Asianet Suvarna News Asianet Suvarna News

ಎಸ್‌ಪಿಬಿ ಧ್ವನಿ, ಸ್ವರ, ಆಲಾಪ, ಸಜ್ಜನಿಕೆ, ಬದುಕಿನ ಕ್ರಮ ಒಂದಿಡೀ ತಲೆಮಾರಿಗೇ ಮಾದರಿ:ಮಂಡ್ಯ ರಮೇಶ್‌

‘ರಮೇಶ್‌, ನೀವು ಎಸ್‌ಪಿಬಿ ಅವರ ಕಾರ್‌ ಡ್ರೈವರ್‌ ಆಗಿ ಆ್ಯಕ್ಟ್ ಮಾಡ್ಬೇಕು ಅಂತ ಸುಬ್ರಹ್ಮಣ್ಯ ಕರೆ ಮಾಡಿದರು. ಕಿವಿ ನಿಮಿರಿತು. ‘ಮಾಂಗಲ್ಯಂ ತಂತು ನಾನೇನಾ’ ಚಿತ್ರಕ್ಕೆ ಬಣ್ಣ ಹಚ್ಚಿ ಅವರ ಮುಂದೆ ನಿಂತಾಗ ಕಣ್ಣು ತೆರೆದೇ ನಿದ್ರಿಸುವ ದೃಶ್ಯ. ಅವರಿಗೆ ನಮಸ್ಕರಿಸಿ ನಿಂತೆ. ಪ್ರೀತಿಯಿಂದ ಮೈದಡವಿದರು. ವಿಶ್ವಾಸವೇ ಮೈದುಂಬಿ ಬಂದಂತೆ ಮಾತನಾಡಿಸುವುದು ಒಂದು ಸಹಜ ಕಲೆ. ಅದು ಅವರಲ್ಲಿ ತುಂಬಿತ್ತು. ಅದಕ್ಕಾಗಿಯೇ ಕನ್ನಡ ಜನಮಾನಸದಲ್ಲಿ ಕುವೆಂಪು, ರಾಜ್‌ಕುಮಾರ್‌ ನಂತರ ಅತಿ ಹೆಚ್ಚು ಹತ್ತಿರವಾದ ಕನ್ನಡಾಪ್ತ ವ್ಯಕ್ತಿತ್ವಗಳಲ್ಲಿ ಎಸ್‌.ಪಿ ಬಾಲಸುಬ್ರಹ್ಮಣ್ಯಂ ಅವರದ್ದು ಪ್ರಮುಖ ಸಾಲಿನ ಹೆಸರು.

Kannada actor Mandya ramesh pens down memories about sp balasubramaniam vcs
Author
Bangalore, First Published Sep 26, 2020, 1:44 PM IST

ಹಿರಿಯ ವಿದ್ವಾಂಸ, ನಿರ್ದೇಶಕ ಕೆ.ಎಸ್‌.ಎಲ್‌. ಸ್ವಾಮಿ ಅವರು, ರಮೇಶ್‌ ‘ಮಹಾ ಎಡಬಿಡಂಗಿ’ ಅಂತ ಎಸ್ಪಿಬಿ ಹಾಕ್ಕೊಂಡು ಪಿಕ್ಚರ್‌ ಮಾಡ್ತಿದ್ದೀನಿ ಪುಟ್ಟಪಾತ್ರ ಮಾಡ್ತೀರೇನ್ರಿ ಅಂದರು. ತಪ್ಪಿಸಿಕೊಳ್ಳಲು ನೋಡಿದೆ. ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರೇ ಪಿಬರೇ ರಾಮರಸಂ ಹಾಡುತ್ತಾರೆ. ನೀವು ಅವರ ಜೊತೆ ಇರ್ತೀರಿ. ಕುಡಿವ ಗೆಳೆಯರು ಅಂದರು. ಒಪ್ಪಿಕೊಂಡೆ. ಮೂರು ರಾತ್ರಿ ಚಿತ್ರೀಕರಣ. ಬೆಂಗಳೂರಿನಲ್ಲಿ. ಅವರ ಜೊತೆ ಮಾತನಾಡುವುದೊಂದು ಅನುಭಾವದ ಲೋಕ. ರಾಗ, ಸಂದರ್ಭ, ತಮಾಷೆ, ಆತ್ಮವಿಮರ್ಶೆ, ಚುಡಾಯಿಸುವುದು ಮನುಷ್ಯ ಸ್ವಭಾವಗಳ ಚಿಂತನೆ - ಚರ್ಚೆಗಳ ಮಹಾಮೇಳೈಕೆ.

