ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ಶುರುವಾಗಲಿದೆಯಾ ಎಂಬ ಅನುಮಾನ ಶುರುವಾಗಿದೆ. ಅಂದಹಾಗೆ ನಟ ಯಶ್ ಹಾಗೂ ನಿರ್ದೇಶಕ ಮಾನ್ಸೋರೆ ಅವರು ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.
ಇಂದು ಪಾಕಿಸ್ತಾನದ ವಿರುದ್ಧ ಭಾರತ ಹೋರಾಟ ಮಾಡುತ್ತಿದೆ. ಪಾಕ್-ಭಾರತದ ನಡುವಿನ ವಾತಾವರಣ ಸಿಕ್ಕಾಪಟ್ಟೆ ಉದ್ವಿಗ್ನತೆ ಶುರುವಾಗಿದೆ. ಭಾರತೀಯ ಸೆಲೆಬ್ರಿಟಿಗಳು ಭಾರತದ ಆರ್ಮಿಯನ್ನು ಶ್ಲಾಘಿಸಿದ್ದಾರೆ. ಅಂದಹಾಗೆ ನಟ ಯಶ್ ಅವರು ಈ ಬಗ್ಗೆ ಪೋಸ್ಟ್ ಹಂಚಿಕೊಂಡು, ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಟ ಯಶ್ ಪೋಸ್ಟ್ ಹೀಗಿದೆ
ನಮ್ಮ ಭಾರತೀಯ ಸಶಸ್ತ್ರ ಪಡೆಗಳ ಅಚಲ ಶಕ್ತಿ, ನಿಖರತೆಗೆ ನಮನಗಳು - ನಮ್ಮ ಅಭೇದ್ಯ ಗುರಾಣಿ ಇದು! ಅವರ ಸೇವೆಗೆ ಕೃತಜ್ಞತೆಯೊಂದಿಗೆ, ನಾವು ಒಗ್ಗಟ್ಟಿನಿಂದ ನಿಂತು ಜವಾಬ್ದಾರಿಯುತವಾಗಿ ವರ್ತಿಸಬೇಕು. ಯಾವುದನ್ನೇ ಆಗಲೀ ಶೇರ್ ಮಾಡುವ ಮೊದಲು, ಅಥವಾ ಪ್ರತಿಕ್ರಿಯಿಸುವ ಮೊದಲು, ವಿಶೇಷವಾಗಿ ಆನ್‌ಲೈನ್‌ನಲ್ಲಿ ಎಲ್ಲವನ್ನೂ ಪರಿಶೀಲಿಸಿ. ತಪ್ಪು ಮಾಹಿತಿಯ ವಿರುದ್ಧ ನಮ್ಮ ಸಾಮೂಹಿಕ ಹೋರಾಟವು ಭಾರತವನ್ನು ಬಲಪಡಿಸುತ್ತದೆ.
ದುರ್ಬಲ ಪ್ರದೇಶಗಳಲ್ಲಿರುವ ಸಹ ಭಾರತೀಯರೊಂದಿಗೆ ಆಲೋಚನೆಗಳು; ಬಲಶಾಲಿಯಾಗಿರಿ, ದೃಢಮನಸ್ಸು ಇಟ್ಟುಕೊಳ್ಳಿ
ಜೈ ಹಿಂದ್!
ಕನ್ನಡ ನಿರ್ದೇಶಕ ಮನ್ಸೋರೆ ಅವರು ಬರೆದ ಬರಹ ಸಾಕಷ್ಟು ವಿವಾದ ಸೃಷ್ಟಿ ಮಾಡಿದೆ.
ತೆಲುಗಿನಲ್ಲಿ ಒಂದು ಮಾತಿದೆ.
ದೇಶಮಂಟೆ ಮಟ್ಟಿ ಕಾದೋಯ್, ದೇಶಮಂಟೆ ಮನುಷುಲೋಯ್.
ಈ ದೇಶದ ಪ್ರತಿಯೊಬ್ಬರ ಜೀವವೂ ಮುಖ್ಯವೇ .
ಯಾಕೋ ನೆನಪಾಯ್ತು.
ಮನುಷ್ಯರನ್ನು ಕೊಲ್ಲುವ, ಮಾನವೀಯತೆಗೆ ಕಂಟಕವಾಗಿರುವ, ಧರ್ಮದ ಹೆಸರಲ್ಲಿ ದುಷ್ಕೃತ್ಯ ಎಸಗುವ, ಈ ರಾಕ್ಷಸರ ಎಲ್ಲಾ ರೀತಿಯ ಭಯೋತ್ಪಾದನೆ, ಭಯೋತ್ಪಾದಕರು ಸರ್ವನಾಶವಾಗಲಿ.
ದೇಶದಲ್ಲಿ ಶಾಂತಿ ನೆಲೆಸಲಿ.
