Vijay Prakash; ಮನೆ ಬಿಟ್ಟು ಓಡಿ ಹೋಗಿ ಮುಂಬೈ ಬೀದಿಯಲ್ಲಿ ಕಷ್ಟಪಟ್ಟ 'ಜೈ ಹೋ' ಗಾಯಕನ ಕಣ್ಣೀರ ಕಥೆ
ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವವರಿಗೆ ಇಂದು (ಫೆಬ್ರವರಿ 21) ಹುಟ್ಟುಹಬ್ಬದ ಸಂಭ್ರಮ. ಮನೆ ಬಿಟ್ಟು ಓಡಿ ಹೋಗಿ ಮುಂಬೈ ಸೇರಿದ ವಿಜಯ್ ಪ್ರಕಾಶ್ ಸ್ಫೂರ್ತಿದಾಯಕ ಪಯಣ ಹೀಗಿದೆ.
ಕರ್ನಾಟಕದ ಖ್ಯಾತ ಗಾಯಕ, ಸಾವಿರಾರು ಹಾಡುಗಳಿಗೆ ಧ್ವನಿ ನೀಡಿರುವ ಕಂಚಿನ ಕಂಠದ ಗಾಯಕ ಜೈ ಹೋ ವಿಜಯ್ ಪ್ರಕಾಶ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮೈಸೂರಿನಲ್ಲಿ ಜನಿಸಿದ ವಿಜಯ್ ಪ್ರಕಾಶ್ ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಹಾಡುಗಳಿಗೂ ಧ್ವನಿಯಾಗಿದ್ದಾರೆ. ತಮಿಳು, ತೆಲುಗು, ಹಿಂದಿ, ಮರಾಠಿ ಸೇರಿದಂತೆ ಅನೇಕ ಭಾಷೆಯ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಅನೇಕ ಸೂಪರ್ ಸೂಪರ್ ಹಿಟ್ ಗೀತೆಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಭಾರತದಾದ್ಯಂತ ತನ್ನ ಧ್ವನಿಯ ಮೂಲಕವೇ ವಿಜಯ್ ಸಾಧಿಸಿರುವ ವಿಜಯ್ ಪ್ರಕಾಶ್ ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಪ್ರೀತಿಯ VPಗೆ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.
ಇಂದು ವಿಶ್ವವೇ ಮೆಚ್ಚುವ ಗಾಯಕವಾಗಿ ಬೆಳೆದಿರುವ ವಿಜಯ್ ಪ್ರಕಾಶ್ ಆರಂಭದಲ್ಲಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮೈಸೂರಿನ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ವಿಜಯ್ ಪ್ರಕಾಶ್ ಮುಂಬೈ ಸೇರಿ ದೊಡ್ಡ ಗಾಯಕನಾಗಿ ಬೆಳೆದಿದ್ದೆ ರೋಚಕ ಪಯಣವಾಗಿದೆ. ಸಾವಿರಾರು ಹಾಡುಗಳಿಗೆ ಹಿನ್ನಲೆ ಗಾಯನ ಮಾಡಿರುವ, ಹತ್ತು ಸಾವಿರಕ್ಕೂ ಹೆಚ್ಚು ಜಾಹೀರಾತಿಗಳಿಗೆ ಧ್ವನಿ ನೀಡಿರುವ ವಿಜಯ್ ಪ್ರಕಾಶ್ ಈ ಮಟ್ಟಕ್ಕೆ ಬೆಳೆಯಲು ಕಾರಣ ಶ್ರಮ. ಮುಂಬೈ ಬೀದಿಬೀದಿಗಳಲ್ಲಿ ಪಟ್ಟ ಕಷ್ಟದ ಬಗ್ಗೆ ವಿಜಯ್ ಪ್ರಕಾಶ್ ವಿಕೇಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಬಹಿರಂಗ ಪಡಿಸಿದ್ದರು.
