ಹಿರಿಯ ನಟ ಅನಂತ್‌ನಾಗ್‌ಗೆ ಗೌರವ ಡಾಕ್ಟರೇಟ್ ಪ್ರದಾನ
ಸ್ಯಾಂಡಲ್ ವುಡ್‌ನ ಹಿರಿಯ ನಟ ಅನಂತ್ ನಾಗ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಹಿರಿಯ ನಟನಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಸ್ಯಾಂಡಲ್ ವುಡ್‌ನ ಹಿರಿಯ ನಟ ಅನಂತ್ ನಾಗ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಹಿರಿಯ ನಟನಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಶುಕ್ರವಾರ (ಅಕ್ಟೋಬರ್ 7) ಪ್ರದಾನ ಮಾಡಿದರು. ರೇಸ್ ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದಲ್ಲಿ ನಡೆದ ಸಮಾರಂಭದಲ್ಲಿ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಡಾಕ್ಟರೇಟ್ ಪದವಿ ಪಡೆಯಲು ಅನಂತ ನಾಗ್ ಕುಟುಂಬ ಸಮೇತ ಆಗಮಿಸಿದ್ದರು. ಮಗಳು ಅದಿತಿ ಅಳಿಯ ವಿವೇಕ್ ಹಾಗೂ ಪತ್ನಿ ಗಾಯತ್ರಿ ಜೊತೆ ಅನಂತನಾಗ್ ಎಂಟ್ರಿ ಕೊಟ್ಟಿದ್ದರು.
ಇನ್ನು ಡಾಕ್ಟರೇಟ್ ಪ್ರದಾನ ಮಾಡಿ ಮಾತನಾಡಿದ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ, 'ಅನಂತನಾಗ್ ಅವರು ಚಿತ್ರರಂಗಕ್ಕೆ ಬಂದ ಸುವರ್ಣ ಮಹೋತ್ಸವದ ವರ್ಷದಲ್ಲಿ ಗೌರವ ಡಾಕ್ಟರೇಟ್ ನೀಡುವ ಮೂಲಕ ಬೆಂಗಳೂರು ಉತ್ತರ ವಿವಿ ತನ್ನನ್ನು ತಾನೇ ಗೌರವಿಸಿ ಕೊಂಡಿದೆ' ಎಂದು ಬಣ್ಣಿಸಿದರು. 'ಅನಂತನಾಗ್ ಮತ್ತು ಶಂಕರನಾಗ್ ಸಹೋದರರು ತಾಯಿ ಭುವನೇಶ್ವರಿಯ ಹೆಮ್ಮೆಯ ಪುತ್ರರಾಗಿದ್ದಾರೆ. ರಾಜ್ಯದಲ್ಲಿ ರಾಮಕೃಷ್ಣ ಹೆಗಡೆಯವರ ಮೂಲಕ ರಾಜಕೀಯ ಬದಲಾವಣೆ ತರುವಲ್ಲಿ ಇವರಿಬ್ಬರೂ ವಹಿಸಿದ ಪಾತ್ರ ಸ್ಮರಣೀಯವಾಗಿದೆ' ಎಂದರು.
'ಅಧ್ಯಯನಶೀಲತೆ ಮತ್ತು ಚಿಂತನ ಶೀಲತೆಗಳನ್ಮು ರೂಢಿಸಿಕೊಂಡಿರುವ ಅನಂತನಾಗ್ ಅವರು ಸಾರ್ವಜನಿಕ ಜೀವನದಲ್ಲಿ ಕೂಡ ತಮ್ಮ ಛಾಪು ಮೂಡಿಸಿದ ಮೇರು ವ್ಯಕ್ತಿ ಆಗಿದ್ದಾರೆ. ಅನಂತನಾಗ್ ನೇರ ಮತ್ತು ನಿಷ್ಠುರ ನುಡಿಗೆ ಹೆಸರಾಗಿದ್ದಾರೆ. ನಾಗ್ ಸಹೋದರರು ಕನ್ನಡ ನಾಡಿನ ಅದ್ಬುತ ಜೋಡಿ ಆಗಿದ್ದರು. ಅನಂತ್ ಅವರು ತಮ್ಮ ವಿಶಿಷ್ಟ ವ್ಯಕ್ತಿತ್ವಕ್ಕೆ ಹೆಸರಾಗಿದ್ದಾರೆ' ಎಂದು ಅವರು ವ್ಯಾಖ್ಯಾನಿಸಿದರು.
