ಬೆಂಗಳೂರು(ಅ.03): ಡ್ರಗ್ಸ್‌ ಮಾಫಿಯಾದಲ್ಲಿ ಇನ್ನೂ ಸಾಕಷ್ಟು ಜನ ಇದ್ದಾರೆ. ಇನ್ನೂ ಯಾಕೆ ರಾಜಕಾರಣಿಗಳ ಮಕ್ಕಳು, ದೊಡ್ಡ ದೊಡ್ಡ ನಟರನ್ನು ಬಂಧಿಸುತ್ತಿಲ್ಲ ಎಂದು ನಾನು ಪ್ರಶ್ನೆ ಮಾಡುತ್ತೇನೆ. ಕೇವಲ ನಟಿಯರೇ ಈ ಜಾಲದಲ್ಲಿ ಇರುವುದಾ? ಇನ್ನೂ ಸಾಕಷ್ಟು ದೊಡ್ಡ ನಟ, ನಟಿಯರು ಇದ್ದಾರೆ. ಅವರ ವಿಚಾರಣೆಯೂ ಆಗಬೇಕು ಎಂದು ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಸಿಬಿ ಅಧಿಕಾರಿಗಳು ಇನ್ನೂ ಇವರೆಲ್ಲರ ಕುರಿತ ಸಾಕ್ಷ್ಯ ಸಂಗ್ರಹ ಮಾಡುತ್ತಿದ್ದಾರಾ ಎಂಬುದು ಗೊತ್ತಿಲ್ಲ. ಸಾಧ್ಯವಾದಷ್ಟು ಬೇಗ ದೊಡ್ಡವರನ್ನೂ ಬಂಧಿಸಬೇಕು. ತಪ್ಪು ಮಾಡಿದವರಿಗೆ ಸೂಕ್ತ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ. 

'ಡ್ರಗ್ಸ್ ಮಾಫಿಯಾ ತನಿಖೆ ಪ್ರಭಾವಿ ರಾಜಕಾರಣಿಗಳ ಕಪಿಮುಷ್ಠಿಯಲ್ಲಿದೆ'

ನಾನು ನನ್ನಲ್ಲಿದ್ದ ಮಾಹಿತಿಗಳನ್ನು ತನಿಖಾ ತಂಡಕ್ಕೆ ನೀಡಿದ್ದೆ. ಆಗಲೇ ತನಿಖಾ ತಂಡದ ಬಳಿ ಸಾಕಷ್ಟು ಮಾಹಿತಿ ಇತ್ತು. ಆ ಬಳಿಕ ಅನೇಕ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಸುಮಾರು 6,000 ಕೆಜಿ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ. ಆದರೆ ತನಿಖೆ ಇನ್ನಷ್ಟು ಚುರುಕುಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.