ಸ್ಯಾಂಡಲ್ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಇದೇ ಜುಲೈ 2ರಂದು 48ನೇ ವಸಂತಕ್ಕೆ ಕಾಲಿಡ್ತಿದ್ದಾರೆ. ಆದ್ರೆ ಈ ಬಾರಿಯೂ ಅಭಿಮಾನಿಗಳಿಗೆ ಗಣೇಶ್ ದರ್ಶನ ಸಿಗ್ತಿಲ್ಲ. 

ಕಲಾವಿದರಿಗೆ ಅಭಿಮಾನಿ (Fan)ಗಳೇ ದೇವರು. ಅಭಿಮಾನಿಗಳ ಮುಂದೆ ಸ್ಟಾರ್ ನಟರು ಬರೋದು ಹುಟ್ಟುಹಬ್ಬದ ಸಂದರ್ಭದಲ್ಲಿ ಮಾತ್ರ. ಮನೆ ಮುಂದೆ ಸಾಲುಗಟ್ಟಿ ನಿಲ್ಲುವ ಫ್ಯಾನ್ಸ್, ನೆಚ್ಚಿನ ನಟನ ಬರ್ತ್ ಡೇಯಲ್ಲಿ ಕೇಕ್ ಕತ್ತರಿಸಿ, ದೊಡ್ಡ ಹಾರ ಹಾಕಿ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಈ ಬರ್ತ್ ಡೇ ಸೆಲಬ್ರೇಷನ್ ಕಡಿಮೆ ಆಗಿದೆ. ನಾನು ಊರಿನಲ್ಲಿ ಇರೋದಿಲ್ಲ, ಮನೆ ಬಳಿ ಬರಬೇಡಿ, ಇದ್ದಲ್ಲೇ ನನ್ನ ಹುಟ್ಟು ಹಬ್ಬಕ್ಕೆ ಹರಸಿ ಎನ್ನುವ ಸ್ಟಾರ್ ಗಳ ಸಂಖ್ಯೆ ಹೆಚ್ಚಾಗಿದೆ. ಕೊರೊನಾ ನಂತ್ರ ಸ್ಟಾರ್ ಗಳ ಅದ್ಧೂರಿ ಹುಟ್ಟುಹಬ್ಬ ಕಡಿಮೆ ಆಗಿದ್ರೂ ದರ್ಶನ್ ಜೈಲು ಸೇರಿದ್ಮೇಲೆ ನಟ ಉಪೇಂದ್ರ ಹುಟ್ಟುಹಬ್ಬ ಬಿಟ್ಟು ಮತ್ತೆ ಯಾವ ನಟರೂ ಅದ್ಧೂರಿಯಾಗಿ ಬರ್ತ್ ಡೇ ಆಚರಿಸಿಕೊಂಡಿಲ್ಲ. ಈಗ ಗೋಲ್ಡನ್ ಸ್ಟಾರ್ ಗಣೇಶ್, ಹಿಂದಿನ ವರ್ಷದ ಪಾಲಿಸಿಯನ್ನೇ ಫಾಲೋ ಮಾಡ್ತಿದ್ದಾರೆ. ಅಭಿಮಾನಿಗಳಿಗೆ ನೀಡಿದ್ದ ಮಾತನ್ನು ಮುರಿದಿದ್ದಾರೆ.

