Asianet Suvarna News Asianet Suvarna News

ದೇವರು ನಮ್ಮೆಲ್ಲರ ಪ್ರಾರ್ಥನೆಗಳನ್ನು ವ್ಯರ್ಥ ಮಾಡಿದ: ಅನಂತ್ ನಾಗ್

ಯಂಗ್‌ಸ್ಟರ್ಸ್‌ಗಳಿಗೆ ಬಹಳ ಉತ್ತೇಜನ ನೀಡುತ್ತಿದ್ದರು, ಕಮಾನ್, ಸಿಂಗಿಟ್, ಬರತ್ತೆ ಬರತ್ತೆ ಎಂದು ಹೇಳುತ್ತಾ ನಗುನಗುತ್ತಾ ಎಲ್ಲರನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಎಸ್‌ಪಿಬಿ| ಲೆಜೆಂಡ್ ಆಫ್ ಲೆಜೆಂಡ್ಸ್. ಅಂಥವರು ಮತ್ತೆ ಮತ್ತೆ ಬರುವುದಿಲ್ಲ. ಅಂಥಾ ಒಬ್ಬ ವ್ಯಕ್ತಿ ನನಗೆ ಧ್ವನಿ ಕೊಟ್ಟಿದ್ದು ಅಂದಾಗ ಗರ್ವ ಆಗುತ್ತದೆ. ಈಗ ಈ ಕ್ಷಣ ಏನಾಯ್ತಪ್ಪಾ ಅಂತ ನೆನೆದು ಬೇಸರವೂ ಆಗುತ್ತದೆ ಎಂದ ಅನಂತ್‌ ನಾಗ್‌| 

Anant Nag Talks Over S P Balasubrahmanyam
Author
Bengaluru, First Published Sep 26, 2020, 1:12 PM IST

ಬೆಂಗಳೂರು(ಸೆ.26): ನನ್ನ ಜೀವನದಲ್ಲಿ ಅವರ ಹಾಡುಗಾರಿಕೆ ಎಷ್ಟು ಹಾಸುಹೊಕ್ಕಾಗಿದೆ ಎಂದರೆ ನಾನು ಅವರ ಬಗ್ಗೆ ಮಾತನಾಡದೇ ಇರಲಾರೆ. ನನ್ನ ಮೊದಲ ಮೇನ್ ಸ್ಟ್ರೀಮ್ ಸಿನಿಮಾ ‘ದೇವರ ಕಣ್ಣು’. ಆ ಚಿತ್ರಕ್ಕೆ ನಾನು ಆಯ್ಕೆಯಾಗುವಾಗಲೇ ಆ ಸಿನಿಮಾದ ಹಾಡುಗಳು ರೆಕಾರ್ಡ್ ಆಗಿದ್ದವು. ಅದಕ್ಕೂ ಮೊದಲು ನಾನು ಜಿವಿ ಅಯ್ಯರ್ ಅವರ ಹಂಸಗೀತೆ ಚಿತ್ರದಲ್ಲಿ ನಟಿಸಿದ್ದೆ. ಆ ಸಿನಿಮಾದಲ್ಲಿ ಇದ್ದಿದ್ದೇ ಹಾಡುಗಳು. ಅದೂ ಶಾಸ್ತ್ರೀಯ ಸಂಗೀತ. ಹಾಡಿದವರು ಬಾಲಮುರಳೀಕೃಷ್ಣ. ರಂಗಭೂಮಿ ನಂಟಿನಿಂದ, ಈ ಸಿನಿಮಾದಿಂದ ಗಾಯನ ಕ್ಷೇತ್ರದಲ್ಲಿ ನನಗೂ ಅನುಭವ ಇತ್ತು. ಈ ಸಂದಭರ್ದಲ್ಲಿ ‘ದೇವರ ಕಣ್ಣು’ ಚಿತ್ರದ ಹಾಡು ಕೇಳಿದೆ. ನಿನ್ನ ನೀನು ಮರೆತರೇನು ಎಂಬ ಸೆಮಿ ಕ್ಲಾಸಿಕಲ್ ಹಾಡು. ಅದರಲ್ಲೂ ಒಂದು ಆಲಾಪನೆ ಬರುತ್ತದೆ. ಆ ಹಾಡನ್ನು ಎಷ್ಟು ಸೊಗಸಾಗಿ ಹಾಡಿದ್ದರು ಎಂದರೆ ಇವತ್ತಿಗೂ ರೇಡಿಯೋ ಹಾಕಿದರೆ ಆ ಹಾಡು ದಿನಕ್ಕೊಮ್ಮೆಯಾದರೂ ಪ್ರಸಾರವಾಗುತ್ತದೆ. ಆ ಸಿನಿಮಾ ಗೆದ್ದಿತು. ಅವರು ಹಾಡಿದ್ದ ಆ ಹಾಡು ಅದಕ್ಕಿಂತ ದೊಡ್ಡ ಸಕ್ಸೆಸ್ ಆಯಿತು. ಹಾಗೆ ನನಗೆ ಸಿಕ್ಕವರು ಎಸ್ಪಿ ಬಾಲಸುಬ್ರಹ್ಮಣ್ಯಂ ಎಂದು ಕನ್ನಡದ ಹಿರಿಯ ನಟ ಅನಂತ್‌ ನಾಗ್‌ ಅವರು ಎಸ್‌ಪಿಬಿ ಅವರ ನೆನಪುಗಳನ್ನ ಮೆಲುಕು ಹಾಕಿದ್ದಾರೆ. 

