ಮಹಿಳೆಯರ ಆರೋಗ್ಯಕ್ಕಾಗಿ ನಟಿ ರಮ್ಯಾ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಪೆರಿಮೆನೋಪಾಸ್ ಮತ್ತು ಮೆನೋಪಾಸ್ ಬಗ್ಗೆ ಜಾಗೃತಿ ಮೂಡಿಸಲು ವೈದ್ಯಕೀಯ ತಜ್ಞರು ಹಾಗೂ IISc ಜೊತೆಗೂಡಿ ಹೊಸ ಪ್ರಯತ್ನ ಆರಂಭಿಸಿದ್ದಾರೆ.
ಸ್ಯಾಂಡಲ್ವುಡ್ನ ಮೋಹಕ ತಾರೆ, ಮಾಜಿ ಸಂಸದೆ ಹಾಗೂ ರಾಜಕಾರಣಿ ರಮ್ಯಾ ಅಲಿಯಾಸ್ ದಿವ್ಯಾ ಸ್ಪಂದನಾ ಇದೀಗ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಅತ್ಯಂತ ಮಹತ್ವದ ವಿಚಾರವೊಂದರ ಬಗ್ಗೆ ಧ್ವನಿ ಎತ್ತಿದ್ದಾರೆ. ಮಹಿಳೆಯರ ಜೀವನದಲ್ಲಿ ಸಹಜವಾಗಿ ಎದುರಾಗುವ ಪೆರಿಮೆನೋಪಾಸ್ (Perimenopause) ಮತ್ತು ಮೆನೋಪಾಸ್ (Menopause) ಹಂತಗಳ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಪ್ರಯತ್ನಕ್ಕೆ ಕೈಹಾಕಿದ್ದಾರೆ. ತಮ್ಮ ಜೀವನದಲ್ಲೇ ಎದುರಾದ ಕೆಲವು ಆರೋಗ್ಯ ಸಮಸ್ಯೆಗಳಿಂದ ಈ ವಿಚಾರದ ಗಂಭೀರತೆಯನ್ನು ಅರಿತುಕೊಂಡಿರುವ ರಮ್ಯಾ, ವೈದ್ಯಕೀಯ ತಜ್ಞರ ಸಹಕಾರದೊಂದಿಗೆ ಮಹಿಳೆಯರಿಗೆ ಅಗತ್ಯ ಮಾಹಿತಿ ತಲುಪಿಸುವ ಉದ್ದೇಶ ಹೊಂದಿದ್ದಾರೆ.
ಸುಮಾರು ಎಂಟು ಎಪಿಸೋಡ್ಗಳನ್ನು ಒಳಗೊಂಡ ಸೀಮಿತ ಸರಣಿಯೊಂದನ್ನು ರೂಪಿಸಲು ರಮ್ಯಾ ಯೋಜಿಸಿದ್ದು, ಇದರಲ್ಲಿ ವೈದ್ಯಕೀಯ ತಜ್ಞರೊಂದಿಗೆ ಸಂವಾದ ನಡೆಸಲಿದ್ದಾರೆ. ಮಹಿಳೆಯರ ದೇಹದಲ್ಲಿ ಈ ಹಂತಗಳಲ್ಲಿ ಉಂಟಾಗುವ ಬದಲಾವಣೆಗಳು, ಅವುಗಳ ಪರಿಣಾಮಗಳು ಹಾಗೂ ಸೂಕ್ತ ಆರೈಕೆಯ ಕುರಿತು ಮಾಹಿತಿ ನೀಡುವುದರ ಜೊತೆಗೆ, ಈ ವಿಚಾರದ ಬಗ್ಗೆ ಸಮಾಜದಲ್ಲಿ ಮುಕ್ತ ಚರ್ಚೆ ನಡೆಯುವಂತೆ ಮಾಡುವುದು ಅವರ ಉದ್ದೇಶವಾಗಿದೆ.