"

ಶಾಸ್ತ್ರೀಯ ಸಂಗೀತ ಕಲಿತು, ಕಚೇರಿ ಕೊಡಬೇಕೆಂಬ ಎಸ್‌ಪಿಬಿಯವರ ಆಸೆ ಈಡೇರಲೇ ಇಲ್ಲ

Kannada actor Mandya ramesh pens down memories about sp balasubramaniam vcs

ಕನ್ನಡದ ಮಾಂತ್ರಿಕ

ಅವರ ಬದುಕಿನ ಅತಿ ದೊಡ್ಡ ಮೈಲಿಗಲ್ಲು ಎಂದರೆ ಲಕ್ಷಾಂತರ ಮಕ್ಕಳನ್ನು ಹಾಡಿನ ಭಾವಗಳಲ್ಲಿ, ರಾಗಗಳಲ್ಲಿ ಎದೆ ತುಂಬಿಸಿ ರಿಯಾಲಿಟಿ ಶೋಗೆ ಘನತೆ ತುಂಬಿದ್ದು. ದೌರ್ಬಲ್ಯಗಳಿಲ್ಲದ ಮನುಷ್ಯನಿಲ್ಲ! ಆದರೆ ಅದನ್ನೂ ಮೀರಿ, ಕನ್ನಡದ ಅಸ್ಮಿತೆಗೆ, ಭಾವಕ್ಕೆ, ಕನ್ನಡದ ತೊದಲುನುಡಿಗಳಲ್ಲಿ ಮಾತನಾಡುತ್ತಾ ಭಾಷೆಗೆ ಮೀರಿದ ಅಂತಃಕರಣ ತುಂಬಿ, ಹಾಡುವಾಗ ಮಾಂತ್ರಿಕನಂತೆ ಕನ್ನಡವನ್ನು ನಿಜದ ಅರ್ಥದಲ್ಲಿ ನುಡಿಸುತ್ತಿದ್ದವರು ಎಸ್‌ಪಿಬಿ. ಹಾಡಿದ ಪ್ರತಿ ಹಾಡು ಕ್ರಿಯಾಶೀಲವಾಗಿ, ಥಿಯೇಟ್ರಿಕಲ್‌ ಗುಣಗಳಿಂದ ಕೇಳುಗರ ಮೈ ರೋಮಾಂಚನಗೊಳಿಸಿದವು. ಈಗ ನಿಜದ ಅರ್ಥದಲ್ಲಿ ನಾಡು, ಕನ್ನಡದ ರಾಯಭಾರಿಯೊಬ್ಬರನ್ನು ಕಳೆದುಕೊಂಡಿದೆ.

ದೇವರು ನಮ್ಮೆಲ್ಲರ ಪ್ರಾರ್ಥನೆಗಳನ್ನು ವ್ಯರ್ಥ ಮಾಡಿದ: ಅನಂತ್ ನಾಗ್ 

ಎಸ್‌ಪಿಬಿ ಮಾಡಬೇಕಿದ್ದ ಪಾತ್ರ ನಾನು ಮಾಡಿದೆ

ಒಮ್ಮೆ ಪ್ರಕಾಶ್‌ ರೈ ಮತ್ತು ನಾನು ಒಗ್ಗರಣೆ ಸಿನಿಮಾ ಬಗ್ಗೆ ಮಾತನಾಡುತ್ತಿದ್ದೆವು. ಅಲ್ಲಿ ಬರುವ ಒಂದು ಉತ್ತಮ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳುವುದು ಎನ್ನುವ ಚರ್ಚೆ ಬಂದಾಗ ಪ್ರಕಾಶ್‌ ‘ಎಸ್‌ಪಿಬಿ’ ಎಂದರು. ನನಗೂ ತುಂಬಾ ಖುಷಿ ಆಯ್ತು. ಆ ಪಾತ್ರಕ್ಕೆ ಅವರೇ ಜೀವ ತುಂಬಲು ಸಾಧ್ಯ ಎಂದುಕೊಂಡೆ. ಆದರೆ ಶೂಟಿಂಗ್‌ ಹಿಂದಿನ ದಿನ ಪ್ರಕಾಶ್‌ ರೈ ಕರೆ ಮಾಡಿ ಎಸ್‌ಪಿಬಿ ಸಿಗುತ್ತಿಲ್ಲ, ಆ ಪಾತ್ರ ನೀವೇ ಮಾಡಿಬಿಡಿ ಎಂದರು. ನನಗೆ ಅರಗಿಸಿಕೊಳ್ಳಲು ಆಗಲೇ ಇಲ್ಲ. ಯಾಕೆಂದರೆ ಆ ಪಾತ್ರ ಮೈತುಂಬಿ ನಗುತ್ತಿದ್ದದ್ದು. ಆ ಶಕ್ತಿ ಎಸ್‌ಪಿಬಿಗೆ ಇತ್ತು. ಆದರೆ ಆ ಪಾತ್ರ ನಾನು ಮಾಡುವುದು ಎಂದರೆ ತುಂಬಾ ಸವಾಲಿನದ್ದು. ಆಗಲೂ ಅವರು ಮಾಡಬೇಕಿದ್ದ ಪಾತ್ರವನ್ನು ನಾನು ಮಾಡುತ್ತಿದ್ದೇನೆ ಎನ್ನುವ ಮುಜುಗರ ನನ್ನಲ್ಲಿ ತುಂಬಿತ್ತು.