"

ನಂತರ ಅವರು ಸಿನಿಮಾದಲ್ಲಿ ನನ್ನ ನಟನೆಯನ್ನು ನೋಡಿ ಒಂದು ಜಾದೂ ಮಾಡಿದರು. He used to give an inflection to his voice, which is sounded exactly like my voice. ನನ್ನ ಧ್ವನಿಯ ಪಿಚ್ ಅನ್ನು ಹೇಗೋ ಕಂಡು ಹಿಡಿದು ಅದಕ್ಕೆ ಹೊಂದಿಕೊಳ್ಳುವಂತೆ ಅವರು ಹಾಡತೊಡಗಿದರು. ಎಷ್ಟು ಶ್ರದ್ಧೆಯಿಂದ ಹಾಡಿದರು ಎಂದರೆ ಕೇಳಿದವರು ಅರೆ ಅನಂತ್ ವಾಯ್ಸೇ ಇದು ಎನ್ನುವಂತಾಯಿತು. ಹಾಡಿದ್ದು ಅವರು, ಆದರೆ ಶ್ರೇಯ ನನಗೆ. ಹಾಗೆ ಹಾಡುತ್ತಾ ಹಾಡುತ್ತಾ ನನ್ನ ಎಷ್ಟೋ ಸಿನಿಮಾಗಳ ನಟನೆಯನ್ನು ಮೇಲಿನ ಹಂತಕ್ಕೆ ಎತ್ತಿಬಿಡುತ್ತಿದ್ದರು. ಅದೇ ಕಾರಣದಿಂದಲೇ ನನ್ನ ಚಿತ್ರಗಳ, ಪಾತ್ರಗಳ ಯಶಸ್ಸಿನಲ್ಲಿ ಅವರ ಪಾಲು ದೊಡ್ಡದು.

