ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್ ಕುಮಾರಸ್ವಾಮಿ ರೈಡರ್ ಸಿನಿಮಾ ಚಿತ್ರೀಕರಣಕ್ಕೆ ತಂಡದ ಜೊತೆ ಲೇ ಲಡಾಕ್‌ ಕಡೆ ಪ್ರಯಾಣಿಸಿದ್ದಾರೆ. ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ಮಾಸ್ಕ್, ಫೇಸ್‌ ಶೀಲ್ಡ್‌ ಧರಿಸಿ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದ್ದಾರೆ. ಇನ್‌ಸ್ಟಾಗ್ರಾಂ ಖಾತೆ ಮೂಲಕ ಅಭಿಮಾನಿಗಳಿಗೆ ನಿಖಿಲ್ ಅಪ್ಡೇಟ್ ನೀಡುತ್ತಿದ್ದಾರೆ. 

Rx 100 ಬೈಕ್‌; ಪತ್ನಿ ರೇವತಿ ಜೊತೆ ನಿಖಿಲ್ ಕುಮಾರಸ್ವಾಮಿ ಜಾಲಿ ರೈಡ್ ವಿಡಿಯೋ! 

ಬ್ಯಾಗೇಜ್‌ ಕೌಂಟರ್‌ನಲ್ಲಿ ವೇಟ್ ಮಾಡುತ್ತಿರುವುದು, ವಿಮಾನದಿಂದ ಭೂಮಿ ಹೇಗೆ ಕಾಣಿಸುತ್ತದೆ ಎಂದು ಎಲ್ಲವನ್ನೂ ಶೇರ್ ಮಾಡಿಕೊಳ್ಳುತ್ತಿದ್ದ ನಿಖಿಲ್, ಈ ಒಂದು ಪೋಸ್ಟ್‌ನಿಂದ ಆದ ಎಡವಟ್ಟಿಗೆ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗುತ್ತಿದ್ದಾರೆ. 

ನಿಖಿಲ್ ಲೇನಲ್ಲಿ ವಾಸವಿರುವ ಮನೆಯ ಬಾಲ್ಕಾನಿಯಲ್ಲಿ ನಿಂತು ಹಿಮಾಲಯ ಪರ್ವತಗಳನ್ನು ವೀಕ್ಷಿಸುತ್ತಿರುವ ಫೋಟೋ ಶೇರ್ ಮಾಡಿಕೊಂಡು 'ರೈಡರ್ ಚಿತ್ರ ಚಿತ್ರಿಕರಣ ವೇಳೆ ಲೇ ಲಡಾಕನಲ ಕಂಡು ಬಂದಂತ ಅದ್ಭುತ ಮನಕಲಕುವಾ ದೃಶ್ಯ,' ಎಂದು ಬರೆದು ಕೊಂಡಿದ್ದಾರೆ. ಇದಕ್ಕೆ 'ಸ್ಟಾರ್ ಅದು ಮನಕುಲಕುವಾ ದೃಶ್ಯ ಅಲ್ಲ ಮನಮೋಹಕ ದೃಶ್ಯ', 'ಮನಕಲಕುವಂತೆ ಅಲ್ಲೇನೂ ಕಾಣ್ತಿಲ್ವಲ್ಲ?' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಅಭಿಮಾನಿಗಳ ಜೊತೆಗಿದ್ದ ನಿಖಿಲ್‌ನನ್ನು ಬಾಲ್ಕನಿಯಿಂದ ನೋಡಿ ನಾಚಿ ನೀರಾದ ಪತ್ನಿ! 

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮಾಡುವ ಸಣ್ಣ ಪುಟ್ಟ ತಪ್ಪುಗಳನ್ನು ಅಭಿಮಾನಿಗಳು ಗಮನಿಸಿ, ತಿದ್ದುತ್ತಾರೆ. ಕೆಲವೊಮ್ಮೆ ಟ್ರೋಲ್ ಮಾಡುತ್ತಾರೆ. ಈಗ ಅದೇ ಸಾಲಿಗೆ ನಿಖಿಲ್ ಕುಮಾರಸ್ವಾಮಿ ಸೇರಿರುವುದು ಆಶ್ಚರ್ಯ.  ವಿದೇಶದಲ್ಲಿ ಓದಿ ಬೆಳೆದರೂ, ನಿಖಿಲ್ ಮಾತೃಭಾಷೆ ಕನ್ನಡ, ತಂದೆ ತಾಯಿ ಅಪ್ಪಟ ಕನ್ನಡಿಗರು. ಇದೀಗ ಹೆಂಡತಿನೂ ಹೌದು. ಅಂದ್ಮೇಲೆ ಕನ್ನಡ ಹೇಗೆ ಮರೆಯುತ್ತಿದ್ದಾರೆ? ಎಂಬ ಅನುಮಾನ ನೆಟ್ಟಿಗರಲ್ಲಿ ಮೂಡಿದೆ.  ಪ್ರಕೃತಿ ಸೌಂದರ್ಯ ಸವಿಯುತ್ತಿರುವ ಫೋಟೋಗೆ ಮನಕಲಕುವ ಎನ್ನುವ ಪದ ಬಳಸಬಾರದು. ಅದು ದುರಂತ ನಡೆದರೆ ಮಾತ್ರ ಬಳಸಬೇಕು. ಈಗ ನೀವು ಮನಮೋಹಕವೆಂದು ಬದಲಾಯಿಸಿ ಎಂದು ಕೆಲವರು ತಪ್ಪನ್ನು ತಿದ್ದಿದ್ದಾರೆ.