'ಹೌದು, ಲವ್ ಮಾಡುವಾಗ ಎಲ್ಲವೂ ಚೆನ್ನಾಗಿತ್ತು. ಅದಕ್ಕಾಗಿಯೇ ಅದು ಮದುವೆ ಆಗುವವರೆಗೂ ಮುಂದುವರೆದಿತ್ತು. ಮದುವೆಯಾದ್ಮೇಲೂ ಕೆಲವು ಕಾಲ ಎಲ್ಲವೂ ಓಕೆ ಎನ್ನುವಂತೆಯೇ ಜೀವನ ಸಾಗಿತ್ತು. ಆದರೆ, ಕಾಲ ಕಳೆದಂತೆ ನಮ್ಮಿಬ್ಬರಲ್ಲಿ ಪರಸ್ಪರ..
ರಾಪರ್, ಸಂಗೀತ ನಿರ್ದೇಶಕ ಹಾಗೂ ನಟ ಚಂದನ್ ಶೆಟ್ಟಿ (Chandan Shetty) ಅವರು ಇತ್ತೀಚೆಗೆ ಏಷ್ಯಾನೆಟ್ ಸುವರ್ಣ ನ್ಯೂಸ್ 'ಬೆಂಗಳೂರು ಬಝ್' ಪಾಡ್‌ಕಾಸ್ಟ್‌ನಲ್ಲಿ ಭಾಗಿಯಾಗಿದ್ದರು. ಅದರಲ್ಲಿ ತಮ್ಮ ಜೀವನದ ಹಲವು ಸಂಗತಿಗಳ ಬಗ್ಗೆ ಮುಕ್ತವಾಗಿ ಮಾತನ್ನಾಡಿದ್ದಾರೆ. ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಚಂದನ್‌ಶೆಟ್ಟಿ ಅವರು ತಮ್ಮ ಬಾಲ್ಯ, ಸಂಗೀತದ ಪ್ರಯಾಣ ಸೇರಿದಂತೆ, ಲವ್, ಮದುವೆ ಹಾಗೂ ವಿಚ್ಛೇದನ ಸೇರಿದಂತೆ ಎಲ್ಲಾ ಸಂಗತಿಗಳ ಬಗ್ಗೆ ಮಾತನ್ನಾಡಿದ್ದಾರೆ.
ಮುಖ್ಯವಾಗಿ, ಬಹಳಷ್ಟು ಜನರು 'ಅದೇ ಬಹಳ ಮುಖ್ಯ' ಎಂದು ಮಾತನ್ನಾಡುವ 'ಮದುವೆ-ಡಿವೋರ್ಸ್' ಬಗ್ಗೆ ಚಂದನ್ ಶೆಟ್ಟಿ ಆಡಿರುವ ಮಾತು ಹಲವರ ಪಾಲಿಗೆ ಹೊಸದು ಎನ್ನಿಸಬಹುದು. ಹಾಗಿದ್ದರೆ ಬಹುಮುಖ ಪ್ರತಿಭೆ ಚಂದನ್ ಶೆಟ್ಟಿಯವರು ಅದೇನು ಹೇಳಿದ್ದಾರೆ ನೋಡಿ..

'ಹೌದು, ಲವ್ ಮಾಡುವಾಗ ಎಲ್ಲವೂ ಚೆನ್ನಾಗಿತ್ತು. ಅದಕ್ಕಾಗಿಯೇ ಅದು ಮದುವೆ ಆಗುವವರೆಗೂ ಮುಂದುವರೆದಿತ್ತು. ಮದುವೆಯಾದ್ಮೇಲೂ ಕೆಲವು ಕಾಲ ಎಲ್ಲವೂ ಓಕೆ ಎನ್ನುವಂತೆಯೇ ಜೀವನ ಸಾಗಿತ್ತು. ಆದರೆ, ಕಾಲ ಕಳೆದಂತೆ ನಮ್ಮಿಬ್ಬರಲ್ಲಿ ಪರಸ್ಪರ ಹೊಂದಾಣಿಕೆ ಆಗಲು ಕಷ್ಟವಾಗುವಂತಹ ಭಿನ್ನಾಭಿಪ್ರಾಯ ಮೂಡತೊಡಗಿತು. ಆದರೆ, ಯಾವತ್ತೂ ಅದನ್ನು ನಾವಿಬ್ಬರೂ ಜಗಳದ ರೂಪಕ್ಕೆ ತೆಗೆದುಕೊಂಡು ಹೋಗಲೇ ಇಲ್ಲ. ಎಲ್ಲೋ ಏನೂ ತಪ್ಪಾಗ್ತಿದೆ ಎಂಬ ಅರಿವು ಇಬ್ಬರಲ್ಲೂ ಬಂದಿತ್ತು. ನಮ್ಮಿಬ್ಬರ ಫ್ಯಾಮಿಲಿಗೂ ಅದು ಗೊತ್ತಾಗಿತ್ತು.
