Actor Vishnuvardhan s Daughter: ವಿಷ್ಣುವರ್ಧನ್ ನಿಧನರಾಗುವ ಹಿಂದಿನ ದಿನ ಮಗಳು ಕೀರ್ತಿಗೆ ಫೋನ್ ಮಾಡಿ ಮಾತನಾಡಿದ್ದರು ಕೀರ್ತಿ ವಿಷ್ಣುವರ್ಧನ್ ಅವರ 70ಕ್ಕೂ ಹೆಚ್ಚು ಸಿನಿಮಾಗಳಿಗೆ ವಸ್ತ್ರವಿನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ.
ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ನಮ್ಮನ್ನು ಅಗಲಿ ವರ್ಷಗಳೇ ಕಳೆದರೂ ಇಂದಿಗೂ ಜನಮಾನಸದಲ್ಲಿ ಶಾಶ್ವತವಾಗಿದ್ದಾರೆ. ಇಂದಿಗೂ ವಿಷ್ಣುವರ್ಧನ್ ಅಭಿಮಾನಿಗಳು ಸಮಾಜಸೇವೆಯಲ್ಲಿ ತೊಡಗಿಕೊಂಡಿರುತ್ತಾರೆ. ಚಂದನವನ ಕಂಡ ಸ್ಪುರದ್ರೂಪಿ ನಟ ಅಂದ್ರೆ ಅದು ಸಾಹಸಸಿಂಹ ವಿಷ್ಣುವರ್ಧನ್. 200 ಸಿನಿಮಾಗಳಲ್ಲಿ ನಟಿಸಿರುವ ವಿಷ್ಣುವರ್ಧನ್ ಪ್ರತಿಯೊಂದು ವಿಷಯದಲ್ಲಿಯೂ ಪರ್ಫೆಕ್ಟ್ ಆಗಿದ್ದರು ಎಂದು ಮಗಳು ಕೀರ್ತಿ ಹೇಳುತ್ತಾರೆ. ನಿಧನದ ಹಿಂದಿನ ತಂದೆ ತಮಗೆ ಕರೆ ಮಾಡಿ ಮಾತನಾಡಿದ್ದರು ಎಂಬ ವಿಷಯನ್ನು ಕೀರ್ತಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇದರ ಜೊತೆಯಲ್ಲಿ ಹಲವು ವಿಷಯಗಳ ಬಗ್ಗೆ ಕೀರ್ತಿ ಮಾತನಾಡಿದ್ದಾರೆ.
ಅಪ್ಪಾ ಬಿಡುವಿನ ಸಮಯದಲ್ಲಿ ಡಾ.ರಾಜ್‌ಕುಮಾರ್ ಅವರ ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತಿದ್ದರು. ಆ ಸಿನಿಮಾಗಳನ್ನು ನೋಡಿ ನಮಗೆಲ್ಲಾ ವಿವರಿಸುತ್ತಿದ್ದರು. ನಮಗೆ ರಾಜ್‌ಕುಮಾರ್ ಅವರ ನಟನೆಯನ್ನು ನೋಡಿ ಎಂದು ಹೇಳುತ್ತಿದ್ದರು. ಶ್ರೀಕೃಷ್ಣದೇವರಾಯ , ರಣಧೀರ ಕಂಠೀರವ ಅಂತಹ ಸಿನಿಮಾಗಳನ್ನು ನೋಡುತ್ತಿದ್ದರು. ನಮಗೆ ಆ ರೀತಿಯ ಸಿನಿಮಾ ನೋಡಬೇಕೆಂದು ಸಲಹೆ ಕೊಡುತ್ತಿದ್ದರು ಅಂತ ಕೀರ್ತಿ ಹೇಳಿದ್ದಾರೆ.
ಫೋನ್ ಮಾಡಿ ಹೇಳಿದ್ದೇನು ವಿಷ್ಣುವರ್ಧನ್?
2009 ಡಿಸೆಂಬರ್ 30ರ ಹಿಂದಿನ ದಿನ ವಿಷ್ಣುವರ್ಧನ್ ಕುಟುಂಬಸ್ಥರೊಂದಿಗೆ ಚೆನ್ನಾಗಿಯೇ ಮಾತನಾಡಿಕೊಂಡಿದ್ದರು. ಎಂದಿನಂತೆ ದಿನನಿತ್ಯದ ಚಟುವಟಿಕೆಯಲ್ಲಿ ವಿಷ್ಣುದಾದ ತೊಡಗಿಕೊಂಡಿದ್ದರು. ಡಿಸೆಂಬರ್ 29ರಂದು ಮಗಳು ಕೀರ್ತಿ ಅವರಿಗೆ ವಿಷ್ಣುವರ್ಧನ್ ಫೋನ್ ಮಾಡಿದ್ದರು. ಅಂದು ಬೆಂಗಳೂರಿನಲ್ಲಿ ಬ್ಲಡ್ ಟೆಸ್ಟ್ ಮಾಡಿಸಬೇಕು ಎಂದು ಮಗಳನ್ನು ಕರೆದಿದ್ದರು. ಡಿಸೆಂಬರ್ 31ರಂದು ಬ್ಲಡ್ ಟೆಸ್ಟ್ ಮಾಡಿಸೋಣ ಅಂತ ಕೀರ್ತಿ ಹೇಳಿದ್ದರು. ಆದರೆ ಡಿಸೆಂಬರ್ 30ರಂದ ವಿಷ್ಣು ಸಾವಿನ ಸುದ್ದಿ ಬರ ಸಿಡಿಲಿನಂತೆ ಬಂದಿತ್ತು. ಹೃದಯಾಘಾತದಿಂದ ವಿಷ್ಣುವರ್ಧನ್ ಕೊನೆಯುಸಿರೆಳೆದಿದ್ದರು.
