ರಮೇಶ್‌ ಅರವಿಂದ್‌ ‘100’ ಚಿತ್ರದ ಪತ್ರಿಕಾಗೋಷ್ಠಿ ಆರಂಭಿಸಿದ್ದೇ ಈ ಮಾತಿನಿಂದ. ರಮೇಶ್‌ ಏನೇ ಹೇಳುವುದಿದ್ದರೂ ಅದನ್ನು ಚೆಂದ ಹೇಳುತ್ತಾರೆ. ಮನಸ್ಸು ಮುಟ್ಟುವಂತೆ ಮಾತನಾಡುತ್ತಾರೆ. ಅವರ ಮಾತು ಕೇಳಿದವರಿಗೆಲ್ಲಾ ಈ ಮಾತು ಗೊತ್ತಿದೆ. ಈಗ ರಮೇಶ್‌ ತಮ್ಮ ನಟನೆ ಮತ್ತು ನಿರ್ದೇಶನದ ಹೊಸ ಸಿನಿಮಾದೊಂದಿಗೆ ಬಂದಿದ್ದಾರೆ. ವಿಶಿಷ್ಟಕತೆಯನ್ನು ಹೇಳುವ ತುಡಿತ ಇರುವ ಅವರು ಈ ಸಲ ಮೊಬೈಲ್‌ನಿಂದ ಆಗುವ ಅನಾಹುತದ ಕತೆಯನ್ನು ಹೇಳುತ್ತಿದ್ದಾರೆ.

‘ಸೈಬರ್‌ ಕ್ರೈಂ ಕತೆ ಹೇಳುವ ಸಿನಿಮಾ ಇದು. ಇಂಟರ್‌ನೆಟ್‌ ಅನ್ನು ಗೋಡೆ ಥರ ಬಳಸಿಕೊಂಡು ಅನಾಮಿಕರಾಗಿದ್ದುಕೊಂಡೇ ಎಮೋಷನಲ್‌ ಬ್ಲಾಕ್‌ಮೇಲ್‌ ಮಾಡುವಂತಹ ಘಟನೆಗಳು ತುಂಬಾ ನಡೆಯುತ್ತವೆ. ಅನಾಮಿಕತೆಯ ಗೋಡೆ ಇಲ್ಲವಾದರೆ ಈ ಯಾವ ಕ್ರೈಮ್‌ಗಳೂ ನಡೆಯುವುದು ಕಷ್ಟ. ಅನಾಮಿಕತೆಯಿಂದಾಗಿ, ಮೊಬೈಲ್‌ಗಳಿಂದಾಗಿ ನೋವು ಅನುಭವಿಸುತ್ತಿದ್ದಾರೆ. ಇಂಥದ್ದೊಂದು ವಿಷಯ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ರಚಿತಾ ರಾಮ್‌ ತಂಗಿ ಪಾತ್ರ ಮಾಡಿದ್ದಾರೆ. ಅವರ ಎನರ್ಜಿ, ಡಿಂಪಲ್‌ ಎಲ್ಲವೂ ನಮ್ಮ ಚಿತ್ರಕ್ಕೆ ಬೇಕಿತ್ತು. ಪೂರ್ಣ ನನ್ನ ಶ್ರೀಮತಿ ಪಾತ್ರದಲ್ಲಿ ನಟಿಸಿದ್ದಾರೆ. ಅವರಂತೂ ತುಂಬಾ ಸ್ನೇಮವಯಿ ವ್ಯಕ್ತಿತ್ವ ಹೊಂದಿರುವವರು. ತುಂಬಾ ಪ್ರೊಫೆಷನಲ್‌ ಆಗಿ ವರ್ತಿಸುತ್ತಾರೆ. ಈ ಇಬ್ಬರೂ ಈ ಚಿತ್ರಕ್ಕೆ ಜೀವ ತುಂಬಿದ್ದಾರೆ’ ಎಂದು ರಮೇಶ್‌ ಹೇಳಿದರು.

ನಿರ್ಮಾಪಕ ರಮೇಶ್‌ ರೆಡ್ಡಿ ನಂಗ್ಲಿವರಿಗೆ ಧನ್ಯವಾದ ಸಮರ್ಪಿಸುತ್ತಾ, ‘ನಿರ್ದೇಶಕನಾಗಿ ನನಗೊಂದು ಅಭಿರುಚಿ ಇರುತ್ತದೆ. ಆ ಅಭಿರುಚಿ ಸಾಕಾರವಾಗಲು ದುಡ್ಡು ಬೇಕಿರುತ್ತದೆ. ಅಂಥಾ ಹೊತ್ತಲ್ಲಿ ನಿರ್ಮಾಪಕರಿಗೂ ಆ ಅಭಿರುಚಿ ಇರುವುದು ಅನಿವಾರ್ಯವಾಗುತ್ತದೆ. ನನ್ನ ಮತ್ತು ನಿರ್ಮಾಪಕ ರಮೇಶ್‌ ರೆಡ್ಡಿಯವರ ಅಭಿರುಚಿ ಒಂದೇ ಆಗಿದ್ದರಿಂದ ಚಿತ್ರ ಇಷ್ಟುಚೆನ್ನಾಗಿ ಮೂಡಿ ಬಂದಿದೆ’ ಎಂದು ಹೇಳಿದರು. ರಮೇಶ್‌ ರೆಡ್ಡಿ ಮಂದಹಾಸ ಬೀರಿದರು.

