ಹಿರಿಯ ನಟ ಶಶಿಕುಮಾರ್ ಹಾಗೂ ನಟಿ ತಾರಾ ಅವರು ಬಹಳ ದಿನಗಳ ಬಳಿಕ ‘ರಾಶಿ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ತಮ್ಮ ಹಳೆಯ ಸಿಗ್ನೇಚರ್ ಡ್ಯಾನ್ಸ್ ಸ್ಟೆಪ್ಸ್ ಮೂಲಕ ಗಮನ ಸೆಳೆದರು. ಶಶಿಕುಮಾರ್ ಪುತ್ರ..
ತುಂಬಾ ದಿನಗಳ ನಂತರ ಹಿರಿಯ ನಟ ಶಶಿಕುಮಾರ್, ನಟಿ ತಾರಾ ಅವರು ಹಾಡೊಂದಕ್ಕೆ ವೇದಿಕೆ ಮೇಲೆ ಹೆಜ್ಜೆ ಹಾಕಿ ಎಲ್ಲರ ಅಚ್ಚರಿಗೆ ಕಾರಣರಾದರು. ಇಬ್ಬರು ತಮ್ಮ ಹಳೆಯ ಸಿಗ್ನೇಚರ್ ಸ್ಟೆಪ್ಸ್ ಮೂಲಕ ಹೀಗೆ ಗಮನ ಸೆಳೆದಿದ್ದು ‘ರಾಶಿ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ.
ಇದು ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ನಾಯಕನಾಗಿ ನಟಿಸಿರುವ ಚಿತ್ರ. ಸಮೀಕ್ಷಾ ನಾಯಕಿ. ನಟಿ ತಾರಾ, ನಿರ್ಮಾಪಕಿ ಶೈಲಜಾ ನಾಗ್ ಹಾಗೂ ಶಶಿಕುಮಾರ್ ಅವರು ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಅಖಿಲೇಶ್ ನಿರ್ಮಾಣ, ವಿಜಯ್ ಪಾಳೇಗಾರ್ ನಿರ್ದೇಶನದ ಜೊತೆಗೆ ಸಂಗೀತ ನೀಡಿದ್ದಾರೆ. ಇದೇ ನವೆಂಬರ್ 13ಕ್ಕೆ ಚಿತ್ರ ತೆರೆಗೆ ಬರುತ್ತಿದೆ.
ಕನಸು ಕಂಡಿದ್ದೆ
ವಿಜಯ್ ಪಾಳೇಗಾರ್, ‘ಕಾಲೇಜು ದಿನಗಳಿಂದಲೂ ನಿರ್ದೇಶಕನಾಗಬೇಕೆಂಬ ಕನಸು ಕಂಡಿದ್ದೆ. ತಾಯಿ ಮತ್ತು ಮಗನ ನಡುವಿನ ಭಾವನಾತ್ಮಕ ಸಂಬಂಧವನ್ನು ಆಧರಿಸಿ ಈ ಚಿತ್ರದ ಕತೆಯನ್ನು ರೂಪಿಸಿದ್ದೇನೆ. ಟ್ರೇಲರ್‌ನಲ್ಲಿ ಕತೆಯ ಕೆಲವು ಅಂಶಗಳನ್ನು ಮಾತ್ರ ತೋರಿಸಲಾಗಿದೆ. ಚಿತ್ರದಲ್ಲಿ ಇನ್ನೂ ಹಲವು ವಿಶೇಷತೆಗಳಿದ್ದು, ಪ್ರೇಕ್ಷಕರಿಗೆ ಖಂಡಿತ ಈ ಚಿತ್ರ ಇಷ್ಟವಾಗಲಿದೆ’ ಎಂದರು.
ನನ್ನದು ಹಳ್ಳಿ ಹುಡುಗನ ಪಾತ್ರ
ಆದಿತ್ಯ ಶಶಿಕುಮಾರ್, ‘ನನ್ನ ಅಪ್ಪ ಶಶಿಕುಮಾರ್ ಅವರ ಸಾಧನೆಗಳು ನನಗೆ ಯಾವಾಗಲೂ ಪ್ರೇರಣೆ. ಚಿತ್ರರಂಗದಲ್ಲಿ ಅವರದ್ದೇ ಆದ ಹೆಜ್ಜೆ ಗುರುತುಗಳಿವೆ. ಅದೇ ರೀತಿ ನಾನು ಕೂಡ ಹೆಸರು ಮಾಡುವಾಸೆ. ಈ ಚಿತ್ರದಲ್ಲಿ ನನ್ನದು ಹಳ್ಳಿ ಹುಡುಗ ಶಿವು ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ತಾಯಿ ಹಾಗೂ ನಾಯಕಿಯ ಮೇಲಿನ ಪ್ರೀತಿಯ ಮಧ್ಯೆ ನಡೆಯುವ ಭಾವನಾತ್ಮಕ ಸಂಘರ್ಷವೇ ಚಿತ್ರದ ಪ್ರಮುಖ ಅಂಶ’ ಎಂದರು.
ಯಾವ ರೀತಿಯ ಪರಿಣಾಮ ಬೀರುತ್ತವೆ?
ಸಮೀಕ್ಷಾ, ‘ಹದಿಹರೆಯದ ವಯಸ್ಸಿನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ’ ಎಂದರು. ನಟಿ ವೀಣಾ ಸುಂದರ್, ತಬಲಾ ನಾಣಿ, ಮಂಜು ಪಾವಗಡ, ಹುಲಿ ಕಾರ್ತಿಕ್, ವಿನೋದ್ ಗೊಬ್ಬರಗಾಲ, ಉಗ್ರಂ ರವಿ, ಭಜರಂಗಿ ಪ್ರಸನ್ನ ಚಿತ್ರದಲ್ಲಿ ನಟಿಸಿರುವ ಹಲವರು ಹಾಜರಿದ್ದು ಚಿತ್ರದ ಕುರಿತು ಮಾತನಾಡಿದರು.