ತುಂಬಾ ಸ್ವೀಟ್ ಪರ್ಸನ್, ಪಾಸಿಟಿವ್ ಗುಣ ಹೊಂದಿದ್ದ ವ್ಯಕ್ತಿತ್ವ

‘ನಾನಿನ್ನ ಬಿಡಲಾರೆ’ ಚಿತ್ರದ ಗಾಯನ ಅವರದೇ. ಆ ಸಿನಿಮಾ ತೆಲುಗಿಗೆ ‘ಗಾಯತ್ರಿ’ ಎಂಬ ಹೆಸರಲ್ಲಿ ಡಬ್ ಆಗಿ ದೊಡ್ಡ ಮಟ್ಟದ ಯಶಸ್ಸು ಗಳಿಸಿತು. ಹಾಗಾಗಿ ‘ಪ್ರೇಮಲೇಖಲು’ ಎಂಬ ತೆಲುಗು ಚಿತ್ರದ ಅವಕಾಶ ಬಂತು. ನಾನು ನಟಿಸಲು ಹೈದರಾಬಾದ್ಗೆ ಹೋದೆ. ನಾನಿದ್ದ ಹೊಟೇಲಿನಲ್ಲಿಯೇ ಅವರೂ ಇದ್ದರು. ತೆಲುಗು ಸಿನಿಮಾದಲ್ಲೂ ಹಾಡಿಗೆ ನಾನೇ ನಿಮಗೆ ದ್ವನಿ ನೀಡುತ್ತಿದ್ದೇನೆ ಎಂದರು. ಅವರ ಪರಿಚಯ ಆಗಿದ್ದು ಹಾಗೆ. ತುಂಬಾ ಸ್ವೀಟ್ ಪರ್ಸನ್. ಪಾಸಿಟಿವ್ ಗುಣ ಹೊಂದಿದ್ದ ವ್ಯಕ್ತಿತ್ವ. ಆದರೆ ತುಂಬಾ ನಾಚಿಕೆ ಅವರಿಗೆ. ಎಂಥಾ ಹಾಡು ಹಾಡಿದ್ರಿ ಎಂದು ಹೊಗಳಿದರೆ ಅವರು ಮಗುವಿನಂತೆ ನಾಚಿಕೊಳ್ಳುತ್ತಿದ್ದರು.

ನಾನು ಐಸ್ ಕ್ರೀಂ ತಿನ್ತೀನಿ, ಅನುಕರಿಸಬೇಡಿ ಅಂತಿದ್ದರು: ಮಂಜುಳಾ ಗುರುರಾಜ್‌

ದಿನಕ್ಕೆ 25-30 ಹಾಡುಗಳನ್ನು ಹಾಡುತ್ತಿದ್ದ ಎಸ್‌ಪಿಬಿ

ಆಗ ಅವರು ಭಾರಿ ಬ್ಯುಸಿ ಮನುಷ್ಯ. ದಿನಕ್ಕೆ 25-30 ಹಾಡುಗಳನ್ನು ಹಾಡುತ್ತಿದ್ದರು. ಅವರಿಗಾಗಿ ಸಂಗೀತ ನಿರ್ದೇಶಕರು ಕಾಯುತ್ತಾ ಕೂತಿರುತ್ತಿದ್ದರು. ಬೆಂಗಳೂರು, ಹೈದರಾಬಾದ್, ಮುಂಬೈ ಹೀಗೆ ಎಲ್ಲೇ ಹೋದರೂ ಬ್ಯುಸಿ. ಹೈದರಾಬಾದಿನಲ್ಲಿದ್ದಾಗ ಒಂದು ದಿನ ನಾನು ಅವರ ಬಳಿ, ನಾಳೆ ಶೂಟಿಂಗ್ ಇಲ್ಲ ನಿಮ್ಮ ಜತೆ ಬರಬಹುದಾ ಎಂದು ಕೇಳಿದೆ. ಬರಬಹುದು, ಆದರೆ ನಾನು ಬ್ಯುಸಿ ಇರುತ್ತೇನೆ, ನೀವು ಅನ್ಯಥಾ ಭಾವಿಸಬಾರದು ಎಂದರು. ಅವರ ಜತೆ ನಾನು ಹೋದೆ.

ಸ್ಟುಡಿಯೋದಲ್ಲಿ ಎದುರಿಗೆ ಪಿಬಿ ಶ್ರೀನಿವಾಸ್ ಬರುತ್ತಿದ್ದರು. ಇವರು ನನ್ನ ಬಳಿ, ಎಷ್ಟು ವಯಸ್ಸು ನಿನಗೆ ಎಂದು ಕೇಳಿದರು. ನಾನು ಹೇಳಿದೆ. ನಿನಗಿಂತ ಎರಡು ವರ್ಷ ದೊಡ್ಡವನು. ನಾನು ಹೇಳಿದ ಹಾಗೆ ಕೇಳಬೇಕು ಎಂದು ಎಳೆದುಕೊಂಡು ಹೋದರು. ಪಿಬಿ ಶ್ರೀನಿವಾಸ್ ಹತ್ತಿರ ಬಂದಾಗ ಕಾಲಿಗೆ ಬಿದ್ದು ನಮಸ್ಕಾರ ಮಾಡಿದರು. ನನಗೂ ನಮಸ್ಕಾರ ಮಾಡಿಸಿದರು. ಅಂಥಾ ನಮ್ರತೆ ಅವರದು. ಸದ್ಗುಣದ ಜತೆ ವಿನಮ್ರತೆ. ಇತ್ತೀಚೆಗೆ ಅವರದೊಂದು ಫೋಟೋ ನೋಡಿದೆ. ಯೇಸುದಾಸ್ ಇದ್ದಲ್ಲಿಗೆ ಹೋಗಿ ಅವರನ್ನು ಕೂರಿಸಿಕೊಂಡು ಪಾದಪೂಜೆ ಮಾಡಿದ್ದಾರೆ. ದೊಡ್ಡ ಮನಸ್ಸು. ದೊಡ್ಡ ವ್ಯಕ್ತಿತ್ವ.

