ದುನಿಯಾ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಾ ಯಶಸ್ವಿಯಾಗಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ವಿನಯ್ ರಾಜ್‌ಕುಮಾರ್ ಹಾಗೂ ಮೋನಿಷಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸ್ಯಾಂಡಲ್‌ವುಡ್‌ನಲ್ಲಿ ‘ಸಿಟಿ ಲೈಟ್ಸ್’ ಸಿನಿಮಾದ ಗೆಲುವಿನ ಸದ್ದು ಮುಂದುವರಿದಿದೆ. ‘ದುನಿಯಾ’ ವಿಜಯ್ ನಿರ್ದೇಶನದ ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಾ ಯಶಸ್ವಿಯಾಗಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ವಿನಯ್ ರಾಜ್‌ಕುಮಾರ್ ಹಾಗೂ ವಿಜಯ್ ಪುತ್ರಿ ಮೋನಿಷಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ, ಬಿಡುಗಡೆಯಾದ ದಿನದಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
‘ಸಿಟಿ ಲೈಟ್ಸ್’ ಮೂಲಕ ನಿರ್ದೇಶಕರಾಗಿ ದುನಿಯಾ ವಿಜಯ್ ಮತ್ತೊಂದು ಗೆಲುವು ದಾಖಲಿಸಿದ್ದಾರೆ. ಈ ಸಿನಿಮಾದ ಯಶಸ್ಸಿನೊಂದಿಗೆ ಸತತ ಮೂರು ಸಿನಿಮಾಗಳನ್ನು ಯಶಸ್ವಿಯಾಗಿ ನಿರ್ದೇಶಿಸಿದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದು, ‘ಹ್ಯಾಟ್ರಿಕ್ ಡೈರೆಕ್ಟರ್’ ಎಂಬ ಪಟ್ಟವೂ ಅವರ ಪಾಲಾಗಿದೆ. ಚೊಚ್ಚಲ ಸಿನಿಮಾದಲ್ಲೇ ಮೋನಿಷಾ ಗಮನ ಸೆಳೆದರು. ‘ಸಿಟಿ ಲೈಟ್ಸ್’ ಮೂಲಕ ಮೋನಿಷಾ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ.
ಮೊದಲ ಸಿನಿಮಾದಲ್ಲೇ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಅವರು, ತಂದೆ ದುನಿಯಾ ವಿಜಯ್ ಅವರ ನಿರ್ದೇಶನದಲ್ಲಿ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇನ್ನೊಂದೆಡೆ ವಿನಯ್ ರಾಜ್‌ಕುಮಾರ್ ಕೂಡ ಈ ಚಿತ್ರದ ಮೂಲಕ ತಮ್ಮ ನಟನೆಯ ಮತ್ತೊಂದು ಮುಖವನ್ನು ಪರಿಚಯಿಸಿದ್ದಾರೆ. ಇದುವರೆಗೆ ಕ್ಲಾಸ್ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದ ವಿನಯ್, ‘ಸಿಟಿ ಲೈಟ್ಸ್’ನಲ್ಲಿ ಮಾಸ್ ಶೇಡ್‌ನ ಪಾತ್ರದಲ್ಲೂ ಪ್ರೇಕ್ಷಕರನ್ನು ರಂಜಿಸಿದ್ದಾರೆ.
‘ಥ್ಯಾಂಕ್ಯೂ ಅಪ್ಪ’ ಎಂದ ಮೋನಿಷಾ
ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಸಕ್ಸಸ್ ಮೀಟ್‌ನಲ್ಲಿ ಚಿತ್ರತಂಡ ಸಂಭ್ರಮ ಹಂಚಿಕೊಂಡಿತು. ಈ ವೇಳೆ ಮಾತನಾಡಿದ ಮೋನಿಷಾ, ತಮ್ಮ ತಂದೆ ದುನಿಯಾ ವಿಜಯ್ ಅವರ ಬೆಂಬಲವನ್ನು ನೆನಪಿಸಿಕೊಂಡು ಭಾವುಕರಾದರು.
