ಮೈಸೂರು ಪ್ರೇಮಿಗಳ ಲವ್‌ ಬಾಬಾ | ಪ್ರೇಮಿಗಳಿಗೆ ಬುದ್ಧಿ ಹೇಳುತ್ತಾರೆ ಓಂಪ್ರಕಾಶ್‌ ರಾವ್‌ 

ಅಂಶಿ ಪ್ರಸನ್ನಕುಮಾರ್‌

ಗಾಬರಿಯಾಗಬೇಡಿ ನಾವು ಯಾವುದೋ ಸಿ.ಡಿ ಕಥೆ ಹೇಳುತ್ತಿಲ್ಲ. ಇದು ಮೈಸೂರಿನ ಪ್ರಿಯಾ ಬಾಲಾಜಿ ಪ್ರೊಡಕ್ಷನ್ಸ್‌ ಮತ್ತು ನವರತ್ನಪ್ರಸಾದ್‌ ನಿರ್ಮಾಣದ, ಚಂದನ್‌ಗೌಡ ನಿರ್ದೇಶನದ ‘ಲವ್‌ ಬಾಬಾ’ ಚಿತ್ರದ ಎರಡು ಪ್ಲಸ್‌ ಮೂರು ಪ್ಲಸ್‌ ಮೂರರ ಕಥೆ. ಇಲ್ಲಿ ಎರಡು ಎಂದರೆ ನಾಯಕ- ನಾಯಕಿ, ಮೂರು ಪ್ಲಸ್‌ ಮೂರು ಎಂದರೇ ನಾಯಕನ ಮೂವರು ಸ್ನೇಹಿತರು ಹಾಗೂ ನಾಯಕಿಯ ಮೂವರು ಸ್ನೇಹಿಯರು. ಇಡೀ ಚಿತ್ರ ಇವರ ಸುತ್ತಲೇ ಸುತ್ತುತ್ತದೆ.

‘ಲವ್‌ ಮಾಕ್‌ಟೇಲ್‌’ ಚಿತ್ರದಲ್ಲಿ ಪ್ರಮಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಭಿಲಾಷ್‌ ಈ ಚಿತ್ರದ ನಾಯಕ. ಮಾಡೆಲ್‌ ಮಹಿಮಾ ನಾಯಕಿ. ಲವ್ವರ್‌ಗಳು ದಾರಿ ತಪ್ಪಿದಾಗ ತಿದ್ದಿ ಬುದ್ಧಿ ಹೇಳುವ ಬಾಬಾನ ಪಾತ್ರದಲ್ಲಿ ಖ್ಯಾತ ನಟ, ನಿರ್ದೇಶಕ ಓಂಪ್ರಕಾಶ್‌ರಾವ್‌ ನಟಿಸುತ್ತಿರುವುದು ವಿಶೇಷ.

ಉದಯ ಟಿವಿಯಲ್ಲಿ ಒಂದೇ ದಿನ 2 ಹೊಸ ಧಾರಾವಾಹಿಗಳು

ಚಿತ್ರದ ನಿರ್ಮಾಪಕ ಬಾಲಾಜಿ ಬೆಂಗಳೂರಿನಲ್ಲಿ ಹದಿನೈದು ವರ್ಷಗಳ ಕಾಲ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ದುಡಿದವರು. ಚಂದನ್‌ ಹೇಳಿದ ಕಥೆ ಹಿಡಿಸಿದ್ದರಿಂದ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದರು ಬಾಲಾಜಿ. ಕೆಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಚಂದನ್‌ಗೌಡ ಈ ಚಿತ್ರದ ಮೂಲಕ ನಿರ್ದೇಶನ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಪಾತ್ರ ಚೆನ್ನಾಗಿದ್ದರಿಂದ ಲವರ್‌ಗಳಿಗೆ ಬಾಬಾ ಆಗುತ್ತಿದ್ದೇನೆ ಎಂದು ನಕ್ಕವರು ಓಂಪ್ರಕಾಶ್‌ರಾವ್‌.

ಮೈಸೂರಿನ ಲವರ್‌ಗಳು ಹೇಗಿದ್ದಾರೆ, ಎಲ್ಲೆಲ್ಲಿ ಟ್ರಾವೆಲ್‌ ಮಾಡ್ತಾರೆ, ಯಾವ ರೀತಿ ಜಗಳ ಆಡ್ತಾರೆ ಎನ್ನುವುದನ್ನು ತೋರಿಸಲಿದ್ದೇವೆ ಎಂದವರು ಕಥೆ, ಚಿತ್ರಕಥೆ, ಸಂಭಾಷಣೆಯ ಹೊಣೆಯನ್ನೂ ಹೊತ್ತಿರುವ ನಿರ್ದೇಶಕ ಚಂದನ್‌ಗೌಡ.

ಡೆಲಿವರಿ ಬಾಯ್‌ ಬೆಂಬಲಕ್ಕೆ ನಿಂತ ನಟಿಯರು

ಮೈಸೂರಿನ ರಂಗಾಯಣ ಅಭಿನಯ ತರಬೇತಿ ಪಡೆದಿರುವ ಸಂತೋಷ್‌, ಮನೋಜ್‌, ನಟನದಲ್ಲಿ ಅಭಿನಯ ತರಬೇತಿ ಪಡೆದಿರುವ ರಾಕೇಶ್‌ ನಾಯಕನ ಸ್ನೇಹಿತರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಮೈಸೂರಿನ ಸಂದೇಶ್‌ ದಿ ಪ್ರಿನ್ಸ್‌ ಆವರಣದಲ್ಲಿ ಈ ಚಿತ್ರದ ಮುಹೂರ್ತ ನೆರವೇರಿತು. ಶಾಸಕ ಎಲ್‌.ನಾಗೇಂದ್ರ ಸಮ್ಮುಖದಲ್ಲಿ ಚಲನಚಿತ್ರ ನಿರ್ಮಾಪಕರೂ ಆದ ಮಾಜಿ ಮೇಯರ್‌ ಸಂದೇಶ್‌ ಸ್ವಾಮಿ ಕ್ಲಾಪ್‌ ಮಾಡಿದರು. ನಿವೃತ್ತ ಎಸಿಪಿ ನಾಗಪ್ಪ, ಇನ್‌ಸ್ಪೆಕ್ಟರ್‌ ಮಲ್ಲೇಶ್‌, ಬಿ.ಎಸ್‌. ಅಶೋಕ್‌, ಪಿಆರ್‌ಓ ವಿಜಯಕುಮಾರ್‌ ಹಾಜರಿದ್ದು, ಚಿತ್ರತಂಡಕ್ಕೆ ಶುಭ ಕೋರಿದರು.