ಜಮ್ಮುವಿನಲ್ಲಿ ತುಂಬಾ ಹತ್ತಿರದವರು, ಪರಿಚಿತರೊಬ್ಬರು ಸಿಲುಕಿಕೊಂಡಿದ್ದಾರೆ, ಅಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗಿದೆ, ತುಂಬಾ ಆತಂಕವಾಗುತ್ತಿದೆ. ಅವರು ಮತ್ತು ಉಳಿದ ಯಾರಿಗೂ ಏನೂ ಆಗದಿರಲಿ, ಯಾರ ಜೀವಕ್ಕೂ ಹಾನಿ ಆಗದಿರಲಿ.
ನಿಜಕ್ಕೂ ಏನಾಗಿದೆ?
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಸೇನೆಯು ಆಪರೇಷನ್ ಸಿಂದೂರವನ್ನು ಆರಂಭಿಸಿದೆ. ಏಪ್ರಿಲ್ 22 ರಂದು ಭಯೋತ್ಪಾದಕರು ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಕ್ರೂರವಾಗಿ ಹತ್ಯೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತೀಯ ಸೇನೆಯು ಆಪರೇಷನ್ ಸಿಂದೂರದ ಅಡಿಯಲ್ಲಿ ಪಾಕಿಸ್ತಾನದಲ್ಲಿ ಹಲವಾರು ಭಯೋತ್ಪಾದಕ ನೆಲೆಗಳನ್ನು, 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದುರುಳಿಸಿದೆ. ಕೆರಳಿದ ಪಾಕಿಸ್ತಾನವು ಭಾರತದ ಮೇಲೆ ಕ್ಷಿಪಣಿ, ಡ್ರೋನ್ ದಾಳಿಗಳನ್ನು ನಿರಂತರವಾಗಿ ನಡೆಸುತ್ತಿದೆ, ಭಾರತೀಯ ಸೇನೆಯು ಅದಕ್ಕೆ ತಕ್ಕ ಉತ್ತರ ನೀಡುವ ಮೂಲಕ ಅದರ ಪ್ರತಿಯೊಂದು ಕೆಟ್ಟ ಉದ್ದೇಶವನ್ನು ವಿಫಲಗೊಳಿಸುತ್ತಿದೆ.
ಈ ಬಾರಿ ಕಪ್ ನಮ್ದೇ ಎಂದು ಜಪ ಮಾಡುತ್ತಿರುವಾಗಲೇ ಯುದ್ಧದ ಭೀತಿ ಶುರುವಾಗಿದೆ, ನಮ್ಮವರು ಆರೋಗ್ಯಕರವಾಗಿರಬೇಕು, ದೇಶ ಸುರಕ್ಷತೆಯಿಂದ ಇರಬೇಕು ಎನ್ನುವ ಆಶಯ ಇದೆ. ಹೀಗಿರುವಾಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಈ ವರ್ಷದ ಐಪಿಎಲ್ ರದ್ದು ಮಾಡಿದೆ. ಇನ್ನು 16 ಪಂದ್ಯಗಳು ಬಾಕಿ ಇರುವಾಗ, ಇಡೀ ಟೂರ್ನಿಯನ್ನು ರದ್ದು ಮಾಡಿದೆ. ಪಾಕಿಸ್ತಾನದ ವಿರುದ್ಧ ಯುದ್ದ ಭೀತಿ ಹೆಚ್ಚಾಗಿರುವ ಹಾಗೆ ಕಾಣ್ತಿದೆ. ಈ ಸಂಘರ್ಷ ಕಡಿಮೆಯಾಗ್ತಿರೋ ಲಕ್ಷಣಗಳು ಕಾಣದೆ ಇರೋದಿಕ್ಕೆ, ಬಿಸಿಸಿಐ ಈ ನಿರ್ಧಾರ ಮಾಡಿತ್ತು. ಇದಕ್ಕೆ ಸರ್ಕಾರದ ಒಪ್ಪಿಗೆ ಕೂಡ ಇದೆ. ಇನ್ನು ಗೃಹ ಇಲಾಖೆಯ ಸೂಚನೆಯ ಮೇರೆಗೆ ಈ ನಿರ್ಧಾರವನ್ನು ತಗೊಳ್ಳಲಾಗಿದೆ. ಅಷ್ಟೇ ಅಲ್ಲದೆ CA ಪರೀಕ್ಷೆ ಕೂಡ ಮುಂದೂಡಲಾಗಿದೆ. ಈ ಟೈಮ್‌ನಲ್ಲಿ ಭಾರತೀಯರು ಪ್ರವಾಸ ಮಾಡೋದು ಕೂಡ ಒಳ್ಳೆಯದಲ್ಲ. ಅಂದಹಾಗೆ ಕೆಲ ವಸ್ತುಗಳ ದರ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಏನೇನು ಆಗಲಿದೆಯೋ ಏನೋ!