‘ಪ್ರೀತಿಯಿಂದ ರಮೇಶ್’ ಬಿಡುಗಡೆ: ಕಾಲೇಜು ವಿದ್ಯಾರ್ಥಿಗಳು ಓದಲೇಬೇಕಾದ ಪುಸ್ತಕ!
ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ನಟ ಅನಂತನಾಗ್ ಅಶ್ವತ್ಥನಾರಾಯಣ ಅವರನ್ನು ಹೊಗಳಿದರು. 'ಮಲ್ಲೇಶ್ವರಂ ಕ್ಷೇತ್ರದ ಅಭಿವೃದ್ಧಿಗೆ ಅಶ್ವತ್ಥನಾರಾಯಣ ಅವರು ದಣಿವರಿಯದೆ ಕೆಲಸ ಮಾಡುತ್ತಿರುವ ಅಪರೂಪದ ಜನ ಪ್ರತಿನಿಧಿ ಆಗಿದ್ದಾರೆ' ಎಂದು ಹೇಳಿದರು. 'ಅದರಲ್ಲೂ ತಮ್ಮ ಕ್ಷೇತ್ರದ ಹಿರಿಯ ನಾಗರಿಕರ ಹಿತಚಿಂತಕರಾಗಿದ್ದಾರೆ. ಇಂಥವರು ಎಷ್ಟು ಸಲ ಶಾಸಕರಾಗಿ ಆಯ್ಕೆಯಾದರೂ ಅದು ಖುಷಿಯ ಸಂಗತಿಯಾಗಿರುತ್ತದೆ' ಅಶ್ವತ್ಥನಾರಾಯಣ ಅವರನ್ನು ಹಾಡಿಹೊಗಳಿದರು.
ಅಂದಹಾಗೆ ಕಳೆದ ಜುಲೈ 14ರಂದೇ ಅನಂತ್ ನಾಗ್ ಅವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿತ್ತು. ವಿದೇಶದಲ್ಲಿ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಇದ್ದ ಕಾರಣ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಅನಂತ್ ನಾಗ್ ಕನ್ನಡ ಜನಪ್ರಿಯ ನಟ. ಕನ್ನಡ ಮಾತ್ರವಲ್ಲದೇ ಹಿಂದಿ, ಮರಾಠಿ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅನಂತ ನಾಗ್ ನಟಿಸಿದ್ದಾರೆ.
Anant Nag Interview ಏನೆಂದು ಹೇಳಲಿ ಆನಂದ ಸಂಭ್ರಮ ಇನ್ನೇನಿನ್ನೇನು
ಸಂಕಲ್ಪ ಸಿನಿಮಾ ಮೂಲಕ 1973ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅನಂತ್ ನಾಗ್ ಈಗಲೂ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಸದ್ಯ ಪೋಷಕನಟರಾಗಿ ಬೆಳ್ಳಿ ಪರದೆ ಮೇಲೆ ಮಿಂಚುತ್ತಿದ್ದಾರೆ. ಅದ್ಭುತ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಅನಂತ್ ನಾಗ್ ಕೊನೆಯದಾಗಿ ಗಾಳಿಪಟ-2 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಅನಂತ್ ನಾಗ್ ಬಳಿ ತಿಮ್ಮಯ್ಯಾ ಮತ್ತು ತಿಮ್ಮಯ್ಯಾ, ಮೈಸೂರು ಮಸಾಲ ಸೇರಿದಂತೆ ಅನೇಕ ಸಿನಿಮಾಗಳಿವೆ.