ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ನಟನೆಯ ಚಿತ್ರದ ಮುಹೂರ್ತ ಅದ್ದೂರಿಯಾಗಿ ನಡೆದಿದೆ. ಖ್ಯಾತ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಅವರು ಚಿತ್ರಕ್ಕೆ ಕ್ಲಾಪ್‌ ಮಾಡಿ ಶುಭ ಹಾರೈಸಿದ್ದಾರೆ. ರವಿಚಂದ್ರನ್‌ ಚಿತ್ರದಲ್ಲಿ ನಟಿಸುವ ಮೂಲಕ ಜೊತೆ ನಿಂತಿದ್ದಾರೆ.

ಇದೇ ಸಂದರ್ಭದಲ್ಲಿ ಕಿರೀಟಿ ರೆಡ್ಡಿಯವರನ್ನು ಪರಿಚಯಿಸುವ ವಿಡಿಯೋ ಕೂಡ ಬಿಡುಗಡೆ ಆಯಿತು.ಆ ವಿಡಿಯೋ ನೋಡಿದವರೆಲ್ಲಾ ಕಿರೀಟಿಯವರನ್ನು ಮೆಚ್ಚಿಕೊಳ್ಳುತ್ತಿದ್ದರೆ ಕಿರೀಟಿ ರೆಡ್ಡಿ ಮಾತ್ರ ಹಿರಿಯರೆಲ್ಲರ ಆಶೀರ್ವಾದ ಪಡೆಯುವಲ್ಲಿ ಬ್ಯುಸಿಯಾಗಿದ್ದರು. ವೇದಿಕೆಯಲ್ಲೇ ಬಹುತೇಕ ಹಿರಿಯರ ಕಾಲು ಮುಟ್ಟಿನಮಸ್ಕರಿಸಿದರು. ತಮ್ಮ ಮಾತಿನಲ್ಲಿ ಕೂಡ ಮನೆಮಗನಂತೆ ಭಾವಿಸಿ ಆಶೀರ್ವದಿಸಿ ಎಂದೇ ಕೇಳಿಕೊಂಡರು. ಅಷ್ಟರ ಮಟ್ಟಿಗೆ ತಾವು ಹಂಬಲ್‌ ಎಂಬುದನ್ನು ಪ್ರಚುರ ಪಡಿಸಿದರು.

ಮಾಯಾ ಬಜಾರ್‌ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಈ ಚಿತ್ರ ನಿರ್ಮಿಸುತ್ತಿರುವುದು ಈಗ ಸಿನಿಮಾ ನಿರ್ಮಿಸಿದ್ದ ತೆಲುಗಿನ ಖ್ಯಾತ ನಿರ್ಮಾಪಕ ಸಾಯಿ ಕೊರಪಾಟಿ. ಜನಾರ್ದನ ರೆಡ್ಡಿಯವರ ಕುಟುಂಬ ಸ್ನೇಹಿತ ಅವರು. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ನಿರ್ಮಿಸುತ್ತಿದ್ದಾರೆ. ಚಿತ್ರದ ತಾರಾಗಣವೂ ದೊಡ್ಡದಿದೆ. ರವಿಚಂದ್ರನ್‌, ಖುಷ್ಬೂ, ಜೆನಿಲಿಯಾ ನಟಿಸುತ್ತಿದ್ದಾರೆ. ನಾಯಕಿಯಾಗಿ ಶ್ರೀಲೀಲಾ ಇದ್ದಾರೆ.

ಬಾಹುಬಲಿ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದ ಸೆಂಥಿಲ್‌ ಕುಮಾರ್‌, ಪುಷ್ಪ ಸಿನಿಮಾದ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್‌, ರಾಜಮೌಳಿಯವರ ಬಹುತೇಕ ಸಿನಿಮಾಗಳ ಪ್ರೊಡಕ್ಷನ್‌ ಡಿಸೈನರ್‌ ರವೀಂದರ್‌ ಮುಂತಾದ ಖ್ಯಾತನಾಮರು ಈ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ.

ಮುಹೂರ್ತ ಕಾರ್ಯಕ್ರಮಕ್ಕೆ ಸಚಿವ ಶ್ರೀರಾಮುಲು, ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ, ನಟ ಅಯ್ಯಪ್ಪ, ವಸಿಷ್ಠ ಸಿಂಹ ಆಗಮಿಸಿದ್ದರು.