ಯಾವಾಗ ನಮ್ಮಿಬ್ಬರಲ್ಲಿ ಕಷ್ಟುಪಟ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಯಿತೋ ಆಗಲೇ ನಾವಿಬ್ಬರೂ ಎಚ್ಚೆತ್ತುಕೊಂಡೆವು. ಜೀವನದಲ್ಲಿ ಮದುವೆ-ಸಂಸಾರ ಎಲ್ಲವೂ ಒಂದೊಂದು ಹಂತ, ಘಟನೆಗಳು. ಆದರೆ ಅದೇ ಜೀವನವಲ್ಲ. ಅದೇ ಜೀವನ ಅಂತಾದ್ರೆ, ಅಲ್ಲಿಯವರೆಗೆ ಮಾಡಿದ್ದು ಏನು ಎಂಬ ಪ್ರಶ್ನೆಗೆ ಉತ್ತರ ಏನಿದೆ? ಇಬ್ಬರೂ ಜತೆಯಾಗಿ ಹೊಂದಿಕೊಂಡು ಜೀವನ ಮಾಡಲು ಸಾಧ್ಯವಾದರೆ ಒಕೆ, ಆಗದಿದ್ದರೂ ಅದೂ ಓಕೆ. ಅಷ್ಟಕ್ಕೂ ಜೀವನ ಯಾವತ್ತಿಗೂ ಒಂಟಿ ಪ್ರಯಾಣ ಹೊರತೂ ಜಂಟಿಯಲ್ಲ. ಒಟ್ಟಿಗೇ ಹುಟ್ಟೋದೂ ಇಲ್ಲ, ಸಾಯೋದೂ ಇಲ್ಲ.
ಇಬ್ಬರೂ ಮಾತನ್ನಾಡಿ ಒನ್ ಫೈನ್ ಡೇ ನಿರ್ಧಾರಕ್ಕೆ ಬಂದೆವು. ನಾವಿಬ್ಬರೂ ಜೋಡಿಯಾಗಿದ್ದು ಮಾಡುವ ಜೀವನಕ್ಕಿಂತ ನಮ್ಮಿಬ್ಬರ ವೃತ್ತಿ-ಪ್ರವೃತ್ತಿಗಳು ಮುಖ್ಯ ಎಂದಾದಾಗ ಬೇರೆಯಾಗಿ ಬದುಕುವುದು ಒಳ್ಳೆಯದು, ಅದೇ ಸರಿ ಎಂಬುದನ್ನು ಮೊದಲು ನಾವಿಬ್ಬರೂ ನಿರ್ಧರಿಸಿದೆವು. ಬಳಿಕ ಅದನ್ನೇ ನಮ್ಮನಮ್ಮ ಕುಟುಂಬಗಳಿಗೂ ಹೇಳಿ ಅವರೂ ಒಪ್ಪಿದ್ದಾಯ್ತು. ಬಳಿಕ ನಡದಿದ್ದು ಈಗ ಎಲ್ಲರಿಗೂ ಗೊತ್ತಿರುವ ಇತಿಹಾಸ. ಯಾವುದೇ ಬಹಿರಂಗ ಜಗಳವಿಲ್ಲ, ಮನಸ್ತಾಪವಿಲ್ಲ, ಒಬ್ಬರ ಮೇಲೊಬ್ಬರು ಅರೋಪ ಹೊರಿಸಲಿಲ್ಲ, ಕ್ಯಾಮೆರಾ ಮುಂದೆ ಕುಳಿತು ಕೂಗಾಡಲಿಲ್ಲ. ಕಾನೂನಿನ ಪ್ರಕಾರ ಡಿವೋರ್ಸ್ ಪಡೆದು 'ನಿನ್ನದಾರಿ ನಿನ್ನದು, ನ್ನನ ದಾರಿ ನನ್ನದು' ಎಂದು ಮದುವೆಗೆ ತಿಲಾಂಜಲಿ ಇಟ್ಟಿದ್ದಾಯ್ತು.