ನನ್ನ ಅವರ ಒಡನಾಟ ಚೆನ್ನಾಗಿತ್ತು. ನನ್ನನ್ನು ಅವರ ರಸಮಂಜರಿ ಕಾರ್ಯಕ್ರಮಗಳಿಗೆ ಕರೆಯುತ್ತಿದ್ದರು. ನಾನು ನಾಲ್ಕೈದು ಕಾರ್ಯಕ್ರಮಗಳಿಗೆ ಹೋಗಿದ್ದೆ. ಒಮ್ಮೆ ಮಂಗಳೂರಿನಲ್ಲಿ ಕಾರ್ಯಕ್ರಮ ಇತ್ತು. ಒಂದು ಹಂತದಲ್ಲಿ ಇದ್ದಕ್ಕಿದ್ದಂತೆ ಈಗ ನಿಮಗಾಗಿ ಅನಂತ್ ನಾಗ್ ಒಂದು ಹಾಡು ಹಾಡುತ್ತಾರೆ ಎಂದು ಘೋಷಿಸಿದರು. 

ರವಿ ಬೆಳಗೆರೆ ಪ್ರೇಮ ಪತ್ರದಲ್ಲಿ ಎಸ್‌ಪಿಬಿ ಸಾಲು..!

ನನ್ನ ವಾಯ್ಸ್ ಅವರು, ನನ್ನ ಸಿನಿಮಾಗೆ ಹಾಡಿದ್ದೆಲ್ಲಾ ಅವರೇ. ಆ ಹಾಡುಗಳನ್ನೇ ನಾನು ಹೇಗೆ ಹಾಡಲಿ.. ನಾನು ಬೇರೆಯೇ ಹಾಡು ಹಾಡುತ್ತೇನೆ ಎಂದು ಭೀಮಸೇನ ಜೋಶಿಯವರ ‘ಭಾಗ್ಯದ ಲಕ್ಷ್ಮೀ ಹಾಡು ಹಾಡಿಬಿಟ್ಟೆ. ನನ್ನ ಹಾಡು ಹಾಡುವುದಿಲ್ಲ ಎಂದು ಹೇಳಿ ಭೀಮಸೇನ ಜೋಶಿಯವರು ಹಾಡು ಹಾಡಬಹುದಾ ಎಂದು ತಮಾಷೆ ಮಾಡಿದ್ದರು. 

ನನ್ನ ಸಿನಿಮಾಗಳಲ್ಲಿ ಬೇರೆ ಬೇರೆ ಥರದ ಹಾಡುಗಳನ್ನು ಹಾಡಿದ್ದಾರೆ. ಬಾಡದ ಹೂವು ಚಿತ್ರದಲ್ಲಿ ಕವಾಲಿ ಸ್ಟೈಲ್‌ನಲ್ಲಿ ಹಾಡಿ ಸೂಪರ್ಹಿಟ್ ಮಾಡಿದ್ದರು. ಬಯಲುದಾರಿ, ನಾನಿನ್ನ ಬಿಡಲಾರೆ, ಚಂದನದ ಗೊಂಬೆ, ಬೆಂಕಿಯ ಬಲೆ, ಬಿಡುಗಡೆಯ ಬೇಡಿ ಹೀಗೆ ನನ್ನ ಎಪ್ಪತ್ತೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ನೂರಕ್ಕೂ ಹೆಚ್ಚು ಹಾಡು ಹಾಡಿದ್ದಾರೆ. ಅನೇಕರ ಸಿನಿಮಾಗಳಲ್ಲಿ ಅವರು ಹಾಡಿದ್ದಾರೆ. ಆದರೆ ನನಗೆ ಜಾಸ್ತಿ ಹಾಡು ಹಾಡಿದ್ದಾರೆ. ಅದು ನನ್ನ ಭಾಗ್ಯ.