ಖ್ಯಾತ ವಸ್ತ್ರವಿನ್ಯಾಸಕಿ
ವಿಷ್ಣುವರ್ಧನ್ ಅವರ ಮಗಳು ಕೀರ್ತಿ ಚಂದನವನದ ಖ್ಯಾತ ವಿನ್ಯಾಸಕಿಯಾಗಿದ್ದಾರೆ. ಆರಂಭದಲ್ಲಿ ತಂದೆ ಅವರು ಮನೆ ಮತ್ತು ಹೊರಗಡೆ ಹೋಗುವಾಗ ಯಾವ ಡ್ರೆಸ್ ಧರಿಸಬೇಕು ಎಂದು ಕೀರ್ತಿ ನಿರ್ಧರಿಸುತ್ತಿದ್ದರು. ಮಗಳ ಆಯ್ಕೆಯ ಬಟ್ಟೆಗಳಿಗೆ ಜನರಿಂದ ಮೆಚ್ಚುಗೆ ವ್ಯಕ್ತವಾದಾಗ ಡ್ರೆಸ್ ಡಿಸೈನರ್ ಆಗುತ್ತೆ ವಿಷ್ಣುವರ್ಧನ್ ಸಲಹೆ ನೀಡಿದ್ದಾರೆ. ವಿಷ್ಣುವರ್ಧನ್ ಅವರ 70ಕ್ಕೂ ಅಧಿಕ ಸಿನಿಮಾಗಳಿಗೆ ಕೀರ್ತಿ ವಸ್ತ್ರವಿನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ. ವೀರಪ್ಪ ನಾಯಕ ಸಿನಿಮಾದ ವಸ್ತ್ರ ವಿನ್ಯಾಸಕ್ಕೆ ರಾಜ್ಯ ಪ್ರಶಸ್ತಿಯನ್ನು ಕೀರ್ತಿ ವಿಷ್ಣುವರ್ಧನ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ನಾನು ಸತ್ತಾಗ ಬೇರೆ ಯಾರು ಬರ್ತಾರೋ ಇಲ್ವೋ, ಆದ್ರೆ ಆತ ಮಾತ್ರ ಬಂದೇ ಬರ್ತಾನೆ: ವಿಷ್ಣುವರ್ಧನ್
ಕನ್ನಡದ ಸೂಪರ್ ಹಿಟ್ ಸಿನಿಮಾ ಯಜಮಾನ ಸಿನಿಮಾಗೂ ಸಹ ಕೀರ್ತಿ ಅವರೇ ವಸ್ತ್ರವಿನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ. ಸಿನಿಮಾ ಚಿತ್ರೀಕರಣ ಆರಂಭಕ್ಕೆ ಒಂದು ವಾರ ಇರುವಾಗಲೇ ವಿಷ್ಣುವರ್ಧನ್ ತಮ್ಮ ಡ್ರೆಸ್ ಟ್ರಯಲ್ ಮಾಡುತ್ತಿದ್ದರು. ಮನೆಯಲ್ಲಿಯೇ ಎಲ್ಲಾ ಬಟ್ಟೆಗಳ ಟ್ರಯಲ್ ನಡೆಯುತ್ತಿತ್ತು. ಯಜಮಾನ ಚಿತ್ರದ ಮೀಸೆ ಮತ್ತು ಮಚ್ಚೆ ಸೇರಿದಂತೆ ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆಯೂ ವಿಷ್ಣುವರ್ಧನ್ ಚರ್ಚೆ ನಡೆಸುತ್ತಿದ್ದರು ಎಂದು ಕೀರ್ತಿ ಹೇಳುತ್ತಾರೆ.
ಪತಿ ಅನಿರುದ್ಧ ಅವರ ಸಿನಿಮಾಗಳಿಗೂ ಕೀರ್ತಿ ಅವರೇ ಡಿಸೈನರ್ ಆಗಿದ್ದರು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿಯ ಆರ್ಯವರ್ಧನ್ ಪಾತ್ರಕ್ಕೂ ಕೀರ್ತಿ ಅವರೇ ವಸ್ತ್ರವಿನ್ಯಾಸಕಿಯಾಗಿದ್ದರು. ನಾನು ಏನು ಧರಿಸಿದ್ರೆ ಚೆನ್ನಾಗಿರುತ್ತೆ ಎಂಬುದನ್ನು ಕೀರ್ತಿ ಅವರೇ ನಿರ್ಧರಿಸುತ್ತಾರೆ. ಕೀರ್ತಿಯವರ ಆಯ್ಕೆಯ ಬಟ್ಟೆ ಸುಂದರವಾಗಿರುತ್ತವೆ ಎಂದು ಅನಿರುದ್ಧ ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಭಾರತಿಯನ್ನು ಬೇರೆಯವ್ರ ಜೊತೆ ನೋಡೋಕೆ ಇಷ್ಟಪಡದ ನಟ ವಿಷ್ಣುವರ್ಧನ್; ಪೊಸೆಸ್ಸಿವ್‌ನೆಸ್ ಇಷ್ಟಿತ್ತಾ?
