'100' ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ
100 ಚಿತ್ರ ಕೇವಲ ಮನರಂಜನೆಗಾಗಿ ಮಾತ್ರವಲ್ಲ. ಜನರ ಕಣ್ಣು ತೆರೆಸಲು ಮತ್ತು ಅಪರಾಧಿ ಜಗತ್ತನ್ನು ನಿರ್ನಾಮ ಮಾಡಲಿಕ್ಕಾಗಿ, ಶಾಂತಿ ಸುವ್ಯವಸ್ಥೆ ಕಾಪಾಡಲು ಈ ಸಿನಿಮಾ ಮಾಡಿದ್ದಾರೆ ಎಂದು ಗೃಹ ಸಚಿವರು ಮೆಚ್ಚುಗೆ ಸೂಚಿಸಿದ್ದಾರೆ.
ರಮೇಶ್ ಅರವಿಂದ್ (Ramesh Aravind) ನಟಿಸಿ, ನಿರ್ದೇಶನ ಮಾಡಿರುವ '100' ಚಿತ್ರ ಈ ವಾರ ತೆರೆಗೆ ಬರಲು ಸಜ್ಜಾಗಿದೆ. ಇತ್ತಿಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿರಸಿಕರಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಇದೀಗ '100' ಚಿತ್ರವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು ವೀಕ್ಷಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಅಧಿಕಾರಿಗಳ ಜೊತೆ ಕುಳಿತು ಅವರು ಸಿನಿಮಾ ನೋಡಿದ್ದಾರೆ. ಸೈಬರ್ ಕ್ರೈಮ್ ಕಥಾಹಂದರವನ್ನೊಳಗೊಂಡಿರುವ ಈ ಚಿತ್ರವನ್ನು ಐಎಎಸ್ ಅಧಿಕಾರಿ ಶಾಲಿನಿ ಹಾಗೂ ಸಿಐಡಿ ಅಧಿಕಾರಿಗಳು ಕೂಡ ವೀಕ್ಷಿಸಿದ್ದಾರೆ.
ಚಿತ್ರ ವೀಕ್ಷಿಸಿದ ಬಳಿಕ ಮಾತನಾಡಿದ ಆರಗ ಜ್ಞಾನೇಂದ್ರ ಅವರು 'ಈ ಸಿನಿಮಾ ಯುವಜನಾಂಗದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಅಪರಾಧದ ಜಗತ್ತನ್ನು ಎಚ್ಚರಿಸುತ್ತದೆ. ಇಂಥ ಒಳ್ಳೆಯ ಸಿನಿಮಾ ನೀಡಿದ ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಕಲಾವಿದರಾದ ರಮೇಶ್, ರಚಿತಾ ರಾಮ್, ಪೂರ್ಣಾ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಎಂದು ಗೃಹ ಸಚಿವರು ಮೆಚ್ಚುಗೆ ಸೂಚಿಸಿದ್ದಾರೆ.
'100' ಚಿತ್ರ ಕೇವಲ ಮನರಂಜನೆಗಾಗಿ ಮಾತ್ರವಲ್ಲ. ಜನರ ಕಣ್ಣು ತೆರೆಸಲು ಮತ್ತು ಅಪರಾಧಿ ಜಗತ್ತನ್ನು ನಿರ್ನಾಮ ಮಾಡಲಿಕ್ಕಾಗಿ, ಶಾಂತಿ ಸುವ್ಯವಸ್ಥೆ ಕಾಪಾಡಲು ಈ ಸಿನಿಮಾ ಮಾಡಿದ್ದಾರೆ. ಇದನ್ನು ಎಲ್ಲರೂ ನೋಡಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ. ವಿಶೇಷವಾಗಿ ಪೊಲೀಸ್ ಅಧಿಕಾರಿಗಳು ಈ ಚಿತ್ರವನ್ನು ವೀಕ್ಷಿಸಬೇಕೆಂದು ಕೋರುತ್ತೇನೆ ಎಂದು ಆರಗ ಜ್ಞಾನೇಂದ್ರ ಅವರು ಟ್ವೀಟ್ (Tweet) ಕೂಡಾ ಮಾಡಿದ್ದಾರೆ.