ಪ್ರತಿಷ್ಠಿತ ಆಸ್ಕರ್ ಮತ್ತು ಗ್ರ್ಯಾಮಿ ಪ್ರಶಸ್ತಿ ಪಡೆದ 'ಜೈ ಹೋ' ಹಾಡಿನ ಗಾಯಕ ವಿಜಯ್ ಪ್ರಕಾಶ್ ಪಯಣ ಅಷ್ಟು ಸುಲಭವಾಗಿರಲಿಲ್ಲ. ಮೈಸೂರಿನಲ್ಲಿ ಹುಟ್ಟಿ ಬೆಳೆದು, ಡಿಗ್ರಿ ಕಂಪ್ಲೀಟ್ ಮಾಡದೆ ಮನೆ ಬಿಟ್ಟು ಸೀದಾ ಮುಂಬೈ ಸೇರಿದರು ವಿಜಯ್ ಪ್ರಕಾಶ್. ಸಂಗೀತದ ಮೇಲಿನ ಅಪಾರ ಪ್ರೀತಿ ಅವರನ್ನು ಮನೆ ಬಿಡುವಂತೆ ಮಾಡಿತು. ಇಂಜಿನೀಯರಿಂಗ್ ಸೇರಿದ ವಿಜಯ್ ಪ್ರಕಾಶ್ ಅವರಿಗೆ ಓದಿನಲ್ಲಿ ಅಷ್ಟು ಗಮನ ಇರರಿಲ್ಲ. ಆದರೆ ಏನಾದರೂ ಮಾಡಬೇಕು ಎನ್ನುವ ಛಲ, ಹಠ ಅವರಲ್ಲಿತ್ತು. ಹಾಗಾಗಿ ಅಪ್ಪ-ಅಮ್ಮನಿಗೂ ಹೇಳದೆ ಮನೆ ಬಿಟ್ಟು ಹೊರಟು ಹೋದರು.
ಗುರು ಸುರೇಶ್ ವಾಡ್ಕರ್
ಮನೆ ಬಿಟ್ಟು ಸೀದ ಮುಂಬೈ ಸೇರಿದ ವಿಜಯ್ ಪ್ರಕಾಶ್ ಹಣವಿಲ್ಲದೆ ಏನು ಮಾಡಬೇಕು, ಎಲ್ಲಿ ಇರಬೇಕು ಎಂದು ತೋಚದೆ ರೈಲ್ವೆ ಸ್ಟೇಷನ್ ನಲ್ಲೇ ಮಲಗುತ್ತಿದ್ದರು. ಪೊಲೀಸರ ಬಳಿ ಒದೆ ತಿನ್ನುತ್ತಾ ದಿನಕಳೆದ ವಿಜಯ್ ಪ್ರಕಾಶ್ ಬಳಿಕ ಅವರ ಗುರು ಸುರೇಶ್ ವಾಡ್ಕರ್ ಅವರನ್ನು ಭೇಟಿಯಾದರು. ಅಲ್ಲಿಂದ ವಿಜಯ್ ಪ್ರಕಾಶ್ ಅವರ ಜೀವನವೇ ಬದಲಾಯಿತು. ಆನಂದ್ ಮಿಲಿಂದ್ ಎನ್ನುವ ಸಂಗೀತ ನಿರ್ದೇಶಕರ ಸಹಾಯದಿಂದ ಸುರೇಶ್ ವಾಡ್ಕರ್ ಅವರನ್ನು ಭೇಟಿಯಾದ ವಿಜಯ್ ಪ್ರಕಾಶ್ ಅವರಿಗೆ ಮುಂಬೈನಲ್ಲಿ ಉಳಿಯಲು ಜಾಗದ ವ್ಯವಸ್ಥೆ ಮಾಡಿಕೊಟ್ಟರು. ಈ ಬಗ್ಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ವಿಜಯ್ ಪ್ರಕಾಶ್ ಅವರೇ ಬಹಿರಂಗ ಪಡಿಸಿದ್ದರು.
