ಡಾ.ರಾಜ್‌ಕುಮಾರ್ ಸ್ಮಾರಕಕ್ಕೆ ಸರ್ಕಾರಿ ಭೂಮಿ ನೀಡಿದ್ದನ್ನು ಪ್ರಶ್ನಿಸಿ ನಟ ಚೇತನ್ ವಿವಾದ ಸೃಷ್ಟಿಸಿದ್ದಾರೆ. ಕನ್ನಡಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾದರೂ, ತಮ್ಮ ಹೇಳಿಕೆಗೆ ಬದ್ಧರಾಗಿದ್ದು, ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಸಮರ್ಥಿಸಿಕೊಂಡು ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ಡಾ.ರಾಜ್‌ಕುಮಾರ್ ಸ್ಮಾರಕಕ್ಕೆ ಸರ್ಕಾರದಿಂದ ಭೂಮಿ ನೀಡಿರುವ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಡಾ. ರಾಜ್‌ಕುಮಾರ್ ಅಭಿಮಾನಿಗಳು ಮತ್ತು ಕನ್ನಡಪರ ಹೋರಾಟಗಾರರಿಂದ ಟೀಕೆಗೆ ಗುರಿಯಾಗಿರುವ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಚೇತನ್, ಕನ್ನಡಪರ ಸಂಘಟನೆಗಳು ಹಾಗೂ ಸಾ.ರಾ. ಗೋವಿಂದು ಹೇಳಿಕೆಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಅಗತ್ಯವಾದರೆ ಕಾನೂನು ಹೋರಾಟ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಡಾ.ರಾಜ್‌ಕುಮಾರ್ ಅವರ ಬಗ್ಗೆ ನನಗೂ ಗೌರವವಿದ್ದು, ನಾನೂ ಅವರ ಅಭಿಮಾನಿ. ಅದಕ್ಕಾಗಿಯೇ ರಾಜ್‌ಕುಮಾರ್ ಅವರ ಅಭಿಮಾನಿಗಳಿಗೆ ಬೇಸರವಾಗಿದ್ದಕ್ಕೆ ಕ್ಷಮೆ ಕೇಳಿದೆ. ಆದರೆ, ಸಾ.ರಾ.ಗೋವಿಂದು ಅವರು ನನಗೆ ಬೆದರಿಕೆ ಹಾಕುವಂತೆ ಮಾತನಾಡಿದ್ದಾರೆ. ಅವರಿಗೆ ನನ್ನ ನಿಲುವಿನ ಬಗ್ಗೆ ವಿರೋಧವಿದ್ದರೆ ಸೌಜನ್ಯಯುತವಾಗಿ, ಸೂಕ್ತ ವೇದಿಕೆಯಲ್ಲಿ ವಿರೋಧ ವ್ಯಕ್ತ ಮಾಡಬಹುದಿತ್ತು. ಆದರೆ, ನನ್ನ ಮನೆ ಮುಂದೆ ಬಂದು ಗೂಂಡಾಗಳ ರೀತಿ ವರ್ತಿಸಿ, ಬೆದರಿಕೆ ಹಾಕಿದ್ದು ಸರಿಯಲ್ಲ ಎಂದರು.
ಅಭಿವ್ಯಕ್ತಿ ಸ್ವಾತಂತ್ರ್ಯವಿದೆ
ಸಾ.ರಾ.ಗೋವಿಂದು ಅವರಂಥವರು ಡಾ.ರಾಜ್‌ಕುಮಾರ್ ಅವರ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ. ನಾವೆಲ್ಲ ರಾಜ್‌ಕುಮಾರ್‌ರಿಂದ ಸೌಜನ್ಯದಿಂದ ಮಾತನ್ನು ಹಿಡಿತದಲ್ಲಿಟ್ಟುಕೊಂಡು ಹೋರಾಟ ನಡೆಸುವುದನ್ನು ಕಲಿತಿದ್ದೇವೆ. ಅದನ್ನು ಮುಂದುವರಿಸಿಕೊಂಡು ಹೋಗೋಣ. ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಈ ಹಿಂದೆ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ನಾನು ಈಗಲೂ ಬದ್ಧ. ಡಾ.ರಾಜ್‌ಕುಮಾರ್ ಅವರು ಇದ್ದಿದ್ದರೆ ಸರ್ಕಾರದ ಭೂಮಿಯನ್ನು ತೆಗೆದುಕೊಳ್ಳುತ್ತಿರಲಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು.