ಆದರೆ, ಪರಿಚಯ, ಸ್ನೇಹ, ಮಾನವೀಯತೆ ನಮ್ಮಿಬ್ಬರಲ್ಲಿ ಮರೆಯಾಗಲಿಲ್ಲ. ವಿಚ್ಚೇದನ ಆದ ತಕ್ಷಣವೇ ನನಗೆ ನನ್ನ ಮಾಜಿ ಹೆಂಡತಿಯನ್ನು ಒಂಟಿಯಾಗಿಯೇ ಅವರ ಮನೆಗೆ ಕಳಿಸಲು ಇಷ್ಟವಾಗಲಿಲ್ಲ. ಪತಿಯಾಗಿ ಅಲ್ಲದಿದ್ದರೂ ಒಬ್ಬ ಹಿತೈಷಿಯಾಗಿ ನಾನು ನಿವೇದಿತಾರನ್ನು ಅವರ ಮನೆಗೆ ಬಿಟ್ಟು ಬಂದೆ. ಅವರೂ ಅಷ್ಟೇ, ಬಹಳಷ್ಟು ಪ್ರಬುದ್ಧತೆಯಿಂದ ಈ ಜವಾಬ್ದಾರಿ ನಿರ್ವಹಿಸಿದ್ದಾರೆ. ಡಿವೋರ್ಸ್ ಬಳಿಕವೂ ನಾವಿಬ್ಬರೂ ಮೊದಲೇ ಒಪ್ಪಿಕೊಂಡಿದ್ದ ಕಮಿಟ್‌ಮೆಂಟ್‌ನಂತೆ ಸಿನಿಮಾ ಶೂಟಿಂಗ್‌ನಲ್ಲಿ ನಟ-ನಟಿಯಾಗಿ ನಟಿನಟಿಸಿದ್ದೇವೆ. ಬೇರೆಯವರು ‘ಪ್ರಬುದ್ಧತೆ’ ಎಂದು ಕರೆಯುವ ಆ ಮನಸ್ಥಿತಿ ನಮ್ಮಿಬ್ಬರಲ್ಲೂ ಇದೆ.
ಒಂದೇ ವಾಕ್ಯದಲ್ಲಿ ಹೇಳಬೇಕು ಎಂದರೆ, 'ಜೀವನದಲ್ಲಿ ಸಂಸಾರವೇ ಹೊರತೂ ಸಂಸಾರವೇ ಜೀವನವಲ್ಲ' ಎಂಬ ನಮ್ಮಿಬ್ಬರ ಭಾವನೆ-ಬದುಕುವ ರೀತಿ ಹೀಗೆ ಬೇರೆಬೇರೆಯಾಗುವ ನಿರ್ಧಾರ ಮಾಡಿಸಿದೆ. ಬೇರೆಯವರ ಅಭಿಪ್ರಾಯ ನಮಗಾಗಲೀ ಅಥವಾ ನಮ್ಮಿಬ್ಬರ ಅಭಿಪ್ರಾಯವಾಗಲೀ ಒಪ್ಪಿಗೆ ಆಗಲೇಬೇಕು ಎಂದೇನಿಲ್ಲ. ಆದರೆ, ಅನಿರೀಕ್ಷಿತ ಎಂಬಂತೆ, ನಮ್ಮ ನಿರೀಕ್ಷೆಗೆ ವಿರುದ್ಧವಾಗಿ ನಮ್ಮಿಬ್ಬರ 'ಜಂಟಿ' ಜೀವನ ಕೊನೆಗೊಂಡಿದೆ, ‘ಒಂಟಿ’ ಜೀವನ ಸಾಗುತ್ತಿದೆ. ಆದರೆ, ಈಗ ಇಬ್ಬರೂ ನಮ್ಮ ನಮ್ಮ ಜೀವನ ಹಾಗೂ ಕೆರಿಯರ್ ಕಡೆ ಗಮನ ಕೊಡುತ್ತಿದ್ದೇವೆ. ಜೀವನ ಮೊದಲಿಗಿಂತ ಚೆನ್ನಾಗಿದೆ. ಸದ್ಯಕ್ಕಂತೂ ನನ್ನದು ‘ಸಿಂಗಲ್ ಲೈಫ್’ ನಡೆಯುತ್ತಿದೆ.. ಮುಂದಿನದು ಮುಂದೆ.. 'ಎಂದಿದ್ದಾರೆ ಚಂದನ್ ಶೆಟ್ಟಿ.