ಸೈಬರ್ ಲೋಕದ 100 ಟ್ರೇಲರ್ ರಿಲೀಸ್: ಫ್ಯಾಮಿಲಿ ಥ್ರಿಲ್ಲರ್‌ನಲ್ಲಿ ರಮೇಶ್ ಅರವಿಂದ್
ಶಾಲಿನಿ ರಜನೀಶ್ ಅವರಿಗೂ '100' ಸಿನಿಮಾ ಇಷ್ಟವಾಗಿದ್ದು, ನಮ್ಮ ಯುವಕ-ಯುವತಿಯರಿಗೆ ಇಂದು ತಂತ್ರಜ್ಞಾನ ಎಷ್ಟು ಅನುಕೂಲ ನೀಡುತ್ತದೆಯೋ ಅಷ್ಟೇ ಕೆಟ್ಟ ಪರಿಣಾಮವನ್ನೂ ಬೀರುತ್ತದೆ ಎಂಬ ಎಚ್ಚರಿಕೆಯನ್ನು ಈ ಸಿನಿಮಾದ ಮೂಲಕ ಹೇಳಲಾಗಿದೆ. ಈ ಚಿತ್ರದಿಂದ ಯುವ ಜನತೆ ಒಂದು ಪಾಠ ಕಲಿಯಲಿದೆ ಎಂದು ಹೇಳಿದ್ದಾರೆ.
'100' ಸಿನಿಮಾ ಸೈಬರ್ ಕ್ರೈಮ್ ಆಧಾರಿತ ಸಿನಿಮಾವಾಗಿದೆ. ರಮೇಶ್ ಅರವಿಂದ್ ಜತೆ ರಚಿತಾ ರಾಮ್, ಪೂರ್ಣಾ ನಟಿಸಿದ್ದು, ಇದು ಫ್ಯಾಮಿಲಿ ಥ್ರಿಲ್ಲರ್ ಜಾನರ್‌ನ ಸಿನಿಮಾವಾಗಿದೆ. ವಿಶೇಷ ಎಂದರೆ ರಮೇಶ್ ಅರವಿಂದ್ ಫ್ಯಾಮಿಲಿ ಮ್ಯಾನ್ ಆಗಿ ಕುಟುಂಬದ ರಕ್ಷಣೆ ಮತ್ತು ಪೊಲೀಸ್ ನಾಗಿ ತಮ್ಮ ಕರ್ತವ್ಯ ಎರಡು ಶೆಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸುರ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಚಿತ್ರ ತಯಾರಾಗಿದ್ದು, ಉಮಾ, ಎಂ. ರಮೇಶ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
100-150 ಕಾರುಗಳನ್ನು ಬಳಸಿ ಭರ್ಜರಿ ಫೈಟ್ ಸೀನ್ ಚಿತ್ರೀಕರಣ ಮಾಡುತ್ತಿರುವ ರಮೇಶ್ ಅರವಿಂದ್!
ಇನ್ನು ರವಿ ಬಸ್ರೂರು ಸಂಗೀತ ಸಂಯೋಜನೆಯಿರುವ ಈ ಚಿತ್ರದಲ್ಲಿ ನಾಲ್ಕು ಫೈಟ್‌ಗಳಿದ್ದು, ಒಂದೊಂದಕ್ಕೂ ಗಟ್ಟಿಯಾದ ಭಾವನಾತ್ಮಕ ಕಾರಣಗಳಿವೆ. ಎರಡು ಫೈಟ್ ದೃಶ್ಯಗಳನ್ನು ಜಾಲಿ ಬಾಸ್ಟಿನ್ ಮತ್ತೆರೆಡು ಫೈಟ್ ದೃಶ್ಯಗಳನ್ನು ರವಿವರ್ಮ ಮಾಡಿದ್ದಾರೆ. ಹಾಗೂ ಸಿನಿಮಾದಲ್ಲಿರುವ ಚೇಸಿಂಗ್ ದೃಶ್ಯಕ್ಕೆ (Chasing scene) 100ರಿಂದ 150 ಕಾರುಗಳನ್ನು ಬಳಸಲಾಗಿದೆ.
ಸತ್ಯ ಹೆಗಡೆ ಕ್ಯಾಮರಾ ಕೈಚಳಕ, ಶ್ರೀನಿವಾಸ್ ಕಲಾಲ್ ಸಂಕಲನ, ಗುರು ಕಶ್ಯಪ್ ಸಂಭಾಷಣೆ, ಧನ೦ಜಯ ನೃತ್ಯ ಸಂಯೋಜನೆ, ಜಾಲಿ ಬಾಸ್ಟಿನ್, ಡಾ.ರವಿವರ್ಮ ಸಾಹಸ ಈ ಚಿತ್ರಕ್ಕಿದೆ. ರಚಿತಾ ರಾಮ್, ಪೂರ್ಣ, ಪ್ರಕಾಶ್ ಬೆಳವಾಡಿ, ಶೋಭರಾಜ್, ರಾಜು ತಾಳಿಕೋಟೆ, ಮಾಲತಿ ಸುಧೀರ್, ಬೇಬಿ ಸ್ಮಯ ಸೇರಿದಂತೆ ಮುಂತಾದವರ ತಾರಾಬಳಗ ಚಿತ್ರಕ್ಕಿದೆ.