38ನೇ ವಯಸ್ಸಿನಲ್ಲಿ ಎದುರಾದ ಆರೋಗ್ಯ ಸಮಸ್ಯೆ
ತಮ್ಮ ಈ ಪ್ರಯತ್ನಕ್ಕೆ ಪ್ರೇರಣೆಯಾದ ಘಟನೆಗಳ ಬಗ್ಗೆ ಮಾತನಾಡಿರುವ ರಮ್ಯಾ, ತಮ್ಮ 38ನೇ ವಯಸ್ಸಿನಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದ ಬಳಿಕ ಎದುರಾದ ಆರೋಗ್ಯ ಸಮಸ್ಯೆಗಳನ್ನು ನೆನಪಿಸಿಕೊಂಡಿದ್ದಾರೆ. ಆರಂಭದಲ್ಲಿ ಅದನ್ನು ಕೆಲಸದ ಒತ್ತಡದಿಂದ ಉಂಟಾದ ಸುಸ್ತು ಅಥವಾ ಬರ್ನೌಟ್ ಎಂದು ಭಾವಿಸಿದ್ದರಂತೆ. ಕೆಲಸದಿಂದ ಸ್ವಲ್ಪ ವಿರಾಮ ಪಡೆದುಕೊಂಡರೆ ಎಲ್ಲವೂ ಸರಿಯಾಗಬಹುದು ಎಂದುಕೊಂಡಿದ್ದರು.
ಇದಾದ ಬಳಿಕ ಕೋವಿಡ್ ಎರಡನೇ ಅಲೆಯ ಸಮಯದಲ್ಲಿ ಗೋವಾಗೆ ತೆರಳಿ ನೆಲೆಸಿದ್ದರೂ ಅವರ ಆರೋಗ್ಯದಲ್ಲಿ ನಿರೀಕ್ಷಿತ ಸುಧಾರಣೆ ಕಂಡುಬರಲಿಲ್ಲ. ದೇಹದಲ್ಲಿ ಶಕ್ತಿ ಕಡಿಮೆಯಾಗುವುದು, ಸರಿಯಾಗಿ ನಿದ್ರೆ ಬಾರದಿರುವುದು ಹಾಗೂ ರಾತ್ರಿ ನಿದ್ರಾಹೀನತೆಯಿಂದ ಬಳಲುವುದು ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಂಡಿದ್ದವು.
ಈ ಸಮಸ್ಯೆಗಳಿಗೆ ಕಾರಣ ತಿಳಿಯಲು ಹಲವು ವೈದ್ಯರು ಹಾಗೂ ತಜ್ಞರನ್ನು ಸಂಪರ್ಕಿಸಿದ್ದರು. ಆದರೆ ರಕ್ತ ಪರೀಕ್ಷೆಗಳ ವರದಿಗಳಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿರಲಿಲ್ಲ. ಕೆಲವರು ವಿಟಮಿನ್ ಡಿ ಅಥವಾ ಬಿ12 ಕೊರತೆಯಿರಬಹುದು ಎಂದರೆ, ಇನ್ನು ಕೆಲವರು ಒತ್ತಡದಿಂದ ಕಾರ್ಟಿಸೋಲ್ ಮಟ್ಟ ಹೆಚ್ಚಾಗಿರಬಹುದು ಎಂದು ಶಂಕಿಸಿದ್ದರು. ಪೂರಕ ಔಷಧಗಳನ್ನು ತೆಗೆದುಕೊಂಡರೂ ಹೆಚ್ಚಿನ ಪ್ರಯೋಜನವಾಗಿರಲಿಲ್ಲ. ಆ ಸಮಯದಲ್ಲಿ ತಾನು ಮೊದಲಿನಂತಿಲ್ಲ ಎಂಬ ಭಾವನೆ ಕಾಡುತ್ತಿತ್ತು ಎಂದು ರಮ್ಯಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಸ್ನೇಹಿತೆಯ ಒಂದು ಸಲಹೆಯಿಂದ ಸಿಕ್ಕಿತು ಆರೋಗ್ಯ ಸಮಸ್ಯೆಯ ಸುಳಿವು!
