ಶಾಸ್ತ್ರೀಯ ಸಂಗೀತ ಕಲಿತು, ಕಚೇರಿ ಕೊಡಬೇಕೆಂಬ ಎಸ್‌ಪಿಬಿಯವರ ಆಸೆ ಈಡೇರಲೇ ಇಲ್ಲ

ಎಷ್ಟೊಂದು ಹಾಡುಗಳು, ಎಷ್ಟೊಂದು ಪ್ರೌಢಿಮೆ, ಯಾವ ಥರದ ಹಾಡುಗಳನ್ನಾದರೂ ಲೀಲಾಜಾಲವಾಗಿ, ಭಾವಕ್ಕೆ ತಕ್ಕಂತೆ ಹಾಡಬಲ್ಲ ಗರಿಮೆ, ಆ ದನಿಯ ಮಾಧುರ್ಯ, ವಾಯ್ಸ್ ಮಾಡುಲ್ಯೇಶನ್‌, ಎಲ್ಲ ಭಾಷೆಗಳ ಭಾವದ ಮೇಲೆ ಹಿಡಿತ- ಇವೆಲ್ಲ ನೋಡಿ ಎಸ್‌ಪಿಬಿ ಅವರೊಬ್ಬ ಶ್ರೇಷ್ಠ ಗಾಯಕ ಅನ್ನುವ ತೀರ್ಮಾನವನ್ನು ಮನಸ್ಸು ಮಾಡೇಬಿಟ್ಟಿತು.

SP Balasubrahmanyam last Desire was Learn Classical music

ಎಸ್‌ಪಿಬಿ ಅಂದಾಕ್ಷಣ ಮೊದಲ ನೆನಪು ಯಾವುದು ಅಂದರೆ ಕಾಲೇಜಲ್ಲಿ ಓದುವಾಗ ‘ಒಂದೇ ಉಸಿರಂತೆ ಇನ್ನು ನಾನು ನೀನು’ ಅಂತ ಹಾಡಿ ಪ್ರೈಜ್‌ ಪಡೆದಿದ್ದು. ಉಸಿರುಕಟ್ಟಿಹಾಡೋ ಆ ಹಾಡನ್ನು ಎಸ್‌ಪಿಬಿ ಹಾಡಿದ್ದು ಅಂತ ಅಂದುಕೊಂಡರೆ ಅದು ರಾಜೇಶ್‌ ಕೃಷ್ಣನ್‌ ಹಾಡಿದ್ದು ಅಂತ ಆಮೇಲೆ ಗೊತ್ತಾಯ್ತು. ಹಾಗೇ ‘ಈ ಸುಂದರ ಬೆಳದಿಂಗಳ’ ಹಾಡನ್ನು ಕೇಳಿದಾಗ ಚಿತ್ರಾ ಅವರ ಗಾಯನದ ಮುಂದೆ ಎಸ್‌ಪಿಬಿ ಸ್ವಲ್ಪ ಸಪ್ಪೆ ಅನ್ನಿಸಿತ್ತು.

ಅದರ ಮಧ್ಯೆ ‘ನೀನು ನೀನೇ ಇಲ್ಲಿ ನಾನು ನಾನೇ’ ಹಾಡು ಕೇಳಿ, ಶಾಸ್ತ್ರೀಯವಾಗಬೇಕಾಗಿದ್ದ ಹಾಡನ್ನು ಯಾಕೋ ಗಾಯಕರು ಸೋಲಿಸಿಬಿಟ್ಟರು ಅಂತ ನಿರಾಶೆಯಾಗಿತ್ತು. ಈ ನಡುವೆ ಎಸ್‌ಪಿಬಿ ಅವರು ಆಯಾ ನಟರ ದನಿಗೆ ತಕ್ಕಂತೆ ತಮ್ಮ ದನಿಯನ್ನು ಬದಲಾಯಿಸಿಕೊಂಡು ಹಾಡುತ್ತಾರಂತೆ ಅಂತ ಯಾರೋ ಹೇಳಿದಾಗ, ಅರೆ ಹಾಗೆ ಹಾಡಿದರೆ ಸ್ವಂತಿಕೆ ಎಲ್ಲಿ ಇರುತ್ತದೆ ಅಂತ ಮೂಗು ಮುರಿದಿದ್ದೂ ಆಗಿತ್ತು.

