Asianet Suvarna News Asianet Suvarna News

ಚಿತ್ರ ವಿಮರ್ಶೆ: ಕಾಣದಂತೆ ಮಾಯವಾದನು

ಜನರಿಗೆ ಮೋಸ ಮಾಡಿ ಅದರಿಂದ ಬಂದ ಹಣವನ್ನೆಲ್ಲಾ ಕೂಡಿಟ್ಟು ಪ್ಯಾರಿಸ್‌ಗೆ ಹೋಗಬೇಕು ಎಂದು ಕನಸು ಕಾಣುತ್ತಿದ್ದ ನಾಯಕ ರಮ್ಮಿಗೆ ಪ್ರೀತಿಯಾಗುತ್ತದೆ. ಅಲ್ಲಿಗೆ ಪ್ಯಾರಿಸ್‌ ಕತೆ ಮುಗಿದು, ಪ್ರಣಯದ ಕತೆ ಶುರುವಾಗಬೇಕು ಎನ್ನುವಲ್ಲಿಗೆ ಅಸಲಿ ಸಿನಿಮಾ ಶುರುವಾಗುತ್ತದೆ. ವಿಲನ್‌ಗಳ ಎಂಟ್ರಿಯಾಗುತ್ತದೆ, ಸಂಕಷ್ಟಗಳು ಬಂದೊದಗುತ್ತವೆ. ಅಂದರೆ ಜನರಿಗೆ ಮೋಸ ಮಾಡುತ್ತಿದ್ದವನು ಪ್ರೀತಿಗಾಗಿ ಬದಲಾಗಿ ಬಂದ ಸಂಕಷ್ಟಗಳನ್ನು ಎದುರಿಸಿ ತನ್ನ ಪ್ರೀತಿಯನ್ನು ಉಳಿಸಿಕೊಳ್ಳುತ್ತಾನೆ, ಅಲ್ಲಿಗೆ ಸಿನಿಮಾ ಸುಖಾಂತ್ಯವಾಗುತ್ತದೆ ಎಂದು ಅಪ್ಪಿತಪ್ಪಿ ಲೆಕ್ಕ ಹಾಕಿದರೆ ಆ ಲೆಕ್ಕ ತಪ್ಪು.

Kannada movie Kaanadante Maayavadanu film review
Author
Bangalore, First Published Feb 1, 2020, 9:38 AM IST

ಕೆಂಡಪ್ರದಿ

ಅದಕ್ಕೆ ಬದಲಾಗಿ ‘ಕಾಣದಂತೆ ಮಾಯವಾದನು’ ಚಿತ್ರ ಬೇರೆಯದ್ದೇ ಜಾನರ್‌ನಲ್ಲಿ ಸಾಗುತ್ತದೆ. ಸಿನಿಮಾ ಶುರುವಿನಲ್ಲಿಯೇ ವಿಲನ್‌ ಜಯಣ್ಣನಿಂದ ಹತನಾಗುವ ರಮ್ಮಿ ಆತ್ಮವಾಗುತ್ತಾನೆ. ಬದುಕಿದ್ದಾಗ ತಾನು ಮಾಡಿದ ತಪ್ಪುಗಳನ್ನು ಸತ್ತಮೇಲೆ ಆತ್ಮವಾಗಿ ಸರಿ ಮಾಡುತ್ತಾರೆ. ಅಲ್ಲಿಗೆ ಇದೊಂದು ಹಾರರ್‌ ಸ್ಟೋರಿಯಾ ಎಂದರೆ ಆ ಲೆಕ್ಕವೂ ತಪ್ಪು. ಅಸಲಿಗೆ ಅಲ್ಲಿಯೇ ನಿರ್ದೇಶಕರ ತಾಕತ್ತು ಅಡಗಿರುವುದು. ಆತ್ಮವಿದ್ದರೂ ಹಾರರ್‌ ಅಂಶಗಳನ್ನು ಸೈಡಿಗಿಟ್ಟು ಸೆಂಟಿಮೆಂಟ್‌, ಫ್ಯಾಂಟಸಿ, ವಾಸ್ತವದ ಕಟು ಸತ್ಯಗಳನ್ನು ಸೇರಿಸಿಕೊಂಡು ಕತೆ ಎಣೆದಿದ್ದಾರೆ ರಾಜ್‌ ಪತಿಪಾಟಿ.

