60 ಮಿಲಿಯನ್ ಹಿಟ್ಸ್ ದಾಟಿದ ಮಾರ್ಟಿನ್ ಟೀಸರ್111. ನಾನು ಯಾವ ಸ್ಟಾರ್ ನಟರಿಗೂ ಸ್ಪರ್ಧಿ ಅಲ್ಲ. ಅವರೆಲ್ಲ ನನ್ನ ಸ್ನೇಹಿತರು. ನಾನೂ ಕೂಡ ಅವರ ಸ್ನೇಹಿತ. ನಾವು ಸ್ಪರ್ಧಿಗಳಲ್ಲ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ನಾನು ಯಾವ ಸ್ಟಾರ್ ನಟರಿಗೂ ಸ್ಪರ್ಧಿ ಅಲ್ಲ. ಅವರೆಲ್ಲ ನನ್ನ ಸ್ನೇಹಿತರು. ನಾನೂ ಕೂಡ ಅವರ ಸ್ನೇಹಿತ. ನಾವು ಸ್ಪರ್ಧಿಗಳಲ್ಲ.
- ಹೀಗೆ ಹೇಳಿದ್ದು ನಟ ಧ್ರುವ ಸರ್ಜಾ. ಅದು ‘ಮಾರ್ಟಿನ್’ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ. ಬಹುಭಾಷೆಯ ಪತ್ರಕರ್ತರ ಸಮ್ಮುಖದಲ್ಲಿ ಕೇಳಿ ಬಂದ ಪ್ರಶ್ನೆಗಳಿಗೆ ಉತ್ತರಿಸಲು ನಿಂತ ಧ್ರುವ ಸರ್ಜಾ, ‘ನಾನು ಪ್ಯಾನ್ ಇಂಡಿಯಾ ನಟನಾಗಿ ತೆರೆದುಕೊಳ್ಳುತ್ತಿರುವುದು ತಡವಾಗುತ್ತಿರಬಹುದು. ಪ್ಯಾನ್ ಇಂಡಿಯಾಗೆ ಚಿತ್ರಕ್ಕೆ ಬೇಕಾದ ಕತೆ, ಪಾತ್ರಕ್ಕಾಗಿ ಕಾಯುತ್ತಿದ್ದೆ. ‘ಮಾರ್ಟಿನ್’ ಮೂಲಕ ಅದು ಸಾಧ್ಯವಾಗಿದೆ. ನನಗಿಂತ ಮುಂಚೆ ಪ್ಯಾನ್ ಇಂಡಿಯಾ ಸ್ಟಾರ್‌ಗಳಾಗಿ ಗುರುತಿಸಿಕೊಂಡ ಯಶ್, ಸುದೀಪ್ ಅವರಂತಹ ನಟರಿಗೆ ನಾನು ಸ್ಪರ್ಧಿ ಅಲ್ಲ. ಅವರಿಗೂ ನಾನು ಸ್ಪರ್ಧಿಲ್ಲ. ನಾವೆಲ್ಲ ಸ್ನೇಹಿತರು. ನನ್ನ ಸ್ಪರ್ಧೆ ಏನಿದ್ದರೂ ನನ್ನ ಜತೆಗೆ ಮಾತ್ರ. ಬೇರೆಯವರ ಜತೆಗೆ ಅಲ್ಲವೇ ಅಲ್ಲ’ ಎಂದು ಸಿನಿಮಾಗಳಲ್ಲಿ ಬರುವ ಅವರ ಡೈಲಾಗ್‌ಗಳಂತೆಯೇ ಖಡಕ್ ಆಗಿ ಹೇಳಿದರು. ಎಪಿ ಅರ್ಜುನ್ ನಿರ್ದೇಶಿಸಿ, ಉದಯ್ ಮೆಹ್ತಾ ನಿರ್ಮಿಸಿರುವ, ಅರ್ಜುನ್ ಸರ್ಜಾ ಕತೆ ಬರೆದಿರುವ ಈ ಚಿತ್ರದ ಟೀಸರ್‌ಗೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ. ಕ್ವಾಲಿಟಿ ಮೇಕಿಂಗ್, ಭರ್ಜರಿ ಆ್ಯಕ್ಷನ್, ತಾಂತ್ರಿಕತೆಯ ಮೆರಗು, ಧ್ರುವ ಸರ್ಜಾ ಅವರ ಔಟ್ ಲುಕ್‌ನಿಂದ ಟೀಸರ್ ಬೆಂಕಿ ಕೆಂಡದಂತೆ ಮೂಡಿ ಬಂದಿದೆ ಎಂಬುದು ನೋಡುಗರ ಮಾತು.