"

ಹೀಗೆ ಒಂಥರ ಮೊದಲ ಕೇಳುವಿಕೆಗೆ ಇಷ್ಟವೇ ಆಗದ ಎಸ್‌ಪಿಬಿ, ಕ್ರಮೇಣ ಆರಾಧ್ಯ ದೈವವೇ ಆಗುತ್ತಾ ಹೋದರು. ಎಷ್ಟೊಂದು ಹಾಡುಗಳು, ಎಷ್ಟೊಂದು ಪ್ರೌಢಿಮೆ, ಯಾವ ಥರದ ಹಾಡುಗಳನ್ನಾದರೂ ಲೀಲಾಜಾಲವಾಗಿ, ಭಾವಕ್ಕೆ ತಕ್ಕಂತೆ ಹಾಡಬಲ್ಲ ಗರಿಮೆ, ಆ ದನಿಯ ಮಾಧುರ್ಯ, ವಾಯ್‌್ಸ ಮಾಡುಲ್ಯೇಶನ್‌, ಎಲ್ಲ ಭಾಷೆಗಳ ಭಾವದ ಮೇಲೆ ಹಿಡಿತ- ಇವೆಲ್ಲ ನೋಡಿ ಎಸ್‌ಪಿಬಿ ಅವರೊಬ್ಬ ಶ್ರೇಷ್ಠ ಗಾಯಕ ಅನ್ನುವ ತೀರ್ಮಾನವನ್ನು ಮನಸ್ಸು ಮಾಡೇಬಿಟ್ಟಿತು.

ಶಿರಸಿ: ಮಾರಿಕಾಂಬಾ ದೇವಿ ಮೂರ್ತಿ ತಲೆಯ ಮೇಲೆ ಎತ್ತಿ ಹಿಡಿದು ಗೌರವಿಸಿದ್ದ ಎಸ್‌ಪಿಬಿ

ಪಿ.ಬಿ. ಶ್ರೀನಿವಾಸ್‌ ಅವರಂತೆ ಎಸ್‌ಪಿಬಿ ಅವರನ್ನು ಪರಿಗಣಿಸಲು ಆಗುತ್ತಿರಲಿಲ್ಲ. ಯಾಕೆ ಅಂತ ಯೋಚನೆ ಮಾಡಿದರೆ- ಉಳಿದವರೆಲ್ಲ ಶಾಸ್ತ್ರೀಯವಾಗಿ ಕಲಿತು ಸಿನಿಮಾ ಸಂಗೀತಕ್ಕೆ ಬಂದವರು. ಆದರೆ ಎಸ್‌ಪಿಬಿ ಕಾಡಲ್ಲಿ ಹಾಡುವ ಹಕ್ಕಿಯಂತೆ, ಅದರ ಸಹಜ ಇಂಪೇ ಇಂಪು. ಹಾಗಾಗಿ ಅವರಲ್ಲಿ ತಪ್ಪು ಕಂಡು ಹಿಡಿಯುವುದೇ ನಮಗೆಲ್ಲ ಒಂಥರ ಕೆಲಸ ಆದಂತೆ, ಅವರನ್ನು ಡಿಸ್‌ಪ್ರೂವ್‌ ಮಾಡುವುದಕ್ಕೇ ಹೊರಡುತ್ತಿದ್ದೆವು. ಎಸ್‌. ಜಾನಕಿ ಅವರೂ ಶಾಸ್ತ್ರೀಯ ಸಂಗೀತ ಕಲಿಯದವರಾಗಿದ್ದರೂ ಅವರೆಲ್ಲ ಆಗಲೇ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದವರೂ ತಪ್ಪುವಂಥ ಗಗನವು ಎಲ್ಲೋ, ಶಿವಶಿವ ಎನ್ನದ, ಆಚಾರವಿಲ್ಲದ ನಾಲಿಗೆ ಥರದ ಹಾಡುಗಳನ್ನು ಹಾಡಿ ಎಲ್ಲರನ್ನೂ ಬಾಯ್ಮುಚ್ಚಿಸಿದ್ದರು. ಆದರೆ ಎಸ್‌ಪಿಬಿ ಅವರು ಶಾಸ್ತ್ರೀಯವಲ್ಲದ, ಡ್ಯುಯೆಟ್‌ಗಳಲ್ಲೇ ತಮ್ಮನ್ನು ತಾವು ಪ್ರೂವ್‌ ಮಾಡಬೇಕಾಗಿತ್ತಲ್ಲ, ಅದೇ ಅವರಿಗೆ ಅವರೇ ಸವಾಲಾಗಿ ಸ್ವೀಕರಿಸಿಕೊಂಡು ಬೆಳೆಯುತ್ತಾ ಹೋಗಬೇಕಾಗಿತ್ತು. ಆದರೆ ಎಸ್‌ಪಿಬಿ ನಿಜ ಅರ್ಥದಲ್ಲಿ ಲೆಜೆಂಡ್‌, ಅವರು ದನಿಯನ್ನು ಬದಲಿಸಿ ಹಾಡಿದರು, ಶಾಸ್ತ್ರೀಯ ಹಾಡನ್ನೂ ಹಾಡಿದರು, ಜಿ.ಕೆ. ವೆಂಕಟೇಶ್‌, ಇಳಯರಾಜ, ರೆಹಮಾನ್‌ ಥರದ ಲೆಜೆಂಡ್ರಿ ಕ್ಲಾಸಿಕಲಿ ಸ್ಟ್ರಾಂಗ್‌ ಇದ್ದಂಥ ಸಂಗೀತ ನಿರ್ದೇಶಕರು ಕರೆದು ಹಾಡಿಸುವವರಾಗಿ ಬೆಳೆದು ನಿಂತರು.