ನನ್ನ ವಿರುದ್ಧದ ಬೆದರಿಕೆ, ದಬ್ಬಾಳಿಕೆ ಕುರಿತು ಕಾನೂನು ಸಲಹೆಗಾರರೊಂದಿಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ನಾನು ಹೇಳುವುದು ಪ್ರಚಾರಕ್ಕಲ್ಲ, ವಿಚಾರಕ್ಕಾಗಿ. ಸರ್ಕಾರ ಒಬ್ಬರಿಗೆ ಭೂಮಿ ನೀಡಿ, ಮತ್ತೊಬ್ಬರಿಗೆ ಕೊಡಲಿಲ್ಲ ಎಂದರೆ ಚಿತ್ರರಂಗದಲ್ಲಿ ಗಲಾಟೆಯಾಗುತ್ತದೆ. ಅದಕ್ಕಾಗಿ ಹೇಳಿದ್ದೇನೆ ಎಂದು ತಿಳಿಸಿದರು.
ಸರ್ಕಾರದಿಂದ ಎರಡೂವರೆ ಎಕರೆ ಭೂಮಿ
ಡಾ. ರಾಜ್‌ಕುಮಾರ್ ಸ್ಮಾರಕದ ಭೂಮಿಗೆ ಸರ್ಕಾರದಿಂದ ಎರಡೂವರೆ ಎಕರೆ ಭೂಮಿ ನೀಡಿರುವುದನ್ನು ಚೇತನ್ ಅಹಿಂಸಾ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತಲ್ಲದೆ, ಕನ್ನಡಪರ ಹೋರಾಟಗಾರರೂ ಶನಿವಾರ ಚೇತನ್ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಚೇತನ್, ಕನ್ನಡಪರ ಹೋರಾಟಗಾರರು ಮತ್ತು ರಾಜ್‌ಕುಮಾರ್ ಅಭಿಮಾನಿಗಳ ಕ್ಷಮೆಯನ್ನೂ ಕೇಳಿದ್ದರು.
ಚೇತನ್‌ಗೆ ಹಲವು ಸಂಘಟನೆಗಳ ಬೆಂಬಲ
ಇದೀಗ ಪ್ರಕರಣಕ್ಕೆ ಸಂಬಂಧಿಸಿ ಸ್ವಾಭಿಮಾನಿ ಬಳಗ, ಭೀಮ್‌ರಾವ್ ಕ್ರಾಂತಿಕಾರಿ ಸಂಘಟನೆ, ಕಾಡುಗೊಲ್ಲ ಸಂಘಟನೆ ಸೇರಿ ಇನ್ನಿತರ ಸಂಘಟನೆ ಸದಸ್ಯರು ಭಾನುವಾರ ಚೇತನ್ ಮನೆಗೆ ಭೇಟಿ ನೀಡಿ ಬೆಂಬಲ ಸೂಚಿಸಿದರು. ಜತೆಗೆ ಚೇತನ್ ವಿರುದ್ಧ ಸಾ.ರಾ.ಗೋವಿಂದು ಅವರು ಬೆದರಿಕೆ ಹಾಕಿರುವ ಕುರಿತಂತೆಯೂ ಚರ್ಚೆ ಮಾಡಿದ ಸಂಘಟನೆ ಸದಸ್ಯರು, ನಿಮ್ಮೊಂದಿಗೆ ತಾವಿದ್ದೇವೆ ಎಂದು ಅಭಯ ನೀಡಿದರು.