14 ವರ್ಷದ ಬಳಿಕ ಮತ್ತೆ ಕನ್ನಡಕ್ಕೆ ಬಂದ ಜೆನಿಲಿಯಾ

ಖ್ಯಾತ ನಟಿ ಜೆನಿಲಿಯಾ 14 ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. 2008ರಲ್ಲಿ ಶಿವರಾಜ್‌ ಕುಮಾರ್‌ ನಟನೆಯ ‘ಸತ್ಯ ಇನ್‌ ಲವ್‌’ ಚಿತ್ರದಲ್ಲಿ ನಟಿಸಿದ್ದರು. 2012ರಲ್ಲಿ ಮದುವೆ ಬಳಿಕ ನಟನೆಯಿಂದ ದೂರಾಗಿದ್ದ ಜೆನಿಲಿಯಾ ಈಗ ಮತ್ತೆ ನಟನೆ ಶುರು ಮಾಡಿದ್ದಾರೆ. ಅದೇ ಕಾರಣಕ್ಕೆ ಅವರು, ‘10 ವರ್ಷಗಳ ನಂತರ ಮತ್ತೆ ನಟಿಸುತ್ತಿದ್ದೇನೆ. ನಾನೂ ನ್ಯೂಕಮರ್‌’ ಎಂದು ಹೇಳಿದರು. ಜೆನಿಲಿಯಾ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ನಾನು ಕರ್ನಾಟಕದವಳು, 10 ವರ್ಷಗಳ ನಂತರ ಚಿತ್ರರಂಗಕ್ಕೆ ಮರಳಿದ ಜೆನಿಲಿಯಾ ಮಾತುಗಳಿದು!

'ಕಿರೀಟಿ ಅಂದ್ರೆ ಅರ್ಜುನ. ಜೀವನದಲ್ಲಿ ಎಂಥಾ co-incidence ಆಗುತ್ತೆ ನೋಡಿ ಕಿರೀಟಿಗೆ ಸಾರಥಿಯಾಗಿ ನಿಂತಿರುವುದು ರಾಧಾ ಕೃಷ್ಣ. ಹಿಂದಿನಿಂದ ಜನಾರ್ಧನ್ ಅವರ ಆಶೀರ್ವಾದ. ಸಾಯಿ ಅವರಿಗೆ ಕನ್ನಡದಲ್ಲಿ ಇದು ಮೊದಲನೇ ಸಿನಿಮಾ. ಚಿತ್ರದಲ್ಲಿ ಶ್ರೀಲೀಲಾ ಇದ್ದಾರೆ ಮತ್ತು ಜೆನಿಲಿಯಾ ಇದ್ದಾರೆ ನಾನು ಇದ್ದೀನಿ. ಇದಕ್ಕಿಂತ ಒಳ್ಳೆ ಪ್ಯಾಕೇಜ್ ಬೇಕಾ ನಮ್ಗೆ? ಸಖತ್ ಆಗಿದೆ ಪ್ಯಾಕೇಜ್. ಇನ್ನು ಒಳಗಡೆ ಬೇಕಿರುವುದು ಒಳ್ಳೆಯ ಕಂಟೆಂಟ್ ಮತ್ತು ಎಮೋಷನ್‌ ಬೇಕು ಅಷ್ಟೆ' ಎಂದು ರವಿಚಂದ್ರನ್ ಮಾತನಾಡಿದ್ದಾರೆ.

'ಕಿರೀಟಿ ಮೊನ್ನೆ ಏರ್‌ಪೋರ್ಟ್‌ನಲ್ಲಿ ಸಿಕ್ಕಿದ್ದರು. ಅದೇ ಮೊದಲು ನೋಡಿರುವುದು. ಒಂದು ಗಂಟೆ ಪ್ರಯಾಣ ಮಾಡಿದ್ದೀವಿ. ಆ ಒಂದು ಗಂಟೆಯಲ್ಲಿ ಸಾವಿರಾರು ಪ್ರಶ್ನೆ ಕೇಳಿದ್ದಾರೆ. ನಾನು ಸಿನಿಮಾ ಮಾಡೋಕೆ ಹೇಗಿರಬೇಕು ಏನು ತಯಾರಿ ಮಾಡಿಕೊಳ್ಳಬೇಕು ಅಂದ್ರು. ಅದಕ್ಕೆ ನಾನು ಹೇಳಿದೆ ಏನೂ ಬೇಡ ಮುಚ್ಕೊಂಡು ಬಂದು ಸಿನಿಮಾ ಮಾಡು ಅಂದೆ. ಹೀಗೆ ಆಗ್ತೀವಿ ಅಂತ ಏನೋ ಮಾಡೋಕೆ ಹೋಗಬಾರದು ಏನೋ ಮಾಡ್ಬೇಕು ಆಮೇಲೆ ಹಾಗೆ ಆಗ್ತೀವಿ ನಾವು' ಎಂದು ರವಿಚಂದ್ರನ್ ಹೇಳಿದ್ದಾರೆ.

"