ಸಿನಿ ಪ್ರಿಯರ ನಿದ್ದೆಗೆಡಿಸಿದ 'ಮಾರ್ಟಿನ್' ಟೀಸರ್: 'ಅಜಾನುಬಾಹು'ಗಳ ಸೆಣಸಾಟಕ್ಕೆ ಫ್ಯಾನ್ಸ್ ಫಿದಾ
ಅಂದಹಾಗೆ ‘ಮಾರ್ಟಿನ್’ ಟೀಸರ್ 60 ಮಿಲಿಯನ್ ಹಿಟ್ಸ್ ಪಡೆದುಕೊಂಡು, ಟ್ರೆಂಡಿಂಗ್‌ನಲ್ಲಿದೆ. ಬೆಂಗಳೂರಿನ ಓರಾಯನ್ ಮಾಲ್‌ನಲ್ಲಿ ನಡೆದ ಪ್ಯಾನ್ ಇಂಡಿಯಾ ಪತ್ರಿಕಾಗೋಷ್ಟಿಯಲ್ಲಿ ಸಾಹಸ ನಿರ್ದೇಶಕರಾದ ರಾಮ್ ಲಕ್ಷ್ಮಣ್, ಛಾಯಾಗ್ರಾಹಕ ಸತ್ಯ ಹೆಗ್ಡೆ, ಕಲಾ ನಿರ್ದೇಕ ಮೋಹನ್ ಬಿ ಕೆರೆ ಅವರ ಮಾತುಗಳ ನಂತರ ಎಪಿ ಅರ್ಜುನ್, ಉದಯ್ ಮೆಹ್ತಾ, ಧ್ರುವ ಸರ್ಜಾ, ಅರ್ಜುನ್ ಸರ್ಜಾ, ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್ ಅವರು ಮಾತನಾಡಿದರು. ‘ಟೀಸರ್ ನೋಡಿದರೆ ಯಾವ ರೀತಿಯ ಸಿನಿಮಾ ಎಂಬುದು ನಿಮಗೇ ಗೊತ್ತಾಗುತ್ತದೆ. ಇಲ್ಲಿ ‘ಮಾರ್ಟಿನ್’ ನಾನಲ್ಲ. ನಾನು ಅರ್ಜುನ್ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದೇನೆ. ‘ಮಾರ್ಟಿನ್’ ಯಾರು ಎಂಬುದೇ ಚಿತ್ರದ ಕತೆ. ಅದನ್ನು ನೀವು ತೆರೆ ಮೇಲೆ ನೋಡಬೇಕು. ತುಂಬಾ ದೊಡ್ಡ ಮಟ್ಟದ ಆ್ಯಕ್ಷನ್ ಸಿನಿಮಾ ಮಾಡಬೇಕು ಎನ್ನುವ ಆಸೆ ಈ ಸಿನಿಮಾದಿಂದ ಈಡೇರಿದೆ. ಇಡೀ ತಂಡದ ಪರಿಶ್ರಮದಿಂದ ಮೂಡಿ ಬಂದಿರುವ ಸಿನಿಮಾ ಇದು’ ಎಂದು ಧ್ರುವ ಸರ್ಜಾ ಹೇಳಿಕೊಂಡರು. ‘ದೇಶ ಪ್ರೇಮ, ಗಡಿಗಳು, ಯುದ್ದ ಇತ್ಯಾದಿಗಳನ್ನು ಒಳಗೊಂಡ ಸಿನಿಮಾ. ಇದು ಸರ್ಜಿಕಲ್ ಸ್ಟೆ್ರೖಕ್ ಆಧರಿಸಿದ ಕತೆಯೇ ಅಥವಾ ಭಾರತೀಯ ಯುದ್ಧ ಖೈದಿಯ ಚಿತ್ರವೇ ಎಂಬುದನ್ನು ತಿಳಿಯಕ್ಕೆ ನೀವು ಸಿನಿಮಾ ನೋಡಬೇಕು’ಎಂದು ಚಿತ್ರಕ್ಕೆ ಕತೆ ಬರೆದಿರುವ ಅರ್ಜುನ್ ಸರ್ಜಾ ಅವರು ಬಹುಭಾಷೆಯಲ್ಲಿ ಹೇಳಿದರು.