ಸಿನಿಮಾ ಇವತ್ತು ರಿಲೀಸ್‌ ಆಗುತ್ತಿರುವ ಕುರಿತು ಮಾತನಾಡುತ್ತಾ, ‘ನಮ್ಮ ಕೆಲಸ ಮಾಡಿದ್ದೇವೆ. ಇವತ್ತು ನೀವು ಯಾವುದನ್ನು ಒಪ್ಪಿಕೊಳ್ಳುತ್ತೀರಿ, ಯಾವುದಕ್ಕೆ ಶಹಭಾಸ್‌ ಎನ್ನುತ್ತೀರಿ ಎಂದು ಕೇಳಲು ಕಾಯುತ್ತಿರುತ್ತೇವೆ. ನಿಮ್ಮ ಚಪ್ಪಾಳೆಯೇ ನಮಗೆ ಶಕ್ತಿ’ ಎಂದರು.

ಕೆಲಸ ಮಾಡಿದ್ದೇವೆ, ಫಲಾಫಲ ನೀಡುವುದು ಏನಿದ್ದರೂ ಪ್ರೇಕ್ಷಕರು ಎಂಬ ಮಾತು ಅವರ ಘನತೆಗೆ ಹಿಡಿದ ಕನ್ನಡಿ.

'100' ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಪತ್ರಿಕಾಗೋಷ್ಠಿಗೆ ರಚಿತಾರಾಮ್‌ ಬಂದಿರಲಿಲ್ಲ. ಪೂರ್ಣ ಇದ್ದರು. ತೆಲುಗು ನಟಿಯಾಗಿರುವ ಪೂರ್ಣ ಈಗ ಬಲಗಾಲಿಟ್ಟು ಕನ್ನಡಕ್ಕೆ ಬಂದಿದ್ದಾರೆ. ಅವರ ಕನ್ನಡ ಪ್ರೀತಿ ಮಾತಲ್ಲಿ ತಿಳಿಯುವಂತಿತ್ತು. ‘ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ತೃಪ್ತಿ ಇದೆ. ಈ ತಂಡವನ್ನು ನನ್ನ ಕುಟುಂಬ ಎನ್ನುವುದೇ ಹೆಚ್ಚು ಖುಷಿ’ ಎಂದರು ಪೂರ್ಣ.

ನಿರ್ಮಾಪಕ ರಮೇಶ್‌ ರೆಡ್ಡಿ, ‘ಮೊಬೈಲ್‌ನಿಂದ ಏನೇನು ಅನಾಹುತ ಆಗುತ್ತದೆ, ಮನೆ ಯಜಮಾನ ಕಷ್ಟಸಮಸ್ಯೆಯನ್ನು ಹೇಗೆ ನಿಭಾಯಿಸುತ್ತನೆ ಅನ್ನೋದು ಈ ಸಿನಿಮಾದಲ್ಲಿದೆ. ಸಿನಿಮಾ ಮುಗಿಯುವುದೇ ಗೊತ್ತಾಗುವುದಿಲ್ಲ. ಅಷ್ಟುವೇಗವಿದೆ. ಕುಟುಂಬ ಸಮೇತ ಸಿನೆಮಾ ನೋಡಿ’ ಎಂದರು.

ಮನೆಯೊಳಗೆ ನುಸುಳೋ ಸೈಬರ್‌ ಜಗತ್ತಿನ ಕತೆ ಹೇಳುವ '100'!

100ರಿಂದ 120 ಚಿತ್ರಮಂದಿರಗಳಲ್ಲಿ 100 ಸಿನಿಮಾ ರಿಲೀಸ್‌ ಆಗುತ್ತಿದೆ. ರಮೇಶ್‌ ಅರವಿಂದ್‌ ಮಾತಿನಲ್ಲಿ ನಂಬಿಕೆ ಹುಟ್ಟಿಸುವವರು. ಕೃತಿಯಲ್ಲಿ ಶ್ರದ್ಧೆ ಇರುವವರು. ಆ ನಂಬಿಕೆಯಲ್ಲಿ ಸಿನಿಮಾವನ್ನು ಎದುರುಗೊಳ್ಳಬಹುದು.

"