ಸದ್ಯಕ್ಕೆ ಇಂತಹ ಮಾತುಗಳ ಮೂಲಕ ಮಾಧ್ಯಮದವರ ಮುಂದೆ ತಮ್ಮ ಅಳಲು ತೋಡಿಕೊಂಡವರು ‘ಕಾಣದಂತೆ ಮಾಯವಾದನು’ ಚಿತ್ರದ ನಾಯಕ ನಟ ವಿಕಾಸ್‌.

ಸೋಮಸಿಂಗ್‌ ನಿರ್ಮಾಣದಲ್ಲಿ ರಾಜಪತಿ ಪಟ್ಟಿನಿರ್ದೇಶನದ ‘ ಕಾಣದಂತೆ ಮಾಯವಾದನು’ ಚಿತ್ರಕ್ಕೆ ವಿಕಾಸ್‌ ನಾಯಕ ನಟ. ನಿರ್ದೇಶಕರಾಗಿದ್ದವರು ಈಗ ನಾಯಕರಾಗಿ ಬಡ್ತಿ ಪಡೆದಿದ್ದಾರೆ. ಈ ಚಿತ್ರ ಜನವರಿ ಕೊನೆಯ ವಾರ ರಾಜ್ಯಾದ್ಯಂತ ಬಿಡುಗಡೆ ಆಗಿತ್ತು. ಮಲ್ಟಿಪ್ಲೆಕ್ಸ್‌ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು. ಆದರೆ ಸಿನಿಮಾ ಮಾತ್ರ ಚಿತ್ರಮಂದಿರದಲ್ಲಿ ಹೆಚ್ಚು ಸಮಯ ಉಳಿಯಲಿಲ್ಲ. ಅದರಿಂದಾಗಿ ತೀವ್ರ ನಿರಾಸೆಗೆ ಒಳಗಾದ ಚಿತ್ರತಂಡ, ಚಿತ್ರಕ್ಕೆ ಹೆಚ್ಚುವರಿ 7 ನಿಮಿಷಗಳಷ್ಟುಅವದಿಯ ದೃಶ್ಯಗಳನ್ನು ಸೇರಿಸಿ, ಮತ್ತೆ ಬೆಂಗಳೂರಿನ ರಾಕ್‌ಲೈನ್‌ ಮಾಲ್‌ ಹಾಗೂ ಕಾಮಾಕ್ಯ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಮರು ಬಿಡುಗಡೆ ಮಾಡಿದೆ. ಆ ಕುರಿತು ಹೇಳಿಕೊಳ್ಳಲು ಮಾಧ್ಯಮದ ಮುಂದೆ ಬಂದಾಗ ವಿಕಾಸ್‌ ಕಣ್ಣೀರಿಟ್ಟರು.

ಚಿತ್ರ ವಿಮರ್ಶೆ: ಕಾಣದಂತೆ ಮಾಯವಾದನು

‘ಸಿನಿಮಾ ಹೇಗೆ ಮಾಡ್ಬೇಕೋ ಗೊತ್ತಾಗುತ್ತಿಲ್ಲ. ಜನರಿಗೆ ಇಷ್ಟವಾಗುವಂತಹ ಸಿನಿಮಾ ಕೊಟ್ಟರೂ ಚಿತ್ರಮಂದಿರದಲ್ಲಿ ಅದನ್ನು ನೋಡುವರಿಲ್ಲ. ಕನ್ನಡ ಸಿನಿಮಾ ಉಳಿಬೇಕು, ಒಳ್ಳೆಯ ಸಿನಿಮಾ ಬರಬೇಕು ಅಂತಾರೆ. ಹಾಗೆ ಒಳ್ಳೆಯ ಸಿನಿಮಾ ಬಂದಾಗ ಯಾಕೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ? ಇದು ನಮಗಂತೂ ಅರ್ಥವೇ ಆಗುತ್ತಿಲ್ಲ. ಸಿನಿಮಾದ ಸೋಲು ನಮ್ಮನ್ನು ಕಾಣೆಯಾಗುವಂತೆ ಮಾಡುತ್ತಿದೆ. ಒಂದ್ರೀತಿ ಭಯ ಆವರಿಸಿದೆ. ದುಡ್ಡು ಹೋದ್ರೂ ಪರವಾಗಿಲ್ಲ ಅಂತ ಎರಡು ಕಡೆಗಳಲ್ಲಿ ರೀ ರಿಲೀಸ್‌ ಮಾಡುತ್ತಿದ್ದೇವೆ. ತಂಡದ ಅಳಿವು -ಉಳಿವು ಪ್ರೇಕ್ಷಕರ ಮೇಲಿದೆ’ ಎನ್ನುತ್ತಾ ಭಾವುಕರಾದರು. ಹಾಗೆಯೇ ಬುಕ್‌ ಮೈ ಶೋ ನಲ್ಲಿ ರೇಟಿಂಗ್‌ ಹೆಚ್ಚು ಕಡಿಮೆ ಮಾಡುತ್ತಿರುವುದರ ವಿರುದ್ಧ ಗುಡುಗಿದರು. ಚಿತ್ರದ ಹಾಸ್ಯ ನಟ ಧರ್ಮಣ್ಣ ಹಾಜರಿದ್ದು, ಪ್ರೇಕ್ಷಕರಿಗೆ ನಾವು ಕೆಟ್ಟಸಿನಿಮಾ ನೋಡಿ ಅಂತ ಹೇಳುತ್ತಿಲ್ಲ. ಜನರೇ ಚೆನ್ನಾಗಿದೆ ಅಂತ ಹೇಳಿದರೂ ನಮ್ಮ ಸಿನಿಮಾಕ್ಕೆ ಜನ ಯಾಕೆ ಬರುತ್ತಿಲ್ಲ ಅನ್ನೋದೇ ಅರ್ಥವಾಗುತ್ತಿಲ್ಲ ’ ಅಂತ ವಿಷಾದಿಸಿದರು.