ಧಾರವಾಹಿ ಮೂಲಕ ಬಣ್ಣದ ಬದುಕು ಆರಂಭಿಸಿ, ಕೆಜಿಎಫ್-2 ಎನ್ನುವ ಚಿತ್ರದ ಮೂಲಕ ಇಂದು ಭಾರತದ ಮೂಲೆಮೂಲೆಗೂ ಪರಿಚಿತರಾಗಿರುವ ಯಶ್, ಗುರುವಾರ ತಮ್ಮ ಸಾಮಾಜಿಕ ಜಾಲತಾಣದ ಪುಟದಲ್ಲಿ ಸ್ಪೂರ್ತಿದಾಯಕ ಕಥೆಯೊಂದನ್ನು ಹೇಳುವ ಮೂಲಕ ತನ್ನ ಈ ಜರ್ನಿಯ ಯಶಸ್ಸಿಗೆ ಶುಭ ಕೋರಿದ ಎಲ್ಲರೂ ಧನ್ಯವಾದ ಅರ್ಪಿಸಿದ್ದಾರೆ.

ಬೆಂಗಳೂರು (ಏ.21): ಸಿನಿಮಾ (Cinema) ಎನ್ನುವುದು ಎಷ್ಟು ರಂಜನೀಯವೋ ಅಷ್ಟೇ ಬೆಂಕಿಯ ಕೆನ್ನಾಲಿಗೆ. ಪ್ರೇಕ್ಷಕರಿಗೆ ಕಾಣುವುದು ಸಿನಿಮಾದ ರಂಜನೀಯ ಮುಖ ಮಾತ್ರ. ಇನ್ನೊಂದು ಮುಖ ಕಾಣುವುದು, ಸಿನಿಮಾದಲ್ಲಿ ಮಿಂಚುವ ಭರವಸೆ ಹೊತ್ತು ಸೋಲು ಕಂಡವರ ಕಣ್ಣಲ್ಲಿ. ಅದೇ ರೀತಿ ಇದು ಗಾಡ್ ಫಾದರ್ ಗಳ ಲೋಕ. ಗಾಡ್ ಫಾದರ್ ಗಳು ಇಲ್ಲ ಎಂದಾದಲ್ಲಿ, ಎಂಥಾ ಪ್ರತಿಭೆಯಿದ್ದರೂ ಆತನನ್ನು ಹೊಸಕಿ ಹಾಕಲಾಗುತ್ತದೆ. ಆದರೆ, ಇದಕ್ಕೆ ಅಪವಾದ ಎನ್ನುವಂತೆ ಎದ್ದು ಬಂದವರೂ ಇದ್ದಾರೆ. ಅದರಲ್ಲಿ ಒಬ್ಬರು ನವೀನ್ ಕುಮಾರ್ ಅಲಿಯಾಸ್ ಯಶ್ (Yash) ಅಲಿಯಾಸ್ ರಾಕಿ ಭಾಯ್ (Rockey Bhai)!

ಧಾರವಾಹಿ ಮೂಲಕ ಬಣ್ಣದ ಬದುಕು ಆರಂಭಿಸಿ, ಕೆಜಿಎಫ್-2 (KGF-2)ಎನ್ನುವ ಚಿತ್ರದ ಮೂಲಕ ಇಂದು ಭಾರತದ (Inia) ಮೂಲೆಮೂಲೆಗೂ ಪರಿಚಿತರಾಗಿರುವ ಯಶ್, ಗುರುವಾರ ತಮ್ಮ ಸಾಮಾಜಿಕ ಜಾಲತಾಣದ ಪುಟದಲ್ಲಿ ಸ್ಪೂರ್ತಿದಾಯಕ ಕಥೆಯೊಂದನ್ನು ಹೇಳುವ ಮೂಲಕ ತನ್ನ ಈ ಜರ್ನಿಯ ಯಶಸ್ಸಿಗೆ ಶುಭ ಕೋರಿದ ಎಲ್ಲರೂ ಧನ್ಯವಾದ ಅರ್ಪಿಸಿದ್ದಾರೆ.