'ಮೊದಲು ನಾನು ಮುಂಬೈಗೆ ಹೋದಾಗ ಆನಂದ್ ಮಿಲಿಂದ್ ಅಂತ ಮ್ಯೂಸಿಕ್ ಡೈರೆಕ್ಟರ್ ರವರ ಮನೆ ಗೊತ್ತಾಯ್ತು. ಅಲ್ಲಿ ಹೋದಾಗ ಅವರು ಸುರೇಶ್ ವಾಡ್ಕರ್ ಹತ್ರ ಕಳುಹಿಸಿದ್ರು. ಅವರ ಹತ್ರ ಹೋಗಿ ಹಾಡಿದ್ಮೇಲೆ ನನ್ನ ವಾಯ್ಸ್ ಇಷ್ಟ ಪಟ್ಟರು. ನಂತರ ರಾಧಾ ಕೃಷ್ಣ ದೇವಸ್ಥಾನದಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿದ್ರು. ಇದ್ದ ಒಂದು ಬಟ್ಟೆಯನ್ನ ಸಮುದ್ರದ ನೀರಲ್ಲಿ ಒಗೆದು ಒಣಗಿಸಿ ಹಾಕೊಳ್ತಿದ್ದೆ. ತಿನ್ನೋಕೆ ದುಡ್ಡು ಇರ್ಲಿಲ್ಲ. ನಾನು ಇದ್ದ ಸ್ಥಿತಿ ನೋಡಿ ಅವರು ನನಗೆ 100 ರೂಪಾಯಿ ಕೊಟ್ಟು ಊಟ ಮಾಡಿ ಬಾ ಅಂತ ಹೇಳಿದ್ರು' ಎಂದು ಹೇಳಿದ್ದರು.
ಮೊದಲ ಸಂಬಳ
ಸುರೇಶ್ ವಾಡ್ಕರ್ ಅವರ ಗೆಳೆಯನ ಮುಖಾಂತರ ಜಾಹಿರಾತುಗಳಿಗೆ ಧ್ವನಿ ನೀಡಲು ವರ್ಡ್ಸ ಅಂಡ್ ವಾಯ್ಸಸ್ ಕಂಪನಿಗೆ ಸೇರಿದರು. ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿರದಿದ್ದರೂ ಉತ್ತಮವಾಗಿ ಧ್ವನಿ ನೀಡಿ ಕೆಸಲ ಗಟ್ಟಿಮಾಡಿಕೊಂಡರು. ವಿಜಯ್ ಪ್ರಕಾಶ್ ಮೊದಲು ವಾಯ್ಸ್ ನೀಡಿದ್ದು ಕೆಲ್ಲಾಗ್ಸ್ ಆಡ್‌ಗೆ.
ಆಡ್ಸ್‌ಗಳಿಗೆ ವಾಯ್ಸ್ ನೀಡುತ್ತಿದ್ದ ವಿಜಯ್ ಪ್ರಕಾಶ್ ಮೊದಲು ಸಂಬಳ 2700 ರೂಪಾಯಿ. ಸಂಬಳ ತೆಗೆದುಕೊಂಡ ಖುಷಿಗೆ ಸ್ನೇಹಿತರಿಗೆಲ್ಲ ಪಾರ್ಟಿ ಕೊಡಿಸಿ ಸಂಭ್ರಮಿಸಿದ್ದರು.
ಅಪ್ಪು ಸರ್ ಹೋದ್ಮೇಲೆ ಗೊಂಬೆ ಹೇಳುತೈತೆ ಹಾಡುವುದಕ್ಕೆ ಭಯ ಆಗ್ತಿದೆ: Vijay Prakash
ಸಿನಿಮಾ ಎಂಟ್ರಿ
ಜಾಹೀರಾತುಗಳಿಗೆ ವಾಯ್ಸ್ ನೀಡುತ್ತಿದ್ದ ವಿಜಯ್ ಪ್ರಕಾಶ್ ಅವರಿಗೆ ಸಿನಿಮಾಗಳಲ್ಲಿ ಹಾಡುವ ದೊಡ್ಡ ಆಸೆಯಿತ್ತು. ಬಳಿಕ ನಿರ್ದೇಶಕ ಬಾಲ್ಕಿ ಅವರ ಪರಿಚಯವಾಯಿತು. ಚೀನಿ ಕಮ್ ಸಿನಿಮಾ ಮೂಲಕ ಹಿನ್ನಲೆ ಗಾಯಕರಾಗಿ ಎಂಟ್ರಿ ಕೊಟ್ಟರು. ಅಮಿತಾಬ್ ಬಚ್ಚನ್ ಅವರಿಗೆ ಧ್ವನಿಯಾಗುವ ಮೂಲಕ ಗಾಯನ ವೃತ್ತಿ ಪ್ರಾರಂಭಿಸಿದರು. ಇಳಯರಾಜ ಸಂಗೀತ ನಿರ್ದೇಶನ ಮಾಡಿದ್ದರು. ಬಳಿಕ ಎ.ಆರ್ ರೆಹಮಾನ್ ಅವರ ಸಂಗೀತ ನಿರ್ದೇಶನದ ಹಾಡಿಗೆ ಧ್ವನಿಯಾದರು. ಶಾರುಖ್ ಖಾನ್ ನಟನೆಯ ಸ್ವದೇಶ್ ಚಿತ್ರ ದ ಹಾಡಿಗೆ ವಿಜಯ್ ಪ್ರಕಾಶ್ ಕಂಠದಾನ ಮಾಡಿದರು.
