ರಮೇಶ್ ಅರವಿಂದ್ ಹೊಸ ವರ್ಷವನ್ನು ‘ಥಾಟ್ ಕಾಕ್‌ಟೇಲ್’ ಮೂಲಕ ಸ್ವಾಗತಿಸಲಿದ್ದಾರೆ. ಸ್ಟೋರಿಟೆಲ್ ಎಂಬ ಸ್ವೀಡನ್ ಮೂಲದ ಆಡಿಯೋ ಬುಕ್ ಹಾಗೂ ಇಬುಕ್ ಪ್ಲಾಟ್‌ಫಾರ್ಮ್ ಇದೀಗ ಕನ್ನಡದಲ್ಲೂ ಆರಂಭವಾಗಿದೆ.
ರಮೇಶ್ ಅರವಿಂದ್ (Ramesh Aravind) ಹೊಸ ವರ್ಷವನ್ನು ‘ಥಾಟ್ ಕಾಕ್‌ಟೇಲ್’ (Thought Cocktail) ಮೂಲಕ ಸ್ವಾಗತಿಸಲಿದ್ದಾರೆ. ಸ್ಟೋರಿಟೆಲ್ ಎಂಬ ಸ್ವೀಡನ್ ಮೂಲದ ಆಡಿಯೋ ಬುಕ್ ಹಾಗೂ ಇಬುಕ್ ಪ್ಲಾಟ್‌ಫಾರ್ಮ್ ಇದೀಗ ಕನ್ನಡದಲ್ಲೂ ಆರಂಭವಾಗಿದೆ. ಈ ವೇದಿಕೆ ಮೂಲಕ ಹೊಸ ವರ್ಷಕ್ಕೆ ಸ್ಪೆಷಲ್ ಆಗಿ ರಮೇಶ್ ಅರವಿಂದ್ ಸ್ಫೂರ್ತಿ ತುಂಬುವ ಮಾತುಗಳನ್ನಾಡಲಿದ್ದಾರೆ. ಸುಮಾರು 12 ಎಪಿಸೋಡ್‌ಗಳಲ್ಲಿ ರಮೇಶ್ ಅರವಿಂದ್ ವ್ಯಕ್ತಿತ್ವ ವಿಕಸನ ಮಾತಿನ ಸರಣಿ ‘ಮಾಸದ ಮಾತು ವಿತ್ ರಮೇಶ್’ ಪ್ರಸಾರವಾಗಲಿದ್ದು, ಜನವರಿ 2ರಂದು ಬಿಡುಗಡೆ ಆಗಲಿದೆ.
‘ಪ್ರತೀ ವರ್ಷದಂತೆ ಈ ವರ್ಷವೂ ನಾನು ಹೊಸ ರೀತಿಯಲ್ಲಿ 2022ರ ಶುಭಾಶಯ ಕೋರುತ್ತಿದ್ದೇನೆ. ಬದುಕಿನ ಬಗ್ಗೆ ಭರವಸೆ ನೀಡುವ, ನಿಮ್ಮ ಬುದ್ಧಿಗೆ ಚುರುಕು ಮುಟ್ಟಿಸುವ ‘ಥಾಟ್ ಕಾಕ್‌ಟೇಲ್’ ಸಿದ್ಧಪಡಿಸಿದ್ದೇನೆ. ನಾನೇ ಪ್ರೀತಿಯಿಂದ ಸಿದ್ಧಪಡಿಸಿರುವ 90 ನಿಮಿಷಗಳ ಈ ಥಾಟ್ ಕಾಕ್‌ಟೇಲ್ ‘ಮಾಸದ ಮಾತುಗಳು ವಿತ್ ರಮೇಶ್’ ಎಂಬ ಆಡಿಯೋ ಸರಣಿ ರೂಪದಲ್ಲಿ ನಿಮ್ಮೆದುರು ಬರಲಿದೆ. ಇದು ಹೊಸ ವರ್ಷಕ್ಕೆ ಸೊಗಸಾದ ಭೂಮಿಕೆ ಒದಗಿಸುವುದರಲ್ಲಿ ಅನುಮಾನವಿಲ್ಲ’ ಎಂದು ರಮೇಶ್ ಅರವಿಂದ್ ತಮ್ಮ ಕಾರ್ಯಕ್ರಮದ ಬಗ್ಗೆ ಹೇಳಿದ್ದಾರೆ. ಎಲ್ಲಾ ವಯೋಮಾನದವರಿಗೂ ಹತ್ತಿರವಾಗುವ ಮಾತಿನ ಸರಣಿಯಿದು. ಬದುಕಿನಲ್ಲಿ ಹೊಸ ಉತ್ಸಾಹ ತುಂಬುವ ಜೀವನಸ್ಫೂರ್ತಿಯ ಮಾತುಗಳನ್ನು ರಮೇಶ್ ಆಡಲಿದ್ದಾರೆ.