ಹಾಗಾಗಿ ಎಸ್‌ಪಿಬಿ ಎಂದರೆ ರಾಧಿಕೆ ನಿನ್ನ ಸರಸವಿದೇಕೋ, ಎಸ್ಪಿಬಿ ಎಂದರೆ ಏನೇ ಕೇಳು ಕೊಡುವೆ ನಿನಗೆ ನಾನೀಗ, ಎಸ್‌ಪಿಬಿ ಎಂದರೆ ಗಾನ ವಿದ್ಯ ಬಡಿ ಕಠಿಣ್‌ ಹೈ, ಎಸ್‌ಪಿಬಿ ಎಂದರೆ ತರಿಕೆರೆ ಏರಿಮೇಲೆ ಮೂರು ಕರಿ ಕುರಿಮರಿ, ಎಸ್‌ಪಿಬಿ ಎಂದರೆ ತಾಳಿ ಕಟ್ಟುವ ಶುಭವೇಳೆ. ಎಂಥ ಹಾಡನ್ನೇ ಕೊಡಿ, ಅದನ್ನು ನನ್ನದು ಮಾಡಿಕೊಳ್ಳುತ್ತೇನೆ ಅಂತ ಹಠ ತೊಟ್ಟವರಂತೆ ಎಲ್ಲ ಥರದ ಹಾಡುಗಳನ್ನೂ ಆ ಹಾಡಿಗೂ ಮೀರಿ ಹಾಡಿ, ಗೆಲ್ಲಿಸಿಬಿಟ್ಟರು.

ನಾಚಿ ಓಡಿದನು ಮದನ, ನನ್ನ ಫೇವರಿಟ್‌ ಹಾಡು. ಆ ಹಾಡನ್ನು ಅದೆಷ್ಟುಸಲ ಕೇಳಿದ್ದೇನೋ. ಪ್ರತಿ ಸಲ ಕೇಳಿದಾಗಲೂ ಅವರು ಶಾಸ್ತ್ರೀಯ ಸಂಗೀತ ಕಲಿತವರನ್ನೂ ಯಾಮಾರಿಸುತ್ತಾರೆ. ನೋಟದಿ ಎಸೆಯುತ ಹೂವಿನ ಬಾಣ ಅನ್ನುವ ಸಾಲೊಂದರಲ್ಲಿ ರಾಗಭೇದ ಇದೆ, ಅದನ್ನು ಅವರು ಅದೆಷ್ಟುಲೀಲಾಜಾಲವಾಗಿ ಹಾಡುತ್ತಾರೆಂದರೆ ಒಂದು ಕ್ಷಣ ಭಲೇ ಎನ್ನಲೇಬೇಕು. ಹಾಗೇ ಅವರ ತಮಿಳಿನ, ತೆಲುಗಿನ ಗೀತೆಗಳೂ ಸವಾಲಿನದೇ. ಅವರಿಗೊಂಥರ, ಅವರ ದನಿಗೊಂದು ಥರ ಎಲ್ಲ ಹಾಡುಗಳೂ ಚಾಲೆಂಜೇ. ಚಾಲೆಂಜು ತೆಗೆದುಕೊಳ್ಳುವುದು ಅವರಿಗಿಷ್ಟ. ಆದರೆ ಅವರಿಗೆ ಶಾಸ್ತ್ರೀಯ ಸಂಗೀತವನ್ನು ಕಲಿತು, ಹಾಡಬೇಕೆಂಬ, ಕಚೇರಿ ಕೊಡಬೇಕೆಂಬ ತುಂಬ ಆಸೆ ಇತ್ತು. ಆದರೆ ಆಗಲೇ ಇಲ್ಲ, ಅದೊಂದು ಚಾಲೆಂಜನ್ನು ಅವರು ಯಾಕೆ ಸ್ವೀಕರಿಸದೇ ಬಿಟ್ಟರೋ?