ಮಾರ್ಟಿನ್ ಸಿನಿಮಾದಲ್ಲಿ ನಾನಿಲ್ಲ, ಕನ್ನಡತಿಯಾಗಿ ಸಪೋರ್ಟ್ ಮಾಡುತ್ತಿರುವೆ: ಅದ್ವಿತಿ ಶೆಟ್ಟಿ
ನಿರ್ದೇಶಕ ಎ ಪಿ ಅರ್ಜನ್, ಏನು ಮಾತನಾಡಬೇಕು ಎಂಬುದು ಚೀಟಿ ಬರೆದುಕೊಂಡು ಬಂದಿದ್ದರು. ಆದರೆ, ಆ ಚೀಟಿ ಎಲ್ಲರಿಗೂ ನಮಸ್ಕಾರ, ಕೃತಜ್ಞತೆ, ವಂದನೆಗಳನ್ನು ಅರ್ಪಿಸುವುದಕ್ಕೆ ಸೀಮಿತವಾಯಿತು. ಉದಯ್ ಮೆಹ್ತಾ ಅವರು ಇಂಗ್ಲಿಷ್‌ನಲ್ಲಿ ಮಾತನಾಡಿ ಪ್ಯಾನ್ ಇಂಡಿಯಾ ಚಿತ್ರದ ಪತ್ರಿಕಾಗೋಷ್ಟಿಯ ಮೆರಗು ಹೆಚ್ಚಿಸಿದರು. ಚಿತ್ರದ ನಾಯಕಿಯರಾದ ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್ ಅವರು ಹಿಂದಿಯಲ್ಲಿ ಮಾತನಾಡಿ ಮುಂಬಾಯಿನಿಂದ ಬಂದಿದ್ದ ಪತ್ರಕರ್ತರ ಚಪ್ಪಾಳೆ- ಶಿಳ್ಳೆಗಳಿಗೆ ಪಾತ್ರರಾದರು. ಹೊರಗಿನಿಂದ ಬಂದಿದ್ದ ಪತ್ರಕರ್ತರು ‘ಕೆಜಿಎಫ್’, ‘ಕಾಂತಾರ’, ‘ಆರ್‌ಆರ್‌ಆರ್’ ಗುಂಗಿನಲ್ಲಿ ಅದೇ ಪ್ರಶ್ನೆಗಳ ಬಾಣಗಳನ್ನು ಎಸೆದರು. ಸ್ಥಳೀಯ ಸಿನಿಮಾ ಪತ್ರಕರ್ತರ ಕಣ್ಣೋಟಗಳು ವೇದಿಕೆ ಹಾಗೂ ಸಭಾಂಗಣ ಸುತ್ತ ನಿಂತಿದ್ದ ವಿದೇಶಿ ಬಾಲೆಯರ ಕಡೆಗೆ ನೆಟ್ಟಿದ್ದವು!
