ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ‘ಬೃಂದಾವಿಹಾರಿ’ ಸಿನಿಮಾ ನವೆಂಬರ್ 20ರಂದು ಬಿಡುಗಡೆಯಾಗಲಿದೆ. ಶ್ರೀನಿವಾಸ್ ರಾಜು ನಿರ್ದೇಶನದ ಹಾಗೂ ಸಮೃದ್ಧಿ ಮಂಜುನಾಥ್ ನಿರ್ಮಾಣದ ಈ ಚಿತ್ರವನ್ನು..
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ‘ಬೃಂದಾವಿಹಾರಿ’ ಸಿನಿಮಾ ನವೆಂಬರ್ 20ರಂದು ತೆರೆಗೆ ಬರಲಿದೆ. ಸಮೃದ್ಧಿ ಮಂಜುನಾಥ್ ನಿರ್ಮಾಣದ, ಶ್ರೀನಿವಾಸ್ ರಾಜು ನಿರ್ದೇಶನದ ಈ ಚಿತ್ರ ಅಕ್ಟೋಬರ್ 16ರಂದೇ ಬಿಡುಗಡೆಯಾಗಬೇಕಿತ್ತು. ಆದರೆ, ಅದೇ ಸಮಯದಲ್ಲಿ ‘ಪ್ರೇಮದ ಊರಲಿ’ ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ಆ ಚಿತ್ರಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ‘ಬೃಂದಾವಿಹಾರಿ’ ಬಿಡುಗಡೆಯನ್ನು ಒಂದು ತಿಂಗಳು ಮುಂದೂಡಲಾಗಿತ್ತು.
ಎಲ್ಲರಿಗೂ ಕನೆಕ್ಟ್ ಆಗುತ್ತದೆ
ಈ ಕುರಿತು ಮಾತನಾಡಿದ ಗಣೇಶ್, “ನಮ್ಮ ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದಕ್ಕೆ ಬೇರೆ ಬೇರೆ ಅರ್ಥಗಳನ್ನು ಕಲ್ಪಿಸಲಾಗುತ್ತಿದೆ. ನಾವು ಬೇರೆ ಯಾವ ಚಿತ್ರಕ್ಕೂ ಹೆದರಿ ಬಿಡುಗಡೆ ಮುಂದೂಡಿಲ್ಲ. ಒಂದು ಕನ್ನಡ ಚಿತ್ರಕ್ಕೆ ತೊಂದರೆಯಾಗಬಾರದು, ನಮ್ಮಿಂದ ಒಳ್ಳೆಯ ಚಿತ್ರವೊಂದಕ್ಕೆ ಚಿತ್ರಮಂದಿರಗಳ ಸಮಸ್ಯೆ ಎದುರಾಗಬಾರದು ಎಂಬ ಕಾರಣಕ್ಕೆ ಇಡೀ ತಂಡ ಒಟ್ಟಾಗಿ ಈ ನಿರ್ಧಾರ ತೆಗೆದುಕೊಂಡಿತ್ತು. ‘ಬೃಂದಾವಿಹಾರಿ’ ಪಕ್ಕಾ ಫ್ಯಾಮಿಲಿ ಪ್ರೇಕ್ಷಕರು ನೋಡಿ ಮೆಚ್ಚುವಂಥ ಪ್ರೇಮಕಥೆ. ಇದರಲ್ಲಿ ನಾನು ಮಾಧವ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಪಾತ್ರ ಎಲ್ಲರಿಗೂ ಕನೆಕ್ಟ್ ಆಗುತ್ತದೆ ಎಂಬ ನಂಬಿಕೆ ಇದೆ. ಚಿತ್ರದ ಪೋಸ್ಟರ್ಗಳನ್ನು ನೋಡಿ ಕೆಲವರು ನನ್ನ ಹಿಂದಿನ ‘ಕೃಷ್ಣಂ ಪ್ರಣಯ ಸಖಿ’ ಚಿತ್ರಕ್ಕೆ ಹೋಲಿಸುತ್ತಿದ್ದಾರೆ. ಆದರೆ, ಎರಡೂ ಚಿತ್ರಗಳ ಕಥೆ ಸಂಪೂರ್ಣ ಭಿನ್ನ. ‘ಬೃಂದಾವಿಹಾರಿ’ ನೋಡಲು ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ನಿರಾಸೆಯಾಗುವುದಿಲ್ಲ ಎಂಬ ವಿಶ್ವಾಸವಿದೆ” ಎಂದರು.