ಅದ್ಭುತ ಮಿಮಿಕ್ರಿ ಪಟು: ಹಾಡಿದ ಅಷ್ಟೂ ಹಾಡಿನ ಕ್ಯಾಸೆಟ್ ಇಟ್ಕೊಂಡಿದ್ರು ಎಸ್‌ಪಿಬಿ

ಎಸ್‌ಪಿಬಿ ಅವರನ್ನು ಒಂದು ಸಲ ಭೇಟಿ ಮಾಡಿ, ಅವರನ್ನು ಸಂದರ್ಶಿಸಬೇಕಾದ ಅವಕಾಶ ಬಂದಿತ್ತು. ಒಂದು ರಿಯಾಲಿಟಿ ಶೋಗೋಸ್ಕರ ಅವರು ಗೆಸ್ಟ್‌ ಆಗಿ ಬಂದಿದ್ದರು. ಆ ಸಂದರ್ಭದಲ್ಲಿ ಬಹಳ ಹತ್ತಿರ ನಿಂತು ಅವರನ್ನು ಸಂದರ್ಶಿಸಿದ ಅದ್ಭುತ ದಿನ ನನ್ನ ಕಣ್ಣೆದುರೇ ನಡೆದಷ್ಟುಹಚ್ಚ ಹಸಿರಾಗಿದೆ.

ಎಸ್‌ಪಿಬಿ ಅವರನ್ನು ಸೆಲಬ್ರೇಟ್‌ ಮಾಡಬೇಕಾಗಿದ್ದ ಒಂದು ವಿಚಾರ ಎಂದರೆ ಅವರೊಬ್ಬರು ಕಂಪೋಸರ್‌ ಕೂಡ ಹೌದು. ಕನ್ನಡದಲ್ಲಿ ನಾಲ್ಕೈದು ಚಿತ್ರಗಳು ಅವರದೇ ಸಂಗೀತದಲ್ಲಿವೆ, ಆ ಹಾಡುಗಳೆಲ್ಲ ಇವತ್ತಿಗೂ ಜನಪ್ರಿಯ. ದೀಪಾವಳಿ ಬಂದಾಗೆಲ್ಲ ಅಣ್ಣಾವ್ರ ದನಿಯಲ್ಲಿ ಕೇಳಿಬರುವ ‘ಮುದ್ದಿನ ಮಾವ’ ಚಿತ್ರದ ‘ದೀಪಾವಳಿ ದೀಪಾವಳಿ, ಗೋವಿಂದ ಲೀಲಾವಳಿ’, ಅವರದೇ ಕಂಪೋಸಿಶನ್‌. ರಾಜ್‌ಕುಮಾರ್‌ ಅವರೇ ಹಾಡಬೇಕು ಅಂತ ಆಸೆಪಟ್ಟು ಹಾಡಿಸಿದ ಗೀತೆ ಅದು. ಹಾಗೇ ‘ಬಾಳಲಿ ಜ್ಯೋತಿಯು ಎಂದೂ ಆರದಿರಲಿ’, ಅವರೇ ಸಂಯೋಜಿಸಿದ್ದು. ‘ದೇವರೆಲ್ಲಿದ್ದಾನೆ’ ಚಿತ್ರದ ಗೀತೆಯಂತೂ ಒಂದಕ್ಕಿಂತ ಮತ್ತೊಂದು ಇಂಪು, ಅಷ್ಟೇ ಕ್ಲಿಷ್ಟಕರ. ಅಲ್ಲೆಲ್ಲ ಅವರಿಗೆ ಸಂಗೀತದ ಜ್ಞಾನ ಅದೆಷ್ಟಿದೆ ಅಂತ ಅಚ್ಚರಿಯಾಗುತ್ತದೆ. ತಮಿಳಿನಲ್ಲಿ ‘ಇದೋ ಇದೋ ಎನ್‌ ಪಲ್ಲವಿ’ ಹಾಡಂತೂ ಪದೇಪದೇ ಕೇಳಲೇಬೇಕೆನ್ನಿಸುವ ಅವರದೇ ಸಂಯೋಜನೆ.