ತಮ್ಮ ಅಭಿನಯವನ್ನು ತಂದೆ ನೇರವಾಗಿ ಹೊಗಳಿದವರಲ್ಲ. ಆದರೆ, ವೃತ್ತಿಜೀವನದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೂ ತಮ್ಮ ಮಗಳಿಗಾಗಿ ಕಥೆ ಮಾಡಿಕೊಂಡು ಸಿನಿಮಾ ನಿರ್ದೇಶಿಸಿದ್ದಾರೆ ಎಂದು ಮೋನಿಷಾ ಹೇಳಿದರು. ತಮಗೆ ಇಂತಹ ದೊಡ್ಡ ಅವಕಾಶ ನೀಡಿದ ತಂದೆಗೆ ವೇದಿಕೆಯಲ್ಲೇ ಧನ್ಯವಾದ ಅರ್ಪಿಸಿದ ಮೋನಿಷಾ, ‘ಥ್ಯಾಂಕ್ಯೂ ಅಪ್ಪ’ ಎಂದು ಭಾವುಕವಾಗಿ ಹೇಳಿದರು.
‘ನನ್ನ ಸಾಮರ್ಥ್ಯಕ್ಕಿಂತ ವಿಜಯ್‌ಗೆ ಹೆಚ್ಚು ನಂಬಿಕೆ ಇತ್ತು’
ಚಿತ್ರದ ನಾಯಕ ವಿನಯ್ ರಾಜ್‌ಕುಮಾರ್ ಕೂಡ ‘ಸಿಟಿ ಲೈಟ್ಸ್’ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು. ತಮ್ಮ ಸಾಮರ್ಥ್ಯದ ಮೇಲೆ ತಮಗಿಂತಲೂ ಹೆಚ್ಚು ನಂಬಿಕೆ ಇಟ್ಟಿದ್ದ ನಿರ್ದೇಶಕ ದುನಿಯಾ ವಿಜಯ್ ಅವರಿಗೆ ಧನ್ಯವಾದ ತಿಳಿಸಿದ ವಿನಯ್, ಅಭಿಮಾನಿಗಳು ತಮ್ಮ ಮೇಲಿಟ್ಟಿದ್ದ ವಿಶ್ವಾಸ ಈಗ ಮತ್ತಷ್ಟು ಸಂತಸ ನೀಡಿದೆ ಎಂದರು.
ಥಿಯೇಟರ್‌ಗಳಿಗೆ ಭೇಟಿ ನೀಡಿದಾಗ ಪ್ರೇಕ್ಷಕರು ಸಿನಿಮಾದ ಪ್ರತಿಯೊಂದು ಪಾತ್ರವನ್ನೂ ಪ್ರೀತಿಯಿಂದ ಸ್ವೀಕರಿಸುತ್ತಿರುವುದನ್ನು ಕಂಡು ಖುಷಿಯಾಗಿದೆ ಎಂದು ಹೇಳಿದ ಅವರು, ಇದು ಕೇವಲ ತಮ್ಮ ಹಾಗೂ ಮೋನಿಷಾ ಅವರ ಗೆಲುವಲ್ಲ, ಇಡೀ ಚಿತ್ರತಂಡ ಮತ್ತು ಸಿನಿಮಾವನ್ನು ಬೆಂಬಲಿಸಿದ ಕನ್ನಡಿಗರ ಗೆಲುವು ಎಂದು ಅಭಿಪ್ರಾಯಪಟ್ಟರು.
‘ನನ್ನ ಮಗಳಿಗೂ ಅದೇ ಪ್ರೀತಿ ಸಿಕ್ಕಿದೆ’
‘ಸಿಟಿ ಲೈಟ್ಸ್’ಗೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ನಿರ್ದೇಶಕ ದುನಿಯಾ ವಿಜಯ್ ಕೂಡ ಸಂತಸಗೊಂಡಿದ್ದಾರೆ. ಸಕ್ಸಸ್ ಮೀಟ್‌ನಲ್ಲಿ ಮಾತನಾಡಿದ ಅವರು, ತಮ್ಮ ಮೊದಲ ಸಿನಿಮಾ ‘ದುನಿಯಾ’ ದಿನಗಳನ್ನು ನೆನಪಿಸಿಕೊಂಡರು. ತಮ್ಮ ಹಿನ್ನೆಲೆಯನ್ನು ನೋಡದೆ ಕನ್ನಡಿಗರು ‘ದುನಿಯಾ’ ಸಿನಿಮಾವನ್ನು ಕೈಹಿಡಿದು ಬೆಳೆಸಿದರು. ಇದೀಗ ಅದೇ ರೀತಿಯ ಪ್ರೀತಿ ಮತ್ತು ಆಶೀರ್ವಾದ ತಮ್ಮ ಮಗಳು ಮೋನಿಷಾಗೂ ಸಿಕ್ಕಿದೆ ಎಂದು ವಿಜಯ್ ಹೇಳಿದರು.
