- Home
- Entertainment
- Sandalwood
- ಕನ್ನಡಕ್ಕಾಗಿ ಕಠಿಣ ನಿರ್ಧಾರ: ಕುಲದಲ್ಲಿ ಕೀಳ್ಯಾವುದೋ ಚಿತ್ರದ ಸೋನು ನಿಗಮ್ ಹಾಡಿಗೆ ಗೇಟ್ ಪಾಸ್
ಕನ್ನಡಕ್ಕಾಗಿ ಕಠಿಣ ನಿರ್ಧಾರ: ಕುಲದಲ್ಲಿ ಕೀಳ್ಯಾವುದೋ ಚಿತ್ರದ ಸೋನು ನಿಗಮ್ ಹಾಡಿಗೆ ಗೇಟ್ ಪಾಸ್
ಸೋನು ನಿಗಮ್ ಉತ್ತಮ ಗಾಯಕ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ನಮ್ಮ ಚಿತ್ರದ ಹಾಡೊಂದನ್ನು ಸೋನು ನಿಗಮ್ ಮೂರು ತಿಂಗಳ ಹಿಂದೆ ಹಾಡಿದ್ದರು. ಆದರೆ, ಈಗ ಸೋನು ನಿಗಮ್ ಕನ್ನಡಕ್ಕೆ ಮಾಡಿರುವ ಅವಮಾನ ಸಹಿಸಲ್ಲ.

ರಾಮ್ ನಾರಾಯಣ್ ನಿರ್ದೇಶನದ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರತಂಡವು ಒಂದು ಹಾಡನ್ನು ಸೋನು ನಿಗಮ್ ಅವರಿಂದ ಹಾಡಿಸಿತ್ತು. ಇದೀಗ ಸಿನಿಮಾದಲ್ಲಿ ಆ ಹಾಡನ್ನು ಕಿತ್ತು ಹಾಕುವ ಮೂಲಕ ಸೋನು ನಿಗಮ್ ವಿರುದ್ಧ ಪ್ರತಿಭಟನೆ ಮಾಡಿದೆ.
ಈ ಕುರಿತು ರಾಮ್ ನಾರಾಯಣ್, ‘ಸೋನು ನಿಗಮ್ ಉತ್ತಮ ಗಾಯಕ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ನಮ್ಮ ಚಿತ್ರದ ಹಾಡೊಂದನ್ನು ಸೋನು ನಿಗಮ್ ಮೂರು ತಿಂಗಳ ಹಿಂದೆ ಹಾಡಿದ್ದರು.
ಆದರೆ, ಈಗ ಸೋನು ನಿಗಮ್ ಕನ್ನಡಕ್ಕೆ ಮಾಡಿರುವ ಅವಮಾನ ಸಹಿಸಲ್ಲ. ಹೀಗಾಗಿ ಅವರು ಹಾಡಿರುವ ಹಾಡನ್ನು ತೆಗೆದು ಹಾಕಿದ್ದೇವೆ. ಈ ಹಾಡನ್ನು ಕನ್ನಡದ ಗಾಯಕ ಚೇತನ್ ಬಳಿ ಹಾಡಿಸಿದ್ದೇವೆ. ಸದ್ಯದಲ್ಲೇ ಹಾಡು ಬಿಡುಗಡೆ ಮಾಡುತ್ತೇವೆ’ ಎಂದರು.
ನಿರ್ಮಾಪಕ ಸಂತೋಷ್ ಕುಮಾರ್ ಮಾತನಾಡಿ, ಕನ್ನಡದ ಬಗ್ಗೆ ಮಾತು ಬಂದಾಗ ನಮಗೆ ಮೊದಲು ಕನ್ನಡ ಮುಖ್ಯ. ಆಮೇಲೆ ಮಿಕ್ಕಿದ್ದು. ಸೋನು ನಿಗಮ್ ಅವರು ಉತ್ತಮ ಗಾಯಕರಾಗಿದ್ದು, ಅವರಿಂದ ಈ ರೀತಿಯ ವರ್ತನೆ ನಿರೀಕ್ಷಿಸಿರಲಿಲ್ಲ. ಘಟನೆ ನಡೆದು ಕೆಲ ದಿನಗಳ ನಂತರ ಇತ್ತೀಚೆಗೆ ಅವರು ಕ್ಷಮೆ ಕೇಳಿದ ವಿಡಿಯೋ ನೋಡಿದೆ ಎಂದರು.
ಸಂಗೀತ ನಿರ್ದೇಶಕ ಮನೋಮೂರ್ತಿ, ಹಾಡಿಗೆ ಸಾಹಿತ್ಯ ನೀಡಿರುವ ಯೋಗರಾಜ್ ಭಟ್ ಚಿತ್ರತಂಡದ ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಸಂತೋಷ್ ಕುಮಾರ್ ಹಾಗೂ ವಿದ್ಯಾ ನಿರ್ಮಾಣದ ಈ ಸಿನಿಮಾ ಮೇ 23ಕ್ಕೆ ತೆರೆಗೆ ಬರಲಿದೆ. ಮಡೆನೂರ್ ಮನು ನಾಯಕನಾಗಿ, ಮೌನ ಗುಡ್ಡೆಮನೆ ನಾಯಕಿಯಾಗಿ ನಟಿಸಿದ್ದಾರೆ.