ಸ್ಯಾಂಡಲ್ವುಡ್ ಗೋಲ್ಡನ್ ಸ್ಟಾರ್ ಗಣೇಶ್ (Sandalwood Golden Star Ganesh) ಜುಲೈ 2 ರಂದು 48ನೇ ವರ್ಷಕ್ಕೆ ಕಾಲಿಡ್ತಿದ್ದಾರೆ. ಒಂದ್ಕಡೆ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ತಯಾರಿ ನಡೆಸ್ತಿದ್ದರೆ ಮತ್ತೊಂದು ಕಡೆ ಗಣೇಶ್ ಅಭಿಮಾನಿಗಳಿಗೆ ಮುಂಚಿತವಾಗಿಯೇ ಸಂದೇಶ ರವಾನೆ ಮಾಡಿ ನಿರಾಸೆ ಮೂಡಿಸಿದ್ದಾರೆ. ಈ ಬಾರಿ ಕೂಡ ಗಣೇಶ್, ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ತಿಲ್ಲ. ಹಿಂದಿನ ವರ್ಷ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳದೆ, ಮನೆ ಬಳಿ ಬರಬೇಡಿ ಎಂದಿದ್ದ ಗಣೇಶ್, ಮುಂದಿನ ಬಾರಿ ಒಟ್ಟಿಗೆ ಆಚರಿಸಿಕೊಳ್ಳೋಣ ಎಂದಿದ್ದರು. ದರ್ಶನ್ ಜೈಲಿಗೆ ಹೋಗಿದ್ದ ಕಾರಣ, ಎಲ್ಲ ನಟರೂ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ, ಗಣೇಶ್ ಕೂಡ ಅದೇ ದಾರಿ ಹಿಡಿದಿದ್ದಾರೆ ಅಂತ ಅಭಿಮಾನಿಗಳು ಸಮಾಧಾನ ಮಾಡ್ಕೊಂಡಿದ್ದರು. ಈ ಬಾರಿ ಹುಟ್ಟುಹಬ್ಬ ಆಚರಿಸಬಹುದು ಅಂತ ಕನಸು ಕಂಡಿದ್ದರು. ಆದ್ರೆ ಗಣೇಶ್ ಈ ಬಾರಿಯೂ ಅಭಿಮಾನಿಗಳ ಆಸೆಗೆ ತಣ್ಣೀರೆರಚಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಗಣೇಶ್ ಪೋಸ್ಟ್ ಹಂಚಿಕೊಂಡಿದ್ದಾರೆ. ಆತ್ಮೀಯ ಅಭಿಮಾನಿ ಸ್ನೇಹಿತರೆ, ಜುಲೈ 2 ನಾನು ಹುಟ್ಟಿದ ದಿನ. ಸಹಜವಾಗಿ ನನಗೆ ಅದು ನಿಮ್ಮ ಪ್ರೀತಿ ಹಾಗೂ ಅಭಿಮಾನವನ್ನು ಅತ್ಯಂತ ಸಮೀಪದಿಂದ ಕಣ್ತುಂಬಿಕೊಂಡು ಸಂಭ್ರಮಿಸುವ ದಿನ. ಆದರೆ ಈ ಬಾರಿ ನಾನು ಪಿನಾಕ ಹಾಗೂ ಯುವರ್ ಸಿನ್ಸಿಯರ್ಲಿ ರಾಮ್ ಚಿತ್ರಗಳ ಹೊರಾಂಗಣ ಚಿತ್ರೀಕರಣದಲ್ಲಿ ಭಾಗವಹಿಸಬೇಕಾಗಿರುವ ಕಾರಣ ಜುಲೈ 2 ರಂದು ನಾನು ನಿಮ್ಮೆಲ್ಲರನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ನಿಮ್ಮನ್ನು ರಂಜಿಸುವುದಕ್ಕಿಂತ ದೊಡ್ಡ ಹಬ್ಬ ನನಗೆ ಮತ್ತೊಂದಿಲ್ಲ. ಆದ ಕಾರಣ ಯಾರೂ ಮನೆಯ ಬಳಿ ಬರದೆ, ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ತಾವುಗಳು ಇದ್ದಲ್ಲಿಂದಲೇ ನನಗೆ ಆಶಿಸಿ, ಆಶೀರ್ವದಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ . ನಿಮ್ಮ ಗಣೇಶ ಎಂದು ಗೋಲ್ಡನ್ ಸ್ಟಾರ್ ಪೋಸ್ಟ್ ಹಾಕಿದ್ದಾರೆ.

ಇದಕ್ಕೆ ಸಾಕಷ್ಟು ಪರ ಹಾಗೂ ವಿರೋಧಗಳು ವ್ಯಕ್ತವಾಗಿವೆ. ಅನೇಕರು ಸೋಶಿಯಲ್ ಮೀಡಿಯಾ ಮೂಲಕವೇ ಗಣೇಶ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ಹೇಳಿದ್ದಾರೆ. ಮತ್ತೆ ಕೆಲವರು ಗಣೇಶ್ ಕ್ರಮವನ್ನು ಖಂಡಿಸಿದ್ದಾರೆ. ನಿಮ್ಮ ಅಭಿಮಾನಿಗಳು ಹುಟ್ಟುಹಬ್ಬದ ದಿನ ದೂರದ ಊರುಗಳಿಂದ ಬರ್ತಾರೆ. ಅವರಿಗೆ ನಿರಾಸೆ ಮಾಡ್ಬೇಡಿ. ಒಂದು ದಿನವನ್ನು ಅವರಿಗೆ ಮೀಸಲಿಡಿ ಅಂತ ಬರೆದಿದ್ದಾರೆ.

ಸಾಮಾನ್ಯವಾಗಿ ಸ್ಟಾರ್ ಬರ್ತ್ ಡೇ ದಿನ ಅವರ ಮನೆ ಮುಂದೆ ಜನಸಂದಣಿ ಸಾಮಾನ್ಯ. ಇದ್ರಿಂದ ಜನಸಾಮಾನ್ಯರಿಗೆ ತೊಂದ್ರೆಯಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಆರ್ ಸಿಬಿ ಸೆಲಬ್ರೇಷನ್ ಕೂಡ ಸದ್ಯ ಭಯ ಹುಟ್ಟಿಸಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಗಣೇಶ್ ಬರ್ತ್ ಡೇ ಆಚರಿಸಿಕೊಳ್ತಿಲ್ಲ ಎನ್ನುವ ಮಾತುಗಳೂ ಕೇಳಿ ಬಂದಿವೆ.

View post on Instagram