ಎಸ್‌. ಜಾನಕಿ ಹುಡುಕಿದ ಪ್ರತಿಭೆ; ಆ ತಾಯಿಗೆ ಈಗ ಹೇಗಾಗಿರಬೇಕು? 

Kannada actor Mandya ramesh pens down memories about sp balasubramaniam vcs

ಅದಾದ ಮೇಲೆ ಅವರೊಮ್ಮೆ ಸಿಕ್ಕಾಗ ಈ ಬಗ್ಗೆ ಮುಜುಗರದಿಂದಲೇ ಹೇಳಿದೆ. ಆಗ ಅವರು ಹೇಳಿದ್ದು, ಅದೆಲ್ಲಾ ಋುಣ. ಯಾರು ಏನು ಮಾಡಬೇಕು, ಯಾರಿಗೆ ಏನು ಸಿಗಬೇಕು ಎನ್ನುವುದನ್ನೆಲ್ಲಾ ಮೊದಲೇ ಬರೆದಾಗಿರುತ್ತದೆ. ಅದನ್ನು ನಾವು ಚೆನ್ನಾಗಿ ಮಾಡಿದರೆ ಸಾಕು. ನೀವು ಆ ಪಾತ್ರವನ್ನು ಚೆನ್ನಾಗಿಯೇ ಮಾಡಿದ್ದೀರಿ ಎಂದು ಬೆನ್ನುತಟ್ಟಿದರು. ಅಷ್ಟುದೊಡ್ಡ ಗುಣ ಅವರದ್ದು. ಯಾವುದೇ ಭಾಷೆ, ಪ್ರಾಂತ್ಯ, ಗುಂಪಿಗೆ ಸಿಲುಕದೇ ವಿಶ್ವಮಾನವರಾದರು.

Kannada actor Mandya ramesh pens down memories about sp balasubramaniam vcs

"

ಒಂದೊಂದು ಹಾಡಿನಲ್ಲಿ ಒಂದೊಂದು ಜಗತ್ತಿನ ದರ್ಶನ

ರವಿಚಂದ್ರನ್‌ ಸಿನಿಮಾದ ಸುಂದರಿ ಸುಂದರಿ ಹಾಡು ಕೇಳಿದವರಿಗೂ, ಡಾ. ರಾಜ್‌ ಅಭಿನಯದ ಪವಡಿಸು ಪರಮಾತ್ಮ ಹಾಡು ಕೇಳಿದವರಿಗೂ ಇವೆರಡನ್ನೂ ಒಬ್ಬರೇ ಹಾಡಿದ್ದು ಎಂದರೆ ನಂಬಲು ಕಷ್ಟವಾಗುತ್ತದೆ. ಆದರೆ ಎಸ್‌ಪಿಬಿಗೆ ಅಂತಹುದೊಂದು ದೊಡ್ಡ ಶಕ್ತಿ ಇತ್ತು. ಯಾವುದೇ ರೀತಿಯ ಹಾಡನ್ನೂ ಅವರು ಹಾಡುತ್ತಿದ್ದರು. ಒಂದೊಂದು ಹಾಡಿನಲ್ಲೂ ಒಂದೊಂದು ಲೋಕವನ್ನು ತೋರಿಸುತ್ತಿದ್ದರು. ಎಲ್ಲರಿಗೂ ಜೀವನದಲ್ಲಿ ಒಂದು ರಾಷ್ಟ್ರ ಪ್ರಶಸ್ತಿ ಪಡೆದುಕೊಳ್ಳುವುದು ಜೀವಮಾನದ ಸಾಧನೆ. ಆದರೆ ಒಂದೇ ಜೀವನದಲ್ಲಿ ಆರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಮಹಾನ್‌ ವ್ಯಕ್ತಿ ಅವರು. ಆ ರೀತಿಯ ಬದುಕು ಎಲ್ಲರಿಗೂ ಸಿಕ್ಕುವುದಿಲ್ಲ. ಅವರದ್ದು ಅಪರೂಪದಲ್ಲಿ ಅಪರೂಪದ ಜನ್ಮ. ಕನ್ನಡದ ಬಗ್ಗೆ, ಕನ್ನಡಿಗರ ಬಗ್ಗೆ ಹೆಚ್ಚು ಒಲವು ಇಟ್ಟುಕೊಂಡಿದ್ದ ಅವರು ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ಕನ್ನಡ ಬೆಳೆಸಿದ ಪರಿ ಅನನ್ಯ. ಒಂದಿಡೀ ತಲೆಮಾರಿಗೆ ಅವರ ಧ್ವನಿ, ಸ್ವರ, ಆಲಾಪ, ಸಜ್ಜನಿಕೆ, ಬದುಕಿನ ಕ್ರಮ ಎಲ್ಲವೂ ಮಾದರಿ.

Follow Us:
Download App:
  • android
  • ios