ಈ ಕ್ಷಣ ಒಂದು ಘಟನೆ ನೆನಪಾಗುತ್ತದೆ. ‘ನನ್ನ ದೇವರು’ ಎಂಬ ಸಿನಿಮಾ. ನಿರ್ಮಾಪಕರು ಹೊಸಬರು. ಆ ಚಿತ್ರಕ್ಕಾಗಿ ಎಸ್ಪಿಬಿ ಮೂರು ಹಾಡುಗಳನ್ನು ಹಾಡಿದ್ದರು. ಇನ್ನೊಂದು ಸಣ್ಣ ಕಂದ ಪದ್ಯ ಇತ್ತು. ನಿರ್ಮಾಪಕರು ಇವರ ಬಳಿ ಬಂದು ಸರ್, ಇನ್ನೊಂದು ಸಣ್ಣ ಹಾಡಬಹುದಾ ಎಂದು ಕೇಳಿದರು. ಅದಕ್ಕೆ ಇವರು, ಮೂರು ಹಾಡು ಹಾಡಿದ್ದೇನಂತೆ. ಇನ್ನೊಂದು ಜಾಸ್ತಿಯಾಗತ್ತ ಎಂದರು. ಅದಕ್ಕೆ ಅವರು, ಮೂರು ಹಾಡಿಗೆ ಸಂಭಾವನೆ ಕೊಟಿದ್ದೇನೆ. ಈ ಹಾಡನ್ನು ದಯವಿಟ್ಟು ಹಾಗೇ ಹಾಡಬೇಕು ಎಂದು ಕೇಳಿಕೊಂಡರು. ಆಗ ಎಸ್ಪಿಬಿ, ಛೇ ಛೇ ಡೋಂಟ್ವರಿ ಹಾಡುತ್ತೇನೆ ಎಂದರು

ಆ ಸಿನಿಮಾದಲ್ಲಿ ನಾಟಕದ ದೃಶ್ಯ ಬರುತ್ತದೆ. ನನ್ನದು ಸತ್ಯ ಹರಿಶ್ಚಂದ್ರನ ಪಾತ್ರ. ಚಂದ್ರಮತಿಯನ್ನು ಕೊಲ್ಲಬೇಕಾಗಿ ಬಂದಾಗ ಬರುವ ಹಾಡು. 

ಕನಸಿನೊಳು ನನಸಿನೊಳು
ಮಾತು ಮತಿ ಮನಸಿನೊಳ್
ಇನಿತಾದೊಡೆಂ ಹುಸಿಯು ಇರದಿರ್ದೊಡೆ
ಎಂದು ಶುರುವಾಗುವ ಹಾಡು ಹೀಗೆ ಮುಂದುವರಿಯುತ್ತದೆ...
ದೈವಕ್ಕೆ ಧರ್ಮಕ್ಕೆ ನ್ಯಾಯಕ್ಕೆ ತಲೆಬಾಗಿ 
ಪ್ರಜೆಗಳನು ಸುತರಂತೆ ಸಲಹಿರ್ದೊಡೆ
ಸತ್ಯವೇ ಶಿವನೆಂದು
ಶಿವನೇ ಸತ್ಯವು ಎಂದು
ಮನಸಾರೆ ನಂಬಿ ನಾ ನಡೆದಿರ್ದೊಡೆ
ಈ ವಧೆಯು ಶಿವನಿಗೆ ಪ್ರಿಯವಾಗಲಿ
ಸತ್ಯವೇ ಲೋಕದಲ್ಲಿ ಸ್ಥಿರವಾಗಲಿ

ಎಂದು ಅವರು ಹಾಡಿದ ಆ ಹಾಡು ಆ ಸಿನಿಮಾದ ಹೈಲೈಟ್ ಆಗಿಹೋಯಿತು. ಆ ಕಂದಪದ್ಯ ನನ್ನ ಪಾತ್ರವನ್ನು ಅಷ್ಟೆತ್ತರಕ್ಕೆ ತೆಗೆದುಕೊಂಡು ಹೋಯಿತು. ಎಷ್ಟು ಜನ ಸತ್ಯ ಹರಿಶ್ಚಂದ್ರ ಪಾತ್ರದಲ್ಲಿ ನಟಿಸಿಲ್ಲ ಹೇಳಿ, ಅವರ ಧ್ವನಿಯಿಂದ ನನ್ನ ಪಾತ್ರ ಹಾಗೇ ಉಳಿದುಹೋಯಿತು.

