ಕಾಶ್‌ ಬೆಳವಾಡಿ, ಕೃಷ್ಣ ಹೆಬ್ಬಾಳೆ, ರವಿಶಂಕರ ಗೌಡ, ರೂಪ, ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್‌ ಮತ್ತು ರವಿಚಂದ್ರನ್ ನಟಿಸಿರುವ ದಿ ಜಡ್ಜ್‌ಮೆಂಟ್‌ ಸಿನಿಮಾ ಸುದ್ದಿಗೋಷ್ಠಿ ನಡೆಯಿತ್ತು. 

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ರವಿಚಂದ್ರನ್‌ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ‘ದಿ ಜಡ್ಜ್‌ಮೆಂಟ್‌’ ಸಿನಿಮಾದ ಶೂಟಿಂಗ್‌ ನಡೆಯುತ್ತಿದೆ. ಶೂಟಿಂಗ್‌ ಸ್ಪಾಟ್‌ಗೆ ಭೇಟಿಕೊಟ್ಟಪತ್ರಕರ್ತರ ಜೊತೆ ಸಿನಿಮಾ ತಂಡ ಮಾತುಕತೆ ನಡೆಸಿತು. ‘ಈ ಪಾತ್ರ ಒಪ್ಪಿಕೊಳ್ಳೋಕೆ ಏನು ಕಾರಣ’ ಎಂದು ಪತ್ರಕರ್ತರು ಕೇಳಿದಾಗ, ತಮ್ಮ ಎಂದಿನ ನೇರ, ನಿರ್ಭಿಡೆಯ ಸ್ಟೈಲ್‌ನಲ್ಲಿ, ‘ದುಡ್ಡು ಕೊಟ್ಟರು, ಪಾತ್ರ ಒಪ್ಪಿಕೊಂಡೆ’ ಎಂದರು ಕ್ರೇಜಿಸ್ಟಾರ್‌.

‘ಇದ್ರಲ್ಲಿ ಎಲ್ಲರ ಕೈಯಲ್ಲಿ ಬೈಸ್ಕೊಳ್ಳೋ ಪಾತ್ರ ನಂದು. ಹತ್ತಾರು ಮಂದಿ ಬೈತಾನೇ ಇರ್ತಾರೆ. ಧನ್ಯಾ ರಾಮ್‌ಕುಮಾರ್‌ ಅಂತೂ ಬಿಸಿನೀರು ಎರಚಿ ಬಾಯಿಗೆ ಬಂದ ಹಾಗೆ ಬೈತಾರೆ. ನೇರವಾಗಿ ಬೈಯೋದಕ್ಕಾಗಲ್ಲ ಅಲ್ವಾ. ಅದಕೆ ಪಾತ್ರದ ಮೂಲಕ ಬೈತಾರೆ. ನಾನು ಜೀವನದಲ್ಲಿ ಏನು ಕಳ್ಕೊಂಡರೂ ನಗು ಕಳ್ಕೊಂಡಿಲ್ಲ. ಇವತ್ತಿಗೂ ಜಗತ್ತಿನ ಹ್ಯಾಪಿಯೆಸ್ಟ್‌ ವ್ಯಕ್ತಿ ನಾನು’ ಎಂದು ಮಾತಿಗೆ ಫುಲ್‌ಸ್ಟಾಪ್‌ ಇಟ್ಟರು.

ರವಿಚಂದ್ರನ್‌ ನೋಡುವಾಗ ಯಾರಿವಳು ಹಾಡು ಕಣ್ಮುಂದೆ ಬರ್ತಿತ್ತು: ಮೇಘನಾ ಗಾಂವ್ಕರ್

ನಿರ್ದೇಶಕ ಗುರುರಾಜ ಕುಲಕರ್ಣಿ, ‘ಸಾಮಾಜಿಕ ಕಳಕಳಿಯ ಪಾತ್ರದಲ್ಲಿ ರವಿಚಂದ್ರನ್‌ ನಟಿಸಿದ್ದಾರೆ. ಸರ್ವರಿಗೂ ಸಮಬಾಳು ಎಂಬ ಮನೋಭಾವ ಈ ಪಾತ್ರದ್ದು. ಇದೊಂದು ಲೀಗಲ್‌ ಥ್ರಿಲ್ಲರ್‌. ಹಣಕ್ಕಾಗಿ ನಡೆಯುವ ಕ್ರೈಮ್‌, ಕ್ರಿಪ್ಟೊಕರೆನ್ಸಿ, ಸಾಮಾಜಿಕ, ರಾಜಕೀಯವಾಗಿ ನಡೆಯುವ ಘಟನೆಯ ಸುತ್ತ ಸಿನಿಮಾವಿದೆ. ಸದ್ಯಕ್ಕೀಗ ರವಿಚಂದ್ರನ್‌ ಅವರ ಭಾಗದ ಪೊಲೀಸ್‌ ಸ್ಟೇಶನ್‌ ದೃಶ್ಯದ ಶೂಟಿಂಗ್‌ ನಡೆಯುತ್ತಿದೆ’ ಎಂದರು.

‘ನಾನು ರವಿ ಸಾರ್‌ಗೆ ನಿಜವಾಗ್ಲೂ ಬೈದಿಲ್ಲ’ ಅಂತನೇ ಮಾತು ಶುರು ಮಾಡಿದ ಧನ್ಯಾ ರಾಮ್‌ಕುಮಾರ್‌, ‘ವಿದೇಶದಲ್ಲಿ ಓದಿ ಬಂದು, ಘಟನೆಯೊಂದರಲ್ಲಿ ತಗಲಾಕಿಕೊಳ್ಳೋ ಪಾತ್ರ ನನ್ನದು’ ಎಂದರು. ಮೇಘನಾ ಗಾಂವ್ಕರ್‌, ‘ರವಿ ಸರ್‌, ಪಕ್ಕದಲ್ಲಿ ಕೂತಿದ್ದೀನಿ ಅನ್ನೋದನ್ನು ಇನ್ನೂ ನಂಬೋಕ್ಕಾಗ್ತಿಲ್ಲ. ಚಿತ್ರದಲ್ಲಿ ರಾಜಕೀಯ ಶಾಸ್ತ್ರ ಪಾಠ ಮಾಡೋ ಅಧ್ಯಾಪಕಿ, ರವಿಚಂದ್ರನ್‌ ಪತ್ನಿ ಪಾತ್ರದಲ್ಲಿ ನಟಿಸಿದ್ದೇನೆ’ ಎಂದರು.

ಕಲಾವಿದರಾದ ಪ್ರಕಾಶ್‌ ಬೆಳವಾಡಿ, ಕೃಷ್ಣ ಹೆಬ್ಬಾಳೆ, ರವಿಶಂಕರ ಗೌಡ, ರೂಪ, ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್‌ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.