ಚಿತ್ರ ವಿಮರ್ಶೆ: ಡಿಂಗ

ನಾಯಕಿ ವಂದನಾ ಇಲ್ಲಿ ಸಮಾಜ ಸೇವಕಿ. ಅವಳ ಹಿಂದೊಂದು ನೋವಿನ ಕತೆ. ಅದು ಗೊತ್ತಿದ್ದೇ, ಅನಾಥ ಮಕ್ಕಳ ನೋವಿಗೆ ಮಿಡಿಯುವ ಈ ಹೃದಯಕ್ಕೆ ನಾಯಕ ರಮ್ಮಿಯ ಹೃದಯ ಕರಗುತ್ತದೆ. ಅಲ್ಲಿಗೆ ಇವರಿಬ್ಬರದು ಚೆಂದದ ಪ್ರೇಮ ಕತೆ. ಸತ್ತು ಆತ್ಮವಾಗಿರುವ ರಮ್ಮಿಗೆ ವಿಶೇಷ ಶಕ್ತಿ ಹೊಂದಿರುವ ಧರ್ಮಣ್ಣ ಸಹಾಯಕನಾಗಿ ನಿಲ್ಲುವುದರೊಂದಿಗೆ ಪ್ರೇಕ್ಷಕನನ್ನು ನಗಿಸುವ ಕೆಲಸವನ್ನೂ ಮಾಡುತ್ತಾರೆ. ಸುಚೇಂದ್ರ ಪ್ರಸಾದ್‌ ಖಾವಿಧಾರಿಯಾಗಿ ಪರರ ಆಸ್ತಿಗಾಗಿ ಬಾಯಿ ಬಿಡುತ್ತಾ, ವಿಲನ್‌ ಆದರೂ ಕಡೆಯಲ್ಲಿ ಅವರಿಂದಲೂ ಭರಪೂರ ನಗು ಸಿಕ್ಕುತ್ತದೆ. ದಿ. ಉದಯ್‌ ಮೊದಲಾರ್ಧದಲ್ಲಿ ಜಯಣ್ಣನಾಗಿ ಖಡಕ್‌ ವಿಲನ್‌ ಪಾತ್ರ ನಿರ್ವಹಿಸಿದ್ದರೆ ನಂತರ ಅವರ ಜಾಗವನ್ನು ಭಜರಂಗಿ ಲೋಕಿ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ.

ಚಿತ್ರ ವಿಮರ್ಶೆ: ನಾನು ಮತ್ತು ಗುಂಡ

ಮುಖ್ಯವಾಗಿ ನಾಯಕ ರಮ್ಮಿಯಾಗಿ ಕಾಣಿಸಿಕೊಂಡಿರುವ ವಿಕಾಶ್‌ ಬಗ್ಗೆ ಹೇಳಲೇಬೇಕು. ನಾಯಕನಾಗಿ ಮೊದಲ ಸಿನಿಮಾದಲ್ಲಿಯೇ ಅವರು ಹೋಪ್‌ ಕ್ರಿಯೇಟ್‌ ಮಾಡಿದ್ದರೂ ಅವರದ್ದು ಜಸ್ಟ್‌ ಪಾಸಿಂಗ್‌ ಮಾರ್ಕ್ಸ್‌ಗಷ್ಟೇ ನಿಲ್ಲುವ ನಟನೆ. ಕ್ಯೂಟ್‌ ಬ್ಯೂಟಿ ಸಿಂಧೂ ಲೋಕನಾಥ್‌ ಈ ಚಿತ್ರದ ಮೂಲಕ ಮತ್ತೊಂದು ಬ್ರೇಕ್‌ ತೆಗೆದುಕೊಳ್ಳುವ ಎಲ್ಲಾ ಕೆಲಸವನ್ನೂ ಮಾಡಿದ್ದಾರೆ. ಪ್ರೇಯಸಿಯಾಗಿ, ಸಮಾಜ ಸೇವಕಿಯಾಗಿ, ಪ್ರೀತಿ ಕಳೆದುಕೊಂಡು ನೊಂದ ವಿರಹಿಯಾಗಿ ಅವರು ಸಕ್ಸಸ್‌. ಅಚ್ಯುತ್‌ ಕುಮಾರ್‌ ಇಲ್ಲಿ ಸಿಪಾಯಿ. ಮೊದಲಿನಿಂದ ಕಡೆಯವರೆಗೂ ಚಿತ್ರದಲ್ಲಿದ್ದು ಎಲ್ಲಾ ಘಟನೆಗಳಿಗೂ ಸಾಕ್ಷಿಯಾಗುವುದರ ಜೊತೆಗೆ ನಾಯಕನಿಗೂ ಸಹಾಯ ಮಾಡುತ್ತಾರೆ.

ಚಿತ್ರ ವಿಮರ್ಶೆ: ಇಂಡಿಯಾ ವರ್ಸಸ್‌ ಇಂಗ್ಲೆಂಡ್‌

ಚಿತ್ರದಲ್ಲಿ ಭಗೀರ ಮುಖ್ಯವಾದ ಪಾತ್ರಧಾರಿ. ಭಗೀರ ಎಂದರೆ ನಾಯಿ. ಈಗೀಗ ಕನ್ನಡ ಸಿನಿಮಾಗಳಲ್ಲಿ ನಾಯಿಗಳ ಪಾಲ್ಗೊಳ್ಳುವಿಕೆ ಹೆಚ್ಚಾಗಿಯೇ ಇದ್ದು, ಈ ಪ್ರತಿಭಾವಂತ ನಾಯಿಯನ್ನೂ ಮೆಚ್ಚಿಕೊಳ್ಳಲು ಅವಕಾಶವಿದೆ. ಕಡೆಗೆ ‘ಕಾಣದಂತೆ ಮಾಯವಾದ’ ನಾಯಕ ಕಾಣದಂತೆಯೇ ತಾನು ಅಂದುಕೊಂಡಿದ್ದನ್ನು ಮಾಡಿ ಮುಗಿಸುವ ಚಿತ್ರದ ಕಾನ್ಸೆಪ್ಟ್‌ ಚೆನ್ನಾಗಿದೆ. ಅಷ್ಟಕ್ಕೆ ನಿರ್ದೇಶಕರನ್ನು ಮೆಚ್ಚಬೇಕು. ಸಂಗೀತ, ಕ್ಯಾಮರಾ ಇವೆಲ್ಲವೂ ಚಿತ್ರದ ಓಟಕ್ಕೆ ಎಲ್ಲಿಯೂ ಕುಂದು ತರದೇ ಮುಂದೆ ಸಾಗುತ್ತವೆ.

Follow Us:
Download App:
  • android
  • ios