'ಒಂದು ಪುಟ್ಟ ಊರು. ಬಹಳ ವರ್ಷಗಳಿಂದ ಆ ಊರು ಬರಗಾಲದಿಂದ ಜರ್ಜರಿತವಾಗಿತ್ತು. ಊರಿನ ಜನ ಒಂದು ದಿನ, ಮಳೆಗಾಗಿ ಪ್ರಾರ್ಥನೆ ಮಾಡಬೇಕು ಎಂದು ನಿರ್ಧಾರ ಮಾಡಿದರು. ಎಲ್ಲರೂ ಪ್ರಾರ್ಥನೆ ಮಾಡಲು ಬರಿಗೈಯಲ್ಲಿ ಬಂದಿದ್ದರೆ, ಒಬ್ಬ ಹುಡುಗ ಮಾತ್ರ ಕೊಡೆ ಹಿಡಿದುಕೊಂಡು ಬಂದಿದ್ದ. ಇದನ್ನು ಕಂಡ ಅನೇಕರು ಇದೇನಿದು ಹುಚ್ಚುತನ ಅಂದುಕೊಂಡರು. ಇನ್ನೂ ಕೆಲವರು ಆ ಹುಡುಗನಿಗೆ ಅತಿಯಾದ ಆತ್ಮವಿಶ್ವಾಸ ಎಂದರು. ಆದರೆ, ಹುಡುಗನಲ್ಲಿ ಇದ್ದಿದ್ದೇನು ಗೊತ್ತಾ? ನಂಬಿಕೆ' ಎಂದು ಯಶ್ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

View post on Instagram


ನಾನೂ ಕೂಡ ಆ ಹುಡುಗನ ರೀತಿ. ಇಂಥದ್ದೊಂದು ದಿನ ಖಂಡಿತ ಬಂದೇ ಬರುತ್ತದೆ ಎಂದು ಕಾದಿದ್ದ ಹುಡುಗ ನಾನು. ನಾನು ಇರುವ ಸ್ಥಿತಿಯಲ್ಲಿ ಬರೀ ಥ್ಯಾಂಕ್ಸ್ ಎಂದು ಹೇಳುವುದು ಸಾಕಾಗುವುದಿಲ್ಲ. ಆದರೆ, ನಿಮ್ಮೆಲ್ಲರಿಗೂ ನನ್ನ ಹೃದಯಾಂತರಾಳದ ಥ್ಯಾಂಕ್ಸ್. ನನ್ನ ಮೇಲೆ ಇಷ್ಟೋದು ವಿಶ್ವಾಸ ಹಾರೈಕೆಗಳನ್ನು ಸುರಿಸಿದ್ದಕ್ಕೆ ಥ್ಯಾಂಕ್ಸ್. ನನ್ನ ಇಡೀ ಕೆಜಿಎಫ್ ತಂಡದ ಪರವಾಗಿ ಈ ಮಾತನ್ನು ಹೇಳುತ್ತಿದ್ದೇನೆ. ನಿಮ್ಮೆಲ್ಲರ ಪ್ರತಿಕ್ರಿಯೆಗಳಿಂದ ನಮಗೆ ಬಹಳ ಖುಷಿಯಾಗಿದೆ. ನಿಮಗೆ ಒಂದು ಅದ್ಭುತ ಸಿನಿಮಾದ ಖುಷಿ ನೀಡಬೇಕು ಎನ್ನುವುದಷ್ಟೇ ನಮ್ಮ ಆಸೆಯಾಗಿತ್ತು. ನೀವು ಇದನ್ನು ಸಂಭ್ರಮಿಸುತ್ತಿದ್ದೀರಿ ಎಂದು ನಾನು ಭಾವಿಸುತ್ತೇನೆ. ನಿಮ್ಮ ಹೃದಯವೇ ನನ್ನ ಟೆರಿಟರಿ ಎಂದು ಯಶ್ ಮಾತು ಮುಗಿಸಿದ್ದಾರೆ.

ಹಾಸನದ ಬೂವನಹಳ್ಳಿಯ ಆಸೆ ಕಂಗಳ ಹುಡುಗ ನವೀನ್ ಕುಮಾರ್ ಗೌಡ. ಯಶ್ ಆಗಿ ಬೆಳೆದಿದ್ದು ಈಗ ಇತಿಹಾಸ. ಆದರೆ, ಈಗ ಯಶ್ ಕೇವಲ ಕನ್ನಡದ ನಟ ಮಾತ್ರವಲ್ಲ. ಪ್ಯಾನ್ ಇಂಡಿಯಾ ಸ್ಟಾರ್. ಕೆಜಿಎಫ್ ಚಿತ್ರದ ಮೂಲಕ ಆಂಗ್ರಿ ಯಂಗ್ ಮ್ಯಾನ್ ಲುಕ್ ಅನ್ನು ಮರುಸೃಷ್ಟಿ ಮಾಡಿದ ನಟ. ಹಾಗಂತ ಯಶ್ ಅವರ ಸಿನಿಪಯಣದ ಹಾದಿ ಸುಲಭವಾಗಿತ್ತಾ? ಯಾವ ಗಾಡ್ ಫಾದರ್ ಗಳ ಸಹಾಯವಿಲ್ಲದೆ, ಬರೀ ನಂಬಿಕೆ, ಅದೃಷ್ಟದ ಬಲದೊಂದಿಗೆ ಯಶಸ್ಸಿನ ಉತ್ತುಂಗಕ್ಕೇರಿದವರು ಯಶ್.