ಹೀಗೆ ಹಲವು ದಿನಗಳಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ರಮ್ಯಾಗೆ ದೆಹಲಿಯಲ್ಲಿದ್ದ ಸ್ನೇಹಿತೆಯೊಬ್ಬರು ಪೆರಿಮೆನೋಪಾಸ್ ಕಾರಣವಾಗಿರಬಹುದೇ ಎಂದು ಪರಿಶೀಲಿಸುವಂತೆ ಸಲಹೆ ನೀಡಿದ್ದರಂತೆ. ಆರಂಭದಲ್ಲಿ ಈ ಸಾಧ್ಯತೆಯನ್ನು ರಮ್ಯಾ ಅಚ್ಚರಿಯಿಂದಲೇ ಸ್ವೀಕರಿಸಿದ್ದರು. ಏಕೆಂದರೆ ಮೆನೋಪಾಸ್ಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಕೇಳಿಬರುವ ಕೆಲವು ಲಕ್ಷಣಗಳು, ಉದಾಹರಣೆಗೆ ಭುಜದ ಚಲನೆಗೆ ತೊಂದರೆಯಾಗುವ ಫ್ರೋಜನ್ ಶೋಲ್ಡರ್ ಅಥವಾ ಅನಿಯಮಿತ ಮುಟ್ಟಿನ ಸಮಸ್ಯೆಗಳು ಅವರಲ್ಲಿ ಕಾಣಿಸಿಕೊಂಡಿರಲಿಲ್ಲ.
ಆದರೆ ಮತ್ತಷ್ಟು ಮಾಹಿತಿ ಕಲೆಹಾಕಿದಾಗ ನಿದ್ರೆಯ ಸಮಸ್ಯೆ, ಮೆದುಳಿನ ಮಂಜು (Brain Fog), ತೂಕ ಹೆಚ್ಚಳ ಹಾಗೂ ಮೈಗ್ರೇನ್ ಸಮಸ್ಯೆ ತೀವ್ರಗೊಳ್ಳುವುದು ಸೇರಿದಂತೆ ಹಲವು ಲಕ್ಷಣಗಳು ತಮ್ಮಲ್ಲೂ ಇದ್ದುದನ್ನು ಅರಿತುಕೊಂಡರು. ಬಳಿಕ ಈ ವಿಚಾರದ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ, ಹೆಚ್ಚಿನ ಮಾಹಿತಿ ಪಡೆಯಲು ವೈದ್ಯೆ ಡಾ. ಜೋತಾ ಮಿರ್ಲೈ ಅವರನ್ನು ಸಂಪರ್ಕಿಸಿದರು.
ವಿದ್ಯಾವಂತ ಮಹಿಳೆಯರಿಗೂ ಮೆನೋಪಾಸ್ ಬಗ್ಗೆ ಅರಿವಿಲ್ಲ!
ಈ ವಿಚಾರದ ಬಗ್ಗೆ ಮಹಿಳೆಯರಲ್ಲಿ ಎಷ್ಟರಮಟ್ಟಿಗೆ ಅರಿವಿದೆ ಎಂಬುದನ್ನು ತಿಳಿದುಕೊಳ್ಳಲು ರಮ್ಯಾ ತಮ್ಮ ಆಪ್ತ ಸ್ನೇಹಿತೆಯರ ನಡುವೆ ಗೂಗಲ್ ಪ್ರಶ್ನಾವಳಿಯೊಂದನ್ನು ಹಂಚಿಕೊಂಡಿದ್ದರು. ಪೆರಿಮೆನೋಪಾಸ್, ಮೆನೋಪಾಸ್, ಮೆನೋಪಾಸ್ ನಂತರದ ಹಂತ ಅಥವಾ ತಾವು ಯಾವ ಹಂತದಲ್ಲಿದ್ದೇವೆ ಎಂಬ ಅರಿವಿಲ್ಲದಿರುವುದು ಸೇರಿದಂತೆ ಹಲವು ಆಯ್ಕೆಗಳ ಕುರಿತು ಪ್ರಶ್ನಿಸಿದ್ದರು.
ಈ ಸಮೀಕ್ಷೆಯಿಂದ ಅವರಿಗೆ ಅಚ್ಚರಿಯ ಸಂಗತಿಯೊಂದು ತಿಳಿದುಬಂದಿತ್ತು. ಉತ್ತಮ ಶಿಕ್ಷಣ ಪಡೆದಿದ್ದ ನಗರ ಪ್ರದೇಶದ ಅನೇಕ ಮಹಿಳೆಯರಿಗೂ ತಾವು ಜೀವನದ ಯಾವ ಹಂತದಲ್ಲಿದ್ದೇವೆ ಎಂಬುದೇ ತಿಳಿದಿರಲಿಲ್ಲ. ಈ ವಿಚಾರವನ್ನು ವೈದ್ಯೆ ಡಾ. ಜೋತಾ ಮಿರ್ಲೈ ಅವರೊಂದಿಗೆ ಚರ್ಚಿಸಿದಾಗ, ನಗರ ಪ್ರದೇಶದ ಮಹಿಳೆಯರಲ್ಲೇ ಇಷ್ಟೊಂದು ಅರಿವಿನ ಕೊರತೆ ಇದ್ದರೆ ಗ್ರಾಮೀಣ ಭಾಗದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿರಬಹುದು ಎಂಬ ಆತಂಕ ಮೂಡಿತ್ತು. ಇದೇ ಮುಂದೆ ದೊಡ್ಡ ಮಟ್ಟದ ಜಾಗೃತಿ ಅಭಿಯಾನಕ್ಕೆ ನಾಂದಿಯಾಯಿತು.
ಕರ್ನಾಟಕದಲ್ಲಿ ಮಹಿಳೆಯರ ಆರೋಗ್ಯ ನೀತಿ ರೂಪಿಸುವ ಗುರಿ!
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ರಮ್ಯಾ ಮತ್ತು ಅವರ ತಂಡ ಆರೋಗ್ಯ ಸಚಿವರನ್ನು ಸಂಪರ್ಕಿಸಿದ್ದರು. ಈ ಪ್ರಯತ್ನಕ್ಕೆ ಸಚಿವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದ್ದು, ಬಳಿಕ ಈ ಕುರಿತು ಅಧ್ಯಯನ ನಡೆಸಲು ತಾಂತ್ರಿಕ ಸಮಿತಿಯನ್ನೂ ರಚಿಸಲಾಗಿದೆ. ರಮ್ಯಾ ಅವರ ಫೌಂಡೇಶನ್ ಇದೀಗ ಭಾರತೀಯ ವಿಜ್ಞಾನ ಸಂಸ್ಥೆ (IISc) ಜೊತೆಗೂಡಿ ಕರ್ನಾಟಕ ಆರೋಗ್ಯ ಇಲಾಖೆಗೆ ಸಲ್ಲಿಸಲು ಶ್ವೇತಪತ್ರ (White Paper) ಸಿದ್ಧಪಡಿಸುತ್ತಿದೆ.
ಈ ಯೋಜನೆಯ ಪ್ರಮುಖ ಉದ್ದೇಶ ಮಹಿಳೆಯರ ಮಧ್ಯವಯಸ್ಸಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಭಾರತದಲ್ಲೇ ಮೊದಲ ಬಾರಿಗೆ ಸಮಗ್ರ ನೀತಿಯೊಂದನ್ನು ರೂಪಿಸಲು ನೆರವಾಗುವುದು. ಅದರಲ್ಲೂ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಮೆನೋಪಾಸ್ಗೆ ಸಂಬಂಧಿಸಿದ ಉತ್ತಮ ಆರೋಗ್ಯ ಸೇವೆ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವತ್ತ ಗಮನಹರಿಸಲಾಗಿದೆ.
ಹಾರ್ಮೋನ್ ಬದಲಾವಣೆಗಳ ಬಗ್ಗೆ ಮಹಿಳೆಯರಿಗೆ ತಿಳಿಸುವ ಪ್ರಯತ್ನ!
ಈ ಅಭಿಯಾನದ ಆರಂಭಿಕ ಹಂತದಲ್ಲಿ ಮೆನೋಪಾಸ್ ಮತ್ತು ಪೆರಿಮೆನೋಪಾಸ್ ಕುರಿತು ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡುವುದು ಹಾಗೂ ಮೂಲಭೂತ ಅರಿವು ಮೂಡಿಸುವುದು ರಮ್ಯಾ ಅವರ ಗುರಿಯಾಗಿದೆ. ಮಹಿಳೆಯರ ದೇಹದಲ್ಲಿ ಹಾರ್ಮೋನ್ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಅವುಗಳಲ್ಲಿನ ಬದಲಾವಣೆಗಳು ಚರ್ಮ, ಮೆದುಳು, ಹೃದಯ ಹಾಗೂ ಮೂಳೆಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ಸರಳವಾಗಿ ವಿವರಿಸಲು ಉದ್ದೇಶಿಸಿದ್ದಾರೆ.
ಇದರ ಜೊತೆಗೆ ಈ ಹಂತಗಳು ಮಹಿಳೆಯರ ವೃತ್ತಿ ಜೀವನ ಮತ್ತು ವೈಯಕ್ತಿಕ ಸಂಬಂಧಗಳ ಮೇಲೂ ಪರಿಣಾಮ ಬೀರಬಹುದು ಎಂಬುದನ್ನು ರಮ್ಯಾ ಪ್ರಸ್ತಾಪಿಸಿದ್ದಾರೆ. ಕೆಲವರಿಗೆ ಕೆಲಸದ ಸ್ಥಳದಲ್ಲಿ ಸಮಸ್ಯೆಗಳು ಎದುರಾಗಬಹುದು. ಇನ್ನು ಕೆಲವರ ವೈಯಕ್ತಿಕ ಸಂಬಂಧಗಳಲ್ಲಿಯೂ ಏರುಪೇರು ಉಂಟಾಗಬಹುದು. ತಮ್ಮ ದೇಹದಲ್ಲಿ ನಡೆಯುತ್ತಿರುವುದು ಸಹಜವಾದ ಶಾರೀರಿಕ ಬದಲಾವಣೆ ಎಂಬ ಅರಿವಿಲ್ಲದೆ, ತಮ್ಮಲ್ಲೇ ಏನೋ ತಪ್ಪಾಗಿದೆ ಎಂದು ಭಾವಿಸಿ ಕೆಲವರು ಉದ್ಯೋಗ ಅಥವಾ ಸಂಬಂಧಗಳಿಂದ ದೂರವಾಗುವ ಸಾಧ್ಯತೆಯೂ ಇದೆ ಎಂದು ಅವರು ಹೇಳಿದ್ದಾರೆ.
ಹೀಗಾಗಿ ಮಹಿಳೆಯರಿಗೆ ಮಾತ್ರವಲ್ಲದೆ ಅವರ ಸಂಗಾತಿ, ಕುಟುಂಬದ ಸದಸ್ಯರಿಗೂ ಈ ಬದಲಾವಣೆಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ಮಹಿಳೆಯರು ಈ ಹಂತವನ್ನು ಒಂಟಿಯಾಗಿ ಎದುರಿಸುವಂತಾಗಬಾರದು; ಅವರಿಗೆ ಕುಟುಂಬದ ಬೆಂಬಲವೂ ದೊರೆಯಬೇಕು ಎಂಬುದು ರಮ್ಯಾ ಅವರ ಆಶಯ.
ಭಾರತೀಯ ಮಹಿಳೆಯರಲ್ಲಿ ಮೆನೋಪಾಸ್ ಬೇಗನೆ ಏಕೆ ಸಂಭವಿಸುತ್ತದೆ?
ಮಹಿಳೆಯರ ಆರೋಗ್ಯದ ಕುರಿತು ನೀತಿ ರೂಪಿಸುವುದರ ಜೊತೆಗೆ ಹೆಚ್ಚಿನ ವೈಜ್ಞಾನಿಕ ಸಂಶೋಧನೆಯ ಅಗತ್ಯವನ್ನೂ ರಮ್ಯಾ ಒತ್ತಿಹೇಳಿದ್ದಾರೆ. ಜಾಗತಿಕವಾಗಿ ಮಹಿಳೆಯರಲ್ಲಿ ಮೆನೋಪಾಸ್ ಸರಾಸರಿ 50ನೇ ವಯಸ್ಸಿನ ಆಸುಪಾಸಿನಲ್ಲಿ ಸಂಭವಿಸಿದರೆ, ಭಾರತೀಯ ಮಹಿಳೆಯರಲ್ಲಿ ಅದು ಸುಮಾರು 46ನೇ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತದೆ ಎಂಬ ಅಂಶದ ಬಗ್ಗೆ ಅವರು ಗಮನ ಸೆಳೆದಿದ್ದಾರೆ.
ಭಾರತೀಯ ಮಹಿಳೆಯರಲ್ಲಿ ಮೆನೋಪಾಸ್ ತುಸು ಬೇಗನೆ ಸಂಭವಿಸಲು ಪೌಷ್ಟಿಕಾಂಶದ ಕೊರತೆ, ಪರಿಸರದ ಪರಿಸ್ಥಿತಿಗಳು ಅಥವಾ ಚರ್ಮದ ಆರೈಕೆ ಉತ್ಪನ್ನಗಳು, ಆಹಾರ ಹಾಗೂ ಅಡುಗೆ ಪಾತ್ರೆಗಳಲ್ಲಿ ಕಂಡುಬರುವ ಎಂಡೋಕ್ರೈನ್ ಡಿಸ್ರಪ್ಟರ್ಗಳು ಕಾರಣವಾಗಿವೆಯೇ ಎಂಬುದರ ಬಗ್ಗೆ ಅಧ್ಯಯನ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಅಂಶಗಳ ಕುರಿತು ವೈಜ್ಞಾನಿಕ ಸಂಶೋಧನೆ ನಡೆದರೆ, ಭವಿಷ್ಯದಲ್ಲಿ ಅಗತ್ಯ ನಿಯಮಗಳು ಹಾಗೂ ನೀತಿಗಳನ್ನು ರೂಪಿಸಲು ಸಹಕಾರಿಯಾಗಬಹುದು ಎಂಬುದು ಅವರ ನಿಲುವು.
ಇದರ ಜೊತೆಗೆ ಮೆನೋಪಾಸ್, ಪೆರಿಮೆನೋಪಾಸ್ ಮತ್ತು ಹಾರ್ಮೋನ್ ಆರೋಗ್ಯ ಕ್ಷೇತ್ರದಲ್ಲಿ ವಿಶೇಷ ಅಧ್ಯಯನ ಮಾಡಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ನೆರವಾಗುವ ಬಗ್ಗೆಯೂ ರಮ್ಯಾ ಯೋಚಿಸುತ್ತಿದ್ದಾರೆ. ಬ್ರಿಟನ್ನ ವೈದ್ಯೆ ಡಾ. ಲೂಯಿಸ್ ನ್ಯೂಸನ್ ಸ್ಥಾಪಿಸಿರುವ ನ್ಯೂಸನ್ ಎಜುಕೇಶನ್ ಹಾಗೂ ಇಂಡಿಯನ್ ಮೆನೋಪಾಸ್ ಸೊಸೈಟಿ ಜೊತೆಗೂಡಿ ಈ ಪ್ರಯತ್ನದ ವ್ಯಾಪ್ತಿಯನ್ನು ವಿಸ್ತರಿಸುವ ಆಸಕ್ತಿಯನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಮಹಿಳೆಯರು ಮೌನವಾಗಿ ನೋವು ಅನುಭವಿಸಬಾರದು: ರಮ್ಯಾ ಆಶಯ!
ಇನ್ನು ರಮ್ಯಾ ಅವರ ಈ ಪ್ರಯತ್ನ ಕೇವಲ ಜಾಗೃತಿ ಮೂಡಿಸುವುದಕ್ಕೆ ಸೀಮಿತವಾಗಿಲ್ಲ. ಮಹಿಳೆಯರ ಆರೋಗ್ಯದ ಕುರಿತು ಹೆಚ್ಚಿನ ಸಂಶೋಧನೆ ನಡೆಯಬೇಕು, ಉತ್ತಮ ವೈದ್ಯಕೀಯ ಸೌಲಭ್ಯಗಳು ಲಭ್ಯವಾಗಬೇಕು, ಸರ್ಕಾರದ ಮಟ್ಟದಲ್ಲಿ ಸೂಕ್ತ ನೀತಿಗಳು ರೂಪುಗೊಳ್ಳಬೇಕು ಹಾಗೂ ಪ್ರತಿಯೊಬ್ಬ ಮಹಿಳೆಗೂ ತನ್ನ ದೇಹದಲ್ಲಿ ನಡೆಯುವ ಬದಲಾವಣೆಗಳ ಬಗ್ಗೆ ಸರಿಯಾದ ಮಾಹಿತಿ ಸಿಗಬೇಕು ಎಂಬುದು ಅವರ ಉದ್ದೇಶವಾಗಿದೆ.
ಮಹಿಳೆಯರ ಜೀವನದ ಈ ಸಹಜ ಹಂತದಲ್ಲಿ ಎದುರಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳದೆ ಮೌನವಾಗಿ ಸಹಿಸಿಕೊಳ್ಳುವ ಪರಿಸ್ಥಿತಿ ಇರಬಾರದು. ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಪ್ರತಿಯೊಬ್ಬ ಮಹಿಳೆಗೂ ಇದೆ ಎಂಬ ಮಹತ್ವದ ಸಂದೇಶವನ್ನು ರಮ್ಯಾ ತಮ್ಮ ಈ ಹೊಸ ಪ್ರಯತ್ನದ ಮೂಲಕ ಸಾರುತ್ತಿದ್ದಾರೆ.