ದೊಡ್ಮನೆ ಕುಟುಂಬದಿಂದ ವಿನಯ್ ರಾಜ್‌ಕುಮಾರ್ ಅವರನ್ನು ಕರೆದುಕೊಂಡು ಸಿನಿಮಾ ಮಾಡುವಾಗ ಜವಾಬ್ದಾರಿ ಮತ್ತು ಆತಂಕ ಎರಡೂ ಇತ್ತು. ಆದರೆ, ಇಂದು ವಿವಿಧ ನಾಯಕರ ಅಭಿಮಾನಿಗಳು ಒಗ್ಗಟ್ಟಾಗಿ ‘ಸಿಟಿ ಲೈಟ್ಸ್’ ನೋಡಿ ವಿನಯ್ ಹಾಗೂ ಮೋನಿಷಾಗೆ ಹಾರೈಸುತ್ತಿರುವುದು ಸಂತಸ ತಂದಿದೆ ಎಂದರು. ಅದೇ ವೇಳೆ, ಸಿನಿಮಾಕ್ಕೆ ಬೆನ್ನೆಲುಬಾಗಿ ನಿಂತ ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್ ಹಾಗೂ ದೊಡ್ಮನೆ ಕುಟುಂಬಕ್ಕೆ ದುನಿಯಾ ವಿಜಯ್ ವಿಶೇಷ ಕೃತಜ್ಞತೆ ಸಲ್ಲಿಸಿದರು.
ರಾಜ್ಯಾದ್ಯಂತ ‘ಸಿಟಿ ಲೈಟ್ಸ್’ ವಿಜಯಯಾತ್ರೆ
ಸಿನಿಮಾಗೆ ಸಿಕ್ಕಿರುವ ಪ್ರೇಕ್ಷಕರ ಪ್ರೀತಿಗೆ ನೇರವಾಗಿ ಧನ್ಯವಾದ ಹೇಳಲು ‘ಸಿಟಿ ಲೈಟ್ಸ್’ ತಂಡ ಇದೀಗ ರಾಜ್ಯಾದ್ಯಂತ ವಿಜಯಯಾತ್ರೆ ಕೈಗೊಳ್ಳಲು ಸಜ್ಜಾಗಿದೆ. ಸೆಪ್ಟೆಂಬರ್ 30ರಿಂದ ವಿಜಯಯಾತ್ರೆ ಆರಂಭವಾಗಲಿದ್ದು, ಚಿತ್ರತಂಡ ರಾಜ್ಯದ ಪ್ರಮುಖ ಜಿಲ್ಲೆಗಳ ಚಿತ್ರಮಂದಿರಗಳಿಗೆ ಭೇಟಿ ನೀಡಲಿದೆ. ಈ ವೇಳೆ ಅಭಿಮಾನಿಗಳನ್ನು ನೇರವಾಗಿ ಭೇಟಿಯಾಗಿ ಸಿನಿಮಾದ ಗೆಲುವನ್ನು ಸಂಭ್ರಮಿಸಲಿದೆ. ಇನ್ನು ಮೂರನೇ ವಾರಕ್ಕೆ ಕಾಲಿಟ್ಟಿರುವ ‘ಸಿಟಿ ಲೈಟ್ಸ್’, ದುನಿಯಾ ವಿಜಯ್ ಅವರ ನಿರ್ದೇಶನದ ಹ್ಯಾಟ್ರಿಕ್ ಗೆಲುವಿನ ಚಿತ್ರವಾಗಿ ಗಮನ ಸೆಳೆದಿದ್ದು, ಮೋನಿಷಾ ಅವರ ಚೊಚ್ಚಲ ಹೆಜ್ಜೆಗೂ ವಿಶೇಷ ಮೆಚ್ಚುಗೆ ದೊರೆತಿದೆ.