ಕೆಜಿಎಫ್ ಬರುವ ಮುನ್ನ ಯಶ್ ಕನ್ನಡದ ಪ್ರಮುಖ ನಟರಾಗಿದ್ದರು. ಆದರೆ. ಈ ಐದು ವರ್ಷಗಳ ಅವಧಿಯಲ್ಲಿ ಬಂದ ಕೆಜಿಎಫ್ ಸರಣಿಯ ಎರಡು ಚಿತ್ರಗಳು ಅವರನ್ನು ಭಾರತದ ಸ್ಟಾರ್ ನಟನನ್ನಾಗಿ ಮಾಡಿದೆ. ಇಂದು ರಾಕಿ ಭಾಯ್ ಭಾರತದ ಬ್ರ್ಯಾಂಡ್.

ಮೆಜೆಸ್ಟಿಕ್ ನಲ್ಲಿ ನಿದ್ರೆಯಿಲ್ಲದೆ ಕಳೆದ ದಿನಗಳು, ಧಾರವಾಹಿಯಲ್ಲಿ ಚಿಕ್ಕಪುಟ್ಟ ಪಾತ್ರಗಳ ಮೂಲಕ ಬೆಳಕಿಗೆ ಬಂದ ಯಶ್ ಚಿತ್ರ ಜೀವನದ ಕಥೆಗಳೇ ರೋಚಕ. ಯಶ್ ತಂದೆ ಅರುಣ್ ಕುಮಾರ್ ಕೆಎಸ್ ಆರ್ ಸಿಟಿ ಚಾಲಕರಾಗಿದ್ದವರು. ತಾಯಿ ಪುಷ್ಪಾ ಗೃಹಿಣಿ. ಇವರಿಬ್ಬರಿಗೆ ನವೀನ್ ಕುಮಾರ್ ಹಾಗೂ ನಂದಿನಿ ಎನ್ನುವ ಇಬ್ಬರು ಮಕ್ಕಳು. ಮೈಸೂರಿನಲ್ಲಿದ್ದ ದಿನಗಳಲ್ಲೇ ನಾಟಕಗಳ ಗೀಳು ಹಚ್ಚಿಕೊಂಡಿದ್ದ ಯಶ್. ಬಿವಿ ಕಾರಂತ್ ಅವರ ಬೆನಕ ಡ್ರಾಮಾ ಗ್ರೂಪ್ ನ ಸದಸ್ಯರಾಗಿದ್ದರು.

KGF Chapter 2: ಕನ್ನಡ ಸಿನಿಮಾ ಹಾಲಿವುಡ್‌ಗೂ ಸೆಡ್ಡು ಹೊಡೆದದ್ಹೇಗೆ?