Ramesh Aravind:ಅನಾಮಿಕತೆ ಸೃಷ್ಟಿಸುವ ನೋವು ತಿಳಿಸುವ ಸಿನಿಮಾ '100'
ಸ್ಟೋರಿಟೆಲ್ ಈಗಾಗಲೇ ವಿಶ್ವದ ಅನೇಕ ಭಾಷೆಗಳಲ್ಲಿ ಆಡಿಯೋ ಬುಕ್, ಆಡಿಯೋ ಸರಣಿ ಪ್ರಸಾರ ಮಾಡುತ್ತಿದೆ. ಕನ್ನಡ ಸಾಹಿತ್ಯಾಸಕ್ತರಿಗೆ ಸ್ಟೋರಿಟೆಲ್‌ನಲ್ಲಿ ದಾಟು, ಯಯಾತಿ, ಶಿಕಾರಿ ಸೇರಿದಂತೆ ಹಲವು ಸಾಹಿತ್ಯ ಕೃತಿಗಳ ಆಡಿಯೋ ವರ್ಶನ್ ಲಭ್ಯವಿದೆ. ಬಿ ಜಯಶ್ರೀ, ಶರತ್ ಲೋಹಿತಾಶ್ವ, ಅರವಿಂದ ಕುಪ್ಳೀಕರ್, ಬಿ ಎಂ ಗಿರಿರಾಜ್ ಸೇರಿದಂತೆ ಅನೇಕ ರಂಗಭೂಮಿ ಹಾಗೂ ಸಿನಿಮಾ ಕಲಾವಿದರು ಈ ಕೃತಿಗಳಿಗೆ ಧ್ವನಿ ನೀಡಿದ್ದಾರೆ. ನವಕರ್ನಾಟಕ, ಮನೋಹರ ಗ್ರಂಥಮಾಲಾ, ಛಂದ ಪುಸ್ತಕ, ಸಾವಣ್ಣ ಎಂಟರ್‌ಪ್ರೈಸಸ್ ಸ್ಟೋರಿಟೆಲ್‌ನ ಸಹಯೋಗ ಹೊಂದಿವೆ.
ಇನ್ನು ರಮೇಶ್ ಅರವಿಂದ್ ನಟಿಸಿ, ನಿರ್ದೇಶನ ಮಾಡಿರುವ ಸೈಬರ್ ಕ್ರೈಮ್ ಆಧಾರಿತ '100' ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನವಾಗಿ, ಸಿನಿಪ್ರಿಯರಿಂದ ಒಳ್ಳೆಯ ಮೆಚ್ಚುಗೆಯನ್ನು ಪಡೆದಿತ್ತು. ಇನ್ಸ್‌ಪೆಕ್ಟರ್ ವಿಷ್ಣು ಪಾತ್ರದಲ್ಲಿ ರಮೇಶ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ರಚಿತಾ ರಾಮ್, ಪೂರ್ಣಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಜೊತೆಗೆ 'ಶಿವಾಜಿ ಸುರತ್ಕಲ್ 2' (Shivaji Surathkal 2) ಚಿತ್ರದ ಶೂಟಿಂಗ್‌ನಲ್ಲಿ ರಮೇಶ್ ಅವರು ಬ್ಯುಸಿಯಾಗಿದ್ದಾರೆ. ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ಆಕಾಶ್ ಶ್ರಿವತ್ಸ (Akash Srivatsa) ಅವರು ನಿರ್ದೇಶನ ಮಾಡುತ್ತಿದ್ದಾರೆ.
Ramesh Aravind: ಸರಳವಾಗಿ ನಡೆದ 'ಶಿವಾಜಿ ಸುರತ್ಕಲ್ 2' ಚಿತ್ರದ ಮುಹೂರ್ತ
'ಶಿವಾಜಿ ಸುರತ್ಕಲ್ 2' ಚಿತ್ರದಲ್ಲಿ ರಮೇಶ್ ಅರವಿಂದ್ ಅವರೊಂದಿಗೆ ರಾಧಿಕಾ ನಾರಾಯಣ್ (Radhika Narayan), ರಾಘು ರಾಮನಕೊಪ್ಪ, ವಿದ್ಯಾಮೂರ್ತಿ ಸೇರಿದಂತೆ ಮೊದಲ ಪಾರ್ಟ್ನಲ್ಲಿ ಇದ್ದ ಕಲಾವಿದರೇ ಈ ಚಿತ್ರತಂಡದಲ್ಲಿದೆ. ಡಿಸಿಪಿ ದೀಪಾ ಕಾಮತ್ ಎಂಬ ಪಾತ್ರವನ್ನು ಮೇಘನಾ ಗಾಂವ್ಕರ್ (Meghana Gaonkar) ನಿಭಾಯಿಸಲಿದ್ದು, ಬೆಂಗಳೂರು ಸೆಂಟ್ರಲ್ ಕ್ರೈಂ ಬ್ರಾಂಚ್ ಡಿಸಿಪಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಹಾಗೂ 'ಮಗಳು ಜಾನಕಿ' ಧಾರಾವಾಹಿ ನಟ ರಾಕೇಶ್ ಮಯ್ಯ (Rakesh Mayya) ಟ್ರೇನಿಂಗ್ ಮುಗಿಸಿ ಕೆಲಸಕ್ಕೆ ಸೇರಿರುವ ಪೋಲೀಸ್ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