ಈ ಗಾಯಕ ಅಂದಿಗೂ ಹಿಟ್ ಇಂದಿಗೂ ಹಿಟ್ ಅಂತಿದಾರೆ ಭಟ್ರು ! ಯಾರಪ್ಪಾ ಅವ್ರು ?
ಪ್ರತಿಷ್ಠಿತ ಆಸ್ಕರ್, ಗ್ರ್ಯಾಮಿ ಪ್ರಶಸ್ತಿ
ಎ.ಆರ್ ರೆಹಮಾನ್ ಅವರ ಜೈ ಹೋ ಗೀತೆಗೆ ಧ್ವನಿ ನೀಡುವ ಮೂಲಕ ಪ್ರತಿಷ್ಠಿತ ಗ್ರ್ಯಾಮಿ ಮತ್ತು ಆಸ್ಕರ್ ಪ್ರಶಸ್ತಿ ಗೆದ್ದು ಬೀಗಿದರು. ಜೈ ಹೋ' ಹಾಡು ಈಗಲೂ ನನಗೆ ನಂಬೋಕೆ ಆಗಲ್ಲ. ಅದಕ್ಕೆ ಆಸ್ಕರ್ ಮತ್ತು ಗ್ರ್ಯಾಮಿ ಪ್ರಶಸ್ತಿ ಸಿಕ್ತು. ಈ ಪ್ರಶಸ್ತಿ ನಂತರ ನನ್ನ ಲೈಫ್ ಬದಲಾಗಿದ್ದು. ನನಗೆ ನಂಬಲಾರದ ಮೆರಗು ಕೊಟ್ಟ ಹಾಡು. ಇದೇ ಹಾಡಿಂದ ನಾನು ಕನ್ನಡಿಗ ಅಂತ ಕರ್ನಾಟಕದಲ್ಲಿ ಪರಿಚಯವಾಗಿದ್ದು' ಎಂದು ಹೇಳಿಕೊಂಡಿದ್ದರು.
ಸಾವಿರಾರು ಗೀತೆಗಳಿಗೆ ಧ್ವನಿ ನೀಡಿರುವ ವಿಜಯ್ ಪ್ರಕಾಶ್ ಕನ್ನಡಿಗ ಎನ್ನವುದೇ ಕನ್ನಡಿಗರ ಹೆಮ್ಮೆ. ಸಿನಿಮಾ ಹಾಡುಗಳಿಗೆ ಧ್ವನಿ ನೀಡುವ ಜೊತೆಗೆ ಕಿರುತೆರೆಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಜನಪ್ರಿಯಾ ಸರಿಗಮಪ ರಿಯಾಲಿಟಿ ಶೋನ ಜಡ್ಜ್‌ಗಳಲ್ಲಿ ಒಬ್ಬರಾಗಿದ್ದಾರೆ. ಉತ್ತಮ ಹಾಡುಗಳನ್ನು ಹಾಡುತ್ತಾ ಸಂಗೀತ ಪ್ರೀಯರನ್ನು ರಂಜಿಸುತ್ತಿರಲಿ ಎನ್ನುವುದೇ ಅಭಿಮಾನಿಗಳ ಆಶಯ.