ಸಿನಿಮಾ ಗೀಳು ಹಚ್ಚಿಸಿಕೊಂಡಿದ್ದ ಯಶ್ ಗೆ ಮೈಸೂರು ಸಾಕಾಗಲಿಲ್ಲ. ಬೆಂಗಳೂರಿಗೆ ಬಂದು ಮಿಂಚುವ ಕನಸು ಕಂಡಿದ್ದರು. ಗಾಂಧಿನಗರ ಎನ್ನುವ ಮಾಯಾವಿ ಲೋಕದ ಸೆಳೆತವೇ ಹಾಗೆ. 2008ರಲ್ಲಿ ಶಶಾಂಕ್ ನಿರ್ದೇಶನದ ಮೊಗ್ಗಿನ ಮನಸು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಇಳಿಯುವ ಮುನ್ನ ನಂದಗೋಕುಲ, ಮಳೆಬಿಲ್ಲು, ಮುಕ್ತ ಹಾಗೂ ನಂದಗೋಕುಲ ಧಾರಾವಾಹಿಗಳಲ್ಲಿ ಪಾತ್ರ ಮಾಡಿದ್ದರು. ನಂದಗೋಕುಲ ಧಾರವಾಹಿಯಲ್ಲಿ ಪತ್ನಿ ರಾಧಿಕಾ ಪಂಡಿತ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದ ಯಶ್, ರಾಧಿಕಾ ಪಂಡಿತ್ ಅವರಿಗೆ ಹೀರೋ ಆಗುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುದ್ದು ಮಾತ್ರ ವಿಪರ್ಯಾಸ. ಒಟ್ಟಾರೆ ರಾಧಿಕಾ ಪಂಡಿತ್, ಯಶ್ ಅವರ ಯಶಸ್ಸಿಗೆ ಮೈಲಿಗಲ್ಲಾಗಿ ನಿಂತಿದ್ದರು. ಯಾಕೆಂದರೆ, ರಾಧಿಕಾ ಪಂಡಿತ್ ಇಲ್ಲದೆ ಯಶ್ ಸಿನಿಮಾ ಜೀವನ ಮುನ್ನಡೆಯೋದೇ ಇಲ್ಲ. ಯಶ್ ಸಿನಿಮಾ ಜೀವನದ ಎರಡು ದೊಡ್ಡ ಚಿತ್ರಗಳಾದ ಡ್ರಾಮಾ ಹಾಗೂ ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿಯಲ್ಲಿ ರಾಧಿಕಾ ಪಂಡಿತ್ ಯಶ್ ಗೆ ನಾಯಕಿ.

ಕೆಜಿಎಫ್‌ 2 ರಿಲೀಸ್‌ ನಂತರ ರಾಕಿಂಗ್‌ ಸ್ಟಾರ್‌ ಯಶ್‌ ಎಲ್ಲಿದ್ದಾರೆ.?

ಯಶಸ್ಸು ಸಿಕ್ಕಾಗ ಸಿಕ್ಕಷ್ಟು ಸಿನಿಮಾಗಳನ್ನು ಮಾಡಿ ಒಂದು ಹಂತಕ್ಕೆ ಸೆಟಲ್ ಆಗಿ ಜೀವನ ನಡೆಸುವ ಸ್ಟಾರ್ ಗಳ ಮಧ್ಯೆ ಯಶ್ ಭಿನ್ನವಾಗಿ ನಿಲ್ಲುತ್ತಾರೆ. ಮಾಸ್ಟರ್ ಪೀಸ್ ಹಾಗೂ ಸಂತು ಸ್ಟ್ರೇಟ್ ಫಾರ್ವಡ್ ಸಿನಿಮಾದ ನಡುವೆಯೇ ಕೆಜಿಎಫ್ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದರು. ದೊಡ್ಡ ಸ್ಟಾರ್ ಆದ ವ್ಯಕ್ತಿ ಬರೋಬ್ಬರಿ ಐದು ವರ್ಷಗಳನ್ನು ಕೇವಲ ಎರಡು ಸಿನಿಮಾಗಳಿಗೆ ಸೀಮಿತ ಮಾಡುವುದು ಬಹಳ ಅಪರೂಪ. ಆದರೆ, ಅಂಥಾ ಸಾಹಸವನ್ನು ಯಶ್ ಮಾಡಿದ್ದರಿಂದಲೇ ಇಂದು ಇಡೀ ಭಾರತವೇ ಗುರುತಿಸುವಂಥ ನಟನಾಗಿ ಬೆಳೆದಿದ್ದಾರೆ. ಕೆಜಿಎಫ್ ಚಾಪ್ಟರ್ -1 ಐದು ಭಾಷೆಗಳಲ್ಲಿ ಬಿಡುಗಡೆಗೊಂಡು 250 ಕೋಟಿ ಕಲ್ಷೆಕನ್ ಮಾಡಿದ್ದರೆ, ಕೆಜಿಎಫ್ ಚಾಪ್ಟರ್-2 ಇನ್ನೊಂದು ಹಂತ. ಎಲ್ಲರ ನಿರೀಕ್ಷೆಗಳನ್ನು ಮೀರಿ ಈ ಚಿತ್ರ ಕಲೆಕ್ಷನ್ ಮಾಡುತ್ತಿದೆ. ಅದರ ನಡುವೆ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲವೂ ಆರಂಭವಾಗಿದೆ.