ನಾನು ಐಸ್‌ಕ್ರೀಂ ತಿನ್ತೀನಿ, ಅನುಕರಿಸಬೇಡಿ ಎಂದಿದ್ದರು: ಮಂಜುಳಾ ಗುರುರಾಜ್

ಎಸ್‌ಪಿಬಿ ಅವರು ಕನ್ನಡದ ಭಾವಸಂಪತ್ತನ್ನೂ ಶ್ರೀಮಂತಗೊಳಿಸಿದ್ದಾರೆ, ಭಕ್ತಿಗೀತೆಯ ಸಂಪತ್ತನ್ನು ಶ್ರೀಮಂತಗೊಳಿಸಿದ್ದಾರೆ, ಜನಪದಗೀತೆಗಳೂ ಅವರ ದನಿಯಲ್ಲಿ ದೀಪ್ತವಾಗಿವೆ, ಜನಪದ ಸೊಗಡಿನ ‘ತೇರಾ ಏರಿ ಅಂಬರದಾಗೆ’ ಗೀತೆ ಕೇಳುತ್ತಿದ್ದರೆ ಅವರು ಕನ್ನಡದಲ್ಲೇ ಹುಟ್ಟಿಬೆಳೆದ ದೇಸಿ ದನಿ ಪ್ರತಿಭೆ ಅಂತಲೇ ಅನ್ನಿಸುವಷ್ಟುಅವರು ಪರ್ಫೆಕ್ಟ್. ಕವಿಗೀತೆ ಕೇಳಿದಾಗಲೂ, ಅಷ್ಟೇ. ಅವರು ಅನ್ಯಭಾಷೆಯಿಂದ ಬಂದವರೆಂದು ಅನ್ನಿಸದಷ್ಟುಗೀತೆಯ ಭಾವವನ್ನು ಜವಾಬ್ದಾರಿಯಿಂದ ನಿಭಾಯಿಸಿದ್ದಾರೆ. ಅವರು ‘ಎದೆ ತುಂಬಿ ಹಾಡಿದೆನು’ ಕಾರ್ಯಕ್ರಮದ ಸಾರಥ್ಯ ವಹಿಸಿದ್ದಾಗ ಅವರ ಬಾಯಲ್ಲಿ ಬರುತ್ತಿದ್ದ ವಚನಗಳನ್ನು ಖಂಡಿತ ಮರೆಯುವಂತೇ ಇಲ್ಲ.

ಕನ್ನಡ ನನಗೆ ಸ್ವಲ್ಪ ಹೆಚ್ಚು ಅನ್ನುತ್ತಿದ್ದ ಎಸ್ಪಿಬಿ ಮುಂದೊಂದು ಜನ್ಮದಲ್ಲಿ ಇಲ್ಲೇ ಹುಟ್ಟುತ್ತೇನೆ ಅಂತ ಹೇಳುತ್ತಲೇ ಇದ್ದರು.

ಯಾರೋ ಪುಟ್ಟಬಾಲಕ ಮುಂದೊಂದು ದಿನ ಹುಟ್ಟಿ, ಎಸ್‌ಪಿಬಿ ಅವರ ಹಾಡುಗಳನ್ನು ತನ್ಮಯವಾಗಿ, ಸುಶ್ರಾವ್ಯವಾಗಿ ಹಾಡುತ್ತಿದ್ದರೆ ಅದನ್ನು ಎಸ್‌ಪಿಬಿ ಅವತಾರ ಅಂತಲೇ ಭಾವಿಸಬೇಕು.

ಈ ಭಾವಗೀತೆ ನಿನಗಾಗಿ ಹಾಡಿದೆ

ಹಾಡುವ ಆಸೆ ಹಾಡದು ಏಕೋ

ಹಾರುವ ಆಸೆ, ಹಾರದು ಏಕೋ

ಎಲೆಗಳಲಲಿ ಮರೆಯಾಗಿ ಎಲ್ಲೋ ಅಡಗಿದೆ

ಕೋಗಿಲೆ ಮೂಕಾಗಿದೆ!

- ವಿಕಾಸ್ ನೇಗಿಲೋಣಿ

Latest Videos
Follow Us:
Download App:
  • android
  • ios