ನಿರೀಕ್ಷೆಗಳು ಹೆಚ್ಚಿವೆ
ನಿರ್ದೇಶಕ ಶ್ರೀನಿವಾಸ್ ರಾಜು ಮಾತನಾಡಿ, “ನಮ್ಮ ನಿರೀಕ್ಷೆಯಂತೆಯೇ ಸಿನಿಮಾ ಮೂಡಿಬಂದಿದೆ. ಗಣೇಶ್ ಮತ್ತು ನನ್ನ ಕಾಂಬಿನೇಷನ್ನ ಹಿಂದಿನ ಚಿತ್ರ ಯಶಸ್ವಿಯಾಗಿರುವುದರಿಂದ ಈ ಚಿತ್ರದ ಮೇಲೂ ನಿರೀಕ್ಷೆಗಳು ಹೆಚ್ಚಿವೆ. ಆ ನಿರೀಕ್ಷೆಗಳನ್ನು ಸಿನಿಮಾ ಖಂಡಿತವಾಗಿಯೂ ತಲುಪಲಿದೆ. ನಿರ್ಮಾಪಕರು ಯಾವುದಕ್ಕೂ ಕೊರತೆಯಾಗದಂತೆ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ. ಕೇಳಿದ್ದಕ್ಕಿಂತ ಹೆಚ್ಚಾಗಿಯೇ ಕೊಟ್ಟಿದ್ದಾರೆ. ಹೀಗಾಗಿ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ” ಎಂದು ಹೇಳಿದರು.
ಕನ್ನಡ ಸಿನಿಮಾಗಳನ್ನು ಕೊಲ್ಲಬೇಡಿ
ನಿರ್ಮಾಪಕ ಸಮೃದ್ಧಿ ಮಂಜುನಾಥ್, “ನಾವು ಅಂದುಕೊಂಡಂತೆಯೇ ನವೆಂಬರ್ 20ರಂದು ಚಿತ್ರವನ್ನು ತೆರೆಗೆ ತರುತ್ತಿದ್ದೇವೆ. ಎಲ್ಲ ಒಳ್ಳೆಯ ಕನ್ನಡ ಸಿನಿಮಾಗಳೂ ಗೆಲ್ಲಬೇಕು ಎಂಬ ಆಶಯ ಹೊಂದಿರುವ ನಿರ್ಮಾಪಕ ನಾನು. ಅದೇ ಕಾರಣಕ್ಕೆ ‘ಪ್ರೇಮದ ಊರಲಿ’ ಚಿತ್ರಕ್ಕೆ ದಾರಿ ಮಾಡಿಕೊಟ್ಟು ನಮ್ಮ ಚಿತ್ರದ ಬಿಡುಗಡೆಯನ್ನು ಒಂದು ತಿಂಗಳು ಮುಂದೂಡಿದೆವು. ಇದರಿಂದ ನನಗೆ ಆರ್ಥಿಕ ನಷ್ಟವಾಗಿರಬಹುದು. ಆದರೆ, ಒಂದು ಒಳ್ಳೆಯ ಸಿನಿಮಾ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪಿತು ಎಂಬ ಸಮಾಧಾನವಿದೆ. ಕನ್ನಡ ಸಿನಿಮಾಗಳನ್ನು ಕೊಲ್ಲಬೇಡಿ. ಒಳ್ಳೆಯ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ನೋಡಿ, ಪ್ರೋತ್ಸಾಹಿಸಿ” ಎಂದು ಮನವಿ ಮಾಡಿದರು.