ಶಾಸ್ತ್ರೀಯ ಸಂಗೀತ ಕಲಿಯದೆ ಹಿನ್ನೆಲೆ ಗಾಯನದಲ್ಲಿ ಯಶಸ್ಸುಸಾಧಿಸಿದ ಗಾನ ಗಂಧರ್ವ ಎಸ್‌ಪಿಬಿ

ಅವರ ಹಾಡಿನ ಶ್ರೇಷ್ಠತೆ ಅರಿವು ಮಾಡಿಸಿದ ಮತ್ತೊಂದು ಸಿನಿಮಾ ಶಂಕರಾಭರಣಮ್. ಹಂಸಗೀತೆಯಿಂದ ಸ್ಫೂರ್ತಿ ಪಡೆದು ಮಾಡಿದ ಸಿನಿಮಾ ಅದು. ಆರಂಭದಲ್ಲಿ ಆ ಸಿನಿಮಾದಲ್ಲಿ ಕ್ಲಾಸಿಕಲ್ ಹಾಡುಗಳೇ ಇವೆ, ನನ್ನ ಕೈಯಲ್ಲಿ ಕ್ಲಾಸಿಕಲ್ ಆಗಲಿಕ್ಕಿಲ್ಲ ಎಂದು ಹೇಳಿದ್ದರಂತೆ ಎಸ್ಪಿಬಿ. ಆಗ ಸಂಗೀತ ನಿರ್ದೇಶಕ ಅವರ ತಂದೆಗೆ ಹೋಗಿ ಹೇಳಿದ್ದಾರೆ. ತಂದೆಯವರು, ಹಾಡಲ್ಲ ಅಂದ್ನಾ ಅವನು, ಹೆಂಗೆ ಹಾಡಲ್ಲ ನಾನೂ ನೋಡ್ತೀನಿ ಎಂದು ಕೋಪದಿಂದ ಹೇಳಿದ್ದಾರೆ. ಸಂಗೀತ ನಿರ್ದೇಶಕ ಅದೇ ಮಾತನ್ನು ಬಂದು ಎಸ್ಪಿಬಿಯವರಿಗೆ ಹೇಳಿದ ಮೇಲೆ, ‘ತಂದೆಯವರು ಹಾಗೆ ಹೇಳಿದರೆ ನಾನು ಹಾಡಲೇಬೇಕು, ಸ್ವಲ್ಪ ಸಮಯ ಕೊಡಿ’ ಎಂದು ರಿಹರ್ಸಲ್ ಮಾಡಿ ಆಮೇಲೆ ಹಾಡಿದರು. ಅವರ ಧ್ವನಿಯೇ ಆ ಸಿನಿಮಾವನ್ನು ಎತ್ತಿತು. ನನಗೆ ‘ಹಂಸಗೀತೆ’ ಸಿನಿಮಾ ಹಾಡುಗಳಲ್ಲಿ ಬಾಲಮುರಳಿಕೃಷ್ಣ, ನಾರದ ವಿಜಯದಲ್ಲಿ ನಾರದನ ಪಾತ್ರಕ್ಕೆ ಯೇಸುದಾಸ್, ಎರಡು ಸಿನಿಮಾದಲ್ಲಿ ಭೀಮಸೇನ ಜೋಶಿ ಧ್ವನಿ ನೀಡಿದ್ದಾರೆ. ಆದರೆ ನನ್ನದೇ ವಾಯ್ಸ್ ಪ್ರೊಡ್ಯೂಸ್ ಮಾಡಿ ಹಾಡಿದವರು ಎಸ್ಪಿಬಿ.

