆ.

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡ್ತಿದೆ. ಸಿನಿಮಾ ವೀಕ್ಷಿಸಿದ ಚಿತ್ರರಂಗದ ಹಲವು ತಾರೆಯರು ತಮ್ಮದೇ ರೀತಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಇದೀಗ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಕೂಡ ಯಶ್‌ ಹಾಗೂ ‘ಟಾಕ್ಸಿಕ್’ ಸಿನಿಮಾ ಕುರಿತು ಮಾತನಾಡಿದ್ದಾರೆ.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮೋಹಕ ತಾರೆ ನಟಿ ರಮ್ಯಾ ಭಾಗವಹಿಸಿದ್ದರು. ಈ ವೇಳೆ ಅವರಿಗೆ ‘ಟಾಕ್ಸಿಕ್’ ಸಿನಿಮಾ ಹಾಗೂ ಯಶ್‌ ಬಗ್ಗೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ರಮ್ಯಾ, “ನಾನಿನ್ನೂ ‘ಟಾಕ್ಸಿಕ್’ ಸಿನಿಮಾ ನೋಡಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನು, “ನಿಮಗೆ ಯಶ್‌ ಎಂದರೆ ಇಷ್ಟನಾ?” ಎಂಬ ಪ್ರಶ್ನೆಗೆ ರಮ್ಯಾ ನೀಡಿದ ಉತ್ತರವೇ ಇದೀಗ ಗಮನ ಸೆಳೆಯುತ್ತಿದೆ.

ಅವರು ಜೆಂಟಲ್‌ಮನ್

“ಐ ಲೈಕ್ ಯಶ್. ಯಾಕೆಂದರೆ, ನಾನು ಅವರ ಜೊತೆ ಕೆಲಸ ಮಾಡಿದ್ದೇನೆ. ಅವರು ಅತ್ಯಂತ ಜೆಂಟಲ್‌ಮನ್. ನಾವಿಬ್ಬರೂ ಆಗಾಗ ಚಾಟ್ ಮಾಡ್ತಿರ್ತೇವೆ. ಆದರೆ, ನಾನಿನ್ನೂ ‘ಟಾಕ್ಸಿಕ್’ ಸಿನಿಮಾ ನೋಡಿಲ್ಲ. ಸಿನಿಮಾದ ಕುರಿತು ನನ್ನ ವೈಯಕ್ತಿಕ ಅಭಿಪ್ರಾಯವನ್ನ ನಾನು ಯಶ್ ಅವರಿಗೆ ಪರ್ಸನಲ್ ಆಗಿ ತಿಳಿಸಿದ್ದೇನೆ. ಅದನ್ನ ಸಾರ್ವಜನಿಕವಾಗಿ ಹಂಚಿಕೊಳ್ಳಲು ಬಯಸುವುದಿಲ್ಲ” ಎಂದು ರಮ್ಯಾ ಹೇಳಿದ್ದಾರೆ.

ರಮ್ಯಾ ಹಾಗೂ ಯಶ್‌ ಜೋಡಿ 2012ರಲ್ಲಿ ತೆರೆಕಂಡ ‘ಲಕ್ಕಿ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿತ್ತು. ಈ ಸಿನಿಮಾದ ಮೂಲಕ ಇವರಿಬ್ಬರ ಆನ್‌ಸ್ಕ್ರೀನ್‌ ಕೆಮಿಸ್ಟ್ರಿ ಪ್ರೇಕ್ಷಕರ ಗಮನ ಸೆಳೆದಿತ್ತು. ಚಿತ್ರದ ಹಾಡುಗಳು ಕೂಡ ಇಂದಿಗೂ ಅಭಿಮಾನಿಗಳ ಫೇವರಿಟ್‌ ಆಗಿವೆ. ಸಿನಿಮಾ ಬಳಿಕವೂ ಯಶ್‌ ಹಾಗೂ ರಮ್ಯಾ ನಡುವಿನ ಸ್ನೇಹ ಮುಂದುವರಿದಿದೆ ಎನ್ನುವುದು ಅವರ ಮಾತುಗಳಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ.

ಇತ್ತ ‘ಟಾಕ್ಸಿಕ್’ ಸಿನಿಮಾ ನೋಡಿದ ಚಿತ್ರರಂಗದ ಹಲವರು ಸಿನಿಮಾದ ದೃಶ್ಯ ವೈಭವ ಹಾಗೂ ಮೇಕಿಂಗ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಸಿನಿಮಾ ವೀಕ್ಷಿಸದಿರುವ ಸಹ ಕಲಾವಿದರು ಕೂಡ ಚಿತ್ರತಂಡಕ್ಕೆ ಶುಭ ಹಾರೈಸುತ್ತಿದ್ದಾರೆ. ಹೀಗಾಗಿ, ರಮ್ಯಾ ಸಿನಿಮಾವನ್ನು ಇನ್ನೂ ನೋಡಿಲ್ಲ ಎಂದಿದ್ದರೂ, ಯಶ್‌ ಬಗ್ಗೆ ಮಾತ್ರ ಮನಸಾರೆ ಮೆಚ್ಚುಗೆಯ ಮಾತುಗಳನ್ನಾಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ.