ನಟಿ ಕಲ್ಪನಾ ಮೇಲಿದ್ದ ಎರಡು ಆರೋಪಗಳಲ್ಲಿ ಒಂದು ಸತ್ಯ; ಆ ನಟ ಹೇಳ್ಬಿಟ್ರು!
ಕೇವಲ 35 ವರ್ಷ ಬದುಕಿದ್ದ ನಟಿ ಕಲ್ಪನಾ ಸುಮಾರು 15 ವರ್ಷ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಆದರೆ ಅಷ್ಟರಲ್ಲಾಗಲೇ ಅವರು 80ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ 'ಮಿನುಗುತಾರೆ' ಪಟ್ಟವನ್ನು ಪಡೆದುಕೊಂಡಿದ್ದರು. ಅವರ ನಟನೆಯ ಹೆಚ್ಚು ಚಿತ್ರಗಳು ಕನ್ನಡವೇ ಆಗಿತ್ತು..
ಕನ್ನಡದ ಮೇರು ನಟಿ, ಮಿನುಗುತಾರೆ (Monugutare kalpana) ಕಲ್ಪನಾ ಅವರ ಬಗ್ಗೆ ಅದೆಷ್ಟು ಹೇಳಿದರೂ ಕಡಿಮೆಯೇ ಎನ್ನಬಹುದು. ಕಾರಣ, ಅವರ ವೃತ್ತಿಜೀವನದಷ್ಟೇ ಅವರ ವೈಯಕ್ತಿಕ ಜೀವನ ಕೂಡ ಸದ್ದು-ಸುದ್ದಿ ಮಾಡುತ್ತಿತ್ತು. ಅಚ್ಚ್ಗನ್ನಡದ ಮಿನುಗುತಾರೆ ಕಲ್ಪನಾ ಅವರು ನಮ್ಮನ್ನಗಲಿ ಬಹಳ ವರ್ಷಗಳೇ ಆಗಿಹೋಗಿವೆ. ಆದರೆ ಆ ಅದ್ಭುತ ನಟಿಯ ನೆನಪು ಮಾತ್ರ ಕನ್ನಡ ಸಿನಿರಸಿಕರನ್ನು ಇವತ್ತಿಗೂ ಕಾಡುತ್ತಿದೆ, ಕಾರಣ, ಬದುಕಿದ್ದಾಗ ನಮ್ಮನ್ನು ತಮ್ಮ ನಟನೆಯ ಮೂಲಕ ಬಹಳಷ್ಟು ರಂಜಿಸಿದ್ದ ನಟಿ ಕಲ್ಪನಾ, ದುರಂತ ಸಾವು ಕಂಡು ನಮ್ಮಿಂದ ದೂರವಾದರು.
ಕೇವಲ 35 ವರ್ಷ ಬದುಕಿದ್ದ ನಟಿ ಕಲ್ಪನಾ ಸುಮಾರು 15 ವರ್ಷ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಆದರೆ ಅಷ್ಟರಲ್ಲಾಗಲೇ ಅವರು 80ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ 'ಮಿನುಗುತಾರೆ' ಪಟ್ಟವನ್ನು ಪಡೆದುಕೊಂಡಿದ್ದರು. ಅವರ ನಟನೆಯ ಹೆಚ್ಚು ಚಿತ್ರಗಳು ಕನ್ನಡವೇ ಆಗಿತ್ತು. ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಕೂಡ ನಟಿ ಕಲ್ಪನಾ ನಟಿಸಿದ್ದರು. ಸ್ವಾತಂತ್ರ್ಯ ಪೂರ್ವದಲ್ಲೇ ಹುಟ್ಟಿದ್ದ (1943) ಹುಟ್ಟಿದ್ದ ನಟಿ ಕಲ್ಪನಾ ಅವರು ಕಪ್ಪು-ಬಿಳುಪು ಚಿತ್ರಗಳಲ್ಲಿ ಸಹ ನಟಿಸಿ ಬಹಳಷ್ಟು ಹೆಸರು ಮಾಡಿದ್ದರು.
ಮೇರುನಟರಾದ ಡಾ ರಾಜ್‌ಕುಮಾರ್, ವಿಷ್ಣುವರ್ಧನ್ ಜೋಡಿಯಾಗಿ ಕೂಡ ಕಲ್ಪನಾ ನಟಿಸಿದ್ದರು. ಸಂದರ್ಭ (1978), ಗಂಧದ ಗುಡಿ (1973) ಹಾಗೂ ವಂಶಜ್ಯೋತಿ (1978) ಚಿತ್ರಗಳಲ್ಲಿ ನಟಿ ಕಲ್ಪನಾ ಅವರು ನಟ ವಿಷ್ಣುವರ್ಧನ್ ಜೊತೆ ತೆರೆ ಹಂಚಿಕೊಂಡಿದ್ದರು. ಡಾ ರಾಜ್‌ಕುಮಾರ್ ಜೊತೆಯಲ್ಲಿ ಹಣ್ಣೆಲೆ ಚಿಗುರಿದಾಗ, ಇಮ್ಮಡಿ ಪುಲಿಕೇಶಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದರು ಕಲ್ಪನಾ.
ಇಂಥ ಮಹಾನ್ ನಟಿ ಕಲ್ಪನಾ ಅವರ ಮೇಲೆ ಒಂದಷ್ಟು ಆರೋಪಗಳು ಇದ್ದವು.
ಹಾಗಿದ್ದರೆ ಆ ಆರೋಪಗಳು ಯಾವವು? ಒಂದು, ಅವರು ಶೂಟಿಂಗ್ ಸೆಟ್‌ಗೆ ಲೇಟಾಗಿ ಬರುತ್ತಿದ್ದರು. ಶೂಟಿಂಗ್ 9 ಗಂಟೆಗೆ ಶುರುವಾದರೆ ಅವರು ಬರುತ್ತಿದ್ದುದು 11 ಗಂಟೆಗೆ. ಇನ್ನೊಂದು ಆರೋಪ, ಅವರಿಗೆ ತುಂಬಾ ಹೆಡ್ ವೇಟ್ ಎಂಬುದಾಗಿತ್ತು. ಆದರೆ, ಬಹುತೇಕರು ಹೇಳುವ ಪ್ರಕಾರ ಅವರು ಲೇಟ್ ಆಗಿ ಸೆಟ್‌ಗೆ ಬರುತ್ತಿದ್ದುದು ಹೌದು. ಆದರೆ ಅವರಿಗೆ ಅಹಂಕಾರ ಅಷ್ಟೇನೂ ಇರಲಿಲ್ಲ. ಕನ್ನಡದ ಹಿರಿಯ ನಟ ರಾಜೇಶ್ ಅವರು ಈ ಬಗ್ಗೆ ಮಾತನ್ನಾಡುತ್ತ 'ನಟಿ ಕಲ್ಪನಾ ಅವರು ಲೇಟ್ ಅಗಿ ಶೂಟಿಂಗ್‌ಗೆ ಬರುತ್ತಿದ್ದರು ಎಂಬ ಅರೋಪದಲ್ಲಿ ಸತ್ಯವಿದೆ. ಆದರೆ ಅವರಿಗೆ ಹೆಡ್‌ವೇಟ್ ಇರಲಿಲ್ಲ' ಎಂದಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಹಿರಿಯ ನಟ ಹಾಗೂ ಆ ಕಾಲದಲ್ಲಿ ನಟಿ ಕಲ್ಪನಾ ಅವರೊಂದಿಗೆ ನಟಿಸಿರುವ ಸಹಕಲಾವಿದರಾದ ರಾಜೇಶ್ ಅವರು ಹೀಗೆ ಹೇಳಿದ್ದಾರೆ. 'ಅಂದು ಕಲ್ಪನಾ ಅವರಂತಹ ಅಪ್ಪಟ ಪ್ರತಿಭೆ, ಪ್ರತಿಭಾವಂತೆ ಅಭಿನೇತ್ರಿ ಮತ್ತೊಬ್ಬರಿರಲಿಲ್ಲ. ಅವರು ನಟಿಸಿದ ಚಿತ್ರಗಳೆಲ್ಲವೂ 25 ವಾರಗಳು, ನೂರು-ಇನ್ನೂರು ದಿನಗಳು ಓಡುತ್ತಿದ್ದವು. ಹೀಗಿರುವಾಗ ಮಾನವ ಸಹಜವಾಗಿಯೇ ಯಾರಿಗಾದರೂ ತಾವು ಯಾರೆಂದು ಅರ್ಥವಾಗುತ್ತದೆ. ಅದು ಕಲ್ಪನಾ ಅವರಿಗೂ ಗೊತ್ತಿತ್ತು. ಆದರೆ ಅವರು ಯಾವತ್ತೂ ಅಹಂಕಾರ ತೋರಿಸಿರಲಿಲ್ಲ' ಎಂದಿದ್ದಾರೆ.