ಯಂಗ್‌ಸ್ಟರ್ಸ್‌ಗಳಿಗೆ ಬಹಳ ಉತ್ತೇಜನ ನೀಡುತ್ತಿದ್ದ ಗಾನ ಗಾರುಡಿಗ

ಅವರು ಎಷ್ಟು ಹಂಬಲ್ ವ್ಯಕ್ತಿ ಎಂದರೆ ಈಟಿವಿಗಾಗಿ ‘ಎದೆ ತುಂಬಿ ಹಾಡಿದೆನು’ ಕಾರ್ಯಕ್ರಮ ಮಾಡಿದಾಗ ಅಲ್ಲಿ ಯಂಗ್‌ಸ್ಟರ್ಸ್‌ಗಳಿಗೆ ಬಹಳ ಉತ್ತೇಜನ ನೀಡುತ್ತಿದ್ದರು. ಕಮಾನ್, ಸಿಂಗಿಟ್, ಬರತ್ತೆ ಬರತ್ತೆ ಎಂದು ಹೇಳುತ್ತಾ ನಗುನಗುತ್ತಾ ಎಲ್ಲರನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅಂಥಾ ವ್ಯಕ್ತಿ ಅವರು. ಲೆಜೆಂಡ್ ಆಫ್ ಲೆಜೆಂಡ್ಸ್. ಅಂಥವರು ಮತ್ತೆ ಮತ್ತೆ ಬರುವುದಿಲ್ಲ. ಅಂಥಾ ಒಬ್ಬ ವ್ಯಕ್ತಿ ನನಗೆ ಧ್ವನಿ ಕೊಟ್ಟಿದ್ದು ಅಂದಾಗ ಗರ್ವ ಆಗುತ್ತದೆ. ಈಗ ಈ ಕ್ಷಣ ಏನಾಯ್ತಪ್ಪಾ ಅಂತ ನೆನೆದು ಬೇಸರವೂ ಆಗುತ್ತದೆ.   

ನಾನು ‘ನಾನೇನೂ ಮಾಡಿಲ್ಲ’ ಸಿನಿಮಾದಲ್ಲಿ ನಟಿಸಿದ ನಂತರ ಇನ್ನುಮುಂದೆ ಪವರ್ಫುಲ್ ಪಾತ್ರ ಇದ್ದರೆ ಮಾತ್ರ ಮಾಡುತ್ತೇನೆ ಎಂದು ನಿರ್ಧಾರ ಮಾಡಿದ ನಂತರವೇ ಅವರು ನನಗಾಗಿ ಹಾಡುವುದು ನಿಂತು ಹೋಗಿದ್ದು. ಅನಂತರವೂ ಅಲ್ಲಿ ಇಲ್ಲಿ ನಮ್ಮ ಭೇಟಿ ಆಗುತ್ತಿತ್ತು. 

ಒಂದು ಸಲ ಅವರು ನನಗೆ ಅಚ್ಚರಿ ಎಂಬಂತೆ ಫೋನ್ ಮಾಡಿದ್ದರು. ‘ನನ್ನ ಮಗ ಒಂದು ಸಿನಿಮಾ ನಿರ್ಮಾಣ ಮಾಡಬೇಕು ಎಂದುಕೊಂಡಿದ್ದಾನೆ. ಈ ಬಗ್ಗೆ ಮತ್ತೆ ಮಾತನಾಡುತ್ತೇನೆ, ಮತ್ತೆ ಸಿಗುತ್ತೇನೆ’ ಎಂದಿದ್ದರು. ಅವರನ್ನು ಭೇಟಿ ಮಾಡುವ ಅವಕಾಶ ಮತ್ತೆ ಸಿಗುತ್ತದೆ ಎಂದು ಖುಷಿಯಾಗಿದ್ದೆ. ಆದರೆ ಆ ಅವಕಾಶ ನನಗೆ ಸಿಗಲಿಲ್ಲ. ದೇವರು ನಮ್ಮ ಎಲ್ಲರ ಪ್ರಾರ್ಥನೆಗಳನ್ನು ವ್ಯರ್ಥ ಮಾಡಿದ ಎಂದು ಅನಂತ್‌ ನಾಗ್‌ ಅವರು ಹೇಳಿದ್ದಾರೆ.
 

Follow Us:
Download App:
  • android
  • ios